ಹಿಂದಿನ ಭಯಾನಕ ಹೋರಾಟದ ಫಲವೇ ಇಂದಿನ ಸ್ವಾತಂತ್ರ್ಯ

Team Newsnap
8 Min Read
rajshekar b
ಡಾ ರಾಜಶೇಖರ್ ನಾಗೂರು

“ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ” ಎಂಬ ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರ ಮಾತು ಅದೆಷ್ಟು ಸತ್ಯ ಅಲ್ವಾ!

ವೈಯಕ್ತಿಕ ಬದುಕಲ್ಲಿಯೂ ಕೂಡ ಇಂದು ನಾವು ಬಯಸಿದಂತೆ ಬದುಕುತ್ತಿದ್ದೇವೆ ಎಂದರೆ ಅದರ ಹಿಂದೆ ಭಯಾನಕ ಹೋರಾಟವಿರುತ್ತದೆ. ಹಾಗಾದರೆ ಇಡೀ ದೇಶ ಇಂದು 77 ನೇ ಸ್ವಾತಂತ್ರ್ಯವನ್ನು ಸಂತೋಷದಿಂದ ಆಚರಿಕೊಳ್ಳುತ್ತಿದೆ ಎಂದರೆ ಅದು ಭಯಾನಕ ಹೋರಾಟದ ಫಲವೇ ನಿಜ.

ಭಾರತ ಸ್ವಾತಂತ್ರ್ಯ ಹೋರಾಟ ಅದೊಂದು ಕೇವಲ ಹೋರಾಟವಾಗಿರಲಿಲ್ಲ. ಅದೊಂದು ಭಾರತದ ಅಸ್ಮಿತೆಯ ಉಳಿವಿಗಾಗಿ ಉಕ್ಕಿದ ಜ್ವಾಲಾಮುಖಿ. ಸ್ವಾಭಿಮಾನಕ್ಕಿಂತ ಹಿರಿದಾದದ್ದು ಮತ್ತೊಂದಿಲ್ಲ ಎನ್ನುವ ಸೂಚಕವೂ ಹೌದು. ನಮ್ಮ ಸಂಸ್ಕಾರ, ಸಂಸ್ಕೃತಿಯ ಮೇಲಿನ ದೌರ್ಜನ್ಯ ಸಹಿಸಲಾರೆವು ಎಂಬ ಸಂದೇಶವೂ ಹೌದು. ವ್ಯಕ್ತಿ ವ್ಯಕ್ತಿಗಳು, ಹಿರಿಯ ವ್ಯಕ್ತಿತ್ವಗಳು, ಪ್ರಮುಖ ಸಂಘಟನೆಗಳು, ಹೀಗೆ ಕೆಳ ಹಂತದಿಂದ ಅಂದರೆ ಹಳ್ಳಿಯಿಂದ ದಿಲ್ಲಿಯವರೆಗೆ, ಅನಕ್ಷರಸ್ಥರಿಂದ ಅಕ್ಷರಸ್ಥರವರೆಗೆ, ಮಹಿಳೆಯಿಂದ ಮಕ್ಕಳು ಪುರುಷರವರೆಗೆ, ಇಡೀ ಭಾರತ ಒಂದಾಗಿ ನಿಂತು ಒಮ್ಮತದಿಂದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವುದರೊಳಗೆ 200 ವರ್ಷಕ್ಕೂ ಮೀರಿ ಸಮಯವಾಗಿ ಹೋಗಿತ್ತು.

ಈ 200 ವರ್ಷಗಳ ಕಾಲ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇಡೀ ಭಾರತೀಯರ ಏಕನಾದ “ನಾನು ನೀನು ಒಂದೇ, ಪರಕೀಯರನ್ನು ಓಡಿಸಲು ಬಂದೆ” ಎನ್ನುವ ಹಂತಕ್ಕೆ ತಲುಪಿದ ಯಶೋಗಾಥೆಯೇ ಈ ಸ್ವಾತಂತ್ರ್ಯ ಹೋರಾಟ.

