ಶಬ್ಧದೊಳಗಿನ ನಿಶ್ಯಬ್ಧ

Team Newsnap
2 Min Read

ಸಾಮಾನ್ಯ ಮನುಷ್ಯನಾಗಿ ಗಲ್ಲಿಯೊಂದರಲ್ಲಿ ಜೀವನ ನಡೆಸುವಾಗ ನಿಮ್ಮ ಮನೆಯ ಹತ್ತಿರ ಯಾರೋ ನೆರೆಯವರು ಅನಿರೀಕ್ಷಿತವಾಗಿ ಬೋರ್ವೆಲ್ ಕೊರೆಸಲು ಪ್ರಾರಂಭಿಸುತ್ತಾರೆಂದುಕೊಳ್ಳಿ. ಹಠಾತ್ ಶಬ್ಧಕ್ಕೆ ತಲೆ ಸಿಡಿದು ಹೋಗುವಂತಹ ಕಿರಿಕಿರಿ ಅನಿಸುತ್ತದೆ. ಸ್ವಲ್ಪ ಹೊತ್ತು ಮನಸ್ಸು ವಿಚಲಿತವಾಗಿ ಬೇಸರಗೊಳ್ಳುತ್ತದೆ.

dr rajshekar nagur
ಡಾ.ರಾಜಶೇಖರ ನಾಗೂರ

ಅರ್ಧಗಂಟೆ ಅದೇ ಕರ್ಕಶ ಶಬ್ಧ ನಿರಂತರವಾದ ಮೇಲೆ, ಆ ಕರ್ಕಶ ಶಬ್ಧವನ್ನು ಮನಸ್ಸು ಅದೆಷ್ಟು ಸುಪ್ತವಾಗಿ ಸ್ವೀಕಾರ ಮಾಡುತ್ತದೆಂದರೆ ಆ ಕರ್ಕಶದ ಶಬ್ಧ ನಿರಂತರವಾಗಿದ್ದರೂ, ಏನೂ ಇಲ್ಲವೇನೋ ಎನ್ನುವಷ್ಟು. ಅಂದರೆ ಆ ಶಬ್ಧದ ಕರ್ಕಶಕ್ಕೆ ಮನಸು ಹೊಂದಿಕೊಂಡು ಶಬ್ಧದೊಳಗಿನ ನಿಶ್ಯಬ್ಧತೆಗೆ ಒಗ್ಗಿ ಹೋಗುತ್ತದೆ. ಶಬ್ಧದೊಳಗಿದ್ದರೂ ನಿಶ್ಯಬ್ಧವಾಗಿಬಿಡುತ್ತದೆ. ಇದೆ ಅನುಭವ ರೈಲಿನ ಹಳಿಯ ಹತ್ತಿರದ ವಾಸಿಗಳಿಗೆ, ದೇವಸ್ಥಾನ, ಮಸೀದಿ, ಚರ್ಚುಗಳ ನೆರೆಹೊರೆಯವರಿಗೆ ತುಂಬಾ ಚೆನ್ನಾಗಿರುತ್ತದೆ.

ಹಾಗೆಯೇ ಬೊರ್ವೆಲ್ ಕೊರೆಯುವುದನ್ನು ನಿಲ್ಲಿಸಿದ ತಕ್ಷಣ, ಮೊದಲಿನ ಬೊರ್ವೆಲ್ ನ ಕರ್ಕಶ ಶಬ್ಧಕ್ಕೆ ಹೊಂದಿಕೊಂಡ ಮನಸ್ಸು ಹಠಾತ್ ನಿಶ್ಯಬ್ಧಕ್ಕೆ ಮತ್ತೆ ವಿಚಲಿತವಾಗುತ್ತದೆ. ಸ್ವಲ್ಪ ಹೊತ್ತಿನ ನಂತರ ಮತ್ತೆ ಯತಾಸ್ಥಿತಿಗೆ ಬರುತ್ತದೆ. ಇಲ್ಲಿ ಗಮನಿಸಬೇಕಾಗಿರುವುದು ಮನಸಿನ ವೈಚಿತ್ರ್ಯ. ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಮನಸ್ಸಿಗಿದೆ. ಶಬ್ಧಕ್ಕೂ, ನಿಶ್ಯಬ್ಧಕ್ಕೂ ಹಾಗೆಯೇ ಕಷ್ಟಕ್ಕೂ, ಸುಖಕ್ಕೂ.

