December 27, 2024

Newsnap Kannada

The World at your finger tips!

teachersdday1

ದೇಶದ ಅಭಿವೃದ್ಧಿಗೆ ಶಿಕ್ಷಣದ ಬೆಸುಗೆ ಅಗತ್ಯ ನಿವೃತ್ತ‌ ಶಿಕ್ಷಕಿ ಅನಂತ ಲಕ್ಷ್ಮಿ ಅಭಿಮತ

Spread the love
ananthlakshmi
ಅನಂತ ಲಕ್ಷ್ಮಿ

ಮೈಸೂರಿನ ಚಾಮುಂಡಿಪುರಂನ ಸೆಂಟ್ ಮೇರಿ ಶಾಲೆಯಲ್ಲಿ 39 ವರ್ಷಗಳ ಕಾಲ , ಆದರ್ಶ ಶಿಕ್ಷಕಿ ಅನಂತ ಲಕ್ಷ್ಮಿ ಅವರು ಗುರು ಎನ್ನುವ ಪದಕ್ಕೆ ಅನ್ವಯವಾಗುವ ಶಿಸ್ತು, ಶ್ರದ್ಧೆ, ಕ್ರಿಯಾಶೀಲತೆಯಿಂದ ಶಿಕ್ಷಣದ ಸೇವೆ ಮಾಡಿದರು.
ನ್ಯೂಸ್ ಸ್ನ್ಯಾಪ್ ಆರಂಭಿಸಿದ ಶೈಕ್ಷಣಿಕ ಸಪ್ತಾಹದಲ್ಲಿ ನಿವೃತ್ತ ಹಿರಿಯ ಅಧಿಕಾರಿ ಎನ್ ಜಯರಾಂ ಪತ್ನಿ
ಅನಂತ ಲಕ್ಷ್ಮಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಪ್ರಶ್ನೆ: ಶಿಕ್ಷಕರ ದಿನಾಚರಣೆ ಮಹತ್ವ ಉಳಿಸಿಕೊಂಡಿದೆ ಅಂತ ನಿಮಗೆ ಅನ್ನಿಸುತ್ತದೆಯೇ?
-ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಮಾಜಿ ರಾಷ್ಟ್ರಪತಿ, ದಿವಂಗತ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಅದನ್ನು ಅವರು ಜಯಂತಿಯಾಗಿ ಆಚರಿಸಿಕೊಳ್ಳದೆ, ಶಿಕ್ಷಕರ ಗೌರವಾರ್ಥ ‘ಶಿಕ್ಷಕರ ದಿನಾಚರಣೆ’ ಎಂದು ಘೋಷಿಸಿದರು. ಹಾಗಾಗಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಮಹನೀಯರ ದಿನಾಚರಣೆಗಳು ವಿಜೃಂಭಣೆಯಿಂದ ಆಚರಿಸುವುದಕ್ಕಿಂತ ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ. ನಿಷ್ಠೆ, ಪ್ರಾಮಾಣಿಕತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉಜ್ವಳ ಭವಿಷ್ಯ ರೂಪಿಸುವ ಶಿಕ್ಷಕರನ್ನೇ ಆಯ್ದು ಗೌರವಿಸಬೇಕು. ಅದೇ ಶಿಕ್ಷಕರ ದಿನಾಚರಣೆ ಹಾಗೂ ರಾಧಾಕೃಷ್ಣರಿಗೆ ಸಲ್ಲಿಸುವ ನಿಜವಾದ ಗೌರವ
ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆ: ಶಿಕ್ಷಕರಾಗಿ ನಿಮ್ಮ ಅನುಭವ, ವಿದ್ಯಾರ್ಥಿಗಳೊಂದಿಗೆ ನಿಮ್ಮ ಒಡನಾಟ ಹೇಗಿತ್ತು?
