December 26, 2024

Newsnap Kannada

The World at your finger tips!

pension , British , BJP

ಟಿಪ್ಪು ಹುತಾತ್ಮ ದಿನ: ಬಹು ಸಂಸ್ಕೃತಿ ಸಾಮರಸ್ಯ ನಡಿಗೆ

Spread the love

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಹುತಾತ್ಮ ದಿನದ ನಿಮಿತ್ತ ಬಹು ಸಂಸ್ಕೃತಿ ಸಾಮರಸ್ಯ ಮೇಳ ಹಾಗೂ ಸಾಮರಸ್ಯ ನಡಿಗೆ ನಡೆಯಿತು.

ಚಿತ್ರ ನಟ ಚೇತನ್‌ ಅಹಿಂಸಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯದ ಇತಿಹಾಸದಲ್ಲಿ ಟಿಪ್ಪು ಜನಪ್ರಿಯ ವ್ಯಕ್ತಿ. ಟಿಪ್ಪು ಮುಸಲ್ಮಾನ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅನುಮಾನದಿಂದ ನೋಡುತ್ತಿದೆ. ಹಿಜಾಬ್‌, ಕೇಸರಿ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚಲಾಗುತ್ತಿದೆ. ಟಿಪ್ಪುವಿನ ಸುಧಾರಣಾ ನೀತಿಗಳು ನಮಗೆ ಅಗತ್ಯವಾಗಿವೆ. ಸುಳ್ಳು, ದ್ವೇಷದಿಂದ ಸಮಾಜ ಕಟ್ಟಲಾಗದು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇತಿಹಾಸಕಾರ ಪ್ರೊ.ಪಿ.ವಿ. ನಂಜರಾಜ ಅರಸ್‌ ಮಾತನಾಡಿ. ಟಿಪ್ಪು ಸುಲ್ತಾನ್‌ ಪಟ್ಟಣದಲ್ಲಿ ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ್ದು ಹಿಂದೂ ಧರ್ಮದ ಮೇಲಿನ ದ್ವೇಷದಿಂದಲ್ಲ. ಶತ್ರುಗಳ ಚಲನ ವಲನ ವೀಕ್ಷಣೆಗಾಗಿ ಬೃಹತ್‌ ಗೋಪುರಗಳ ಮಸೀದಿ ನಿರ್ಮಿಸಿದ. ಮಸೀದಿ ವಿಷಯವನ್ನು ಮುಂದಿಟ್ಟುಕೊಂಡು ಕೋಮುಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಮುಸಲ್ಮಾರ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಪ್ರಮೋದ್‌ ಮುತಾಲಿಕ್‌ ಇತರರು ಸಾಮರಸ್ಯ ಕದಡುತ್ತಿದ್ದಾರೆ. ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದರು

ರೈತರಿಗೆ ಭೂಮಿ ಹಂಚಿಕೆ, ಕೃಷಿ ಸಾಲ ನೀಡಿಕೆ, ಮದ್ಯಪಾನ, ದೇವದಾಸಿ ಪದ್ದತಿ, ಜೂಜು ನಿಷೇಧಿಸಿದ ಟಿಪ್ಪು ಸುಲ್ತಾನನನ್ನು ಮತಾಂಧ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಆಳಿದ ಊರಿನಲ್ಲಿ, ಟಿಪ್ಪು ಹೆಸರಿನಲ್ಲಿ ಕಾರ್ಯಕ್ರಮ ಮಾಡಲು ಪೊಲೀಸರು ಅಡ್ಡಿಪಡಿಸಿದರು ಎಂದು ಬಹು ಸಂಸ್ಕೃತಿ ಸಾಮರಸ್ಯ ಮೇಳದ ಸಂಚಾಲಕ ಲಕ್ಷ್ಮಣ ಚೀರನಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರೊ.ಪಿ. ನಂಜರಾಜ ಅರಸ್‌ ಅವರ ‘ಟೀಪೂ ಮಾನ್ಯತೆ ಸಿಗದ ಸುಲ್ತಾನ್‌‘ ಕೃತಿಯನ್ನು ರಂಗಕರ್ಮಿ ಜನ್ನಿ (ಜನಾರ್ದನ್‌) ಬಿಡುಗಡೆ ಮಾಡಿದರು. ಗುಂಬಸ್‌ನಲ್ಲಿ ಟಿಪ್ಪು ಸಮಾಧಿಗೆ ಚಾದರ ಹೊದಿಸಿದರು. ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್‌. ವೆಂಕಟೇಶ್‌, ಸಾಮಾಜಿಕ ಹೋರಾಟಗಾರ ಕೆ.ಎಲ್‌. ಅಶೋಕ್‌, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌, ನಜ್ಮಾ ನಜೀರ್‌ ಚಿಕ್ಕನೇರಳೆ ಮಾತನಾಡಿದರು.

ಇದಕ್ಕೂ ಮುನ್ನ ಕುವೆಂಪು ವೃತ್ತದಿಂದ ಟಿಪ್ಪು ಮಡಿದ ಸ್ಥಳದ ವರೆಗೆ ಸಾಮರಸ್ಯ ನಡಿಗೆ ನಡೆಯಿತು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ ಚೀರನಹಳ್ಳಿ, ಡಾ.ಬಿ. ಸುಜಯಕುಮಾರ್‌, ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್‌. ವೆಂಕಟೇಶ್‌, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌, ನಜ್ಮಾ ನಜೀರ್‌, ಸಾಮಾಜಿಕ ಕಾರ್ಯಕರ್ತ ಕೆ.ಎಲ್‌. ಅಶೋಕ್‌, ಪ್ರೊ.ಹುಲ್ಕೆರೆ ಮಹದೇವು ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!