ಈ ನಿಟ್ಟಿನಲ್ಲಿ ವ್ಯಕ್ತಿ ವ್ಯಕ್ತಿತ್ವಗಳ, ಸಂಘ ಸಂಸ್ಥೆಗಳ ಹೋರಾಟ ದೊಡ್ದದು. ಎಲ್ಲವನ್ನು ಇಲ್ಲಿ ವಿವರಿಸುವುದು ಕಷ್ಟ ಸಾಧ್ಯ. ಹೀಗಾಗಿ ಸಂಕ್ಷಿಪ್ತವಾಗಿ ಅವಲೋಕಿಸೋಣ:

1) ಮೊದಲ ಸ್ವಾತಂತ್ರ್ಯ ದಂಗೆ: 1857 ರ ಸಿಪಾಯಿ ದಂಗೆ

1857 ರ ಹೊತ್ತಿಗೆ ಭಾರತವನ್ನು ಬ್ರಿಟಿಷರು ಆಕ್ರಮಿಸಿಯಾಗಿತ್ತು. ನಮ್ಮ ಆಚಾರ ವಿಚಾರ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಹೇರಿಕೆ ಪ್ರಾರಂಭವಾಗಿತ್ತು. ಅಂದಿನ ಭಾರತದಲ್ಲಿ ಸಾಗರವನ್ನು ದಾಟಿ ಹೋಗುವುದು ಧಾರ್ಮಿಕವಾಗಿ ‘ಪಾಪ’ ಎನ್ನುವ ನಂಬಿಕೆ ಭಾರತೀಯರದ್ದಾಗಿತ್ತು. ಬ್ರಿಟಿಷ್ ಸೇನೆಗೆ ಭಾರತೀಯ ಸೈನಿಕರನ್ನು ನೇಮಕ ಮಾಡಿಕೊಂಡು ಹೊರ ರಾಷ್ಟ್ರಗಳಿಗೆ ಯುದ್ಧಕ್ಕಾಗಿ ಕಳಿಸುತ್ತಿದ್ದರು. ಸಾಗರವನ್ನು ಉಲ್ಲಂಘನ ಮಾಡಿದ ಕಳಂಕ ಭಾರತೀಯರ ಸೈನಿಕರ ಮೇಲೆ ಇರುತ್ತಿತ್ತು . ಹೀಗಾಗಿ ಬ್ರಿಟಿಷರ ಮೇಲೆ ತುಂಬಾ ಅಸಮಾಧಾನವಿತ್ತು.

sepoy munity

ಹಾಗೆಯೇ ಸೈನಿಕರು ಬಳಸುವ ‘ಎನ್ಫೀಲ್ಡ್ ರೈಫಲ್’ ನಲ್ಲಿ ಬಳಸುವ cataridge ಗಳನ್ನು ಬಾಯಿಯಿಂದ ಕಿತ್ತೆಸೆಯಬೇಕಾಗಿತ್ತು. ಆ ಗುಂಡುಗಳ catridge ಗಳನ್ನು ಹಂದಿಯ ಫ್ಯಾಟ್ ನಿಂದ ಮಾಡಿರುವುದಾಗಿತ್ತು. ಭಾರತೀಯ ಅನೇಕ ಸೈನಿಕರು ಸಸ್ಯಾಹಾರಿಗಳಾಗಿ ಇದನ್ನು ಒಪ್ಪಲಿಲ್ಲ. ಇದೊಂದು ಸಂಸ್ಕೃತಿ ವಿರೋಧಿ ಕೃತ್ಯ. ಇದನ್ನು ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಸುತ್ತಿದ್ದರು. ಈ ಎಲ್ಲ ಘಟನೆಗಳಿಂದ ಬೇಸತ್ತು ಆ ಒಂದು ದಿನ ‘ಮಂಗಲ ಪಾಂಡೆ’ ಎನ್ನುವ ಸೈನಿಕ ತನ್ನ ಮೇಲಾಧಿಕಾರಿಯನ್ನು ಕೊಂದು, ಸಿಕ್ಕಸಿಕ್ಕ ಬ್ರಿಟಿಷ ಅಧಿಕಾರಿಗಳಿಗೆ ಗುಂಡಿಟ್ಟು ಎಲ್ಲಾ ಕೈದಿಗಳನ್ನು ಬಿಡುಗಡೆ ಮಾಡಿ, ಅಲ್ಲಿರುವ ಇತರೆ ಸೈನಿಕರೊಂದಿಗೆ ದಂಗೆ ಎದ್ದುಬಿಟ್ಟನು. ಇದನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯುತ್ತಾರೆ. ಇದನ್ನು ‘ಸಿಪಾಯಿ ದಂಗೆ’ ಎಂದೂ ಕರೆಯುತ್ತಾರೆ. ಭಾರತದ ಸ್ವಾತಂತ್ರದ ಹೋರಾಟದ ಮೊದಲ ಹೆಜ್ಜೆ ಇದಾಗಿತ್ತು. ಮಂಗಲ ಪಾಂಡೆಯನ್ನು ಗಲ್ಲಿಗೇರಿಸಲಾಯಿತು ನಿಜ ಆದರೆ ಇಲ್ಲಿ ಹೊತ್ತಿಸಿದ ಕಿಡಿ 1947 ರ ವರೆಗೂ ಆರಲೇ ಇಲ್ಲ.

