January 7, 2025

Newsnap Kannada

The World at your finger tips!

deepa1

ಶಿಕ್ಷಕರ ದಿನದಂದು ಶಿಕ್ಷಕರಿಗೊಂದು ಸಲಹೆ ರೂಪದ ಮನವಿಯೆಂಬ ಪಾಠ

Spread the love

ಅತ್ಯಂತ ಗೌರವಾನ್ವಿತ ಮತ್ತು ಸಮಾಜದ ಮಹತ್ವದ ಒಂದು ಪಾತ್ರವಾದ ನಮ್ಮೆಲ್ಲರ ಪ್ರೀತಿಯ ಶಿಕ್ಷಕ ವೃಂದದವರೇ ಇಗೋ ಈ ದಿನದಂದು ನಿಮಗೆಲ್ಲರಿಗೂ ನಮ್ಮ ಹೃದಯಾಂತರಾಳದ ಶುಭಾಶಯಗಳು………….

ಶಿಕ್ಷಕರಿಗೇ ಪಾಠ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿರುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಮ್ಮೆಲ್ಲರ ಕ್ಷಮೆ ಕೋರುತ್ತಾ………

” ಶಿಕ್ಷಣ ಎಂದರೆ ಮಾನವೀಯತೆಯ ವಿಕಾಸದ ಮಾರ್ಗ ” ಎಂದು ಹೇಳಿದ ಗ್ರೀಕ್ ತತ್ವಜ್ಞಾನಿಯ ಮಾತನ್ನು ನೆನಪಿಸಿಕೊಳ್ಳುತ್ತಾ……….

ವಾಸ್ತವಾಂಶ ಏನೇ ಇರಲಿ, ಕಾರಣಗಳು ಏನೇ ಇರಲಿ ಇಂದು ಈ ಆಧುನಿಕ ಕಾಲದಲ್ಲಿ ಕುಸಿಯುತ್ತಿರುವ ಮತ್ತು ವ್ಯಾಪಾರೀಕರಣವಾಗುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವಾಗ ಬಹುತೇಕ ಸಾಮಾನ್ಯ ಜನ ಬೆರಳು ತೋರಿಸುವುದು ಶಿಕ್ಷಣದ ಕಡೆಗೆ ಮತ್ತು ಇದನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಚರ್ಚೆ ಮಾಡುವಾಗಲು ಸಾಮಾನ್ಯವಾಗಿ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆಯೇ ಮಾತನಾಡುತ್ತಾರೆ…,…

ಬೇರೆ ಎಲ್ಲಾ ಕ್ಷೇತ್ರಗಳ ಕಲುಷಿತತೆಗೆ ಮೂಲ ಕಾರಣ ಶಿಕ್ಷಣ ಎಂಬುದು ಅವರ ಅಭಿಪ್ರಾಯ. ಆದ್ದರಿಂದ ಮಾನವೀಯ ಮೌಲ್ಯಗಳನ್ನು ಉಳಿಸುವ ಮತ್ತು ಬೆಳೆಸುವ ಜೊತೆಗೆ ಸಮಾಜದ ಸ್ವಾಸ್ಥ್ಯ ಮತ್ತು ಜನರ ಜೀವನ ಮಟ್ಟ ಸುಧಾರಿಸುವ ನಿಮ್ಮ ಜವಾಬ್ದಾರಿಯನ್ನು ನೆನಪು ಮಾಡುತ್ತಾ…..,…,….

ಮಾನವ ಬದುಕೆಂಬುದು ಕಾಲದೊಂದಿಗೆ ಸಮಯದ ಜೊತೆ ಒಂದು ಪಯಣ. ಸುಮಾರು 70/80 ವರ್ಷಗಳ ಅವಧಿಯ ದೀರ್ಘ ಮತ್ತು ನಿರಂತರ ಪಯಣದಲ್ಲಿ ನಾಗರಿಕ ಸಮಾಜದಲ್ಲಿ ಮನುಷ್ಯ ಎಂಬ ಪ್ರಾಣಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಬಯಸುತ್ತದೆ. ಅದಕ್ಕಾಗಿಯೇ ಅನೇಕ ದೇವರು ಧರ್ಮ ವೈಚಾರಿಕತೆ ಆಡಳಿತಾತ್ಮಕ ಪದ್ಧತಿ ಸಿದ್ದಾಂತ ಮುಂತಾದ ವ್ಯವಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಅದರಲ್ಲಿ ಬಹುಮುಖ್ಯವಾದುದು ಶಿಕ್ಷಣ ವ್ಯವಸ್ಥೆ ಮತ್ತು ಅದರ ಬಹುಮುಖ್ಯ ಭಾಗ ಶಿಕ್ಷಕರು……..

