ಗುರು ಎನ್ನುವುದು ಔನ್ನತ್ಯವನ್ನು,ಶ್ರೇಷ್ಠವಾದುದನ್ನು ಸೂಚಿಸುವ ಪದವಾಗಿದೆ.ಗುರಿ ಸಾಧನೆಗೆ ಮಾರ್ಗದರ್ಶಕನೇ ಗುರು.ಆದ್ದರಿಂದಲೇ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿದ್ದಾರೆ. ಏಕೆಂದರೆ ಗುರುವಿನ ಸ್ಥಾನಮಾನವೇ ಅಂತಹುದು. ಇದನ್ನರಿತೇ ಹಿಂದಿನ ಕಾಲದ ಗುರುಗಳು ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳಿಗೆ ,ಸಮಾಜಕ್ಕೆ ಮಾರ್ಗದರ್ಶಕರಾಗಿ ವಿಶಿಷ್ಟ ಸ್ಥಾನಮಾನವನ್ನು ಗಳಿಸಿಕೊಂಡಿದ್ದರು.ನಮ್ಮ ಹಿರಿಯರು ಇಂದಿಗೂ ತಮ್ಮ ಗುರುಗಳನ್ನು ನೆನೆದು ಪ್ರಶಂಸಿಸುತ್ತಾರೆ. ಬದಲಾಗುತ್ತಿರುವ ಕಾಲ ಸ್ಥಾನಮಾನಗಳೇನೇ ಇರಲಿ ಭವ್ಯ ಭಾರತದ ಪ್ರಜೆಗಳನ್ನು ರೂಪಿಸುತ್ತಿರುವ ಇಂದಿನ ಶಿಕ್ಷಕರೂ ತಮ್ಮ ಶ್ರೇಷ್ಠ ಸ್ಥಾನವನ್ನು ಉಳಿಸಿಕೊಂಡು ಸಹ ಹಿರಿಯರು ಸಾಗಿದ ಹಾದಿಯಲ್ಲೇ ಸಾಗಬೇಕಾಗಿದೆ.
ಹಿಂದೆ ಶಿಕ್ಷಕ ವೃತ್ತಿಯನ್ನು ಕರೆದು ಕೊಡುತ್ತಿದ್ದರಂತೆ! ಕಾಲ ಬದಲಾದಂತೆ ಇದೂ ಸಹ ಮಾರ್ಪಡಾಗುತ್ತಾ ಬಂದು ಈಗ ಶಿಕ್ಷಕರಾಗಬೇಕಾದರೆ ಏನೆಲ್ಲಾ ಶ್ರಮಪಡಬೇಕು,ಎಂತಹ ಪೈಪೋಟಿಯನ್ನು ಎದುರಿಸಬೇಕು ಎಂಬುದು ನಮ್ಮ ಕಣ್ಣಮುಂದೆಯೇ ಇದೆ.ಸಾವಿರಾರು ಶಿಕ್ಷಕ ನಿರುದ್ಯೋಗಿಗಳು ಕೆಲಸಕ್ಕಾಗಿ ಜಾತಕ ಪಕ್ಷಿಯಂತೆ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ತರಬೇತಿ ಪಡೆದೂ ಸಹ ಬೇರೆ ವೃತ್ತಿಗಳತ್ತ ಮುಖಮಾಡಬೇಕಾದ ಸಂದಿಗ್ಧತೆ ಎದುರಾಗಿದೆ.ಅಂತಹುದರಲ್ಲಿ ಈಗಾಗಲೇ ಅನಾಯಾಸವಾಗಿ ಶಿಕ್ಷಕ ವೃತ್ತಿಯ ಖಾಯಂ ಕೆಲಸ ಪಡೆದು ವರ್ಷಕ್ಕೆ ಲಕ್ಷಾಂತರ ಸಂಬಳ ಪಡೆಯುವಾಗ ಅದಕ್ಕಾದರೂ ಬೆಲೆ ಕೊಟ್ಟು ಸಮಾಜದ ಋಣ ತೀರಿಸಬೇಕಾಗಿದೆ.
