December 19, 2024

Newsnap Kannada

The World at your finger tips!

navbharat times

ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕಿತ್ತು ಹಾಕಿ !

Spread the love

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಸುತ್ತಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹೊರ ಬೀಳುತ್ತಿದ್ದಂತೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್‌, ಆರ್‌ಸಿ ಬಿ ನಾಯಕತ್ವದಿಂದ ವಿರಾಟ್‌ ಕೊಹ್ಲಿಯನ್ನು ಕಿತ್ತು ಹಾಕಿ ಎಂದು ಒತ್ತಾಯಿಸಿದ್ದಾರೆ. 

ಐಪಿಎಲ್‌ ಟೂರ್ನಿ ಆರಂಭಗೊಂಡು ಇದುವರೆಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿ ಕೊಹ್ಲಿ ಪಡೆ ಮುಡಿಗೇರಿಸಿಕೊಳ್ಳಲಿದೆ ಎಂದು ಭಾವಿಸಲಾಗಿತ್ತು. ಆದರೆ, ಟೂರ್ನಿಯ ದ್ವಿತಿಯಾರ್ಧದಲ್ಲಿ ಕಳಪೆ ಪ್ರದರ್ಶನದ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಭಗ್ನಗೊಳಿಸಿತು.

ಶುಕ್ರವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಗೌತಮ್‌ ಗಂಭೀರ್‌, ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 

“ಐಪಿಎಲ್‌ ಇತಿಹಾಸದಲ್ಲಿ ಯಶಸ್ವಿ ನಾಯಕರಾದ ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಅವರ ಸಾಲಿನಲ್ಲಿ ವಿರಾಟ್‌ ಕೊಹ್ಲಿಯನ್ನು ಸೇರಿಸಲು ಸಾಧ್ಯವಿಲ್ಲ. ಆರ್‌ಸಿಬಿ ನಾಯಕತ್ವ ವಹಿಸಿಕೊಂಡ 8 ವರ್ಷಗಳಲ್ಲಿ ಕೊಹ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಐಪಿಎಲ್‌ ಟ್ರೋಫಿ ಗೆಲ್ಲದ ಒಬ್ಬ ನಾಯಕ ಎಂಟು ವರ್ಷಗಳ ಕಾಲ ಒಂದೇ ಫ್ರಾಂಚೈಸಿಯಲ್ಲಿ ಮುಂದುವರಿಯಬಹುದೇ?,” ಎಂದು ಕೋಲ್ಕತಾ ನೈಟ್‌ ರೈಡರ್ಸ್ ಮಾಜಿ ನಾಯಕ ಗೌತಮ್‌ ಗಂಭೀರ್‌ ಪ್ರಶ್ನೆ ಮಾಡಿದ್ದಾರೆ.

”ಆರ್‌ಸಿಬಿ ಇದುವರೆಗೂ ಪ್ರಶಸ್ತಿ ಗೆಲ್ಲದ ಬಗ್ಗೆ ವಿರಾಟ್‌ ಕೊಹ್ಲಿಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಸಲಹೆ ನೀಡಿದ ಗಂಭೀರ್‌, ಎರಡು ಆವೃತ್ತಿಗಳಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಅತ್ಯುತ್ತಮವಾಗಿ ಮುನ್ನಡೆಸಿದ್ದರೂ ಆರ್‌. ಅಶ್ವಿನ್‌ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸಲಾಯಿತು. ಆದರೆ, ಸತತ ಎಂಟು ವರ್ಷಗಳಿಂದ ಕೊಹ್ಲಿ ನಾಯಕತ್ವದ ವೈಫಲ್ಯತೆ ವಿಷಯವಾಗಿ ಏಕೆ ಈ ಕ್ರಮ ಜರುಗಿಸುತ್ತಿಲ್ಲ,” ಎಂದು ಹೇಳಿದ್ದಾರೆ.

“ನೀವೇ ನಾಯಕನಾಗಿ, ತಂಡ ಗೆದ್ದಾಗ ಅಥವಾ ಸೋತಾಗ ಅದಕ್ಕೆ ನೀವೇ ಹೊಣೆಯಾಗಿರಬೇಕಾಗುತ್ತದೆ. ಗೆದ್ದಾಗ ನೀವು ಕ್ರೆಡಿಟ್ ಪಡೆದಾಗ .. ನೀವು ಸೋತಾಗ ಟೀಕೆಗಳನ್ನು ಸಹ ಸ್ವೀಕರಿಸಬೇಕು. ಸತತ ನಾಲ್ಕು ಸೋಲುಗಳ ನಂತರ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದು ಎಲಿಮಿನೇಟರ್‌ ಪಂದ್ಯದಲ್ಲಿ ಸೋತಿದೆ. ಆರ್‌ಸಿಬಿ ಕೊಹ್ಲಿ ಮತ್ತು ಡಿವಿಲಿಯರ್ಸ್‌ರನ್ನು ಹೆಚ್ಚು ಅವಲಂಬಿಸಿದೆ. ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ ಕೆಲವು ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದಾರೆ. ಇವರಿಗೆ ಇನ್ನುಳಿದ ಆಟಗಾರರೂ ಸಾಥ್‌ ನೀಡಬೇಕಾಗಿತ್ತು” ಎಂದು ಗೌತಮ್‌ ಗಂಭೀರ್‌ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!