2) ಬಂಗಾಳವು ಭಾರತ ಸ್ವತಂತ್ರ್ಯದ ನವಜಾಗೃತಿಯ ಕೇಂದ್ರ:

ಅಲ್ಲಿಯವರೆಗೂ ಪೂರ್ವ ಬಂಗಾಳ (ಇಂದಿನ ಬಾಂಗ್ಲಾದೇಶ) ಪಶ್ಚಿಮ ಬಂಗಾಳ ಎರಡು ಒಂದೇ ಆಗಿತ್ತು. 1905ರಲ್ಲಿ ಈ ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳವನ್ನು ಬ್ರಿಟಿಷರು ವಿಭಜಿಸಿ ಹೋರಾಟದ ಭೌಗೋಳಿಕ ಒಮ್ಮತವನ್ನು ಚಾಣಾಕ್ಷತನದಿಂದ ಇಬ್ಭಾಗವಾಗಿಸುವ ಹುನ್ನಾರ ಮಾಡಿದರು.

-ಸ್ವದೇಶಿ ಚಳುವಳಿ:
ಇಲ್ಲಿಯೇ ಸ್ವದೇಶಿ ಚಳುವಳಿ ಪ್ರಾರಂಭವಾಯಿತು. ಪಾಶ್ಚಿಮಾತ್ಯ ಉಡುಪುಗಳನ್ನು ವಸ್ತುಗಳನ್ನು ಸಾರ್ವಜನಿಕವಾಗಿ ದಹಿಸಿ ಸ್ವದೇಶಿ ಉಡುಪುಗಳನ್ನು ಸ್ವದೇಸಿ ಕರಕುಶಲ ವಸ್ತುಗಳನ್ನು ಉತ್ತೇಜಿಸುವ ಕೆಲಸ ಇದಾಗಿತ್ತು.

ಸನ್ಯಾಸಿ ದಂಗೆ, ಇಂಡಿಗೋ ದಂಗೆ, ಇಲ್ಲಿಂದ ಪ್ರಾರಂಭವಾಗಿದ್ದು.

ಬಂಕಿಮ್ ಚಂದ್ರ ಚಟರ್ಜಿ ರವರು ತಮ್ಮ ಕೃತಿ ‘ಆನಂದ ಮಠ’ದಲ್ಲಿ ‘ವಂದೇ ಮಾತರಂ’ ರಚಿಸಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವ ಮೂಲ ಮಂತ್ರವನ್ನು ಇದೇ ಬಂಗಾಳದಿಂದ ಕೊಟ್ಟಿದ್ದು. ಈ ಒಂದೇ ಮಾತರಂ ಗೀತೆ ಇಂದಿಗೂ ಕೂಡ ಕೇಳುತ್ತಿದ್ದರೆ ಮೈಮನ ಪುಳಕಿತಗೊಳ್ಳುವುದು.

‘Hindu patriot’, ‘ತತ್ವ ಭೋದಿನಿ’, “ಸಂಪ್ರಕಾಶ್” ಎನ್ನುವ ಅನೇಕ ಪತ್ರಿಕೆಗಳು ಜರ್ನಲ್ ಗಳು ದೇಶ ಭಕ್ತಿಯನ್ನು ಹರಡುವಲ್ಲಿ ಸಹಾಯಕವಾಗಿದ್ದು ಇದೆ ಬಂಗಾಳದಿಂದ.

