ಮನುಷ್ಯನಿಗೆ ಭರವಸೆಯೇ ಜೀವನಾಧಾರ. ಭರವಸೆ ಇಲ್ಲದೇ ಹೋದರೆ ಬದುಕು ಕತ್ತಲಿನಲ್ಲಿ ನೂಕಿದಂತೆ ಸರಿ. ನಿರಾಸೆ, ಹತಾಶೆಯ, ನೋವು ಕಂಡ ವ್ಯಕ್ತಿಗಳೆಲ್ಲರೂ ಭರವಸೆಯಲ್ಲೇ ಜೀವನ ಸವೆಸಿದವರು. ಭರವಸೆ ಎಂದರೆ ಏನು? ಎಂಬ ಪ್ರಶ್ನೆ ಉತ್ತರ ಹುಡುಕುವುದಕ್ಕಿಂತ ಮಿಗಿಲಾಗಿ ಭರವಸೆಯ ಫಲದ ಅನುಭವ ಪಡೆಯುವುದೇ ಲೇಸು.ದೇವರಿದ್ದಾನೆ. ಈ ಕಷ್ಟದಿಂದ ನನ್ನನ್ನು ಕಾಪಾಡುತ್ತಾನೆ ಎಂಬ ಅದಮ್ಯ ಭರವಸೆ ಇಟ್ಟುಕೊಂಡವರಿಗೆ ಕೊನೆಯ ಪ್ರಯತ್ನದಲ್ಲೇ ಯಶಸ್ಸು ಕಂಡ ಉದಾಹರಣೆಗಳು ಇವೆ. ಆದರೆ ದೇವರ ಬಗ್ಗೆ ಅರೆ, ಬರೆ ಭರವಸೆ , ನಂಬಿಕೆ ಇಟ್ಟುಕೊಂಡವರು ಜೀವನದಲ್ಲಿ ಈಜಿ ದಡ ಸೇರಿದ್ದು ತೀರಾ ಅಪರೂಪ.
ದೇವರಿದ್ದಾನೆಯೇ ? ಎಲ್ಲಿದ್ದಾನೆ? ನಿಮಗೆ ಕಂಡಿದ್ದಾನೆಯೇ ?ನಮಗೆ ಯಾಕೆ ಕಾಣುವುದಿಲ್ಲ. ಕಾಣಲು ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆ ಮಾಡುವವರು ಸಾಕಷ್ಟು ಜನರಿದ್ದಾರೆ. ತಾಯಿಯೇ ಪ್ರತ್ಯಕ್ಷದೇವರು. ಆಕೆಯನ್ನು ದೇವರೆಂದು ಒಪ್ಪಿಕೊಳ್ಳಲು ತಯಾರಿಲ್ಲದವರು ಕಾಣದ ದೇವರನ್ನು ಹೇಗೆ ತಾನೆ ಹುಡುಕಲು ಸಾಧ್ಯ? ದೇವರಿಲ್ಲದ ಸ್ಥಳದಲ್ಲಿ ಹೋಗಿ ಬಾಳೆ ಹಣ್ಣು ತಿಂದು ಬಾ ಎಂದು ಕನಕದಾಸರನ್ನು ಕಳಿಸಿದಾಗ ಅವರು ಬಾಳೆ ಹಣ್ಣು ತಿನ್ನದೇ ವಾಪಸ್ಸು ತಂದರು. ನಿರ್ವಿಕಾರ ರೂಪದಲ್ಲಿರುವ ದೇವರಿಗೆ ಕಾಣದಂತೆ ನಾನು ಬಾಳೆ ಹಣ್ಣು ತಿನ್ನಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ವಾಪಸ್ಸು ತಂದೆ ಎಂದು ಗುರುಗಳಿಗೆ ಹೇಳಿದರಂತೆ. ಅದಕ್ಕೆ ಹೇಳುವುದು. ಯದ್ಭಾವಂ ತದ್ ಭವತಿಃ. ನಮ್ಮ ಭಾವ ಭರವಸೆ, ನಂಬಿಕೆಗಳು ನಮ್ಮನ್ನು ಗಟ್ಟಿ ಮಾಡುತ್ತವೆ. ಗುರಿ ಮುಟ್ಟಿಸುತ್ತವೆ. ಅಚಲ ವಿಶ್ವಾಸಕ್ಕೂ ಎಡೆ ಮಾಡಿಕೊಡುತ್ತವೆ.
