November 16, 2024

Newsnap Kannada

The World at your finger tips!

child prayer

ಮಕ್ಕಳ ಬೆಳವಣಿಗೆಯಲ್ಲಿ ಪ್ರಾರ್ಥನೆಯ ಮಹತ್ವ ಎಷ್ಟು ?

Spread the love

ಪ್ರಾರ್ಥನೆಯ ಅರ್ಥ, ಶ್ರದ್ದೆ ಭಕ್ತಿ ವಿಶ್ವಾಸದಿಂದ ದೇವರನ್ನು ಸ್ಮರಿಸುವುದು.ಹಾಗೂ ಬದುಕಿನ ಕಷ್ಟಗಳನ್ನು ಎದುರಿಸಿ ಮುನ್ನಡೆವ ಶಕ್ತಿಯನ್ನು ದಯಪಾಲಿಸು ಎಂದು ಮೊರೆಯಿಡುವುದು.

ಭಾರತೀಯ ಸಂಸ್ಕೃತಿಯು,ಧಾರ್ಮಿಕ, ಸಾಂಸ್ಕೃತಿಕ ವಿಚಾರಗಳಲ್ಲಿ ,ಮೊದಲಿನಿಂದಲೂ ಶ್ರೀಮಂತ ಪರಂಪರೆ ಹಾಗೂ ಗೌರವಗಳಿಗೆ ಪಾತ್ರವಾದ ದೇಶ ನಮ್ಮದು.

ವಿಶ್ವದಲ್ಲಿರುವ ಎಲ್ಲಾ ಸಂಸ್ಕೃತಿಗಳಿಗೂ ತಾಯಿ ಬೇರು ನಮ್ಮ ಭಾರತೀಯ ಸಂಸ್ಕೃತಿ,ನಮ್ಮ ಸಂಸ್ಕೃತಿಯ ಸದ್ವಿಚಾರಗಳನ್ನು ಜೋಪಾನವಾಗಿರಿಸಿ ಹೃದಯಮಂದಿರದಲ್ಲಿ ಜ್ಞಾನದ ದೀಪವನ್ನು ಬೆಳಗಿಸಬೇಕು.

ಪ್ರಾರ್ಥನೆಯ ಮೂಲಕ ಉತ್ತಮ ಸಂಸ್ಕಾರ

ನಮ್ಮ ಪ್ರಾಚೀನ ಋಷಿಗಳು, ಸಂತರು,ಅನೇಕ ಸ್ತೋತ್ರಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ,

ದೇಹಕ್ಕೆ ಆಹಾರದ ಅಗತ್ಯತೆ ಇದ್ದ ಹಾಗೆ ಮನಸ್ಸು ಮತ್ತು ಆತ್ಮಕ್ಕೆ ಪ್ರಾರ್ಥನೆಯು ಅವಶ್ಯಕವಾಗಿದೆ, ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸು ಪ್ರಾರ್ಥನೆಯಿಂದ ಶುದ್ಧವಾಗಿ ಉದಾತ್ತ ಭಾವನೆಗಳು ಬೆಳೆಯಲು ಸಹಕಾರಿಯಾಗಿದೆ.

ಪ್ರಾರ್ಥನೆಯ ಪಠಣದಿಂದ ಮಕ್ಕಳಲ್ಲಿ ನಾಲಿಗೆ ಚುರುಕಾಗುತ್ತದೆ,ಶಬ್ದಗಳನ್ನು ಉಚ್ಚರಿಸುವುದರಿಂದ ಮಾತು ಸ್ಪಷ್ಟವಾಗುತ್ತದೆ,ಕಣ್ಣುಗಳ ಮೂಲಕ ಮನಸ್ಸು ಗ್ರಹಿಸುತ್ತದೆ.

ದಿನ ನಿತ್ಯದ ಶ್ಲೋಕಗಳು

ಬೆಳಗ್ಗೆ ಎದ್ದ ಕೂಡಲೇ ಹಸ್ತವನ್ನು ನೋಡುತ್ತಾ

ಕರಾಗ್ರೇ ವಸತೇ ಲಕ್ಷ್ಮೀ
ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ
ಪ್ರಭಾತೇ ಕರದರ್ಶನಂ

ಕೈಯ ತುದಿಯಲ್ಲಿ (ಬೆರಳುಗಳ ತುದಿಯಲ್ಲಿ) ಲಕ್ಷ್ಮಿಯು ನೆಲೆಸಿದ್ದಾಳೆ; ಕೈಯ ಮಧ್ಯೆ ಸರಸ್ವತಿ ಇದ್ದಾಳೆ; ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ. ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇನೆ.

