ಇಂದಿನ ಆಧುನಿಕ ಯುವ ಸಮೂಹ ಸ್ವಾಮಿ ವಿವೇಕಾನಂದ ಅವರಿಂದ ಪ್ರೇರಣೆ ಹೊಂದಿ ಪ್ರಗತಿಯ ಕಡೆಗೆ ಮುನ್ನಡೆಯುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದುರಂತವಾಗಿದೆ.
ಬಹುಶಃ ಬಹುತೇಕ ಯುವ ಶಕ್ತಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವುದು………….
ಯಾವ ಯುವಕ ತನ್ನ ಕ್ರಿಯಾಶೀಲತೆಯಿಂದ ಸಮಾಜಕ್ಕೆ ತನ್ನ ಕೊಡುಗೆ ನೀಡುವುದನ್ನು ಮರೆತು, ಮಧ್ಯರಾತ್ರಿ ಬೈಕನ್ನು Wheeling ಮಾಡುತ್ತಾ, ತಾನು ಮೋಜು ಅನುಭವಿಸಿ ಇತರರಿಗೆ ತೊಂದರೆ ಕೊಡುತ್ತಾನೋ, ಸಮಾಜಕ್ಕೆ ಕಂಟಕ ಪ್ರಾಯವಾಗುತ್ತಾನೋ, ಅವನೇ ನಿಜವಾದ ಭಾರತೀಯ ಯುವಕ ಎಂದು ಪರಿಗಣಿಸಲಾಗಿದೆ.
ಯಾವ ಯುವತಿ ತನ್ನ ಧೈರ್ಯ ಸಾಮರ್ಥ್ಯ ಸಹನೆಯಿಂದ ಪುರುಷರ ಸಮಾನತೆ ಸಾಧಿಸದೆ, ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿ, ಎಣ್ಣೆ ಹೊಡೆದು, ಕುಣಿದು ಕುಪ್ಪಳಿಸಿ ಸ್ವೇಚ್ಚೆ ಮೆರೆಯುತ್ತಾಳೋ, ಆಕೆಯೇ ನಿಜವಾದ ಭಾರತೀಯ ಯುವನಾರಿ ಎಂಬಂತಾಗಿದೆ.
ಯಾವ ವಿದ್ಯಾರ್ಥಿ ಕಾಲೇಜಿನಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದೆ, ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳದೆ, ಯಾವುದೋ ರಾಜಕೀಯ ಪಕ್ಷಕ್ಕೋ ಅಥವಾ ಸಿದ್ಧಾಂತಕ್ಕೋ ತನ್ನನ್ನು ಶರಣಾಗಿಸಿ ಬಸ್ಸಿಗೆ ಕಲ್ಲು ಹೊಡೆದು ಮುಷ್ಕರ ಮಾಡಿ ಬಕೆಟ್ ಹಿಡಿದು ಜೈಕಾರ ಕೂಗುತ್ತಾನೋ, ಅವನೇ ಭವಿಷ್ಯದ ನಾಯಕನಾಗುವ ಸಾಧ್ಯತೆ ಇದೆ.
ಯಾವ ಯುವಕ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಯ ಮುಖ್ಯ ಅಂಶಗಳಾದ ಉತ್ತಮ ನಾಗರಿಕತೆ, ವಿಶಾಲ ಮನೋಭಾವ, ನಿಜ ದೇಶಪ್ರೇಮವನ್ನು ತಿರಸ್ಕರಿಸಿ, ಅದಕ್ಕೆ ಬದಲಾಗಿ, ಪಾಶ್ಚಾತ್ಯರ ಊಟ ಬಟ್ಟೆ ಡ್ರಿಂಕ್ಸ್ ಫ್ಯಾಷನ್ ಅನುಕರಿಸಿ ನಕಲಿ ದೇಶಭಕ್ತಿ ಪ್ರದರ್ಶಿಸುತ್ತಾರೋ ಅವರೇ ಭಾರತದ ಯುವಶಕ್ತಿ ಎಂದೇ ಭಾವಿಸಲಾಗುತ್ತದೆ.
ಯಾವ ಯುವಕರು ಎಷ್ಟು ಬೇಗ ಯಾವ ಭ್ರಷ್ಟ ಮಾರ್ಗವನ್ನಾದರೂ ಅನುಸರಿಸಿ ದಿಢೀರ್ ಶ್ರೀಮಂತರಾಗುತ್ತಾರೋ ಅವರೇ ಭಾರತದ ಯುವಶಕ್ತಿಯ ವಕ್ತಾರರಾಗುತ್ತಿದ್ದಾರೆ.