ಆದರ್ಶ ಶಿಕ್ಷಕ : ಶಿಕ್ಷಕನಾದವನು ಮೊದಲಿಗೆ ತನ್ನ ವೃತ್ತಿಯಲ್ಲಿ ಶ್ರದ್ಧೆ,ನಂಬಿಕೆ ಗೌರವಗಳನ್ನು ಬೆಳೆಸಿಕೊಂಡು ಅಧ್ಯಾಪಕ ವೃತ್ತಿಯ ಉನ್ನತ ಧೋರಣೆಗಳನ್ನು ಎತ್ತಿ ಹಿಡಿಯಬೇಕು. ಮನವರಿಕೆಯಾಗುವಂತೆ ವಿದ್ಯಾರ್ಥಿಗಳಿಗೆ ಬೋಧಿಸಬೇಕು.ಕೇವಲ ವಿಷಯ ಜ್ಞಾನವನ್ನಷ್ಟೇ ನೀಡಿದರೆ ಸಾಲದು,ಕ್ರೀಡೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಭಾಗವಹಿಸುವಂತೆ ಮಾಡಿ ಸರ್ವತೋಮುಖ ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರೇರಕನಾಗಬೇಕು.ಇಂದಿನ ಸಮಾಜ ನೈತಿಕ ಅಧಃಪತನದತ್ತ ಸಾಗುತ್ತಿರುವುದನ್ನು ತಡೆಯಬೇಕಾದರೆ ಶಿಕ್ಷಕರು ಕ್ರಿಯಾಶೀಲರಾಗಬೇಕು. ಆದರ್ಶ ಶಿಕ್ಷಕನಾದವನು ತನ್ನ ಮುಂದೆ ಹಾದುಹೋಗುವ ಸಾವಿರಾರು ನ್ಯಾಯ-ಅನ್ಯಾಯಗಳ ವಿಮರ್ಶೆ ,ಒಳಿತು-ಕೆಡುಕಗಳ ವಿಶ್ಲೇಷಣೆ,ಶಿಷ್ಟ-ದುಷ್ಟರ ನಡೆವಳಿಕೆ ಅರಿಯುವಂತೆ ಮಾಡಿ ದೇಶಭಕ್ತಿ,ಸಚ್ಚಾರಿತ್ರ್ಯ ಮುಂತಾದ ಉತ್ತಮಾಂಶಗಳನ್ನು ಬೆಳೆಸಿ ತನ್ಮೂಲಕ ರಾಷ್ಟರಕ್ಷಕನಾಗಬೇಕಾಗಿದೆ.ಇಪ್ಪತ್ತೊಂದನೇ ಶತಮಾನದ ಈಗಿನ ವಿದ್ಯಾರ್ಥಿಗಳು ಪ್ರತಿಯೊಂದನ್ನು ಅರಿಯಬಲ್ಲವರಾಗಿದ್ದಾರೆ. ಶಿಕ್ಷಕನ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆತನ ಗುಣಾವಗುಣಗಳನ್ನು ಪೋಷಕರ ಮುಂದೆ,ಸಮಾಜದ ಮುಂದೆ ತೆರೆದಿಡಬಲ್ಲರು.ಈ ಅಂಶ ಶಿಕ್ಷಕರಿಗೆ ತಿಳಿದಿರುವುದು ಉಚಿತ.ಕೆಳ ಹಂತದ ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಶಿಕ್ಷಕರು ಶಿಸ್ತು,ಸಂಯಮ ನಡೆ-ನುಡಿಯಲ್ಲಿ ಸಮಯಪಾಲನೆಯಲ್ಲಿ ಆದರ್ಶಪ್ರಾಯರಾಗಿರಬೇಕು ವಿದ್ಯಾರ್ಥಿಗಳಿಗೆ ಉಪದೇಶ ಮಾಡುವ ನಾವು ಎಷ್ಟರಮಟ್ಟಿಗೆ ಅದನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಅರಿತಿರಬೇಕು.