December 23, 2024

Newsnap Kannada

The World at your finger tips!

deepa1

ಬೆಟ್ಟವನ್ನು ಏರಬೇಕಾಗಿದೆ,……

Spread the love

ಬಹುದೊಡ್ಡ ಬೆಟ್ಟವೊಂದನ್ನು,
ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು,
ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು,….

ಬುದ್ದ ಯೇಸು ಪೈಗಂಬರ್ ಬಸವ ಗಾಂಧಿ ಅಂಬೇಡ್ಕರ್ ಮುಂತಾದ ಘಟಾನುಘಟಿಗಳು ಅರ್ಧ ದಾರಿಯಲ್ಲೇ ಸುಸ್ತಾಗಿ ನಿಲ್ಲಿಸಿದ ಬೆಟ್ಟವನ್ನು ಏರಬೇಕಾಗಿದೆ….

ಖುರಾನ್ ಬೈಬಲ್ ವೇದ ಉಪನಿಷತ್ತುಗಳು ಮಾರ್ಗ ತೋರುವಲ್ಲಿ ವಿಫಲವಾದ ಬೆಟ್ಟವನ್ನು……

ಅದಕ್ಕಾಗಿ….

ಜನರ ಮನಸ್ಸುಗಳ ಒಳಗೆ ಇಳಿಯಬೇಕಿದೆ….

ಅವರ ಹೃದಯದ ಬಾಗಿಲನ್ನು ತಟ್ಟಬೇಕಿದೆ…

ಅವರ ಪ್ರತಿರೋಧವನ್ನು ಎದುರಿಸಬೇಕಿದೆ….

ಅವರ ನಿಂದನೆಯನ್ನು ಸಹಿಸಬೇಕಿದೆ…..

ಆರೋಪಗಳನ್ನು ಕೇಳಿಸಿಕೊಳ್ಳಬೇಕಿದೆ….

ಅವರ ಅಜ್ಞಾನಕ್ಕೆ ಮರುಕಪಡಬೇಕಾಗಿದೆ….

ಉಡಾಫೆತನವನ್ನು ನಿರ್ಲಕ್ಷಿಸಬೇಕಾಗಿದೆ…..

ಮೌಢ್ಯವನ್ನು ಅರ್ಥಮಾಡಿಸಬೇಕಿದೆ…

ನಂಬಿಕೆಯನ್ನು ಪ್ರಶ್ನಿಸಬೇಕಿದೆ….

ನೋವನ್ನು ನುಂಗಬೇಕಿದೆ…

ಪ್ರೀತಿಯನ್ನು ಹಂಚಬೇಕಿದೆ…….

ಅದಕ್ಕಾಗಿ…….

ವಿಶ್ರಾಂತಿ ಪಡೆಯುವಂತಿಲ್ಲ,…

ಸುಖ ಬಯಸುವಂತಿಲ್ಲ…

ತಾಳ್ಮೆಗೆಡುವಂತಿಲ್ಲ…..

ಪ್ರಶಸ್ತಿ ಸ್ವೀಕರಿಸುವಂತಿಲ್ಲ…

ಸನ್ಮಾನಕ್ಕೆ ಹಾತೊರೆಯುವಂತಿಲ್ಲ…

ಅಧಿಕಾರಕ್ಕಾಗಿ ಹೊಡೆದಾಡುವಂತಿಲ್ಲ…..

ಪ್ರಚಾರಕ್ಕೆ ಹಲ್ಲುಗಿಂಜುವಂತಿಲ್ಲ…..

ಆ ಮಾರ್ಗದಲ್ಲಿ……..

ಬ್ರಾಹ್ಮಣರನ್ನು ಟೀಕಿಸಬೇಕಾಗುತ್ತದೆ…..

ದಲಿತರನ್ನು ಪ್ರಶ್ನಿಸಬೇಕಾಗುತ್ತದೆ……

ಒಕ್ಕಲಿಗರನ್ನು ನಿಂದಿಸಬೇಕಾಗುತ್ತದೆ…

ಲಿಂಗಾಯಿತರನ್ನು ಎಚ್ಚರಿಸಬೇಕಾಗುತ್ತದೆ…..

ಕುರುಬರನ್ನು ಕುಟುಕಬೇಕಾಗುತ್ತದೆ….

ಎಲ್ಲಾ ಜಾತಿಗಳವರನ್ನು ಹೀಗಳೆಯಬೇಕಾಗುತ್ತದೆ….

ಮಹಿಳೆಯರಿಗೂ ಬುದ್ದಿ ಹೇಳಬೇಕಾಗುತ್ತದೆ….

ಪುರುಷರಿಗೆ ಗದರಿಸಬೇಕಾಗುತ್ತದೆ…..

ಮಕ್ಕಳಿಗೆ ಕಲಿಸಬೇಕಾಗುತ್ತದೆ…..

ರೈತರನ್ನು ದಡ್ಡರೆನ್ನಬೇಕಾಗುತ್ತದೆ….

ಕಾರ್ಮಿಕರನ್ನು ಜಗಳಗಂಟರು ಎಂದು ದೂರಬೇಕಾಗುತ್ತದೆ….

ಧಾರ್ಮಿಕ ನಾಯಕರ ಮುಖವಾಡ ಕಳಚಬೇಕಾಗುತ್ತದೆ….

ಸಿನಿಮಾ ನಟನಟಿಯರ ಬಣ್ಣ ಬಯಲುಮಾಡಬೇಕಾಗುತ್ತದೆ…..