-ಅನುಶೀಲನ ಸಮಿತಿ, ಜುಗಾಂತರ:

20ನೇ ಶತಮಾನದ ಆರಂಭದಲ್ಲಿ ಬಂಗಾಳದಲ್ಲಿ ಕಾರ್ಯನಿರತವಾಗಿದ್ದ ಮುಖ್ಯ ಗುಪ್ತ ಕ್ರಾಂತಿಕಾರಿ ಸಂಘಟನೆಗಳು. ಜುಗಾಂತರ್ ಸಂಘಟನೆಯು ನಗರದ ಹೊರವಲಯದಲ್ಲಿ ವ್ಯಾಯಾಮ ಶಾಲೆಯಂತೆ ಭೂಗತವಾಗಿ ಹಬ್ಬಿಕೊಂಡಿತ್ತು. ಮದ್ದು ಗುಂಡು ಶಸ್ತ್ರಾಸ್ತ್ರಗಳ ತರಬೇತಿ ಕೊಡುವುದು ಇವುಗಳ ಕೆಲಸವಾಗಿತ್ತು.

3) ಕುದಿರಾಮ್ ಬೋಸ್ ಮರೆಯಲಾಗದ ಮಾಣಿಕ್ಯ


ಸ್ವಾತಂತ್ರ್ಯ ಪೂರ್ವ, ಬ್ರಿಟಿಷರ ನ್ಯಾಯಾಲಯದ ತೀರ್ಪಿನಂತೆ ನೇಣುಗಂಬಕ್ಕೇರಿದ ಅತೀ ಚಿಕ್ಕ ವಯಸ್ಸಿನ ಕೆಚ್ಚೆದೆಯ 18 ರ ಪೋರ.

kudiram bose

ಬ್ರಿಟಿಷರ ದೌರ್ಜನ್ಯಕ್ಕೆ ಬೇಸತ್ತು, ಬ್ರಿಟಿಷ್ ಜಡ್ಜ್ ‘ಕಿಂಗ್ಸ್ ಫೋರ್ಡ’ ಪ್ರಯಾಣಿಸುತ್ತಿರುವ ರೈಲಿನ ಬೋಗಿಯ ಮೇಲೆ ಬಾಂಬ್ ಎಸೆಯಲು ಕುದಿರಾಮ್ ಬೋಸ್ ನಿಯೋಜನೆಗೊಂಡಿದ್ದ. ರೈಲಿನ ಬೋಗಿಯ ಮೇಲೆ ಬಾಂಬ್ ಎಸೆದನಾದರೂ ಆ ಬೋಗಿಯಲ್ಲಿ ‘ಕಿಂಗ್ಸಫೋರ್ಡ’ ಇರಲಿಲ್ಲವಾದ್ದರಿಂದ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಆ ಜಡ್ಜ್ ಪಾರಾದ. ಆ ಬೋಗಿಯಲ್ಲಿದ್ದ ಇಬ್ಬರು ಬ್ರಿಟೀಷ್ ಮಹಿಳೆಯರು ಅಸುನೀಗಿದರು.

ಈ ಕಾರಣಕ್ಕಾಗಿ ಕುದಿರಾಮ್ ಬೋಸ್ ಗೆ ಗಲ್ಲು ಶಿಕ್ಷೆಯಾಗುತ್ತದೆ. ಆಗ ಅವನ ವಯಸ್ಸು 18 ವರ್ಷ 8 ತಿಂಗಳು 11 ದಿನ. ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಯ ತೀರ್ಪನ್ನು ಓದಿ ಮುಗಿಸಿದ ಮೇಲೆ ಕುದಿರಾಮ್ ಬೋಸ್ ನಗುತ್ತಿದ್ದ. ಅದನ್ನು ಕಂಡ ಜಡ್ಜ್ ಕೇಳುತ್ತಾನೆ “ಹೇ.. ಹುಡುಗ ನಾನು ಓದಿದ ತೀರ್ಪು ನಿನಗೆ ಅರ್ಥವಾಯಿತೇ? ನಗುತ್ತಿರುವೆಯಲ್ಲ” ಎಂದು.

