December 25, 2024

Newsnap Kannada

The World at your finger tips!

deepa1

ನನಸಾಗಬಹುದಾದ ನಾಗರೀಕತೆಯ ಹೊಸ ಮನ್ವಂತರ

Spread the love

ಸಿನಿಮಾ ಮಾಡೋಣ ಬನ್ನಿ
ಹೊಡೆದಾಟಗಳಿಲ್ಲದ – ರಕ್ತ ಚೆಲ್ಲದ – ಕುತಂತ್ರಗಳಿಲ್ಲದ –
ಆಕರ್ಷಕ – ಸೃಜನಾತ್ಮಕ – ಮನೋರಂಜನಾತ್ಮಕ –
ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರ.

ಸಾಹಿತ್ಯ ರಚಿಸೋಣ ಬನ್ನಿ,
ದ್ವೇಷಕಾರದ – ವಿಷಕಕ್ಕದ – ಪ್ರತಿಷ್ಠೆ ಮೆರೆಯದ –
ಚೆಂದದ ಭಾಷೆಯ – ಪ್ರೀತಿಯ ಚುಂಬಕದ – ಮಾನವೀಯ ಬರಹ.

ಚಿತ್ರ ಬಿಡಿಸೋಣ ಬನ್ನಿ,
ಆತ್ಮವಂಚನೆಯಿಲ್ಲದ – ಬೆಂಕಿಯುಗುಳದ – ಅಶ್ಲೀಲವಲ್ಲದ – ಪ್ರಕೃತಿಯ ಮಡಿಲಿನ – ಸೌಂದರ್ಯದ ಬೀಡಿನ – ಮನಮೋಹಕ ದೃಶ್ಯ .

ಸಂಗೀತ ನುಡಿಸುತ್ತಾ ಹಾಡೋಣ ಬನ್ನಿ,
ಅಹಂಕಾರಗಳಿಲ್ಲದ – ಪಂಥಬೇದಗಳಿಲ್ಲದ – ಕೃತಿಮತೆಯಿಲ್ಲದ –
ಮನಕೆ ಮುದನೀಡುವ – ಆಹ್ಲಾದಕರ – ಆರಾಧನಾ ಭಾವದಿಂದ.

ಪರಿಸರ ಉಳಿಸೋಣ ಬನ್ನಿ,
ವಿಷಗಾಳಿಯಿಲ್ಲದ – ಕಲ್ಮಶನೀರಲ್ಲದ – ಆಹಾರ ಕಲಬೆರಕೆಯಾಗದ – ಹಚ್ಚಹಸಿರಿನ – ಸ್ವಚ್ಚ ಗಾಳಿಯ – ಶುಧ್ಧ ನೀರಿನ ಪ್ರಕೃತಿ.

ಸಂಘಟಿತರಾಗೋಣ ಬನ್ನಿ,
ಸ್ವಾರ್ಥಿಗಳಾಗದ – ಘರ್ಷಣೆಗಳಿಲ್ಲದ – ಸೇವಾಮನೋಭಾವದ –
ತ್ಯಾಗದ – ಪ್ರಾಮಾಣಿಕತೆಯ – ಅರ್ಪಣಾಮನೋಭಾವದ ಸಂಸ್ಥೆಯೊಂದಿಗೆ.

ಆಡಳಿತ ನಡೆಸೋಣ ಬನ್ನಿ,
ಭ್ರಷ್ಟತೆಯಿಲ್ಲದ – ದೌರ್ಜನ್ಯಗಳಿಲ್ಲದ – ಅನ್ಯಾಯ ಮಾಡದ – ಸಮಾನತೆ – ಸ್ವಾತಂತ್ರ್ಯ – ಸೋದರತೆಯ ಜೀವಪರ ಸರ್ಕಾರ.

ಬದುಕೋಣ ಬನ್ನಿ,
ಚಿಂತೆಗಳಿಲ್ಲದ – ಜಿಗುಪ್ಸೆಗಳಿಲ್ಲದ – ನೋವುಗಳಿಲ್ಲದ –
ನೆಮ್ಮದಿಯ – ಆನಂದದಾಯಕ – ಸುಖದ ಜೀವನ .

ಮನುಷ್ಯರಾಗೋಣ ಬನ್ನಿ,
ಕಪಟತನವಿಲ್ಲದ – ದುರ್ಬುದ್ಧಿಗಳಿಲ್ಲದ – ಮನೋವಿಕಾರಗಳಿಲ್ಲದ –
ಜ್ಞಾನಸ್ಥ – ಧ್ಯಾನಸ್ಥ – ಯೋಗಸ್ಥ – ಕರ್ಮಸ್ಥ – ಜೀವಿಗಳಾಗಿ.

ಇದು ತಿರುಕನ ಕನಸಲ್ಲ ………

ನನಸಾಗಬಹುದಾದ ನಾಗರೀಕತೆಯ ಹೊಸ ಮನ್ವಂತರ .

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!