ದೇವರಲ್ಲಿ ಅಚಲವಾದ ನಂಬಿಕೆ ಮತ್ತು ದೇವರು ನಮಗೆ ಸಹಾಯ ಮಾಡುತ್ತಾನೆ ಎಂಬ ಭರವಸೆ ಇದ್ದರೆ ದೇವರು ಬರದೇ ಹೋದರೂ ಯಾವುದೋ ರೂಪದಲ್ಲಿ ನಮಗೆ ಆತನಿಂದ ಸಹಾಯ ಸಿಗುತ್ತದೆ. ಆದರೆ ಸಹಾಯ ಸಿಕ್ಕಾಗ, ದೇವರು ಮಾಡಿದ್ದು ಎಂದು ಸ್ಮರಿಸುವ ಜನ ತೀರಾ ಕಡಮೆ. ಸಹಾಯ ಮಾಡಿದ ವ್ಯಕ್ತಿಯನ್ನು ನಾವು ವೈಭವೀಕರಿಸುತ್ತೇವೆ. ದೇವರನ್ನು ಮರೆಯುತ್ತೇವೆ. ಆದರೆ ಆ ವ್ಯಕ್ತಿಗೆ ಸಹಾಯ ಮಾಡುವಂತೆ ಪ್ರೇರಣೆ ಮತ್ತು ಬುದ್ಧಿ ನೀಡಿದ್ದು ದೇವರೇ ಎನ್ನುವುದು ಮಾತ್ರ ಮನುಷ್ಯರಿಗೆ ನಿಲುಕದ ಉತ್ತರ.
ಈ ವಾರ ಮತ್ತೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ಸತ್ಯ ಘಟನೆಯೊಂದು ದೇವರಲ್ಲಿ ಇಟ್ಟಿರುವ ಭರವಸೆ ನಮ್ಮನ್ನು ಹೇಗೆ ಕಾಪಾಡುತ್ತದೆ ಎನ್ನುವುದು ಸುಂದರ ಉದಾಹರಣೆಯಾಗಿದೆ.
ವಿಶ್ವ ವಿಖ್ಯಾತ ಕ್ಯಾನ್ಸ ರ್ ರೋಗ ತಜ್ಞ ವೈದ್ಯರೊಬ್ಬರು ಜಾಗತೀಕ ಪ್ರಶಸ್ತಿಯೊಂದನ್ನು ಸ್ವೀಕರಿಸಲು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ತಾಂತ್ರಿಕ ದೋಷದಿಂದ ವಿಮಾನ ಬೇರೊಂದು ಏರ್ ಪೋರ್ಟ್ ಇಳಿಯಿತು. ಮುಂದಿನ ವಿಮಾನಕ್ಕೆ ಹತ್ತು ಗಂಟೆ ನಂತರವಿತ್ತು. ಕಾರಿನ ಮೂಲಕ ಹೋದರೆ ಕೆಲವೇ ಗಂಟೆಯಲ್ಲಿ ಪ್ರಶಸ್ತಿ ಸ್ವೀಕರಿಸುವ ಸ್ಥಳ ತಲುಪಬಹುದು ಎಂದು ತಿಳಿದು, ಕಾರು ಬಾಡಿಗೆ ಪಡೆದು ಹೊರಟರು.ದುರ್ದೈವ ಎಂದರೆ ಇದಕ್ಕಿದ್ದಂತೆ ಹವಾಮಾನ ಬದಲಾಯಿತು. ಧಾರಕಾರ ಮಳೆ ಸುರಿಯ ತೊಡಗಿತು. ಏಲ್ಲೋ ಹೋಗ ಬೇಕಿದ್ದ ಕಾರು ಏಲ್ಲೆಲ್ಲೋ ಸುತ್ತಾಡಿಸಿತ್ತು. ದಣಿವು, ಹಸಿವಿನಿಂದ ವೈದ್ಯರು ಕಂಗಾಲಾದರು. ವಿಪರೀತ ಮಳೆ . ಕತ್ತಲು ಆವರಿಸಿತ್ತು. ಮುಂದಿನ ಪಯಣ ಅಸಾಧ್ಯವಾಗಿತ್ತು. ವೈದ್ಯರು ತಂಗಲು ಮನೆಯೊಂದನ್ನು ಹುಡುಕಲು ಆರಂಭಿಸಿದರು. ಅವರಿಗೆ ದೂರದಲ್ಲಿ ಮುರಕಲು ಸಣ್ಣ ಮನೆಯೊಂದು ಕಣ್ಣಿಗೆ ಬಿದ್ದಿತು. ಅಲ್ಲಿಯೇ ಆಶ್ರಯ ಪಡೆಯಲು ನಿಶ್ಚಯಿಸಿ ವೈದ್ಯರು ಆ ಮನೆಯ ಬಾಗಿಲು ತಟ್ಟಿದರು.