ಆಗ ಕುದಿರಾಮ್ ನಗುತ್ತಲೆ ಉತ್ತರಿಸುತ್ತಾನೆ “ನಿಮ್ಮ ತೀರ್ಪು ಅರ್ಥವಾಗಿದೆ ನ್ಯಾಯಾಧೀಶರೆ, ಆದರೆ ನನಗೆ ಗಲ್ಲಿಗೇರಿಸುವ ಮುನ್ನ ಸ್ವಲ್ಪ ಸಮಯಾವಕಾಶ ನೀಡಿದಲ್ಲಿ ನಿಮಗೆ ಬಾಂಬ್ ಹೇಗೆ ತಯಾರಿಸುತ್ತಾರೆ ಎಂದು ಹೇಳಿಕೊಟ್ಟು ನೇಣಿಗೇರುವೆ” ಎಂದು ಮತ್ತೆ ನಗುತ್ತಾನೆ. ಸಾವಿಗೆ ಕಿಂಚಿತ್ತೂ ಹೆದರದ ದೇಶಪ್ರೇಮಿಯ ಮಾತುಗಳಿವು.

ಕೊನೆಗೂ ತನ್ನ 18ನೇ ವಯಸ್ಸಿಗೆ ನೇಣಿಗೆ ಕೊರಳೊಡ್ಡಿದ ಅತೀ ಚಿಕ್ಕ ವಯಸ್ಸಿನ ದೇಶಪ್ರೇಮಿಯಾಗಿ ಇತಿಹಾಸ ಸೇರುತ್ತಾನೆ ಈ ಕುದಿರಾಮ್ ಬೋಸ್. ಹೀಗೆ ಚಿಕ್ಕ ಮಕ್ಕಳು ಸಹಿತ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪರಂಪರೆ ನಮ್ಮದು.

4) ವೈಚಾರಿಕ ವ್ಯತ್ಯಾಸಗಳಾಚೆಯ ವ್ಯಕ್ತಿತ್ವಗಳು

ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳ ನಂತರವೂ ಒಮ್ಮತವಿಲ್ಲದೆ, ಪ್ರಾಣಿಗಳಂತೆ ಕಚ್ಚಾಡುತ್ತಾ, ಆ ಹೋರಾಟಗಾರರ ರಕ್ತದ ಹರಿವಿನ ಮೇಲೆ ಸಿಕ್ಕ ಸ್ವಾತಂತ್ರ್ಯವನ್ನು ಐಶಾರಾಮಿಯಾಗಿ ಅನುಭವಿಸುತ್ತಿರುವ ನಮಗೆ ವೈಚಾರಿಕ ಹೋರಾಟವೇ ಬೇರೆ, ವ್ಯಕ್ತಿಗತ ಹೋರಾಟವೇ ಬೇರೆ ಎನ್ನುವ ಕನಿಷ್ಠ ತಿಳಿವಳಿಕೆ ಇಲ್ಲದಂತಾಗಿದೆ. ಎಲ್ಲಕ್ಕೂ ವಿರೋಧ ಭಾವವೇ ಪ್ರಮುಖವಾಗಿ ಬಿಟ್ಟಿದೆ.

ವಿಚಾರಗಳಲ್ಲಿ ವ್ಯತ್ಯಾಸ ಬಂದಾಗ, ವ್ಯಕ್ತಿಗತ ವ್ಯತ್ಯಾಸವನ್ನು ಸೃಷ್ಟಿ ಮಾಡಿಕೊಂಡು ಸಂಬಂಧಗಳನ್ನು ಕಳೆದುಕೊಳ್ಳುವ ಮೂಢರು ನಾವು. ಇದಕ್ಕೆ ವ್ಯತಿರಿಕ್ತವಾಗಿ ಇತಿಹಾಸದ ಎತ್ತರಕ್ಕೆ ನಿಲ್ಲುವ ವ್ಯಕ್ತಿತ್ವ ನೇತಾಜಿ ಸುಭಾಷ್ ಚಂದ್ರ ಬೋಸರು.

ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಮಹಾತ್ಮ ಗಾಂಧೀಜಿಯವರ ನಿಲುವನ್ನು ವಿರೋಧಿಸುತ್ತಿದ್ದಾಗಲೂ, ನಮ್ಮಿಬ್ಬರ ಗುರಿ ಒಂದೇ ಎನ್ನುವ ಸ್ಪಷ್ಟ ಪರಿಕಲ್ಪನೆಯ ಅರಿವು ಸುಭಾಷ್ಚಂದ್ರ ಬೋಸ್ ರವರಿಗಿತ್ತು. ಹೀಗಾಗಿ ವೈಯಕ್ತಿಕ ಮತ್ತು ವ್ಯಕ್ತಿಗತ ನೆಲೆಗಟ್ಟಲ್ಲಿ ಗಾಂಧೀಜಿಯವರನ್ನು ಗೌರವಿಸುತ್ತಿದ್ದ ಆದರ್ಶ ಅವರಲ್ಲಿತ್ತು.