-ಶಿಕ್ಷಕ ವೃತ್ತಿ ಪವಿತ್ರವಾದುದು. ಸೇವಾಭಾವನೆ ಇರಬೇಕು. ಪ್ರಾಮಾಣಿಕತೆ ಅರ್ಪಿಸಬೇಕು. ಗುರು-ಶಿಷ್ಯರ ಸಂಬಂಧ ಪ್ರೀತಿಯ ಅನುಬಂಧವಾಗಿರಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಗೌರವದಿಂದ ಕೂಡಿರಬೇಕು. ಶಿಕ್ಷಕನಾಗಿ ಮಕ್ಕಳಿಂದ ನಿಷ್ಕಲ್ಮಷ ಪ್ರೀತಿ ಗಳಿಸಿದ್ದೇನೆ. ಆನಂದ ಅನುಭವಿಸಿದ್ದೇನೆ. ಮಕ್ಕಳಿಗೆ ಉಜ್ವಲ ಭವಿಷ್ಯ ಕಲ್ಪಿಸಿರುವ ಹೆಮ್ಮೆ ನನಗಿದೆ. ನನ್ನ ವಿದ್ಯಾರ್ಥಿಗಳು ರಾಜ್ಯ, ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೀಗಲೂ ನನ್ನನ್ನು ಕಂಡಾಗ ಪ್ರೀತಿ, ಗೌರವದಿಂದ ಮಾತನಾಡಿಸುತ್ತಾರೆ. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕೆ? ಶಿಕ್ಷಕರೆಂದರೆ ಸಮಾಜಕ್ಕೆ ಸತ್ಪಜೆಗಳನ್ನು ಕೆತ್ತಿಕೊಡುವ ಶಿಲ್ಪಿಗಳು.
-ಶಿಕ್ಷಕರಿಗೆ ಮೊದಲು ತಾಳ್ಮೆ ಇರಬೇಕು. ಮಕ್ಕಳನ್ನು ಪ್ರೀತಿಯಿಂದ ತಮ್ಮತ್ತ ಆಕರ್ಷಿಸಬೇಕು. ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಎಲ್ಲಾ ಮಕ್ಕಳು ಒಂದೇ ರೀತಿ ಇರುವುದಿಲ್ಲ. ಎಲ್ಲರ ಮನೋಭಾವ, ಹವ್ಯಾಸ, ವ್ಯಕ್ತಿತ್ವ, ಗ್ರಹಿಸುವ ಶಕ್ತಿ, ಚುರುಕುತನ, ಬುದ್ದಿವಂತಿಕೆ ಎಲ್ಲವೂ ವಿಭಿನ್ನವಾಗಿರುತ್ತವೆ. ಅವರನ್ನು ಅಷ್ಟು ಬೇಗ ಅರ್ಥ ಮಾಡಿಕೊಳ್ಳಲು ಅಸಾಧ್ಯ. ಅದಕ್ಕೆ ತಾಳ್ಮೆ ಬೇಕು. ತಾಳ್ಮೆಯಿಂದ ಅವರೊಂದಿಗೆ ಬೆರೆತು, ಪ್ರೀತಿಯಿಂದಲೇ ತಮ್ಮ ಹತೋಟಿಗೆ ತಂದುಕೊಳ್ಳಬೇಕು. ಆಗ ಮಕ್ಕಳು ನಾವು ಹೇಳಿದ್ದನ್ನು ಖುಷಿಯಿಂದ ಕೇಳುತ್ತಾರೆ. ಶಿಕ್ಷಕರಾದ ನಮಗೂ ಮಕ್ಕಳ ಮನಸ್ಸಲ್ಲಿ ಪಾಠ ಬಿತ್ತಲು ಸುಲಭವಾಗುತ್ತದೆ. ಕಷ್ಟವಾದದ್ದನ್ನು ನಮ್ಮನ್ನು ಕೇಳಿ ತಿಳಿದುಕೊಳ್ಳುವ ಸಲುಗೆ ಅವರಲ್ಲಿ ಬೆಳೆಸಬೇಕು. ಶಿಕ್ಷಕ ತಾಯಿಯಂತೆ ಮಕ್ಕಳನ್ನು ಪ್ರೀತಿಸಬೇಕು. ತಂದೆಯಂತೆ ದಂಡಿಸಬೇಕು. ಸ್ನೇಹಿತರಂತೆ ಬೆರೆಯಬೇಕು. ಆಗ ಮಕ್ಕಳಿಗೆ ಶಿಕ್ಷಣ ಕಲಿಸುವುದು ಹೊರೆಯಲ್ಲ. ಆಗಲೇ ಒಬ್ಬ ಶಿಕ್ಷಕ ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕನಾಗಬಲ್ಲ.