ಆ ಮನೆಯ ಬಾಗಿಲು ತೆರೆದ ಮಹಿಳೆಯೊಬ್ಬರಿಗೆ ನಡೆದ ಘಟನೆ ವಿವರಿಸಿ ಆಶ್ರಯ ನೀಡುವಂತೆ ಕೋರಿದರು. ಆ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಮಹಿಳೆ ಮುಂದಾದಳು .ಬಿಸಿ ಕಾಫಿ ಮತ್ತು ಊಟ ಉಪಚರಿಸಿ ವಿಶ್ರಮಿಸಲು ಅವಕಾಶವನ್ನೂ ನೀಡಿದಳು.ಅವಳು ಕೆಲ ಹೊತ್ತಿನ ನಂತರ ತೊಟ್ಟಿಲ್ಲೊಂದರ ಮುಂದೆ ಕುಳಿತು ಪ್ರಾರ್ಥಿಸ ತೊಡಗಿದಳು, ವೈದ್ಯರಿಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದಳು .ಅದಕ್ಕೆ ವೈದ್ಯರು. ನನಗೆ ಈ ಪ್ರಾರ್ಥನೆಯಲ್ಲಿ ಯಾವ ನಂಬಿಕೆಯೂ ಇಲ್ಲ. ನಾನು ಕೇವಲ ದುಡಿಮೆಯಲ್ಲಿ ಮಾತ್ರ ವಿಶ್ವಾಸ ಇಡುತ್ತೇನೆ ಎಂದು ನಯವಾಗಿ ಹೇಳಿದರು. ಅವಳು ತೊಟ್ಟಿಲ ಮುಂದೆ ಮುಂಡಿಯೂರಿ ಕುಳಿತು ನಿರಂತರ ಪ್ರಾರ್ಥನೆ ಮಾಡುವುದನ್ನು ನೋಡಿದರು. ಅವಳ ಪ್ರಾರ್ಥನೆಯ ನಂತರ ವೈದ್ಯರು ಕೇಳಿದರು. ಯಾತಕ್ಕಾಗಿ ನೀನು ದೇವರನ್ನು ಪ್ರಾರ್ಥಿಸುತ್ತಿದ್ದಿಯಾ? ದೇವರು ನಿನ್ನ ಪ್ರಾರ್ಥನೆ ಈಡೇರಿಸುವನೆಂಬ ಭರವಸೆ, ನಂಬಿಕೆ ಇದೆಯಾ? ಎಂದು ಪ್ರಶ್ನೆ ಮಾಡಿದರು.
