January 11, 2025

Newsnap Kannada

The World at your finger tips!

deepa1

ಜಾಗತೀಕರಣದ ಪ್ರಭಾವ…..

Spread the love

ಸುಮಾರು 1990 ಕ್ಕೆ ಮೊದಲು ಅಥವಾ ಜಾಗತೀಕರಣಕ್ಕೆ ಭಾರತ ತೆರೆದುಕೊಳ್ಳುವ ಮೊದಲು…………

ನಮ್ಮ ಸಮಾಜದಲ್ಲಿ ಅಂದಾಜು ಸುಮಾರು ಶೇಕಡಾ 75% ಜನರು ಸಾಮಾನ್ಯವಾಗಿ ಒಳ್ಳೆಯವರು, ಹೆಚ್ಚು ಮೋಸ ವಂಚನೆ ಮಾಡದವರು, ತುಂಬಾ ದುರಾಸೆ ಪಡದವರು, ಪ್ರೀತಿ ವಿಶ್ವಾಸ ಗೆಳೆತನ ಸಹಕಾರ ಕರುಣೆ ಮಾನವೀಯತೆ ಮುಂತಾದ ಮೌಲ್ಯಗಳನ್ನು ತಕ್ಕಮಟ್ಟಿಗೆ ಪಾಲಿಸುವವರೂ ಆಗಿದ್ದರು.

ಉಳಿದ ಸುಮಾರು 25% ಜನ ಮೋಸ ವಂಚನೆ ಕಳ್ಳತನ ಅಸೂಯೆ, ಇನ್ನೊಬ್ಬರಿಗೆ ತೊಂದರೆ ಕೊಡುವ ಸ್ವಭಾವ ಮುಂತಾದ ಗುಣಗಳನ್ನು ಹೊಂದಿದ್ದರು. ಕಡಿಮೆ ಜನಸಂಖ್ಯೆ, ಸಂಪರ್ಕ ಮಾಧ್ಯಮಗಳ ಕೊರತೆ ಮತ್ತು ಗ್ರಾಮೀಣ ಪರಿಸರದ ವಾತಾವರಣದಿಂದ ಒಳ್ಳೆಯವರು ಮತ್ತು ಕೆಟ್ಟವರನ್ನು ಸ್ವಲ್ಪ ಮಟ್ಟಿಗೆ ನೇರವಾಗಿ ಗುರುತಿಸಬಹುದಿತ್ತು.

ಒಳ್ಳೆಯವರಿಗೆ ಮಾನ್ಯತೆ ಮತ್ತು ಗೌರವ ಹಾಗು ಕೆಟ್ಟವರಿಗೆ ನಿಂದನೆ ಮತ್ತು ಅವರಿಂದ ಅಂತರ ಕಾಪಾಡುವುದು ಸಮಾಜದ ಸಹಜ ಗುಣವಾಗಿತ್ತು.

ಬಡತನ ಅನಕ್ಷರತೆ ಅಜ್ಞಾನ ಅಸಮಾನತೆ ಇದ್ದರೂ ಸಹ ಈ ಗುಣಗಳೇ ಮೇಲುಗೈ ಪಡೆದಿದ್ದವು.

ಆದರೆ ಜಾಗತೀಕರಣದ ನಂತರ ಅಂದರೆ ಸುಮಾರು 1990 ರ ನಂತರ ಸಮಾಜ ಬದಲಾಯಿತು ನೋಡಿ.
ಅಬ್ಬಬ್ಬಾ………

ಇಡೀ ವಾತಾವರಣ ಉಲ್ಟಾ ಆಗತೊಡಗಿತು.

ಶೇಕಡಾ 75% ಕೆಟ್ಟವರು ಮತ್ತು 25% ಮಾತ್ರ ಒಳ್ಳೆಯವರು ಇರುವುದು ಎಂದಾಯಿತು.