ಯಾರು ನಿಜವಾದ ಧೀರರೆಂದರೆ, ಯಾವ ಯುವಕನನ್ನು ನೋಡಿ ಬೀದಿಯಲ್ಲಿ ಹೋಗುವ ಹೆಣ್ಣು ಮಕ್ಕಳು ಅವನಿಗೆ ಹೆದರಿ ಬೇರೆ ದಾರಿಯಲ್ಲಿ ಹೋಗುವಂತೆ ಮಾಡುವರೋ ಅವರೇ ವೀರ ಯುವಕರ ಪ್ರತಿನಿಧಿಗಳು ಎಂದು ಧೈರ್ಯವಾಗಿ ಹೇಳಲಾಗುತ್ತದೆ.
ನಿಜವಾದ ಜಾಗೃತ ಮನಸ್ಥಿತಿಯ ಯುವತಿಯರೆಂದರೆ,
ಕೆಲವು ಸಂದರ್ಭಗಳಲ್ಲಿ, ಯಾರ ಸಂಸಾರ ಹಾಳಾದರು, ಮಕ್ಕಳು ಹಾಳಾದರು, ಸಮಾಜ ಹಾಳಾದರು ತನ್ನ ಸ್ವೇಚ್ಛೆಗೆ ಅಡ್ಡಬಂದ ಗಂಡನನ್ನು ಸುಳ್ಳುಕೇಸು ಹಾಕಿ ಜೈಲಿಗೆ ಕಳಿಸುತ್ತಾಳೋ ಅವಳನ್ನೇ ಆದರ್ಶ ಯುವತಿ ಎಂದು ಕರೆಯಲಾಗುತ್ತದೆ. ( ದುರುಪಯೋಗ ಪಡಿಸಿಕೊಂಡವರಿಗೆ ಮಾತ್ರ )
ಯುವ ಶಕ್ತಿಯೆಂದರೆ,
ಯಾರು ಸಾವಿರಾರು ವರ್ಷಗಳ ಅನುಭವದ ಆಧಾರದಲ್ಲಿ ರೂಪಿತವಾದ ಅತ್ಯುತ್ಕೃಷ್ಟ ಮೌಲ್ಯಗಳನ್ನು ತಿರಸ್ಕರಿಸಿ ಉಢಾಪೆ ಮಾಡುತ್ತಾ, ನಕಲಿ ದೇಶಭಕ್ತಿ ಪ್ರದರ್ಶಿಸುತ್ತಾ,
ಸ್ವಂತ ಯೋಚಿಸುವ ಶಕ್ರಿ ಇಲ್ಲದ, ದೇಶವನ್ನು ಜಾತಿ ಧರ್ಮದ ಆಧಾರದಲ್ಲಿ ಒಡೆಯುವ ಸಾಮರ್ಥ್ಯವಿರುವುದೋ ಅವರೇ ಎನ್ನಲಾಗುತ್ತದೆ.
ಯುವಕರೆಂದರೆ,
ಸಮಸ್ಯೆಗಳು ಬಂದಾಗ – ಪ್ರೇಮ ವೈಫಲ್ಯಗಳಾದಾಗ – ಸಂಕಷ್ಟ ಎದುರಾದಾಗ, ಅರಿವಿನಿಂದ – ಧ್ಯಾನದಿಂದ ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸದೆ ,
” ಸಕಲ ಸಮಸ್ಯೆಗಳಿಗೂ ಸಾರಾಯಿಯೇ ಮದ್ದು ” ಎಂದು ಭಾವಿಸಿ ಅದಕ್ಕೇ ಶರಣಾಗುವ ಅಥವಾ ಆತ್ಮಹತ್ಯೆ ದಾರಿ ಹಿಡಿಯುವ ಸಮೂಹ ಎಂದೇ ಹೇಳಬಹುದಾಗಿದೆ.
ಯುವಕರೆಂದರೆ ,
ಜ್ಞಾನಕ್ಕೆ ಬದಲು ದುಡ್ಡು ,
ಧ್ಯಾನಕ್ಲೆ ಬದಲು ಗಾಂಜಾ ,
ತಾಳ್ಮೆಗೆ ಬದಲು ಮಚ್ಚು ,
ಕ್ಷಮೆಗೆ ಬದಲು ಕೊಲೆ,
ಎಂಬ ಪರ್ಯಾಯಗಳನ್ನು ತಿಳಿದಿರುವವರು ಎಂದೇ ಭಾವಿಸಲಾಗುತ್ತದೆ.
