ತಾತ್ಕಾಲಿಕವಾಗಿ ಸ್ಥಗಿತಗೊಂಡ ವಿದ್ಯಾಗಮ: ನ. 2 ರಿಂದ ಸಿಬ್ಬಂದಿ ಹಾಜರಾತಿಗೆ ಸೂಚನೆ

Team Newsnap
1 Min Read

ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ‌ ಶಿಕ್ಷಣ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಇಲ್ಲಿಯವರೆಗೂ ವಿದ್ಯಾಗಮ ಯೋಜನೆಯಡಿ ಕೈಗೊಂಡ ತರಗತಿಗಳನ್ನು ಆಧರಿಸಿ ಪ್ರತೀ ವಿದ್ಯಾರ್ಥಿಯ ಪ್ರಗತಿ, ಸಾಧನೆ ಹಾಗೂ ಕೊರತೆಯನ್ನು ವಿಶ್ಲೇಷಿಸಿ ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ.‌ ಹಾಗಾಗಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಶಾಲೆಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಶಾಲೆಗಳಿಗೆ ಹಾಜರಾದ ಸಂದರ್ಭದಲ್ಲಿ ಬೋಧಕರು ಸದರಿ ವಿಶ್ಲೇಷಣೆಯನ್ವಯ ಬೋಧನಾ-ಕಲಿಕಾ ಯೋಜನೆ, ಬೋಧನಾ-ಕಲಿಕಾ‌ ಸಾಮಾಗ್ರಿ ತಯಾರಿಕೆಯಂತಹ ಮುಂತಾದ ಕೆಲಸಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲದೇ ಸಾರ್ವಜನಿಕ ಶಿಕ್ಷಣ ‌ಇಲಾಖೆಯ ವತಿಯಿಂದ ಮುಂದಿನ ದಿನಗಳಲ್ಲಿ ದೂರದರ್ಶನ ಮಾಧ್ಯಮ ಹಾಗೂ ಆಕಾಶವಾಣಿಗಳ ಮುಖಾಂತರ ಮಕ್ಕಳಿಗೆ‌ ಇನ್ನೂ ಹೆಚ್ಚಿನ ಕಲಿಕಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವದಾಗಿ‌ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.

ಸದ್ಯಕ್ಕೆ ಡಿಎಸ್ಇಆರ್‌ಟಿ ಯೂಟ್ಯೂಬ್ ಚಾನೆಲ್‌ನ ಜ್ಞಾನದೀಪದಲ್ಲಿ ಅಳವಡಿಕೆ ಮಾಡಿರುವ ವಿಡೀಯೋಗಳು, ದೀಕ್ಷಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಸಾಮಗ್ರಿಗಳು ಹಾಗೂ ಚಂದನದಲ್ಲಿ ಬರುತ್ತಿರುವ ಪಾಠಗಳ ಸಾಮಗ್ರಿಗಳನ್ನು ಬಳಕೆ ಮಾಡಲು ಅವಶ್ಯಕವಾದ ಮಾರ್ಗದರ್ಶನವನ್ನು ದೂರವಾಣಿ ಅಥವಾ ಸಮೂಹ ಮಾಧ್ಯಮದ ಮುಖಾಂತರ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ‌.

ಅಕ್ಟೋಬರ್ 31 ರಂದು ವಾಲ್ಮೀಕಿ ಜಯಂತಿ ಹಾಗೂ ನವೆಂಬರ್ 1ರಂದು ಕರ್ನಾಟಕ‌ ರಾಜ್ಯೋತ್ಸವ ಇರುವ ಪ್ರಯುಕ್ತ ಕಡ್ಡಾಯವಾಗಿ ಎಲ್ಲ ಸಿಬ್ಬಂದಿಗಳು ಶಾಲೆ-ಪ್ರೌಢ ಶಾಲೆಗಳಿಗೆ ಹಾಜರಾಗಿ ಜಯಂತಿ ಹಾಗೂ ರಾಜ್ಯೋತ್ಸವ ಆಚರಿಸಬೇಕೆಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Share This Article
Leave a comment