January 11, 2025

Newsnap Kannada

The World at your finger tips!

deepa1

ಶ್ರಮಿಕರ ಎದೆಯ ಮೇಲಿನ ಬೆವರ ಹನಿಗಳು…….

Spread the love

ಇಂಗ್ಲೇಂಡಿನ ಮ್ಯಾಂಚೆಸ್ಟರ್ ನ ಬಟ್ಟೆ ಗಿರಣಿಗಳು,

ದಕ್ಷಿಣ ಆಫ್ರಿಕಾದ ಚಿನ್ನದ ಗಣಿಗಳು,

ಚೀನಾದ ಕಬ್ಬಿಣದ ಅದಿರ ಗಣಿಗಳು,

ಅರೇಬಿಯನ್ ಮರುಭೂಮಿಯ ಕೂಲಿಗಳು,

ಬ್ರೆಜಿಲ್ ಕಾಫಿ ತೋಟದ ಕಾರ್ಮಿಕರು,

ಸುಡಾನ್ ಇಥಿಯೋಪಿಯಾದ ಗುಲಾಮರು,

ಇಟಲಿಯ ಕ್ವಾರಿಯ ಕಲ್ಲುಗಣಿ ಶ್ರಮಿಕರು,

ಅಮೆರಿಕದ ಹಾಲಿವುಡ್‌ನ ಸಿನೆಮಾ ಕೆಲಸಗಾರರು,

ಹಾಂಕಾಂಗ್ ನ ಹೋಟೆಲ್ ಕಾರ್ಮಿಕರು,

ಆಸ್ಟ್ರೇಲಿಯಾ ದ್ವೀಪಗಳ ಮೀನುಗಾರರು,

ಬಾಂಗ್ಲಾದೇಶದ ಬಿರು ಬಿಸಿಲಿನಲ್ಲಿ ನಡೆದಾಡುವ ಟಾಂಗಾವಾಲಾಗಳು,

ಟಿಬೆಟ್ಟಿನ ದುರ್ಗಮ ರಸ್ತೆಗಳಲ್ಲಿ ವಾಹನ ಚಲಾಯಿಸುವ ಚಾಲಕರು,

ಸಿರಿಯಾದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರು,

ಉತ್ತರ ಕೊರಿಯಾದ ಸರ್ವಾಧಿಕಾರಕ್ಕೆನಲುಗಿ ಉಸಿರಾಡಲು ಕಷ್ಟ ಪಡುತ್ತಿರುವ ಸ್ವತಂತ್ರ ಜೀವಿಗಳು,

ಭಾರತದ ಮ್ಯಾನ್ ಹೋಲ್ ಗಳಲ್ಲಿ ಕೆಲಸ ಮಾಡುವ ನನ್ನದೇ ಅಣ್ಣ ತಮ್ಮಂದಿರು,

ಮುಂಬಯಿನ ರೈಲ್ವೆ ಕೂಲಿಗಳು,

ಸೂರತ್ ನ ಬಟ್ಟೆ ಗಿರಣಿಗಳ ಕೆಲಸಗಾರರು,

ವಿಶಾಖಪಟ್ಟಣದ ಮೀನುಗಾರರು,

ಕೊಯಮತ್ತೂರಿನ ಪಟಾಕಿ ತಯಾರಕರು,

ಮಂಗಳೂರಿನ ಬೀಡಿ ಕಟ್ಟುವವರು,

ಕೇರಳದ ಚಹಾ ತೋಟದ ದಿನಗೂಲಿಗಳು,

ದೆಹಲಿಯ ಕಟ್ಟಡ ಕಾರ್ಮಿಕರು,

ಜೈಪುರದ ಕಲ್ಲು ಬಂಡೆ ಹೊಡೆಯುವವರು,

ಇಳಕಲ್ ನ ಸೀರೆ ನೇಯುವವರು,

ಹೋಸಕೋಟೆಯ ಇಟ್ಟಿಗೆ ಕಾರ್ಮಿಕರು,

ಲಕ್ನೋ ಬಸ್ ನಿಲ್ದಾಣದ ಕಸ ಗುಡಿಸುವವರು,

ಅಸ್ಸಾಂನ ನಿರಾಶ್ರಿತರು,

ಮಣಿಪುರದ ಕ್ಷೌರಿಕರು,

ಭುವನೇಶ್ವರದ ಬಟ್ಟೆ ತೊಳೆಯುವವರು,

ಹೀಗೆ ಸಾಕಷ್ಟು ಶ್ರಮ ಜೀವಿಗಳು ನೆನಪಾಗುತ್ತಾರೆ…..

