December 23, 2024

Newsnap Kannada

The World at your finger tips!

deepa1

ಮನಸ್ಸು ಮಾನವೀಯ ಪ್ರೀತಿಯನ್ನೇ ಬಯಸುತ್ತದೆ….

Spread the love

ಏನ್ರೀ , ಪ್ರತಿದಿನ ಈ ಸಮಾಜದ ಹುಳುಕುಗಳನ್ನು ಮಾತ್ರ ಬರೆಯುತ್ತೀರಿ. ಇಲ್ಲಿನ ಒಳ್ಳೆಯದು ನಿಮಗೆ ಕಾಣುವುದಿಲ್ಲವೇ ? ನಮ್ಮ ಸುತ್ತಮುತ್ತ ಅನೇಕ ಒಳ್ಳೆಯ ವಿಷಯಗಳಿವೆ ಅದನ್ನೂ ಬರೆಯಿರಿ ಎಂದು ಗೆಳೆಯರು ಆಗಾಗ ಹೇಳುತ್ತಿರುತ್ತಾರೆ. ಅದಕ್ಕಾಗಿ……….

ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5/30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ….
ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತಾವರಣ ಗಿಡಮರಗಳ ನಡುವಿನಿಂದ ತೂರಿಬಂದ ಪಕ್ಷಿಗಳ ಕಲರವ – ಮಂದಿರದಿಂದ ಭಕ್ತಿಗೀತೆ ಮಸೀದಿಯಿಂದ ಪ್ರಾರ್ಥನೆ ಚರ್ಚಿನಿಂದ ಗಂಟೆಯ ಶಬ್ದ ಮೂಡಿ ಬರುತ್ತಿದ್ದು ಸಂಗೀತದ ರಸಾನುಭವ ಮುದನೀಡಿತು.
ಬೆಳಗ್ಗೆ ಸೇವಿಸಿದ್ದ ಅಸ್ಸಾಂನ ರುಚಿ ರುಚಿಯಾದ ಮಸಾಲಾ ಟೀ ಸ್ವಾದ ಗಂಟಲಿನಿಂದ ಕೆಳಗಿಳಿದು ದೇಹ ಬೆಚ್ಚಗಾಗಿಸಿ ಸಂಭ್ರಮಿಸಿತು…

ಹಾಗೇ ಸ್ವಲ್ಪ ದೂರ ನಡೆಯುತ್ತಿದ್ದಂತೆ ಒಂದು ರಸ್ತೆಯ ಬದಿಯಲ್ಲಿ ಸುಮಾರು 10 ವರ್ಷದ ಆಸುಪಾಸಿನ ಒಂದಷ್ಟು ಮಕ್ಕಳು ಆ ನಡುಗುವ ಚಳಿಯಲ್ಲೂ ಆ ದಿನದ ಪತ್ರಿಕೆಗಳನ್ನು ವಿಂಗಡಿಸಿ ಸೈಕಲ್ ಗೆ ಕಟ್ಟಿ ಗಡಿಬಿಡಿಯಲ್ಲಿ ಹೊರಡುವ ಆತುರದಲ್ಲಿದ್ದರು. ಅವರಿಗೆ ಸಿಗುವ ಸಂಬಳ ತಿಂಗಳಿಗೆ 300/500. ಅಷ್ಟೆ.
ಎಷ್ಟೋ ದಶಕಗಳಿಂದ ಇರುವ ಬಾಲ ಕಾರ್ಮಿಕ ನಿಷೇಧ ಕಾನೂನು ಮುಸುಮುಸು ನಗುತ್ತಿತ್ತು….
ಪಕ್ಕದಲ್ಲಿಯೇ ಸುಂದರ ಹುಡುಗಿಯೊಬ್ಬಳು ತನ್ನ ಮುದ್ದಿನ ಪುಟ್ಟ ನಾಯಿಮರಿಗೆ ಬೆಚ್ಚನೆಯ ಹೊದಿಕೆ ಹೊದಿಸಿ ತನ್ನ ಎದೆಗವುಚಿಕೊಂಡು ಸಾಗುತ್ತಿದ್ದ ದೃಶ್ಯ ನನ್ನ ಮನ ಸೆಳೆಯಿತು…