ಅವಳು ಹೇಳಿದಳು. ನನ್ನ ಮಗುವಿಗೆ ಕ್ಯಾನ್ಸರ ರೋಗವಿದೆ. ಜೀವಕ್ಕೆ ಮಾರಕವೂ ಆಗಲಿದೆ. ಆದರೆ ದೂರದ ಪಟ್ಟಣದಲ್ಲಿರುವ ವಿಶ್ವ ವಿಖ್ಯಾತ ವೈದ್ಯರು ಮಾತ್ರ ಗುಣಪಡಿಸಬಲ್ಲರು. ಅವರ ಬಳಿ ಹೋಗಲು ನನ್ನಲ್ಲಿ ಹಣ ಇಲ್ಲ. ಆದರೆ ಪರಮಾತ್ಮ ನನ್ನ ಪ್ರಾರ್ಥನೆಗೆ ಏನಾದರೊಂದು ಮಾರ್ಗವನ್ನು ನಿಶ್ಟಯವಾಗಿ ತೋರಿಸುತ್ತಾನೆ ಎಂಬ ಭರವಸೆ ಮಾತ್ರ ನನ್ನಲ್ಲಿ ಇರುವುದರಿಂದ ನಾನು ನಿರಂತರವಾಗಿ ದೇವರಲ್ಲಿ ಭರವಸೆ ಇಟ್ಟು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದಳು. ಗಾಡ್ ಈಸ್ ಗ್ರೇಟ್. ದೇವರು ಎಷ್ಟು ದೊಡ್ಡವನು ಎಂದು ವೈದ್ಯರು ಆಕೆಯ ನಂಬಿಕೆ, ಭರವಸೆಯ ಮಾತುಗಳನ್ನು ಕೇಳಿ ಮೂಲೆಯಲ್ಲಿ ನಿಂತು ಕಣ್ಣೀರು ಹಾಕ ತೊಡಗಿದರು.
ವಿಪರ್ಯಾಸ ನೋಡಿ. ನಾನು ಹೊರಟಿದ್ದ ವಿಮಾನ ಮಧ್ಯದಲ್ಲೇ ಕೆಟ್ಟು ನಿಂತಿತು. ಕಾರು ಹಿಡಿದು ಪ್ರಯಾಣ ಮುಂದುವರೆಸಿದಾಗ ಮಾರ್ಗ ಮಧ್ಯೆ ಧಾರಕಾರ ಮಳೆ.ಈ ಮಳೆ ಗಾಳಿ, ಕತ್ತಲಿಗೆ ರಸ್ತೆ ತಪ್ಪಿ ಹೋಯಿತು. ಭೌತಿಕ ಪ್ರಪಂಚದಲ್ಲಿ ಸಿಲುಕಿರುವ ನನ್ನ ಬಳಿ ಸಾಕಷ್ಟು ಹಣ, ಜ್ಞಾನ ಎಲ್ಲವೂ ಇದೆ. ಆದರೆ ಕೇವಲ ನಿನ್ನ ಬಳಿ ಭರವಸೆಯ ಅಪಾರ ಸಂಪತ್ತು ಇರುವುದರಿಂದಲೇ ಆ ನಿನ್ನ ದೇವರು ನಿನ್ನ ಬಳಿ ನನ್ನನ್ನು ಕಳುಹಿಸಿದ್ದಾನೆ. ಚಿಂತೆ ಬಿಡು ಮಗುವಿನ ಆರೋಗ್ಯದ ಹೊಣೆ ಈಗ ನನ್ನ ಮೇಲೆ. ನೀನು ದೇವರ ಮೇಲಿಟ್ಟಿರುವ ಭರವಸೆ ಸಾರ್ಥಕವಾಯಿತು. ನಾನು ಕ್ಯಾನ್ಸರ್ ತಜ್ಞ ವೈದ್ಯನಾಗಿದ್ದೇನೆ. ಇನ್ನು ಮುಂದೆ ನಿನ್ನ ಮಗು ಕಾಪಾಡುವ ಹೊಣೆ ನನ್ನದು ಎಂದು ವೈದ್ಯರು ಆ ಮಹಿಳೆಗೆ ಹೇಳಿದಾಗ, ಆ ವೈದ್ಯರನ್ನು ಮಹಿಳೆ ದೇವರ ರೂಪದಲ್ಲಿ ನೋಡಿದಳು.
ಜೀವನದಲ್ಲಿ ಯಾವುದು ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಅಜ್ಞಾತ ಕಾರಣವಿದ್ದೆ ಇರುತ್ತದೆ. ಇದು ಭಗವಂತನ ಪ್ರೇರಣೆ ಮತ್ತು ನಿಸರ್ಗದ ನಿಯಮ ಎಂಬುದು ನಮಗೆ ಗೊತ್ತಾಗುವುದಿಲ್ಲ.
ಕೆ. ಎನ್. ರವಿ
ಅತ್ಯುತ್ತಮ ವಾದ ಬರವಣಿಗೆ