ರಾಜಕಾರಣಿಗಳ ಭ್ರಷ್ಟತೆ ಎತ್ತಿ ತೋರಿಸಬೇಕಾಗುತ್ತದೆ….

ಅಧಿಕಾರಿಗಳ ಹಣದ ಮೋಹ ಖಂಡಿಸಬೇಕಾಗುತ್ತದೆ….

ಸಮಾಜ ಸೇವಕರ ಗೋಮುಖ ವ್ಯಾಘ್ರತನ ವರ್ಣಿಸಬೇಕಾಗುತ್ತದೆ…

ಮತದಾರರ ಸ್ವಾರ್ಥ ಹೇಳಲೇಬೇಕಾಗುತ್ತದೆ…

ಇದರ ನಡುವೆ………..

ಎಡಬಿಡಂಗಿ ಎನ್ನುವರು,
ದೇಶದ್ರೋಹಿ ಎನ್ನುವರು,
ಧರ್ಮ ವಿರೋಧಿ ಎನ್ನುವರು,
ಮುಭಕ್ತನೆನ್ನುವರು,
ಗಂಜಿಗಿರಾಕಿ ಎನ್ನುವರು,
ತಟ್ಟೆ ಕಾಸಿನ ಭಿಕ್ಷುಕ ಎನ್ನುವರು,
ಹಿಜಡಾ ಎನ್ನುವರು,
ಎಡಪಂಥೀಯ ಎನ್ನುವರು,
ಬಲಪಂಥೀಯ ಎನ್ನುವರು,
ತೆವಲು ಬರಹಗಾರ ಎನ್ನುವರು,
ಪಲಾಯನವಾದಿ ಎನ್ನುವರು,
ಪ್ರಚೋದಿಸುವರು,
ಹುಚ್ಚನೆನ್ನುವರು,
ವೈಯಕ್ತಿಕವಾಗಿ ನಿಂದಿಸುವರು…….

ಆಗಲೂ…..

ತುಂಬು ಹೃದಯದಿಂದ ಸ್ವಾಗತಿಸುವವರು,
ಪ್ರೋತ್ಸಾಹಿಸುವವರು,
ಬೆನ್ನು ತಟ್ಟುವವರು,
ಜೊತೆಯಲ್ಲಿ ಬರುವವರು ಇದ್ದೇ ಇರುತ್ತಾರೆ…..

ನಿರ್ಲಿಪ್ತರು,
ನಿರ್ಲಕ್ಷಿಸುವವರು,
ಗಮನಿಸುವವರು,
ಕುತೂಹಲಿಗಳು,
ಎಚ್ಚರಿಸುವವರು,
ಉದಾಸೀನ ಮಾಡುವವರು,
ಇರುತ್ತಾರೆ…..

ಜೊತೆಗೆ
ಬೆಟ್ಟವನ್ನು ಹತ್ತಲು ಬಿಡದೆ….

ಕಾಲೆಳೆಯುವವರು,
ಕಲ್ಲು ಎಸೆಯುವವರು,
ಬಾಣ ಬಿಡುವವರು,
ಹಿತಶತ್ರುಗಳು,
ಮಜಾ ನೋಡುವವರು,
ನಾಶ ಮಾಡಲು ಯತ್ನಿಸುವವರು,
ಕೊಂದೇ ಬಿಡುವವರು,
ಇರುತ್ತಾರೆ…….

ಏಕೆಂದರೆ….

ಅದು ಅಂತಿಂತ ಬೆಟ್ಟವಲ್ಲ…

ಮಾನವೀಯತೆಯ ಬೆಟ್ಟ,
ಜೀವಪರ ಬೆಟ್ಟ,
ಮಾನವ ಧರ್ಮದ ಬೆಟ್ಟ,
ಪ್ರಕೃತಿ ಸಹಜ‌ ಸೃಷ್ಟಿಯ ಬೆಟ್ಟ,

ಅಲ್ಲಿಗೆ ತಲುಪಿದ್ದೇ ಆದರೆ,……

ಈ ಪಟ್ಟಭದ್ರ ಹಿತಾಸಕ್ತಿಗಳ ಮಾನವ ನಿರ್ಮಿತ ಚಿಕ್ಕ ಚಿಕ್ಕ ಬೆಟ್ಟಗಳು ಕುಸಿಯುತ್ತವೆ,
ಕೃತಕ ಗೋಡೆಗಳು ಉದುರಿ ಬೀಳುತ್ತವೆ.
ಅಸ್ತಿತ್ವವೇ ಇಲ್ಲವಾಗುತ್ತದೆ.

ಆದರೂ……

ಹತ್ತಲೇ ಬೇಕಿದೆ ಆ ಬೆಟ್ಟವನ್ನು,
ಆ ಕನಸಿನಾ ಬೆಟ್ಟವನ್ನು,
ಬನ್ನಿ ನನ್ನೊಂದಿಗೆ…..
ನಾನು ನಿಮ್ಮೊಂದಿಗೆ…..
ಪ್ರಯತ್ನಿಸುತ್ತಲೇ ಇರೋಣ….
ನಿರಂತರವಾಗಿ….
ಬೆಟ್ಟದ ತುದಿ ತಲುಪುವವರೆಗೂ……

ವಿವೇಕಾನಂದ. ಹೆಚ್.ಕೆ.



Copyright © All rights reserved Newsnap | Newsever by AF themes.
error: Content is protected !!