‘ಶಾಂತಿ ಶಾಂತಿ ಶಾಂತಿ’ ಎನ್ನುವ ಗಾಂಧೀಜಿಯವರ ಎದುರು ರಕ್ತ ಕೊಡಿ ಸ್ವಾತಂತ್ರ್ಯ ಕೊಡುವೆ ಎನ್ನುವಂತೆ ‘ಕ್ರಾಂತಿ ಕ್ರಾಂತಿ ಕ್ರಾಂತಿ’ ಎಂದವರು ನೇತಾಜಿ.

ಇಷ್ಟೆಲ್ಲಾ ವೈಚಾರಿಕ, ಸೈದ್ಧಾಂತಿಕ ವಿರೋಧಗಳ ನಡುವೆ ಮಹಾತ್ಮ ಗಾಂಧೀಜಿಯವರನ್ನು ಪ್ರಪ್ರಥಮ ಬಾರಿಗೆ “ರಾಷ್ಟ್ರಪಿತ” ( “Father of Nation”) ಎಂದು 1944 ರಲ್ಲೇ ಉಲ್ಲೇಖಿಸಿದ ಹಿರಿಮೆ ನೆಚ್ಚಿನ ನೇತಾಜಿಯವರದು.

ಪ್ರಸ್ತುತಕ್ಕೂ ನೇತಾಜಿಯ ಈ ಆದರ್ಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾದದ್ದು ಭಾರತದ ಭ್ರಾತೃತ್ವಕ್ಕೆ ಅನಿವಾರ್ಯ ಎನ್ನುವ ನಿಲುವು ನನ್ನದು. ಆದರ್ಶಗಳ ಆಯಾಮವನ್ನು ಒಳಗಣ್ಣಿಂದ ನೋಡುವ ಇಂದಿನ ಅಗತ್ಯಕ್ಕೆ ಅಂದಿನ ಬೋಸರು ಎಂದೆಂದಿಗೂ ಆದರ್ಶನೀಯ. ಅಲ್ಲವೇ!!

ನನ್ನ ಅರ್ಥದಲ್ಲಿ ನಿಜವಾದ ಪರಾಕ್ರಮವೆಂದರೆ ಇದೇ.

ವೈಯಕ್ತಿಕ ಭೇದಗಳನ್ನು ಮರೆತು ವೈಚಾರಿಕತೆಯ ಆಧಾರದ ಮೇಲೆ ಮಾನವೀಯ ಸಂಬಂಧಗಳನ್ನು ಹೊಂದುತ್ತಾ ಸಾಗಿದಾಗ ಮಾತ್ರ ನಾವು ಬೋಸ್ ರಂತೆ ಹಿರಿಮೆಯನ್ನು ತಲುಪಬಲ್ಲೆವು.

5) ಗಾಂಧೀಜಿ ಹೆಜ್ಜೆ:

ಭಾರತಕ್ಕೆ ಬರುವ ಮೊದಲು ಗಾಂಧೀಜಿ ಆಫ್ರಿಕಾದಲ್ಲಿ ಕಾನೂನು ಪ್ರಾಕ್ಟೀಸ್ ಮಾಡುತ್ತಿದ್ದರು. ಅಲ್ಲಿಯೇ ಅವರು ‘ಉಪವಾಸ ಸತ್ಯಾಗ್ರಹ’ ಎಂಬ ಅಸ್ತ್ರವನ್ನು ಕಂಡುಕೊಂಡು ಮುಂದೆ ಭಾರತಕ್ಕೆ ಆಗಮಿಸಿದಮೇಲೆ ಚಂಪಾರನ್ ಸತ್ಯಾಗ್ರಹ, ಖೇಡಾ ಸತ್ಯಾಗ್ರಹದಲ್ಲಿ ಈ ಪ್ರಬಲ ಅಸ್ತ್ರವನ್ನು ಬಳಸಿ ಯಶಸ್ವಿಯಾದರು.