ಭೂಮಿ ತಾಯಿಯನ್ನು ಪ್ರಾರ್ಥಿಸಿ ಭೂಮಿಯ ಮೇಲೆ ಕಾಲಿಡಬೇಕು

ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

ಸಮುದ್ರರೂಪೀ ವಸ್ತ್ರ ಧರಿಸುವ, ಪರ್ವತರೂಪೀ ಸ್ತನಗಳಿರುವ ಮತ್ತು ಭಗವಾನ ಶ್ರೀವಿಷ್ಣೂವಿನ ಪತ್ನಿಯಾಗಿರುವ ಹೇ ಪೃಥ್ವೀದೇವೀ, ನಿನಗೆ ನನ್ನ ನಮಸ್ಕಾರಗಳು. ನನ್ನಕಾಲುಗಳ ಸ್ಪರ್ಶನಿನಗಾಗಲಿದೆ,ನನ್ನನ್ನು ಕ್ಷಮಿಸು.

ಸ್ನಾನ ಮಾಡುವ ಸಮಯದಲ್ಲಿ

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಗಂಗಾ ಯಮುನಾ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಮಾತೆ ನಾನು ಸ್ನಾನ ಮಾಡುತ್ತಿರುವ ನೀರಿನಿಂದ ನನ್ನನ್ನು ಪವಿತ್ರಗೊಳಿಸಿ.

ದೇವರಿಗೆ ನಮಸ್ಕರಿಸುವಾಗ

ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಮಸ್ಕಾರಗಳು

ಪೂಜ್ಯಾಯ ಗುರು ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ.

ರಾಮಾಯ ರಾಮಭದ್ರಾಯ ರಾಮ ಚಂದ್ರಾಯ ವೇದಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ

ವಿದ್ಯಾಭ್ಯಾಸದ ಆರಂಭದಲ್ಲಿ

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ.

ಹೇ ಸರಸ್ವತಿ ಬೇಡಿದ ವರವ ನೀಡುವವಳೇ, ನಾನು ವಿದ್ಯಾಭ್ಯಾಸವನ್ನು ಆರಂಭಿಸುತ್ತಿದ್ದೇನೆ,ನನಗೆ ಹರಸು

ಬೋಜನ ಮಾಡುವಾಗ

ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣ ವಲ್ಲಭೇ |
ಜ್ಞಾನ ವೈರಾಗ್ಯಸಿಧ್ಯರ್ಥಂ ಭಿಕ್ಷಾಂ ದೇಹಿ ಪಾರ್ವತಿ

ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆ ಭಾವ ಸಲ್ಲಿಸಲು

ಶಾಂತಿ ಮಂತ್ರ

ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ

ನಾವು ನಮ್ಮೊಳಗೆ ಇರುವ ಜ್ಞಾನವೆಂಬ ಜ್ಯೋತಿಗಳನ್ನು ಬೆಳಗುವುದರಿಂದ ಮನಸ್ಸಿನಲ್ಲಿರುವಂತಹ ಅಜ್ಞಾನ, ಕಷ್ಟ, ನೋವುಗಳು ದೂರವಾಗಿ ಜ್ಞಾನ ಮತ್ತು ನೆಮ್ಮದಿಯ ಬೆಳಕು ಎಲ್ಲೆಡೆ ಪಸರಿಸುವಂತಾಗುತ್ತದೆ.

ತಾಯಿ ತಂದೆ ಗುರು ಅತಿಥಿ ದೇವರಿಗೆ ನಮಸ್ಕಾರ

ಮಾತೃ ದೇವೋ ಭವ , ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ.

ಇನ್ನು ರಾತ್ರಿ ಮಲಗುವಾಗ

ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃ

ಮಲಗುವ ಮುಂಚಿತವಾಗಿ ರಾಮ ಸುಬ್ರಹ್ಮಣ್ಯ ಹನುಮಂತ ಗರುಡ ಗಣಪತಿ ಇವರನ್ನು ಸ್ಮರಿಸಿದರೆ ಸುಖನಿದ್ರೆ ಪ್ರಾಪ್ತಿಯಾಗುತ್ತದೆ.

ಈ ಶ್ಲೋಕಗಳು ಮಕ್ಕಳಿಗೆ ಮುದ ಕೊಡುವುದಲ್ಲದೆ,ಮಕ್ಕಳ ಮನಸ್ಸು ಚಂಚಲವಾಗದಂತೆ ಅವರ ಬೆಳವಣಿಗೆಗೆ ಚೇತನ ತುಂಬುತ್ತದೆ. ಮಕ್ಕಳಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ತಪ್ಪುಗಳಾಗದಂತೆ,ಮುನ್ನಡೆಯಲು ಪ್ರೇರಣೆ ನೀಡುತ್ತದೆ.

Copyright © All rights reserved Newsnap | Newsever by AF themes.
error: Content is protected !!