ಇಲ್ಲದಿದ್ದರೆ ಪುರಾಣ ಹೇಳೋಕೆ ಬದನೆಕಾಯಿ ತಿನ್ನೋಕೆ ಎಂಬಂತಾಗುತ್ತದೆ. ಒಬ್ಬವಿದ್ಯಾರ್ಥಿ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಪ್ರತಿಷ್ಟಿತ ಸ್ಥಾನಕ್ಕೇರಿ ಶಿಕ್ಷಕರನ್ನು ವಂದಿಸಿ ಮಾತನಾಡಿಸಿದಾಗ ಸಿಗುವ ಸಂತೃಪ್ತಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ.ವಿದ್ಯಾರ್ಥಿಗಳು ನಮ್ಮನ್ನು ಗೌರವಿಸುವಂತಾಗಲು ನಮ್ಮ ವ್ಯಕ್ತಿತ್ವವೇ ಕಾರಣವಾಗಿರುತ್ತದೆ.ಆದ್ದರಿಂದ ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಹೊಣೆಗಾರಿಕೆ ಶಿಕ್ಷಕನ ಮೇಲಿರುತ್ತದೆ.
ಸಮಸ್ಯೆಗಳ ಸುಳಿಯಲ್ಲಿ : ಇಷ್ಟೆಲ್ಲಾ ಗುರುತರವಾದ ಜವಾಬ್ದಾರಿಗಳನ್ನು ಹೊಂದಿರುವ ಶಿಕ್ಷಕನಿಗೆ ಸರ್ಕಾರ ಸಮಾಜ ಅದಕ್ಕೆ ತಕ್ಕಂತಹ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಬೇಕಾದ ಹೊಣೆಗಾರಿಕೆಯೂ ಸಮಾಜದ ಮೇಲಿದೆ ಎಂಬುದನ್ನು ಮರೆಯುವಂತಿಲ್ಲ.ಶಿಕ್ಷಕ ತನ್ನ ಪರಿಮಿತಿಯಲ್ಲಿ ಏನೇನೆಲ್ಲಾ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರೂ ಸಮಾಜ ಜೀವಿಯಾದ ವಿದ್ಯಾರ್ಥಿ ಅದರ ವಿರುದ್ಧ ದಿಕ್ಕಿನಲ್ಲಿ ಎಳೆಯುವ ಚಟುವಟಿಕೆಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ.ವಿದ್ಯಾರ್ಥಿ ಇಂತಹ ಪ್ರಭಾವಕ್ಕೆ ಒಳಗಾಗದಂತೆ ತಡೆಯುವುದು ಪೋಷಕರ ಕರ್ತವ್ಯವಾಗಬೇಕು.