ಪ್ರಶ್ನೆ: ಶಿಕ್ಷಣ ವ್ಯವಸ್ಥೆ, ಸಮಸ್ಯೆ, ಸವಾಲು ಎದುರಿಸಲು ಸಾಧ್ಯವಾಗುತ್ತಿಲ್ಲ ಏಕೆ?
-ಶಿಕ್ಷಣದ ವ್ಯವಸ್ಥೆ ಸುಮಾರು ವರ್ಷಗಳಿಂದ ಬದಲಾಗಿರಲಿಲ್ಲ. ಶಿಕ್ಷಕನೂ ತನ್ನ ಪಾಡಿಗೆ ತಾನು ಓದಿದ ವಿಷಯಗಳನ್ನೇ ಬೋಧಿಸುತ್ತಿದ್ದ. ಮಕ್ಕಳು ಹಿರಿಯ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕ, ನೋಟ್ಸ್‍ಗಳು, ಪ್ರಶ್ನೋತ್ತರಗಳು ಪಡೆದುಕೊಂಡು ಅದನ್ನೇ ಓದಿಕೊಂಡು ಪರೀಕ್ಷೆ ಬರೆದು ಪಾಸು ಮಾಡಿಕೊಳ್ಳುತ್ತಿದ್ದರು. ಕೆಲ ವರ್ಷಗಳ ಬಳಿಕ ಪಠ್ಯಪುಸ್ತಕಗಳು ಬದಲಾಯಿತು. ಹೀಗೆ ಮತ್ತೆ ಕೆಲ ವರ್ಷಗಳ ಬಳಿಕ ಒಂದು ಮಹತ್ವದ ಬದಲಾವಣೆ ಕಂಡಿತು. ಅದೆಂದರೆ, ಸೆಮಿಸ್ಟÀ್ಟರ್ ಪದ್ಧತಿ. ಅದು 8 ಮತ್ತು 9ನೇ ತರಗತಿಗಳಿಗೆ ಮಾತ್ರ. ಈ ಸೆಮಿಸ್ಟರ್ ಪದ್ಧತಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ ಪರೀಕ್ಷೆ. ಆ ನಾಲ್ಕು ತಿಂಗಳಲ್ಲಿ ಓದಿದ್ದನ್ನು ಪರೀಕ್ಷೆಯಲ್ಲಿ ಬರೆದುಬಿಟ್ಟರೆ, ಮತ್ತೇ ಆ ಪಠ್ಯವಿಷಯಗಳನ್ನು ಓದುವ ಹಾಗಿಲ್ಲ. ಅಲ್ಲದೆ, 8 ಮತ್ತು 9ನೇ ತರಗತಿಯ ಮಕ್ಕಳನ್ನು ಪಾಸು ಮಾಡಲೇಬೇಕಿತ್ತು. ಈ ಪದ್ಧತಿಯಡಿ ಸ್ವಪ್ರಯತ್ನ, ಶ್ರಮ ಹಾಕಿ ಓದಿಕೊಂಡು ಎಸ್ಸೆಸ್ಸೆಲ್ಸಿಗೆ ಬಂದ ಮಕ್ಕಳು ಉತ್ತಮ ಪ್ರಗತಿ ಸಾಧಿಸಿದರು. ಶ್ರಮ ಹಾಕದೆ ಬಂದ ಮಕ್ಕಳಿಗೆ ಒತ್ತಡ ಹೆಚ್ಚಾಯಿತು. ಈ ಕ್ರಮ ವಿಫಲವಾಯಿತು. ಆಗ ಮತ್ತೆ ದ್ವಿ-ಸೆಮಿಸ್ಟರ್ ಪದ್ಧತಿ ತಂದರು. ಈ ಪದ್ಧತಿಯೂ ವಿಫಲವಾಯಿತು.
-ನನ್ನ ಪ್ರಕಾರ ಮಕ್ಕಳನ್ನು ಕ್ರಿಯಾತ್ಮಕತೆಗೆ ಹಚ್ಚಬೇಕು. ಅವರು ಹೆಚ್ಚು ಓದುವುದರಿಂದ ಜ್ಞಾನವೃದ್ಧಿಯಾಗಲಿದೆ. ಅಂತಹ ಪಠ್ಯಕ್ರಮ, ಪರೀಕ್ಷಾ ಕ್ರಮಗಳೇ ಅನುಸರಿಸಬೇಕು. ಅವರು ವಿದ್ಯಾರ್ಥಿಗಳು ಓದಲಿ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಪಾಸು ಮಾಡಲಿ. ಪ್ರತಿಭೆಯ ಮಾನದಂಡದಡಿ ಅಂಕಗಳು ಗಳಿಸಲಿ. ಆಗಲೇ ಮುಂದಿನ ತರಗತಿಗೆ ಹೋಗಲಿ. ಅದೇ ಸರಿಯಾದ ಕ್ರಮ.