ಹಾಗೇ ಸಾಗುತ್ತಿದ್ದಂತೆ ಅಲ್ಲೊಂದು ಬಸ್ ನಿಲ್ದಾಣವಿದೆ. ಅಲ್ಲಿ ಕಣ್ಣಾಯಿಸಿದಾಗ ಮೂಲೆಯೊಂದರಲ್ಲಿ ಅರೆಬೆತ್ತಲೆಯಾಗಿ ಮಧ್ಯ ವಯಸ್ಸಿನ ಹೆಣ್ಣೊಂದು ಅಸ್ತವ್ಯಸ್ತವಾಗಿ ಮಲಗಿತ್ತು. ಆಕೆಯ ಮುದ್ದು ಮಗು ತಾಯಿ ಮಡಿಲ ಸೀರೆಯ ಸೆರಗಿನಲ್ಲಿ ಅಡಗಿ ಕಾಲು ಮುದುಡಿ ಬೆಕ್ಕಿನಂತೆ ಮಲಗಿತ್ತು. ಗಮನಿಸುವವರು ಯಾರೂ ಇರಲಿಲ್ಲ.
ಸುಮ್ಮನೆ ಪಕ್ಕದ ರಸ್ತೆಯತ್ತ ಕಣ್ಣಾಡಿಸಿದೆ. ನಿಂತಿದ್ದ ಕಾರಿನಲ್ಲಿ ಸಂಪೂರ್ಣ ಕೋಟು ಸ್ವೆಟರ್ ಮಂಕಿ ಕ್ಯಾಪ್ ನೊಂದಿಗೆ ಗಂಡ ಹೆಂಡತಿ ಮಗುವಿನ ಒಂದು ಕುಟುಂಬ ಬ್ರೆಡ್ – ಆಮ್ಲೆಟ್ ತಿನ್ನುತ್ತಾ ಫ್ಲಾಸ್ಕಿನಲ್ಲಿ ತಂದಿದ್ದ ಬಿಸಿಬಿಸಿ ಕಾಫಿ ಕುಡಿಯುತ್ತಿರುವುದು ಕಾಣಿಸಿತು. ಬಹುಶಃ ಮಗುವನ್ನು ಶಾಲೆಗೆ ಬಿಟ್ಟು ಇಬ್ಬರೂ ಕೆಲಸಕ್ಕೆ ಹೋಗುವವರಿರಬೇಕು…

ಮುಂದೆ ಸಾಗುತ್ತಿದ್ದಂತೆ 25/30 ವಿವಿಧ ವಯೋಮಾನದ ಜನರು Q ನಲ್ಲಿ ನಿಂತಿರುವುದು ಕಾಣಿಸಿತು. ಅರೆ ಇಷ್ಟು ಬೇಗ ಏನಿದು ಎಂದು ತಲೆ ಎತ್ತಿ ನೋಡಿದರೆ ಸರ್ಕಾರಿ ಆಸ್ಪತ್ರೆ. ಏನೋ ವಿಶೇಷ ಇರಬೇಕೆಂದು ಅದರಲ್ಲಿ ಒಬ್ಬರನ್ನು ಕೇಳಿದೆ.
ಆತ ” ಇದು ನಾಯಿ ಕಚ್ಚಿದವರಿಗಾಗಿ ಕೊಡುವ ರೇಬಿಸ್ ನಿರೋಧಕ ಇಂಜೆಕ್ಷನ್ ಪಡೆಯಲು ಇರುವ Q. 9 ಗಂಟೆಯಿಂದ ಕೊಡುತ್ತಾರೆ. ಅಷ್ಟೊತ್ತಿಗೆ 100 ಜನರಿಗೂ ಹೆಚ್ಚು ಬರುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಇದು ದುಬಾರಿ. ಇಲ್ಲಿ ಉಚಿತ ಆದರೂ 50/100 ಕೊಡಬೇಕು ” ಎಂದರು..
ಪಕ್ಕದಲ್ಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆಯಲ್ಲಿ ವಿಧವಿಧವಾದ ಕಾರುಗಳು ಮಿಂಚಿನಂತೆ ಚಲಿಸುತ್ತಿದ್ದವು……….