ಪದ್ಧತಿ ಕ್ರಮ ಯಾವುದೇ ಇರಲಿ ಮನುಷ್ಯ ಜನಾಂಗದ ಮಾನಸಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯ ಮತ್ತು ಅನಿವಾರ್ಯ. ಅದನ್ನು ಮುಂದಿನ ಜನಾಂಗಕ್ಕೆ ಅರ್ಥ ಮಾಡಿಸುವ ಹೊಣೆಗಾರಿಕೆ ಶಿಕ್ಷಕರದು…..

ಆದರೆ ಇಂದು ಈ ಕ್ಷಣದಲ್ಲಿ ಮಾನವೀಯ ಮೌಲ್ಯಗಳು ಸಂಪೂರ್ಣ ದಾರಿ ತಪ್ಪಲು ಈ ಶಿಕ್ಷಕ ವರ್ಗದ ಗುಣಮಟ್ಟ ಕುಸಿಯುತ್ತಿರುವುದು ಹೆಚ್ಚು ಕಾರಣವಾಗುತ್ತಿದೆ.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ಶಿಕ್ಷಣ ಒಂದು ಕಡ್ಡಾಯ ಅನುಸರಿಸಬೇಕಾದ ನಿಯಮವಾಗಿದೆ. ಎಲ್ಲಾ ಮಕ್ಕಳು ಶಾಲೆಗಳ ಮುಖಾಂತರವೇ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಆದರೆ ಇಂದು ಆ ಶಿಕ್ಷಣ ವ್ಯವಸ್ಥೆಯೇ ಹಾದಿ ತಪ್ಪಿ ಕಲುಷಿತಗೊಂಡಿದೆ. ಸಂಸ್ಥೆಗಳಿಗೆ ಹಣ ಮಾಡುವ ಗುರಿ ಶಿಕ್ಷಕರಿಗೆ ಹೊಟ್ಟೆ ಪಾಡಿನ ಉದ್ಯೋಗ ಎಂಬಂತಾಗಿದೆ……

ಶಿಕ್ಷಕರೇ ಸಮಾಜದ ಕಣ್ಣು. ಆದರೆ ಇಂದು ಕಣ್ಣು ಮಬ್ಬಾಗುತ್ತಿದೆ. ದೃಶ್ಯಗಳು ಸ್ಪಷ್ಟವಾಗಿ ಕಾಣದಂತಾಗಿದೆ. ಅದಕ್ಕಾಗಿ ಆತ್ಮಾವಲೋಕನ ಎಂಬ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಶ್ಯಕತೆ ಇದೆ…….

ಹೆಚ್ಚು ಹೆಚ್ಚು ವಿದ್ಯಾವಂತರಾಗುವ, ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯುವ, ಹೆಚ್ಚು ಹೆಚ್ಚು ಮಾಹಿತಿ ಮತ್ತು ಉದ್ಯೋಗ ಪಡೆಯುವ ದೊಡ್ಡ ಅಧಿಕಾರ ಹೊಂದುವ ಜನರೇ ಬಹುತೇಕ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತಿರುವುದು ಶಿಕ್ಷಣದ ಬಗ್ಗೆಯೇ ಅನುಮಾನ ಮೂಡಿಸುತ್ತಿದೆ. .

ಆದ್ದರಿಂದ ನಮ್ಮ ಶಿಕ್ಷಕ ಬಂಧುಗಳೇ……..

ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ನೈತಿಕತೆಯನ್ನು ಮಕ್ಕಳಲ್ಲಿ ಬೆಳೆಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸಮಾಜದ ಬಹುತೇಕ ಎಲ್ಲರೂ ನಿಮ್ಮ ಮೂಲಕವೇ ಹಾದು ನೀವು ನೀಡುವ ಶಿಕ್ಷಣ ಮತ್ತು ಸಂಸ್ಕಾರದ ಮೂಲಕವೇ ಮುಂದಿನ ಬದುಕನ್ನು ರೂಪಿಸಿಕೊಳ್ಳುವುದು. ಈ ಜಗತ್ತನ್ನು ಮಕ್ಕಳು ಅರ್ಥಮಾಡಿಕೊಳ್ಳುವುದೇ ನಿಮ್ಮ ಮಾತುಗಳ ಮೂಲಕ. ಮಕ್ಕಳ ಮನಸ್ಸಿನ ಅಡಿಪಾಯವೇ ನೀವು. ಆಧುನಿಕತೆ ಮತ್ತು ವ್ಯಾಪಾರೀಕರಣದ ಹೆಸರಿನಲ್ಲಿ ನೀವು ಸಹ ವ್ಯವಸ್ಥೆಗೆ ಹೊಂದಿಕೊಂಡು ಅಸಹಾಯಕರಾಗಿ ಕೈ ಚೆಲ್ಲಿದರೆ ಭಾರತದ ಮುಂದಿನ ಭವಿಷ್ಯ ಕರಾಳವಾಗುವ ಸಾಧ್ಯತೆ ಇದೆ……

ಈಗಾಗಲೇ ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಆಹಾರ ಕಲುಷಿತವಾಗಿದೆ. ಹುಟ್ಟು ಸಾವಿನ ಪ್ರಮಾಣ ಪತ್ರ ಪಡೆಯಲು ಸಹ ಲಂಚ ನೀಡಬೇಕಾಗಿದೆ. ನೈತಿಕತೆ ಕುಸಿಯುತ್ತಿರುವುದು ಮಾತ್ರವಲ್ಲದೆ ವಿರುದ್ಧ ಮೌಲ್ಯಗಳು ಮತ್ತು ಅನೈತಿಕತೆ ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿದೆ. ಶಿಕ್ಷಣ ಪಡೆದವರೇ ಮೌಢ್ಯ ಅಂಧಕಾರ ಭ್ರಷ್ಟಾಚಾರ ಜಾತಿ ವ್ಯವಸ್ಥೆ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ….

ಶಿಕ್ಷಕ ಮಿತ್ರರೇ ” ಏಳಿ ಎದ್ದೀಳಿ ಎಚ್ಚರಗೊಳ್ಳಿ. ಮತ್ತೊಂದು ಸ್ವಾತಂತ್ರ್ಯ ಸಮಾನತೆಯ ಹೋರಾಟಕ್ಕೆ ಸಿದ್ದರಾಗಿ. ಶಿಕ್ಷಕ ವೃತ್ತಿ ಎಂಬುದು ಕೇವಲ ಹೊಟ್ಟೆ ಪಾಡಿನ ಉದ್ಯೋಗವಲ್ಲ. ಅದು ಬದುಕಿನ ಪಾಠ. ಅದು ವ್ಯಕ್ತಿಯ ಜೀವನ ವಿಧಾನ. ಅದು ಸಮಾಜದ ಆರೋಗ್ಯ. ಅದು ದೇಶದ ಅಭಿವೃದ್ಧಿಯ ಮೂಲ ಮಂತ್ರ. ಅದು ನಮ್ಮೆಲ್ಲರ ನೆಮ್ಮದಿಯ ಮಾರ್ಗ .
75 ವರ್ಷಗಳ ಹಿಂದೆ ಪಡೆದ ಸ್ವಾತಂತ್ರ್ಯವನ್ನು ಮುಕ್ತವಾಗಿ ಅನುಭವಿಸುವ ವಾತಾವರಣ ನಿರ್ಮಾಣ ಮಾಡಿ. ಅಧ್ಯಯನ ಚಿಂತನೆ ವಿಶಾಲ ಮನೋಭಾವ ರೂಢಿಸಿಕೊಳ್ಳಿ. ಶಿಕ್ಷಕರೆಂದರೆ – ಶಿಕ್ಷಣವೆಂದರೆ ತಿಳಿವಳಿಕೆ ಮಾತ್ರವಲ್ಲ ಅದು ನಡವಳಿಕೆ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಾ………”

ಮತ್ತೊಮ್ಮೆ ಶಿಕ್ಷಕರ ದಿನದ ಶುಭಾಶಯಗಳು

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!