ಜೀವನದಲ್ಲಿ ಬರುವ ಯಾವುದೇ ಅನಿರೀಕ್ಷಿತ ಕಷ್ಟಗಳಿಗೆ ಅಥವಾ ಘಟನೆಗಳಿಗೆ ಮನಸ್ಸು ಮೊದ ಮೊದಲು ವಿಚಲಿತವಾದರೂ ಸ್ವಲ್ಪ ಸಮಯದಲ್ಲಿ ಹೊಂದಿಕೊಂಡು ಅವುಗಳನ್ನು ಸ್ವೀಕರಿಸುವ ಗುಣ ಹೊಂದಿದೆ. ಆದರೆ ಬಹುತೇಕ ಸಮಯದಲ್ಲಿ ಬಹುತೇಕರು ನಾವು ಆ ಮನಸ್ಸನ್ನು ಆ ಕಷ್ಟಕರ ಸ್ಥಿತಿಗೆ ಹೊಂದಿಕೊಳ್ಳಲು ಬಿಡುವುದೇ ಇಲ್ಲ. ಆಗಿ ಹೋಗಿರುವುದನ್ನು ಪುನಃ ಪುನಃ ನೆನೆದು ಯಾತನೆ ಅನುಭವಿಸುತ್ತೇವೆ. ಕಷ್ಟವನ್ನೇ ಕನವರಿಸಿ ಕಣ್ಣೀರಿಡುವುದೇ ಜೀವನ ಎಂದುಕೊಳ್ಳುತ್ತೇವೆ. ಆ ಶಬ್ಧದೊಳಗಿನ ನಿಶ್ಯಬ್ಧವನ್ನು ಹುಡುಕುವ ಪ್ರಯತ್ನ ಮಾಡುವುದೇ ಇಲ್ಲ. ಆ ಶಬ್ಧದಿಂದಾಚೆ ನಾವು ಬರುವುದೇ ಇಲ್ಲ.

ಜೀವನದಲ್ಲಿ ಬರುವ ಕಷ್ಟಗಳನ್ನಂತೂ ಖಂಡಿತವಾಗಿಯೂ, ಯಾರಿಂದಲೂ ತಡೆಯಲಾಗದು. ಆದರೆ ಕಷ್ಟಗಳಿಂದ ಅನುಭವಿಸುವ ಯಾತನೆ (suffering) ಮಾತ್ರ ನಮ್ಮ ನಿಯಂತ್ರಣದಲ್ಲಿಯೇ ಇರುತ್ತದೆ ಎನ್ನುವುದು ಮರೆಯುವಂತಿಲ್ಲ. ಆ ಯಾತನೆಯ ಹೊರೆಯನ್ನು ತಕ್ಕಮಟ್ಟಿಗೆ ಕಡಿಮೆಯಾಗಿಸಿಕೊಳ್ಳಬಹುದು.

ಅವರು ಹೀಗೆಲ್ಲಾ ತೆಗಳಿದರು, ಹೀಗೆಲ್ಲಾ ಅವಮಾನಿಸಿದರು, ಹೀಗೆಲ್ಲಾ ವರ್ತಿಸಿದರು, ಹೀಗೆಲ್ಲಾ ಆಗಿಹೋಯಿತು ಎಂದು ನೊಂದುಕೊಳ್ಳುವುದು ಕಷ್ಟವೇನೋ ಸರಿ. ಆದರೆ ಹೀಗೆಂದರಲ್ಲ, ಹೀಗೆ ವರ್ತಿಸಿದರಲ್ಲ, ಹೀಗಾಯಿತಲ್ಲ ಎಂದು ಪುನಃ ಪುನಃ ನೆನೆದದ್ದನ್ನೆ ನೆನೆದು ಪುನರಾವರ್ತನೆ ಮಾಡಿಕೊಂಡು ನರಳುವುದೇ ಯಾತನೆ (suffering).

ಆ ಕಷ್ಟಗಳು ಮತ್ತು ಅವುಗಳನ್ನು ಅನುಭವಿಸುವ ಯಾತನೆಗಳ ಮಧ್ಯದಲ್ಲಿ ಸೂಕ್ಷ್ಮ ಸಂಬಂಧವಿದೆ. ಆ ಎಳೆಯನ್ನು ತಿಳಿದವರು ಮಾತ್ರ ಶಬ್ಧದೊಳಗೂ ನಿಶ್ಯಬ್ಧವನ್ನು ಕಂಡುಕೊಳ್ಳುಬಲ್ಲರು. ಕಷ್ಟದೊಳಗೂ ಸಮಸ್ಥಿತಿಯನ್ನು ನೋಡಬಲ್ಲರು.

ಈ ಅದೃಶ್ಯ ಬದುಕ ದಾರಿಯಲ್ಲಿ ಬರುವ ಕಷ್ಟಗಳೆಷ್ಟೋ! ಆ ಕಷ್ಟಗಳಿಗೆ ಹೊಂದಿಕೊಳ್ಳುವ ಶಕ್ತಿ ನಮ್ಮಲ್ಲಿಯೇ ಇದೆ. ಇದುವೇ ಶಬ್ಧದೊಳಗಿನ ನಿಶಬ್ಧ. ಕಷ್ಟಗಳಿಗೆ ಹೊಂದಿಕೊಳ್ಳೊಣ. ಬದುಕಿ ಬದುಕನ್ನು ಗೆಲ್ಲೋಣ.

“In life, problems are inevitable, unavoidable but suffering is an option. Hence we need to learn to be in silence even when we are in noise.”

Share This Article
Leave a comment