ವಿದ್ಯಾರ್ಥಿಯ ಪ್ರಗತಿಗೆ ಪೋಷಕರೂ ಕೈಜೋಡಿಸಿದರೆ ಮಾತ್ರ ಶಿಕ್ಷಕನ ಶ್ರಮ ಸಾರ್ಥಕವಾಗುತ್ತದೆ. ಶಿಕ್ಷಕನ ಮಾನಸಿಕ ನೆಮ್ಮದಿ ಆತನ ಕರ್ತವ್ಯದಲ್ಲಿ ಪ್ರತಿಫಲಿತವಾಗುವುದರಿಂದ ಶಿಕ್ಷಕರ ಮೇಲೆ ಬಲವಂತದ ಮಾಘಸ್ನಾನಗಳಂತಹ ಇತರೆ ಕಾರ್ಯಗಳನ್ನು ನಿಯಂತ್ರಿಸಿ ಶಿಕ್ಷಕರನ್ನು ಬೋಧನೆಗೆ ಮಾತ್ರ ಬಳಸಿಕೊಳ್ಳಬೇಕು.ಯಾರದೋ ತೀಟೆ ತೆವಲುಗಳಿಗೆ ಪ್ರತಿನಿತ್ಯ ಜಾರಿಯಾಗುತ್ತಿರುವ ಹೊಸಹೊಸ ಯೋಜನೆಗಳು- ಯೋಚನೆಗಳು ಶಿಕ್ಷಕ ಪಾಠಮಾಡುವುದನ್ನು ಬಿಟ್ಟು ಬೇರೆಲ್ಲವನ್ನೂ ಮಾಡು ಎಂಬ ಸ್ಥಿತಿಗೆ ದೂಡುತ್ತಿವೆ.ಜೊತೆಗೆ ಅಧಿಕಾರಿಗಳ ಕಿರುಕುಳ,ಶಿಕ್ಷೆಯಿಂದ ಹೊರತಾಗಿ ಬುದ್ದಿಮಾತಿನಿಂದಲೇ ವಿದ್ಯಾರ್ಥಿಗಳನ್ನು ತಿದ್ದಬೇಕಾದ ಅನಿವಾರ್ಯತೆ,ಶಿಕ್ಷಕನ ಸದುದ್ದೇಶವನ್ನೇ ಮರೆತು ಬಲಿಪಶುಮಾಡುವ ಮಕ್ಕಳ-ಪೋಷಕ ಪರವಾದ ನೀತಿ ನಿಯಮಗಳು, ವಿದ್ಯಾಥರ್ಿಗಳ ಹಿತದೃಷ್ಟಿಯಿಂದ ತೆಗೆದುಕೊಂಡ ಕ್ರಮಗಳೂ ಶಿಕ್ಷಕರ ಕೊರಳಿಗೆ ಉರುಳಾಗಿ ಸುತ್ತಿಕೊಳ್ಳುತ್ತಿವೆ.ಶಿಕ್ಷಕರನ್ನು ಬಲಿಪಶುವಾಗಿಸುತ್ತಿವೆ.
ಹತ್ತಾರು ಹೊಣೆಗಾರಿಕೆ ಆದರ್ಶಗಳನ್ನು ಶಿಕ್ಷಕನಾದವನು ಪಾಲಿಸಬೇಕು ಎಂದು ಅಪೇಕ್ಷಿಸುವ ನಾವು ಶಿಕ್ಷಕನೂ ಸಂಘಜೀವಿ,ಆತನೂ ಮನುಷ್ಯ,ಆತನ ಜೀವನದಲ್ಲೂ ನೋವು-ನಲಿವು,ರಾಗ-ದ್ವೇಷ,ಕಷ್ಟ-ಸುಖ ಎಲ್ಲವನ್ನು ಅನುಭವಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುತ್ತಾನೆ.ಆತನಿಗೂ ಮಾನವೀಯ ದೌರ್ಬಲ್ಯಗಳಿರುತ್ತವೆ.ಶಿಕ್ಷಕನಿಂದ ಅಪರೂಪಕ್ಕೊಮ್ಮೆ ಎಂಬಂತೆ ಅಲ್ಲಲ್ಲಿ ನಡೆಯುವ ಅನೈತಿಕ,ಸಮಾಜಘಾತುಕ ಚಟುವಟಿಕೆಗಳನ್ನು ಇಡೀ ಶಿಕ್ಷಕ ವೃಂದಕ್ಕೆ ಆರೋಪಿಸುವಂತಹ ಮನೋಪ್ರವೃತ್ತಿ ಕಡಿಮೆಯಾಗಬೇಕು.ಅಂತಹ ಚಟುವಟಿಕೆಯ ಸತ್ಯವನ್ನು ಪರಾಮರ್ಶಿಸದೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಶಿಕ್ಷಿಸುವ ಪ್ರವೃತ್ತಿ ನಿಲ್ಲಬೇಕು.