ನೆನಪಿರಲಿ,
ಜಗತ್ತಿನ ಪ್ರತಿ ಜೀವಿಯೂ ಕಾರ್ಮಿಕನೇ….‌‌…….

ಶ್ರೀಮಂತ ರಾಷ್ಟ್ರ ಕತಾರ್,
ಬಲಿಷ್ಠ ರಾಷ್ಟ್ರ ಅಮೆರಿಕ,
ಬಡ ರಾಷ್ಟ್ರ ಇಥಿಯೋಪಿಯ,
ಆಧ್ಯಾತ್ಮಿಕ ರಾಷ್ಟ್ರ ಭಾರತ,
ಧರ್ಮನಿಷ್ಠ ರಾಷ್ಟ್ರ ಇರಾನ್,
ಹಿಂಸಾತ್ಮಕ ರಾಷ್ಟ್ರ ಸಿರಿಯಾ, ಶಾಂತಿಯುತ ರಾಷ್ಟ್ರ ನಾರ್ವೆ,
ಸುಂದರ ರಾಷ್ಟ್ರ ಸ್ವಿಟ್ಜರ್ಲ್ಯಾಂಡ್,
ಯಾವುದೇ ಆಗಿರಲಿ,
ಮಗುವಿನಿಂದ ವೃದ್ಧರವರೆಗೆ,
ಎಲ್ಲರೂ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಲೇಬೇಕು…….

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ತನಗೆ ಎಲ್ಲವೂ ದೊರೆತಾಗಲೂ ಸುಮ್ಮನೆ ಇರಲು ಸಾಧ್ಯವಿಲ್ಲ. ಏನಾದರೂ ಮಾಡಲೇ ಬೇಕು. ಇಲ್ಲದಿದ್ದರೆ ಆತ ನಿರ್ಜೀವಿಯಾಗುತ್ತಾನೆ.
ಹಾಗೆಯೇ ಭಿಕ್ಷುಕ ಕೂಡ ತನ್ನ ಮಿತಿಯಲ್ಲಿ ಕೆಲಸ ಮಾಡಲೇಬೇಕು….

ಆದರೆ,
ಕೆಲಸದ ರೂಪಗಳು, ಮಾರ್ಗಗಳು, ಗುರಿಗಳು, ಏರಿಳಿತಗಳು, ಅವಶ್ಯಕತೆಗಳು, ಅನಿವಾರ್ಯಗಳು ಬೇರೆ ಬೇರೆಯಾಗಿರುತ್ತದೆ ಅಷ್ಟೆ.

ಸಾಮಾನ್ಯವಾಗಿ ಮತ್ತು ಸರಳವಾಗಿ ಹೆಚ್ಚು ಶ್ರಮದಾಯಕ ಕೆಲಸ ಮಾಡುವ, ಕಡಿಮೆ ಹಣ ಗಳಿಸುವ, ಹೆಚ್ಚಿನ ಸುರಕ್ಷತೆ ಇಲ್ಲದ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳದ, ಮಾಲೀಕರ ಆಶಯಕ್ಕೆ ಅನುಗುಣವಾಗಿ ದುಡಿಯುವ,
ಬದುಕಿನ ಅನಿವಾರ್ಯತೆಗೆ ಶೋಷಣೆಗೆ ಒಳಗಾಗುವವರನ್ನು ಕಾರ್ಮಿಕರು ಎಂದು ಕರೆಯಲಾಗುತ್ತದೆ.

ಒಂದಷ್ಟು ಹಿಂದೆ ಕೆಲವು ಮನುಷ್ಯರನ್ನು ಗುಲಾಮರೆಂದು ಪರಿಗಣಿಸಿ ಪ್ರಾಣಿಗಳಂತೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಪಾರವೂ ಮಾಡಲಾಗುತ್ತಿತ್ತು. ಅವರ ಯಾವ ಮೂಲಭೂತ ಅಂಶಗಳನ್ನು ಪರಿಗಣಿಸಲಾಗುತ್ತಿರಲಿಲ್ಲ.
ಆದರೆ,
ಈಗಿನ ಆಧುನಿಕ ಜಗತ್ತಿನಲ್ಲಿ ಇದು ಇಲ್ಲವಾಗಿದೆ.