ಯಾರೂ ಕೇಳದೆ ಅನಾಥವಾಗಿ ಪಾಳು ಬಿದ್ದಿದ್ದ ಜಮೀನುಗಳಿಗೆ
ಇದ್ದಕ್ಕಿದ್ದಂತೆ ಅಸಹಜ ರೀತಿಯ ಬೆಲೆ ಏರಿಕೆ, ಸಾಫ್ಟ್ ವೇರ್ ಎಂಬ ಕಂಪಹೆಚ್ಕೆರ್ ತಂತ್ರಜ್ಞಾನದ ಬೆಳವಣಿಗೆ ಅನಿವಾರ್ಯತೆ, ಅದರಿಂದ ಸೃಷ್ಟಿಯಾದ ಉದ್ಯೋಗಗಳಿಗೆ ಕಿರಿ ವಯಸ್ಸಿನ ಯುವಕರ ನೇಮಕ, ಆ ವಯಸ್ಸಿಗೆ ಅವರಿಗೆ ಬಂದ ಹೆಚ್ಚಿನ ಸಂಬಳ ಮತ್ತು ಸೌಕರ್ಯ, ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿ, ಜನಸಂಖ್ಯೆಯ ಸ್ಪೋಟ, ಹಣಕ್ಕೆ ದೊರೆತ ಅತಿ ಮಹತ್ವ, ಬಹುತೇಕ ಗ್ರಾಮೀಣ ಪರಿಸರ ನಾಶವಾಗಿ ಎಲ್ಲೆಡೆ ನಗರೀಕರಣದ ಗುಣಲಕ್ಷಣಗಳು ಕಾಣತೊಡಗಿದಂತೆ ಮೌಲ್ಯಗಳು ಶಿಥಿಲವಾಗತೊಡಗಿದವು. ರಾಜಕೀಯ ಸಿನಿಮಾ ಶಿಕ್ಷಣ ಆರೋಗ್ಯ ಉದ್ದಿಮೆ ವ್ಯವಹಾರ ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ಹಸಿ ಹಸಿ ವ್ಯಕ್ತಿತ್ವದ ಭ್ರಷ್ಟರು, ಅಲ್ಪ ತಿಳಿವಳಿಕೆಯವರು ಪ್ರವೇಶಿಸಿ ಅದನ್ನು ನಿಯಂತ್ರಿಸತೊಡಗಿದರು.

ಒಮ್ಮೆ ಯೋಚಿಸಿ ನೋಡಿ….

ಮೊದಲು ಒಂದು ಊರಿನಲ್ಲಿ ಅಲ್ಲಿಯ ಶಿಕ್ಷಕರ ಮಾತೇ ವೇದವಾಕ್ಯ,
ಡಾಕ್ಟರು ಏನು ಕೊಟ್ಟರು ಕಣ್ಣು ಮುಚ್ಚಿಕೊಂಡು ಕುಡಿಯುತ್ತಿದ್ದರು, ಉದ್ಯೋಗ ಕೊಡಿಸಿದಾತನನ್ನು ದೇವರೆಂದೇ ಪರಿಗಣಿಸುತ್ತಿದ್ದರು,
ಯಾವುದೇ ವಾಹನ ಮನೆ ಜಮೀನು ಖರೀದಿಸುವಾಗ ಈಗಿನಷ್ಟು ಎಚ್ಚರಿಕೆಯ ಅವಶ್ಯಕತೆ ಇರಲಿಲ್ಲ.

ಈಗ ಯಾವುದೂ ನಂಬಿಕೆಗೆ ಅರ್ಹವಲ್ಲ. ಯಾರನ್ನ ಯಾರೂ ನಂಬುವುದಿಲ್ಲ. ಕೊನೆಗೆ ಗಂಡ ಹೆಂಡತಿ, ಅಪ್ಪ ಮಕ್ಕಳು ಕೂಡ ಒಂದು ಅಂತರ ಕಾಯ್ದುಕೊಂಡಿರುತ್ತಾರೆ.

ಕೆಲವೇ ವರ್ಷಗಳ ಅಂತರದಲ್ಲಿ ಎಷ್ಟೊಂದು ವ್ಯತ್ಯಾಸ……

ಎಲ್ಲಾ ಬದಲಾವಣೆಗಳು ಕೆಟ್ಟದ್ದು ಎಂದು ನಾನು ಹೇಳುತ್ತಿಲ್ಲ. ಅನೇಕ ಆಧುನಿಕ ಸೌಲಭ್ಯಗಳು, ಜೀವನಮಟ್ಟ ಸುಧಾರಣೆಯ ಅಂಶಗಳು, ಎಲ್ಲಾ ಸಮುದಾಯಗಳ ಜಾಗೃತ ಮನಸ್ಥಿತಿ ಮುಂತಾದ ಒಳ್ಳೆಯ ಪರಿವರ್ತನೆ ಆಗಿದೆ.

ಆದರೆ ಮಾನವೀಯ ಮೌಲ್ಯಗಳ ಕುಸಿತ ಮತ್ತು ಜನರ ಕೆಟ್ಟ ಗುಣಗಳ ಬಹಿರಂಗ ವಿಜೃಂಭಣೆ ಮಾತ್ರ ಆತಂಕಕಾರಿ ಎಂಬುದನ್ನು ಮುಖ್ಯವಾಗಿ ಗಮನಿಸಿ ಈ ಅಭಿಪ್ರಾಯ ಮೂಡಿದೆ. ಒಳ್ಳೆಯವರು ಮತ್ತು ಕೆಟ್ಟವರ ನಡುವಿನ ಅಂತರ ಕಡಿಮೆಯಾಗಿ ಅದನ್ನು ಗುರುತಿಸುವುದೇ ಕಷ್ಟವಾಗಿದೆ. ಬಹುತೇಕ ಮುಖವಾಡಗಳೇ ಈ ಸಮಾಜದ ಗುಣಲಕ್ಷಣಗಳಾಗಿವೆ. ಇದನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ….

  • ವಿವೇಕಾನಂದ. ಹೆಚ್
Copyright © All rights reserved Newsnap | Newsever by AF themes.
error: Content is protected !!