ಇವೆಲ್ಲವನ್ನು ಅನುಭವಿಸುತ್ತಾ ಏನೆಲ್ಲಾ ಮಾಡಿಯೂ ತಿಂಗಳ ಮೊದಲ ದಿನ ಸಂಬಳ ಕೈಸೇರುವ ದಿನ ಎಂದೋ ಮಾಯವಾಗಿದೆ.ಸಂಬಳ ಸವಲತ್ತು ಸಾಲದು ಎಂದೇನಾದರೂ ಬೀದಿಗೆ ಬಂದರೆ ಮುಗಿದೇ ಹೋಯಿತು ಇಡೀ ಸಮಾಜವೇ ವಿದ್ಯಾರ್ಥಿಗಳ ಭವ್ಯ ಭವಿತವ್ಯದ ವಿಷಯ ಮುಂದೆ ಮಾಡಿ ಶಿಕ್ಷಕ ಸಮುದಾಯದ ಮೇಲೆ ಮುಗಿಬೀಳುತ್ತದೆ.ಈ ಒತ್ತಡಕ್ಕೆ ಮಣಿದು ಹಿಂದೆ ಸರಿದರೆ ಸಂಬಳ ಗಗನ ಕುಸುಮವೇ ಸರಿ ಆಗ ಯಾರೂ ಶಿಕ್ಷಕರ ದಯನೀಯ ಸ್ಥಿತಿಗೆ ಮರುಗರು.ವಿವಿಧ ರೀತಿಯ ಶಾಲೆ-ಕಾಲೇಜುಗಳಲ್ಲಿ ವಿವಿಧ ಹಣೆಪಟ್ಟಿ ಅಂಟಿಸಿಕೊಂಡು ತಾತ್ಕಾಲಿಕವಾಗಿ ದುಡಿಯುತ್ತಿರುವ ಶಿಕ್ಷಕರ ದಯನೀಯ ಸ್ಥಿತಿ ಹೇಳತೀರದು.
ಕೊರೋನಾ ಸಮಯದ ಶಿಕ್ಷಣ ವ್ಯವಸ್ಥೆ: ಕೊರೋನಾ ವಕ್ಕರಿಸಿದ ನಂತರವಂತೂ ಶಿಕ್ಷಣ ವ್ಯವಸ್ಥೆಯೇ ಬುಡಮೇಲಾಗಿದೆ.ಸರ್ಕಾರಿ,ಅನುದಾನಿತ,ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅದರದೇ ಆದ ರೀತಿಯಲ್ಲಿ ಸಾಕಷ್ಟು ಅವ್ಯವಸ್ಥೆ ಸೃಷ್ಟಿಸಿದೆ.ಆಡಳಿತ ವರ್ಗ,ವಿದ್ಯಾರ್ಥಿಗಳು,ಪೋಷಕರು,ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರ ನಾನಾ ರೀತಿಯ ಸಮಸ್ಯೆಗಳು ಪರಿಹರಿಸಲು ಸಾಧ್ಯವಿಲ್ಲದ ಮಟ್ಟಿಗೆ ಬೆಳೆದು ನಿಂತಿದೆ.ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸ್ವಲ್ಪ ಮಟ್ಟಿಗೆ ಹೊಡೆತ ತಾಳಿಕೊಂಡಿವೆ ವಿದ್ಯಾರ್ಥಿಗಳು. ಹಲವಾರು ರೀತಿಯ ಅಡೆತಡೆಗಳಿಂದ ಆನ್ ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಶಿಕ್ಷಣ ಮರೀಚಿಕೆಯಾಗಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ನೌಕರರು ಜೀವನ ನಡೆಸಲಾಗದೇ ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ.ಶಿಕ್ಷಕರು ತಮ್ಮ ವಿದ್ಯೆ ಬದಿಗಿಟ್ಟು ಜೀವನೋಪಾಯಕ್ಕೆ ಸಿಕ್ಕ ಸಿಕ್ಕ ನೌಕರಿ ಹುಡುಕಿಕೊಂಡು ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ.ಕೆಲವು ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ.ಪೋಷಕರು ಆನ್ಲೈನ್ ಶಿಕ್ಷಣದ ಪರಿಕರಗಳನ್ನು ತಮ್ಮ ಮಕ್ಕಳಿಗೆ ಒದಗಿಸಲಾಗದೇ ಕಂಗಾಲಾಗಿದ್ದಾರೆ.ಗ್ರಾಮೀಣ ಪರಿಸರದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವೇ ಉಳಿದಿದ್ದಾರೆ.ಅವರಿಗೆ ಶಿಕ್ಷಣ ಕೊಡಿಸಲು ಯತ್ನಿಸುತ್ತಿರುವ ಸರ್ಕಾರ ಜಾರಿಗೆ ತಂದಿರುವ ‘ವಿದ್ಯಾಗಮ’ ಯೋಜನೆಯಿಂದ ಶಿಕ್ಷಕರು ಬೀದಿ-ಬೀದಿ,ಮನೆ ಮನೆ,ಪಾರ್ಕ,ಜಗುಲಿ,ಗುಡಿ-ಗುಡಾರದ ಬಳಿ ಶಿಕ್ಷಣ ಕೊಡಲು ಪ್ರಯತ್ನಿಸುತ್ತಾ ಹೈರಾಣಾಗುತ್ತಿದ್ದಾರೆ.ಸದ್ಯಕ್ಕೆ ಶಿಕ್ಷಣ ವ್ಯವಸ್ಥೆ ಹಳಿಗೆ ಬರುವ ಸೂಚನೆ ಇಲ್ಲ,ಬಂದರೂ ನಿಗದಿತ ಅವಧಿಯಲ್ಲಿ ಶೈಕ್ಷಣಿಕ ವರ್ಷ ಪೂರೈಸುವುದು ದುಸ್ಸಾಹಸವಾಗುತ್ತದೆ.
ಹೀಗೆ ಶಿಕ್ಷಕರ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಶಿಕ್ಷಕರಿಗೆ ‘ಪಾಠ ಹೇಳುವ’ ಮಂದಿ ಇವುಗಳತ್ತಲೂ ಗಮನಹರಿಸಿ ಶಿಕ್ಷಕರ ಬೇಕು-ಬೇಡಗಳಿಗೆ ಸ್ಪಂದಿಸಿ ಶಿಕ್ಷಕರಿಗೆ ಕಲಿಸುವ – ಕಲಿಯುವ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕಾಗಿದೆ.
ಕೊನೆಮಾತು : ಇಷ್ಟೆಲ್ಲಾ ಸಮಸ್ಯೆಗಳಿದ್ದಾಗ್ಯೂ ಸಂಯಮಿ ಶಿಕ್ಷಕ ಇವೆಲ್ಲವನ್ನು ಬದಿಗಿಟ್ಟು ತನ್ನ ಪಾಲಿನ ಕರ್ತವ್ಯವನ್ನು ವಿದ್ಯಾಥರ್ಿಗಳ, ಸಮಾಜದ ಹಿತದೃಷ್ಟಿಯಿಂದ ತನ್ನ ಅಡೆತಡೆಯನ್ನು ನಿವಾರಿಸಿಕೊಂಡು ಶಿಕ್ಷಕ ವೃತ್ತಿಯ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ರಾಧಾಕೃಷ್ಣನ್ರಂತಹ ಆದರ್ಶ ಶಿಕ್ಷಕರ ಹಾದಿಯಲ್ಲಿ ಮುನ್ನಡೆಯಬೇಕಾದ ಅಗತ್ಯತೆ ಅನಿವಾರ್ಯತೆಯನ್ನು ಮನಗಾಣಬೇಕಾಗಿದೆ.
More Stories
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