ದಾರಿ ಬದಲಿಸಿ ಪಕ್ಕಕ್ಕೆ ಹೊರಳಿದೆ.
ಅದೊಂದು ಕೊಳಗೇರಿ ಪ್ರದೇಶ. ಬೆಳಗ್ಗೆಯೇ ಕುಡಿದು ತೂರಾಡುತ್ತಾ ಇದ್ದವರು – ಬೀಡಿ ಸಿಗರೇಟು ಕುಡಿಯುತ್ತಾ ಮೋರಿಯ ಮೇಲೆ ಕುಳಿತು ಕ್ಯಾಕರಿಸಿ ಉಗಿಯುತ್ತಿದ್ದವರು – ಸೊಳ್ಳೆ ಇರುವೆಗಳು ಮುತ್ತುತ್ತಿದ್ದರು ಇನ್ನೂ ಅರೆ ಪ್ರಜ್ಞಾವಸ್ಥೆಯಲ್ಲಿ ಬೆತ್ತಲಾಗಿ ಮಲಗಿದ್ದ ಕಂದಮ್ಮಗಳನ್ನು ದಾಟಿ ಮುಂದೆ ಬರುತ್ತಿದ್ದಂತೆ ಏನೋ ಜೋರಾಗಿ ಗಲಾಟೆಯಾದ ಶಬ್ದ ಕೇಳಿಸಿತು. ಹತ್ತಿರ ಹೋಗಿ ನೋಡಿದರೆ ಬೋರ್ ವೆಲ್ ನೀರಿಗಾಗಿ ಖಾಲಿ ಕೊಡಹಿಡಿದಿದ್ದ ಹತ್ತಾರು ಹೆಣ್ಣುಮಕ್ಕಳು ಹೊಡೆದಾಡುತ್ತಿದ್ದರು.
ಅವರು ಬಳಸುತ್ತಿದ್ದ ಭಾಷೆ ಕೇಳಿ ಬಹುಶಃ ಈ ಭಾಷೆ ನಮ್ಮ ಜನಮನದ ಆಡುಭಾಷೆಯಾಗಿ ಎಂದಿನಿಂದ ಜಾರಿಯಾಯಿತೋ ಎಂಬ ಅನುಮಾನ ಮೂಡಿತು. ಸ್ವಲ್ಪ ದೂರ ಕಿವಿಮುಚ್ವಿಕೊಂಡು ಮನೆಯ ಕಡೆ ಹೊರಟೆ….
ಹಾಗೇ ದಾರಿಯಲ್ಲಿ ಬರುವಾಗ ದಡೂತಿ ಶರೀರದ ಒಂದಷ್ಟು ಗಂಡಸರು ಮತ್ತು ಹೆಂಗಸರು A/C ಅಳವಡಿಸಿರುವ Gym ನಲ್ಲಿ Aerobic ಕಸರತ್ತು ಮಾಡುತ್ತಿರುವುದು ಮೊದಲನೇ ಮಹಡಿಯ ದೊಡ್ಡ ಬಿಲ್ಡಿಂಗ್ ನಲ್ಲಿ ಕಾಣಿಸಿತು…..