ಇದೇ ಏನು ಆ ಮಹಾತ್ಮನು ಸಾರಿದ ಸಂದೇಶದ ಸಾರಾಂಶ,
ಇದೇ ಏನು ಆ ಯೋಗಿ ವಿಶ್ವಕ್ಕೆ ಸಾರಿದ ಭಾರತೀಯ ಸಂಸ್ಕೃತಿ.
ಕ್ಷಮಿಸಿ.
ಸಭ್ಯತೆಯ ಸೋಗಿನಲ್ಲಿ ಆತ್ಮವಂಚನೆ ಮಾಡಿಕೊಳ್ಳವ Pseudo ಸಮಾಜದೆಡೆಗೆ ನಮ್ಮ ಯುವಶಕ್ತಿ ಸಾಗುತ್ತಿದೆಯೇ ಎಂದು ಆತಂಕವಾಗುತ್ತಿದೆ.
ಆದರೂ ಈ ಮಾತೃಭೂಮಿ ಹಾಗಾಗಲಿಕ್ಕೆ ಬಿಡದೆ ಮುಂದಿನ ದಿನಗಳು ಯುವಕರ ಪಾಲಿಗ ಆಶಾದಾಯಕವಾಗಲಿ – ಆದರ್ಶವಾಗಲಿ – ಸ್ಪೂರ್ತಿದಾಯಕವಾಗಲಿ ಎಂದು ಆಶಿಸುತ್ತಾ ………….
ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಪರಿಹಾರದ ಮೊದಲ ಹೆಜ್ಜೆ. ಹಾಗೆಯೇ ಈ ಯುವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಹ ಅಲ್ಲಿಂದಲೇ ಹುಡುಕಬೇಕಿದೆ. ಯಾವ ವಿಷಯಗಳಿಂದ ಯುವ ಶಕ್ತಿ ದಾರಿ ತಪ್ಪುತ್ತಿದೆಯೋ ಅದನ್ನೇ ಗುರಿಯಾಗಿಸಿ ಮತ್ತು ಅದಕ್ಕೆ ಪರ್ಯಾಯ ಅವಕಾಶಗಳನ್ನು ಸೃಷ್ಟಿಸಿ ಅವರನ್ನು ಮತ್ತೆ ಪ್ರಗತಿ ಪಥದತ್ತ ಸಾಗುವಂತೆ ಮಾಡುವ ಜವಾಬ್ದಾರಿ ನಮೆಲ್ಲರದು.
ಬಾರ್ ಸಂಸ್ಕೃತಿಯಿಂದ ಗ್ರಂಥಾಲಯ ಸಂಸ್ಕೃತಿಗೆ,
ಡಾಬಾ ಸಂಸ್ಕೃತಿಯಿಂದ ಕ್ರೀಡಾ ಸಂಸ್ಕೃತಿಗೆ,
ಮೊಬೈಲ್ ಸಂಸ್ಕೃತಿಯಿಂದ ಓದುವ ಸಂಸ್ಕೃತಿಗೆ,
ಹಣ ಸಂಸ್ಕೃತಿಯಿಂದ ಗುಣ ಸಂಸ್ಕೃತಿಗೆ,
ಸಂಬಂಧಗಳ ತಿರಸ್ಕಾರ ಸಂಸ್ಕೃತಿಯಿಂದ ಪುರಸ್ಕಾರ ಸಂಸ್ಕೃತಿಗೆ,
ಸಂಕುಚಿತ ಮನೋಭಾವ ಸಂಸ್ಕೃತಿಯಿಂದ ಸಮಗ್ರ ಚಿಂತನೆಯ ಸಂಸ್ಕೃತಿಗೆ……….
ಯುವಕರಿಗೆ ಆದರ್ಶ ಸಂಸ್ಕೃತಿ ನಿರ್ಮಿಸುವ ಹೊಣೆಗಾರಿಕೆ ನಾವು ಹೊರಬೇಕಿದೆ.
ಕೇವಲ ಬಾಡಿಗೆ ಭಾಷಣಕಾರರಾಗದೆ ನಿಜ ಬದುಕಿನ ಮಾದರಿ ವ್ಯಕ್ತಿಗಳಾಗಿ ಅವರಿಗೆ ದಾರಿ ತೋರಬೇಕಿದೆ.
ಇದೇ ಸ್ವಾಮಿ ವಿವೇಕಾನಂದರಿಗೆ ನಾವು ಕೊಡಬಹುದಾದ ನೈಜ ಕಾಣಿಕೆ.
- ವಿವೇಕಾನಂದ. ಹೆಚ್ ಕೆ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