ಮುಂದೆ ಖಿಲಾಫತ್ ಚಳುವಳಿಯಲ್ಲಿ ಮುಸ್ಲಿಂ ಸಮುದಾಯದ ಮತ್ತು ಅವರ ಭಾವನಾತ್ಮಕ ಹೋರಾಟಕ್ಕೆ ಜೊತೆ ನಿಂತು ಇಡೀ ರಾಷ್ಟ್ರದ ಎಲ್ಲಾ ಸಮುದಾಯದ ನಾಯಕ ಎನಿಸಿಕೊಂಡರು. ಆಗಲೇ ಇಡೀ ಭಾರತ ಇವರ ನಾಯಕತ್ವವನ್ನು ಒಪ್ಪಿಕೊಂಡಿತ್ತು.

gandhiji

ಮುಂದೆ ಗಾಂಧೀಜಿ ಕರೆಕೊಟ್ಟ ಅಸಹಕಾರ ಚಳುವಳಿ, ಸುಮಾರು 388 ಕಿ. ಮಿ ಅಹಮದಾಬಾದ್ ನಿಂದ ದಂಡಿವರೆಗೆ 24 ದಿನ ನಡೆದು ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ನಡೆಗೆ ಇಡೀ ದೇಶವೇ ಒಟ್ಟಾಗಿ ಅವರ ಜೊತೆ ನಿಂತಾಗಿತ್ತು.

ಕ್ವಿಟ್ ಇಂಡಿಯಾ ಚಳುವಳಿ ಬ್ರಿಟಿಷರಿಗೆ ಇವರ ಕೊನೆಯ ಎಚ್ಚರಿಕೆಯಾಗಿದ್ದು ಗೊತ್ತೇ ಇದೆ.

ಜನರನ್ನು ಜನರ ಹೋರಾಟದ ಉತ್ಸಾಹವನ್ನು ಹಿಡಿದಿಡಬಲ್ಲ ಏಕೈಕ ನಾಯಕ ಗಾಂಧೀಜಿಯಾಗಿದ್ದು ಸ್ವಾತಂತ್ರ್ಯ ಹೋರಾಟದ ಕೇಂದ್ರ ಬಿಂದು ಎನಿಸಿಕೊಂಡು ಸ್ವಾತಂತ್ರ್ಯ ತಂದು ಕೊಟ್ಟರು.

6) ದೇಶಾಭಿಮಾನಿ ಹೆಣ್ಣು ಹುಲಿಗಳು.


1) ಉದಾದೇವಿ (1857)‌.

uda devi

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಲಕ್ನೋ ರಾಣಿ ಹಜ್ರತ್ ಬೇಗಂ ಜೊತೆ ನಿಂತು ಬ್ರಿಟಿಷರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಗಂಡನ ಸಹಾಯದಿಂದ ಮರಹತ್ತಿ, 36 ಬ್ರಿಟಿಷ್ ಸೈನಿಕರನ್ನು ಹೊಡೆದುರುಳಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರಿ ಇವಳು.

2) ರಾಣಿ ಗೈದಿನ್ಲು (1932)‌.

rani gaidinliu

ಬುಡಕಟ್ಟು ಜನಾಂಗದ ಹೆಣ್ಣು ಮಗಳು, ಬ್ರಿಟಿಷರ ವಿರುದ್ಧ ಹೋರಾಡಿ, ಕೇವಲ 16 ವರ್ಷದವಳಿದ್ದಾಗಲೇ ಅಜೀವ ಸೆರೆವಾಸ ಶಿಕ್ಷೆಗೆ ಗುರಿಯಾಗಿದ್ದ ದೇಶಪ್ರೇಮಿ ಇವಳು. ಸ್ವಾತಂತ್ರ್ಯ ನಂತರ ಬಿಡುಗಡೆಗೊಂಡ ಇವಳಿಗೆ, ನೆಹರೂರವರು “ರಾಣಿ” ಎಂದು ಬಿರುದಾಂಕಿತ ನೀಡಿ, “ರಾಣಿ ಗೈದಿನ್ಲು” ಎಂದು ಗೌರವಿಸುತ್ತಾರೆ.

