ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ : ಪ್ರಿಯಾಂಕ್ ಖರ್ಗೆ

Team Newsnap
1 Min Read

ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ತೆಗೆಯುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಅವರು ಪಿಹೆಚ್‌ಡಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಚಕ್ರವರ್ತಿ ಸೂಲಿಬೆಲೆಯವರು ಭಗತ್‌ಸಿಂಗ್, ಸುಖದೇವ್ ಅವರ ಬಗ್ಗೆ ಬರೆದಿರುವುದು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವವಿದೆ. ಅವರ ನಿಜವಾದ ಇತಿಹಾಸ ನಾವು ಹೇಳುತ್ತೇವೆ. ನಾನು ನಾಸ್ತಿಕ ಏಕೆ ಆಗಿದ್ದೇನೆ ಎಂಬ ಭಗತ್ ಸಿಂಗ್ ಪುಸ್ತಕವಿದೆ. ಅದನ್ನು ಚಕ್ರವರ್ತಿ ಸೂಲಿಬೆಲೆ ಓದಲಿ ಸಾಕು. ಇತಿಹಾಸ ತಿರುಚಿಲ್ಲದ ಪಾಠ ನಾವು ಇಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದ್ದೀರಿ. ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸಪ್ ಯೂನಿವರ್ಸಿಟಿಯಲ್ಲಿ ಓದಿರುವವರು ಇವರು. ಅವರೆಲ್ಲಾ ಪಠ್ಯ ರಚನೆ ಮಾಡಲು ಪ್ರಾರಂಭಿಸಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಸೂಲಿಬೆಲೆ ವಿರುದ್ಧ ಕಿಡಿಕಾರಿದರು.

ಸಾಹಿತಿಗಳ ಹಿನ್ನೆಲೆ ಇಲ್ಲದೇ ಬರೆದವರ ಪಠ್ಯ ಯಾಕೆ ಓದಬೇಕು? ಆಡಳಿತ ಪಕ್ಷಕ್ಕೆ ಹತ್ತಿರದವರಾಗಿದ್ದೆ ಎಂದು ಪಠ್ಯ ಹಾಕುವುದು ಸರಿನಾ? ನಾವು ಅದರ ವಿರುದ್ಧ ಇದ್ದೇವೆ.

ಚಕ್ರವರ್ತಿಗಿಂತ ಒಳ್ಳೆಯ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ. ಅವರು ಬರೆದಿರುವ ಪಠ್ಯ ನಾನು ಯಾಕೆ ಓದಲಿ? ನನಗೆ ಓದೋಕೆ ಸಾಕಷ್ಟಿದೆ. ಅವರು ಬರೆದಿರುವ ಪಠ್ಯ ನಾನು ಓದಿಲ್ಲ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ಮಕ್ಕಳಿಗೆ ಅಗತ್ಯವಿಲ್ಲ. ಯಾವುದು ಕೇಸರೀಕರಣವಿದೆ. ಯಾವುದು ಸತ್ಯ ಅಲ್ಲ ಅದೆಲ್ಲವನ್ನೂ ತೆಗೆಯುತ್ತೇವೆ ಎಂದರು.

Share This Article
Leave a comment