ಹೊಲದಲ್ಲಿ ಬೇಸಾಯ ಮಾಡಿದ ರೈತಸ್ನೇಹಿ ತಹಶೀಲ್ದಾರ್

Team Newsnap
2 Min Read

ನಮ್ಮದು ಕೃಷಿ ಪ್ರಧಾನ ದೇಶ. ನಮ್ಮ ದೇಶದ ಆದಾಯದ ಪ್ರಮುಖ ಮೂಲ ಕೃಷಿ. ಆದ್ದರಿಂದಲೇ ಭಾರತದಲ್ಲಿ ‘ರೈತನೇ ದೇಶದ ಬೆನ್ನೆಲುಬು’ ಎಂದು ಕರೆಯಲಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆಂದೇ ಅನೇಕ ಯೋಜನೆಗಳನ್ನು ತಂದಿವೆ. ಅದರಲ್ಲಿ ಇತ್ತೀಚಿಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಬೆಳೆ ಸಮೀಕ್ಷೆ ಆ್ಯಪ್ ಕೂಡ ಒಂದು.

ಇದರಲ್ಲಿನ ವಿಶೇಷವೇನೆಂದರೆ, ಸ್ವತಃ ರೈತನೇ ತನ್ನ ಬೆಳೆಯನ್ನು ಸಮೀಕ್ಷೆ ಮಾಡಿ ಸರ್ಕಾರಕ್ಕೆ ಕಳುಹಿಸುವದಾಗಿದೆ. ಹಾಗೆಯೇ ಅನೇಕ ಖಾಸಗೀ ವ್ಯಕ್ತಿಗಳನ್ನೂ ಸಮೀಕ್ಷೆಗೆಂದು ಸರ್ಕಾರ ನೇಮಿಸಿದೆ.

ಆದರೆ ಇದುವರೆಗೂ ರಾಜ್ಯಾದ್ಯಂತ ಕೇವಲ ೫೦೦೦-೬೦೦೦ ಜನ ಆ್ಯಪ್ ಡೌನ್ ಲೋಡ್ ಮಾಡಿದ್ದು ಇದಕ್ಕೆ ರೈತರ ಸಹಕಾರ ಕಡಿಮೆ ಪ್ರಮಾಣದಲ್ಲಿದೆ. ಅದಕ್ಕೆಂದೇ ಮಂಡ್ಯ ಜಿಲ್ಲೆಯ, ನಾಗಮಂಗಲದ ತಹಶೀಲ್ದಾರ್ ಕುಂಞ ಮಹಮದ್ ಸ್ವತಃ ತಾವೇ ಹೊಲ, ಗದ್ದೆಗಳಿಗೆ ಭೇಟಿ‌ ನೀಡಿ, ಅವರೇ ಬೆಳೆ ಸಮೀಕ್ಷೆ ಆ್ಯಪ್ ಮುಖಾಂತರ ಹೊಲ, ಗದ್ದೆಗಳ‌ ಸಮೀಕ್ಷೆ ನಡೆಸಿದರು.
ಇದೇ ವೇಳೆ ಅವರು ರಾಗಿ ಜಮೀನಿನಲ್ಲಿ ನಾಟಿ ಮಾಡುತ್ತಿದ್ದ ಮಹಿಳೆಯೊಡನೆ ಸೇರಿ‌ ತಾವೂ ನಾಟಿ ಮಾಡಿದರು. ಮಾಸ್ತಯ್ಯ ಎಂಬುವವರ ಜಮೀನಿನಲ್ಲಿ ಉಳುಮೆ ಕೂಡ ಮಾಡಿದರು. ರಾಸುಗಳನ್ನು ಮೇಯಿಸಿದರು. ಗದ್ದೆಗಿಳಿದು ನಾಟಿ ಮಾಡಿದರು.

ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ತಹಶೀಲ್ದಾರ್ ಕುಂಞ ಅವರು, ‘ರೈತರ ಅನುಕೂಲಕ್ಕಾಗಿ ಪಹಣಿಯಲ್ಲಿನ ಬೆಳೆ ಕಾಲಂನಲ್ಲಿ ಯಾವುದೇ ತೊಂದರೆಯಾಗದಂತೆ ರೈತರೇ ಸಮೀಕ್ಷೆ ಮಾಡುವಂತೆ ಸರ್ಕಾರ ಜಾರಿಗೆ ತಂದಿರುವ ಬೆಳೆ ಸಮೀಕ್ಷೆ ಆ್ಯಪ್ ನ ಸಂಪೂರ್ಣ ಸದುಪಯೋಗಕ್ಕೆ ಉತ್ತೇಜನ‌ ನೀಡುವ ಜೊತೆಗೆ ವಿಎ ಹಾಗೂ ಆರ್ ಐ ಗಳು ನಡೆಸುತ್ತಿರುವ ಬೆಳೆ ಸಮೀಕ್ಷೆಯನ್ನು ತಾಲೂಕಿನ ಐದೂ ಹೋಬಳಿಗಳಲ್ಲೂ ಪರಿಶೀಲನೆ ನಡೆಸುತ್ತಿದ್ದೇವೆ. ಈ ವೇಳೆ ರೈತರಿಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ಹೊಲ ಗದ್ದೆಗಳಲ್ಲಿ ನಾಟಿ‌ ಮಾಡಿ, ರಾಸುಗಳೊಂದಿಗೆ ಕುಂಟೆ ಹೊಡೆದೆನು. ನಮ್ಮದೂ ಸಹ ರೈತ ಕುಟುಂಬ. ರೈತ ಈ ದೇಶದ ಬೆನ್ನೆಲುಬು. ಕೃಷಿಕರ ಸ್ವಾವಲಂಬಿ ಬದುಕಿಗೆ ರೈತ ಹಾಗೂ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ’ ಎಂದರು‌.

ಇಜ ಸಂದರ್ಭದಲ್ಲಿ, ಮಾಸ್ತಯ್ಯ ಎಂಬ ರೈತರಿಗೆ ಮಾಲಾರ್ಪಣೆ ಮಾಡಿ ತಹಶೀಲ್ದಾರ್ ಕುಂಞ ಅವರು ಗೌರವಿಸಿದರು. ಸ್ಥಳದಲ್ಲಿ ರಾಜಸ್ವ ನಿರೀಕ್ಷಕ ಸತ್ಯನಾರಾಯಣ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

Share This Article
Leave a comment