ಮನೆಗೆ ಬಂದು ಹಳೆಯ ಪತ್ರಿಕೆಗಳ ಮೇಲೆ ಕಣ್ಣಾಡಿಸಿದೆ. ಮೇಲೆ “ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಕ್ರಮ ಮೆರೆದ ಭಾರತ. ಒಂದೇ ಬಾರಿಗೆ ನೂರಕ್ಕೂ ಹೆಚ್ಚು ಉಪಗ್ರಹ ಉಡಾವಣೆಯ ಸಾಧನೆ ಮಾಡಿದ ಭಾರತ ಇದೀಗ ಮಂಗಳ ಗ್ರಹಕ್ಕೆ ಮಾನವ ಪ್ರಯಾಣದ ಸಾಧ್ಯತೆ ” ಎಂದಿತ್ತು.
ಪಕ್ಕದಲ್ಲೇ ” ಉತ್ತರಪ್ರದೇಶದ ಗೋರಖ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಪಾವತಿಸದ ಕಾರಣ ಆಮ್ಲಜನಕ ಸಿಲಿಂಡರ್ ಪೂರೈಕೆ ಸ್ಥಗಿತ 79 ಮಕ್ಕಳ ಸಾವು ” ಎಂದು ಬರೆದಿತ್ತು.
ಪತ್ರಿಕೆ ಮಡಚಿಟ್ಟು…
ಈಗ ಬರೆಯಲು ಕುಳಿತಿದ್ದೇನೆ…..

ನಾನು,
ಅಮಿತಾಭ್ ಬಚ್ಚನ್ ತೆಂಡೂಲ್ಕರ್ ಅಂಬಾನಿ ಅಧಾನಿ ಟಾಟಾ ಬಿರ್ಲಾ ಮೋದಿ ರಾಹುಲ್ ದೇವೇಗೌಡ ಆಗಿದಿದ್ದರೆ ಈ ಸಮಾಜ ಹೇಗೆ ಕಾಣುತ್ತಿತ್ತೋ ಗೊತ್ತಿಲ್ಲ. ಆದರೆ ನಾನೊಬ್ಬ ವಠಾರದ ಸಾಮಾನ್ಯ ಜೀವಿ………
ಮನಸ್ಸು ಮಾನವೀಯ ಪ್ರೀತಿಯನ್ನೇ ಬಯಸುತ್ತದೆ.
ಆದ್ದರಿಂದ……

ರಮ್ಯವಾದದನ್ನೇ ಬರೆದು ಹುಸಿ ದೇಶಭಕ್ತನಾಗಲೋ
ಅಥವಾ
ವಾಸ್ತವ ಬರೆದು ದೇಶದ್ರೋಹಿ ಎಂಬ ತಪ್ಪು ಮೂದಲಿಕೆ ಒಳಗಾಗಲೋ…. .
ಯಾವ ಹಣ ಅಧಿಕಾರ ಪ್ರಚಾರದ ಹಂಗಿಲ್ಲದ – ಯಾವ ಧರ್ಮ ಜಾತಿ ಪಂಥ ಗ್ರಂಥಗಳ ಅಡಿಯಾಳಾಗದ –
ಬದುಕಿನಲ್ಲಿ ಇನ್ನೇನೂ ಹೆಚ್ಚಿನ ನಿರೀಕ್ಷೆಗಳಿಲ್ಲದ ನಾನು ಸತ್ಯ ಮತ್ತು ವಾಸ್ತವದ ಹುಡುಕಾಟದಲ್ಲಿ ನನಗಾದ ಅನುಭವಗಳನ್ನು ದಾಖಲಿಸುತ್ತಾ..

ಲೋಕ ನಿಂದನೆ ಎದುರಿಸುತ್ತಾ..
ಈ ಮಣ್ಣಿನ ಋಣ ತೀರಿಸಲು ಪ್ರಯತ್ನಿಸುತ್ತಾ –
ಮಾನವೀಯ ಪ್ರಜ್ಞೆಯ ಭಾರತೀಯ ಕನ್ನಡಿಗನಾಗಿ ನಿಮ್ಮ ಹೃದಯಗಳಲ್ಲಿ ಮೂಡುವ ನೆಮ್ಮದಿಯ ಭಾವಕ್ಕಾಗಿ
ಮುಖದಲ್ಲಿ ಕಾಣುವ ನಗುವಿಗಾಗಿ ಹಂಬಲಿಸುತ್ತಾ ಮುಂದೆ ಸಾಗುತ್ತೇನೆ.

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!