ಪ್ರಶ್ನೆ: ಇಂದಿನ ಪೀಳಿಗೆಗೆ ಎಂತಹ ಶಿಕ್ಷಣದ ಅಗತ್ಯವಿದೆ, ಹೊಸ ಶಿಕ್ಷಣ ನೀತಿ ಪೂರಕವಾಗಿದೆಯೇ?
-ಇಂದಿನ ಪೀಳಿಗೆಗೆ ಹೊಸ ಶಿಕ್ಷಣ ನೀತಿ ಅಷ್ಟು ಪೂರಕವಾಗಿಲ್ಲ ಎಂಬುದು ನನ್ನ ಅನಿಸಿಕೆ. ಈ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಒಂದು ರೀತಿಯ ಸ್ವಾತಂತ್ರ್ಯ ಸಿಕ್ಕಿದೆ. ಇಲ್ಲಿಯೂ ಮಕ್ಕಳು ಒಂದರಿಂದ 9ನೇ ತರಗತಿವರೆಗೂ ಪಾಸಾಗುತ್ತಲೇ ಹೋಗುವರು. ಶಿಕ್ಷಕರೂ ಪಾಸು ಮಾಡಲೇಬೇಕು. ಮತ್ತೆ ಎಸ್ಸೆಸ್ಸೆಲ್ಸಿಗೆ ಬಂದಾಗ ಆಗಲೂ ಅವರಿಗೆ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಆ ಮಾನಸಿಕ ಒತ್ತಡದಲ್ಲಿ ಅಭ್ಯಾಸ ಮಾಡಲಾಗುವುದಿಲ್ಲ. ಇದರಿಂದ ಸಹಜವಾಗಿಯೇ ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತದೆ. ಅಂತಹ ಮಕ್ಕಳು ಸಮಾಜಕ್ಕೆ ಕಂಠಕವಾಗುವುದಲ್ಲದೆ, ಇತರೆ ಚಟುವಟಿಕೆಗಳತ್ತ ಗಮನ ಹರಿಸುತ್ತಾರೆ. ಮಕ್ಕಳನ್ನು ಈ ಒತ್ತಡಗಳಿಂದ ಪಾರು ಮಾಡಿ ಪಠ್ಯಕ್ರಮಗಳತ್ತ ಸೆಳೆಯುವ ಶಿಕ್ಷಣ ಪದ್ಧತಿ ಅಗತ್ಯವಿದೆ.
-ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವಾಗಬಾರದು. ಒಂದೊಂದು ತರಗತಿಯಲ್ಲಿ ಇಪ್ಪತ್ತರಿಂದ ಮೂವತ್ತು ಮಕ್ಕಳನ್ನು ಮಾತ್ರ ಒಬ್ಬ ಶಿಕ್ಷಕ ನಿರ್ವಹಿಸಲು ಸಾಧ್ಯ. ಒಂದು ತರಗತಿಯಲ್ಲಿ 80 ಇಲ್ಲವೇ 90 ಮಕ್ಕಳಿದ್ದರೆ ಶಿಕ್ಷಕರೂ ಎಲ್ಲಾ ಮಕ್ಕಳನ್ನು ಗಮನಿಸುವುದು, ನಿಭಾಸಲಾಗದು. ಆಗ ಗುಣಮಟ್ಟದ ಶಿಕ್ಷಣ ನೀಡಲಾಗುವುದಿಲ್ಲ. ಇಲ್ಲಿ ಬರೀ ಮಕ್ಕಳ ಬಗ್ಗೆ ಅಷ್ಟೇ ಯೋಚಿಸಿದರೆ ಸಾಲದು, ಅವರನ್ನು ನಿಭಾಯಿಸುವ ಶಿಕ್ಷಕರ ಬಗೆಗೂ ಆಲೋಚಿಸಬೇಕಿದೆ. ಯಾವುದೇ ಯೋಜನೆ ತರುವಾಗ ಒಂದೇ ಕಡೆಯಿಂದ ಯೋಚಿಸದೇ ಎರಡೂ ಕಡೆಯಿಂದ ತುಲನೆ ಮಾಡಬೇಕು. ಮಕ್ಕಳ ಮಿತಿ ಸರಿಪಡಿಸಬೇಕು. ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸುವುದು ಕೂಡ ತುಂಬಾ ಮುಖ್ಯ.