ಆದರೂ,
ಕಾರ್ಮಿಕ ಶೋಷಣೆ ಬೇರೆ ಬೇರೆ ರೂಪದಲ್ಲಿ ಈಗಲೂ ಜೀವಂತವಿದೆ.
ಈ ಬಗ್ಗೆ ಹಿಂದಿನಿಂದಲೂ ಒಂದಷ್ಟು ಪ್ರತಿಭಟನೆಗಳು ಆಗುತ್ತಿದ್ದರೂ ಸಮಗ್ರವಾಗಿ ಜಗತ್ತಿನ ಗಮನಸೆಳೆದ ಕೀರ್ತಿ ಕಾರ್ಲ್ ಮಾರ್ಕ್ಸ್ ಅವರಿಗೆ ಸಲ್ಲುತ್ತದೆ.

ಕಾರ್ಮಿಕರ ಶೋಷಣೆ ನಿಲ್ಲಬೇಕು ನಿಜ, ಆದರೆ ಅದಕ್ಕಾಗಿ ಶ್ರೀಮಂತ ಉದ್ಯಮಿಗಳನ್ನು ದ್ವೇಷಿಸಬಾರದು. ಸಂಘರ್ಷಕ್ಕಿಂತ ಸಮನ್ವಯತೆಗೆ ಹೆಚ್ಚಿನ ಮಹತ್ವ ಕೊಡಬೇಕು.

ಅದರಲ್ಲೂ ಬದಲಾದ ಈ ಆಧುನಿಕ ಕಾಲ ಘಟ್ಟದಲ್ಲಿ ಬಂಡವಾಳ ಶಾಹಿಗಳು ಕೂಡ ಮುಖ್ಯರಾಗುತ್ತಾರೆ. ಶೋಷಣೆ ತಪ್ಪಿಸುವ ಮಾರ್ಗಗಳು ಮುಖ್ಯವಾಗಬೇಕೆ ಹೊರತು ಸೇಡಿನ ಕ್ರಮಗಳು ಮೇಲುಗೈ ಪಡೆಯಬಾರದು. ಅದು ನಕ್ಸಲಿಸಂ ಎಂಬ ಹಿಂಸಾತ್ಮಕ ಸಿದ್ದಾಂತಕ್ಕೆ ದಾರಿ ಮಾಡಿಕೊಡುತ್ತದೆ. ಅದು ತುಂಬಾ ಅಪಾಯಕಾರಿ.

ಈಗಲೂ ನಿಕೃಷ್ಟವಾಗಿ ಬದುಕುತ್ತಿರುವ ಕಾರ್ಮಿಕರು, ಅತ್ಯಂತ ಕಠಿಣ ಕೆಲಸಗಳಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿರುವ ಕಾರ್ಮಿಕರು,
ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಮಹಿಳಾ ಕಾರ್ಮಿಕರು,
ಹೋಟೆಲ್ ಮುಂತಾದ ಕಡೆ ಅಸಹನೀಯ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರು ಮುಂತಾದವರ ಜೀವನಮಟ್ಟ ಸುಧಾರಿಸದೆ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ.

ಈ ಕಾರ್ಮಿಕ ದಿನದ ಸಂಧರ್ಭದಲ್ಲಿ ನಮ್ಮ ವ್ಯವಸ್ಥೆಯಲ್ಲಿ, ಕಾರ್ಮಿಕರು, ಬಂಡವಾಳ ಶಾಹಿಗಳು, ವ್ಯಾಪಾರೋಧ್ಯಮಿಗಳ ಮಧ್ಯೆ ಒಂದು ಸಮಾನತೆಯ ಮಾನವೀಯತೆಯ ಸಮನ್ವಯ ಸಾಧ್ಯವಾಗಲಿ ಮತ್ತು ಒಬ್ಬರಿಗೊಬ್ಬರು ಪ್ರೀತಿಸುವ ಗೌರವಿಸುವ ವ್ಯವಸ್ಥೆ ನಿರ್ಮಾಣವಾಗಲಿ ಎಂದು ಆಶಿಸುತ್ತಾ…….

ಕಾರ್ಮಿಕ ದಿನದ ಶುಭಾಶಯಗಳು

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!