ಸುಶಾಂತ್ ಸಾವಿನ ರಹಸ್ಯ ಬಯಲು-ಕೊಲೆಯಲ್ಲ , ಆತ್ಮಹತ್ಯೆ

Team Newsnap
2 Min Read

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂಬ ವಾದಗಳನ್ನು ಏಮ್ಸ್ ವರದಿ ಹುಸಿಗೊಳಿಸಿದೆ.

ಜೂನ್ 14ರಂದು ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಏಮ್ಸ್ ತಜ್ಞರ ತಂಡ ಸಿಬಿಐಗೆ ನೀಡುವ ವರದಿ ಬಗ್ಗೆ ಎಲ್ಲರ ಗಮನ ನೆಟ್ಟಿತ್ತು.

ಸಿಬಿಐಗೆ ಏಮ್ಸ್ ತಜ್ಞರ ತಂಡ ವರದಿ ಸಲ್ಲಿಸಿದ್ದಾರೆ. ಸುಶಾಂತ್ ಸಿಂಗ್ ಅವರಿಗೆ ವಿಷ ಪ್ರಾಶನ ಮಾಡಿಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಕುಟುಂಬದವರು ಹಾಗೂ ವಕೀಲರ ಆರೋಪಗಳನ್ನು ನಿರಾಕರಿಸಿದೆ. ಇದು ಕೊಲೆಯ ಪ್ರಕರಣವಲ್ಲ, ಆತ್ಮಹತ್ಯೆ ಎಂದು ಏಮ್ಸ್ ತಂಡ ಸಿಬಿಐಗೆ ಅಭಿಪ್ರಾಯ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಮುಂಬೈ ಪೊಲೀಸರು ಮರಣೋತ್ತರ ಪರೀಕ್ಷೆ ಆಧಾರದಲ್ಲಿ ಇದು ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದರು. ಆದರೆ ಮುಂಬೈ ತನಿಖೆಯ ಬಗ್ಗೆ ಕುಟುಂಬದವರು ಮತ್ತು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ದೊಡ್ಡ ಮಟ್ಟದ ಆಂದೋಲನ ನಡೆದಿತ್ತು.

ಕೊಲೆ ಆಯಾಮ ತಿರಸ್ಕಾರ

ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ವರದಿ ಹಾಗೂ ಅಂಗಾಂಗ ವರದಿಗಳನ್ನು ಪರಿಶೀಲನೆ ನಡೆಸಿದ ಡಾ. ಸುಧೀರ್ ಗುಪ್ತಾ ನೇತೃತ್ವದ ಏಮ್ಸ್ ಸಮಿತಿ ಇದು ಆತ್ಮಹತ್ಯೆ ಎಂದಿದೆ., ಕೊಲೆಯ ಆಯಾಮವನ್ನು ತಿರಸ್ಕರಿಸಿದೆ. ಇದು ಆತ್ಮಹತ್ಯೆ ಎಂದು ಸುಧೀರ್ ಗುಪ್ತಾ ತಿಳಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್, ಹಾರ್ಡ್‌ ಡಿಸ್ಕ್ ಪರಿಶೀಲನೆ
ಮರಣೋತ್ತರ ಪರೀಕ್ಷೆ ಹಾಗೂ ಅಂಗಾಂಗ ಪರೀಕ್ಷೆಯ ಮರು ಮೌಲ್ಯಮಾಪನದ ಆಧಾರದಲ್ಲಿ ಏಮ್ಸ್ ವೈದ್ಯರು ಈ ವರದಿ ನೀಡಿದ್ದಾರೆ. ಅವರ ಬಳಿ ಲಭ್ಯವಿದ್ದ ಶೇ 20ರಷ್ಟು ಅಂಗಾಂಗ ಮಾದರಿಗಳನ್ನು ಪರಿಶೀಲಿಸಲಾಗಿದೆ. ವಿಧಿ ವಿಜ್ಞಾನ ಸಂಸ್ಥೆಗಳು ಸುಶಾಂತ್ ಮನೆಯಿಂದ ವಶಪಡಿಸಿಕೊಳ್ಳಲಾದ ಲ್ಯಾಪ್‌ಟಾಪ್, ಎರಡು ಹಾರ್ಡ್‌ ಡಿಸ್ಕ್‌ಗಳು, ಒಂದು ಕೆನಾನ್ ಕ್ಯಾಮೆರಾ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿವೆ.

ಎಲ್ಲಾ ಆಯಾಮಗಳಲ್ಲಿ ತನಿಖೆ

ಏಮ್ಸ್ ವೈದ್ಯರ ಸಮಿತಿಯು ಸೆ. 29ರಂದು ಸಿಬಿಐಗೆ ವರದಿ ಸಲ್ಲಿಸಿದೆ. ಸುಶಾಂತ್ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆ ನೀಡಿದ ಮಾಹಿತಿಗಳನ್ನು ಪರಿಶೀಲಿಸಲಾಗಿದೆ. ಅದರಾಚೆಗೂ ಕೊಲೆಗೆ ಸಂಬಂಧಿಸಿದಂತಹ ಯಾವುದೇ ಸುಳಿವು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಸಿಬಿಐ, ಆತ್ಮಹತ್ಯೆ ಪ್ರಕರಣದ ಆಯಾಮದಿಂದ ತನಿಖೆ ಮುಂದುವರಿಸಲಿದೆ. ಆತ್ಮಹತ್ಯೆಗೆ ಪ್ರಚೋದನೆಯ ಆಯಾಮದಿಂದಲೂ ತನಿಖೆ ನಡೆಸಲಾಗುತ್ತದೆ. ಏಮ್ಸ್ ವೈದ್ಯರ ವರದಿ ಬಳಿಕವೂ ಎಲ್ಲ ಬಗೆಯ ತನಿಖೆಯನ್ನು ನಡೆಸಲು ಸಿಬಿಐ ಉದ್ದೇಶಿಸಿದೆ.

57 ದಿನದ ತನಿಖೆಯಲ್ಲಿ ಸಿಗದ ಸುಳಿವು

ಕೊಲೆ ಆರೋಪಕ್ಕೆ ಪೂರಕವಾದ ಯಾವುದೇ ಸಣ್ಣ ಸಾಕ್ಷ್ಯ ಲಭ್ಯವಾದರೂ ಐಪಿಸಿ ಸೆಕ್ಷನ್ 302ರ ಅಡಿ ಇದನ್ನು ಕೊಲೆ ಪ್ರಕರಣ ಎಂದು ಸಿಬಿಐ ದಾಖಲು ಮಾಡಲಿದೆ. ಆದರೆ 57 ದಿನಗಳಿಂದ ತನಿಖೆ ನಡೆಸುತ್ತಿರುವ ಸಿಬಿಐಗೆ ಇದುವರೆಗೂ ಅಂತಹ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗಿದೆ. ವಿಧಿ ವಿಜ್ಞಾನ ವರದಿಯೊಂದಿಗೆ ತನಿಖಾ ಸಂಸ್ಥೆಯು ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a comment