ಪ್ರಶ್ನೆ: ಆನ್‍ಲೈನ್ ಶಿಕ್ಷಣ ಪರಿಣಾಮಕಾರಿ ಮಾಡಲು ಸಾಧ್ಯವೇ?

ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂಬ ಹಿತದೃಷ್ಟಿಯಿಂದಲೇ ಸರ್ಕಾರ ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಇದು ಒಂದು ರೀತಿ ಒಕೆ. ಆದರೆ, ಇದರಿಂದ ಗ್ರಾಮೀಣ ಭಾಗದ, ಸರ್ಕಾರಿ ಶಾಲೆ, ಬಡ ಮಕ್ಕಳಿಗೆ ಅನ್ಯಾಯ ಮತ್ತು ಅನನುಕೂಲವಾಗಬಾರದು. ಎಲ್ಲಾ ಪೋಷಕರು ಮೊಬೈಲ್ ಫೋನ್ ಖರೀದಿಸಲು ಅಸಾಧ್ಯ. ಒಂದು ವೇಳೆ ಮಕ್ಕಳಿಗಾಗಿ ಖರೀದಿಸಿದರೂ ಅದನ್ನು ಬಳಸುವ ವಿಧಾನವೂ ಗೊತ್ತಿರಬೇಕು. ಹಾಗೆಂದು ಮಕ್ಕಳಿಗೆ ಶಿಕ್ಷಣವಿಲ್ಲದೆ ಮನೆಯಲ್ಲಿ ಕೂರಿಸುವುದು ಸರಿಯಲ್ಲ. ಆನ್‍ಲೈನ್ ಶಿಕ್ಷಣ ಸಾಧ್ಯವಿಲ್ಲದವರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಅದನ್ನು ಸರ್ಕಾರ ಮಾಡಿದರೆ ಆನ್‍ಲೈನ್ ಶಿಕ್ಷಣ ಪರಿಣಾಮಕಾರಿಯಾಗಲಿದೆ ಎಂದು ಭಾವಿಸುತ್ತೇನೆ.

ಪ್ರಶ್ನೆ: ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಸುಧಾರಣೆಗೆ ನಿಮ್ಮ ಸಲಹೆ ಏನು?
-ಶೈಕ್ಷಣಿಕ ಸುಧಾರಣೆಗೆ ಮಕ್ಕಳು, ಶಿಕ್ಷಕರು, ಪೋಷಕರು ಎಲ್ಲರ ಸಹಕಾರವೂ ಅತ್ಯಗತ್ಯ. ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶಾಲೆಗಳಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಅಳವಡಿಸಿಕೊಂಡು ಅನುಸರಿಸಬೇಕು. ಅವು ಮಕ್ಕಳಿಗೆ ಎಷ್ಟರ ಮಟ್ಟಿಗೆ ತಲುಪುತ್ತಿವೆ ಎಂಬುದನ್ನು ಪೋಷಕರು ಗಮನಿಸಬೇಕು. ಅವುಗಳ ಕಾರ್ಯಾಚರಣೆಯನ್ನು ಸರ್ಕಾರ ಪರಿಶೀಲಿಸಬೇಕು. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿಬಿಟ್ಟರೆ ಸಾಲದು. ಶಿಕ್ಷಕರೊಂದಿಗೆ ಸದಾ ಸಂಪರ್ಕದಲ್ಲಿರಬೇಕು. ಮಕ್ಕಳ ಶೈಕ್ಷಣಿಕ ಮಟ್ಟ, ನಡವಳಿಕೆ, ಬೆಳವಣಿಗೆಗಳ ಕುರಿತು ಅರಿತುಕೊಳ್ಳಬೇಕು. ಮನೆಯಲ್ಲಿಯೂ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಹಾಗೆಯೇ ಶಿಕ್ಷಕರು ಕೂಡ ಮಗುವಿನ ಬಗ್ಗೆ ಯಾವುದೇ ವ್ಯತ್ಯಾಸ ಕಂಡರೂ ಕೂಡಲೆ ಪೋಷಕರ ಗಮನಕ್ಕೆ ತರಬೇಕು. ಇಬ್ಬರೂ ಸೇರಿ ಮಗುವಿನ ಸಮಸ್ಯೆ ಅರಿತು ಬಗೆಹರಿಸಬೇಕು.
-ಸರ್ಕಾರಗಳು ಕೇವಲ ಯೋಜನೆಗಳನ್ನು ಜಾರಿಗೊಳಿಸಿದರೆ ಸಾಲದು. ಆ ಯೋಜನೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಸಾಕಾರಗೊಂಡಿವೆ ಎಂದು ಫಾಲೋ ಅಪ್ ಮಾಡಬೇಕು. ದೇಶದ ಅಭಿವೃದ್ಧಿ ಶಿಕ್ಷಣದೊಂದಿಗೆ ಬೆಸೆದುಕೊಂಡಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ. ಅದಕ್ಕೆ ಸಮಾಜದ ಸಹಕಾರವೂ ಅತ್ಯಗತ್ಯ

Copyright © All rights reserved Newsnap | Newsever by AF themes.
error: Content is protected !!