3) ಬೀನಾದಾಸ್(1932).

benadas

ಬೀನಾದಾಸ್, ತನ್ನ ಪದವಿಯ ಘಟಿಕೋತ್ಸವಕ್ಕೆ ಪದವಿ ಪ್ರಧಾನ ಮಾಡಲು ಬಂದಿದ್ದ ಬ್ರಿಟಿಷ್ ಗವರ್ನರ್ ಜಾಕ್ಸನ್ ನಿಂದ ಪದವಿ ಪಡೆಯಲು ನಿರಾಕರಿಸಿ, ನನ್ನ ಪದವಿ ಪರಕೀಯನಾದ ಇವನಿಂದ ಪಡೆಯುವಷ್ಟು ಕನಿಷ್ಠವೇ, ಎಂದುಕೊಂಡು ಜಾಕ್ಸನ್ ಮೇಲೆ ಐದು ಸುತ್ತು ಗುಂಡು ಹಾರಿಸುತ್ತಾಳೆ, ಹೇಡಿಯಂತೆ ಓಡಿ ತಪ್ಪಿಸಿಕೊಳ್ಳುತ್ತಾನೆ ಜಾಕ್ಸನ್. ಇಂತಹ ಸ್ವಾಭಿಮಾನಿ, ದೇಶಪ್ರೇಮಿ,

4) ಕನಕ್ಲಾತಾ ಬಾರುವ (1942).

ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ, ಗೋಹಪುರ್ ಪೊಲೀಸ್ ಠಾಣೆಯ ಮುಂದೆ ಭಾರತದ ಧ್ವಜ ಹಾರಿಸುವ ಪ್ರಯತ್ನದಲ್ಲಿದಾಗ, ಬ್ರಿಟಿಷರ ಗುಂಡಿಗೆ ಬಲಿಯಾಗಿ ನೆಲಕ್ಕುರುಳುವ ಸಂದರ್ಭದಲ್ಲಿಯೂ ಸಹ, ತನ್ನ ಕೈಯಲ್ಲಿದ್ದ ಧ್ವಜ ಕೆಳಗೆ ಬೀಳದಂತೆ ಮೇಲೆತ್ತಿ ಹಿಡಿದು, ತನ್ನ ದೇಶಾಭಿಮಾನ ಪ್ರದರ್ಶಿಸುತ್ತಾಳೆ.

ಮಾತೃ ನೆಲಕ್ಕಾಗಿ ಪ್ರಾಣ ಕೊಟ್ಟ ಇಂತಹ ಅನೇಕ ಸ್ವದೇಶಾಭಿಮಾನದ ಹೆಣ್ಣು ಹುಲಿಗಳು ಜನಿಸಿದ ದೇಶ ನಮ್ಮದು. ಹೀಗಿರುವಾಗ ಸ್ವಾತಂತ್ರ್ಯ ಸಿಗದೇ ಇರುತ್ತದೆಯೇ.

ಈ ಮೇಲಿನ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ನೋಡಿದಾಗ ನಮ್ಮ ಇಂದಿನ ಸ್ವಾತಂತ್ರ್ಯ ಈ ಹಿಂದಿನ ಭಯಂಕರ ಹೋರಾಟದ ಫಲವೇ ಆಗಿದೆ.

ಇತಿಹಾಸ ಮರೆತವನಿಗೆ ಭವಿಷ್ಯವಿರುವುದಿಲ್ಲ ಎಂಬ ಮಾತಿನಂತೆ ಭಾರತ ಸ್ವಾತಂತ್ರ್ಯದ ಹೋರಾಟಗಾರರನ್ನು, ಅವರ ತ್ಯಾಗ ಬಲಿದಾನಗಳನ್ನು ನಾವು ನೆನೆಯುತ್ತಾ ಇದ್ದಾಗ ಮಾತ್ರ ಇಂದಿನ ಸ್ವಾತಂತ್ರ್ಯದ ದಿನ ಸಾರ್ಥಕವಾಗುವುದು. 76 ಸ್ವಾತಂತ್ರ್ಯಯುತ ವರ್ಷಗಳನ್ನು ಕಳೆದು 77 ನೇಯ ಆಚರಣೆಗೆ ನಾವು ಕಾಲಿಟ್ಟರೂ ನಮ್ಮ ಹೋರಾಟದ ಪರಂಪರೆಯನ್ನು ಮರೆಯದಿರೋಣ. ಇದೇ ನಿಜವಾದ ದೇಶ ಭಕ್ತಿ.

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಜೈ ಹಿಂದ್

Share This Article
Leave a comment