ನಾಗಮಂಗಲ ತಾಲ್ಲೂಕಿನಲ್ಲಿ ಉದ್ದೇಶಿತ ಕೈಗಾರಿಕಾ ಪ್ರದೇಶ ಅಭಿವೃದ್ದಿಗೆ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಮತ್ತೊಮ್ಮೆ ಸರ್ವೇ ಮಾಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖನಿಜ ಭವನದ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಶನಿವಾರ ಸಚಿವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಭೆಯಲ್ಲಿ ಮಾತನಾಡಿ, ನಾಗಮಂಗಲ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ದಿಗೆ ಭೂಸ್ವಾಧೀಯ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲವೊಂದು ಅಭಿವೃದ್ದಿ ಹೊಂದಿರುವ ತೋಟಗಳನ್ನು ನಮೂದಿಸಲಾಗಿದೆ. ಇದನ್ನು ಕೈಬಿಟ್ಟು ಶುಷ್ಕ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಈ ಭಾಗದಲ್ಲಿ ಕೈಗಾರಿಕೆಗಳ ಬರುವ ಅಗತ್ಯತೆ ಇದೆ. ಆದರೆ, ಕೃಷಿಯಲ್ಲಿ ಅಭಿವೃದ್ದಿ ಹೊಂದಿರುವ ನೀರಾವರಿ ಜಮೀನನ್ನು ಈ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಳ್ಳುವುದು ಬೇಡ ಎಂದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ತೋಟಗಳು ಹಾಗೂ ನೀರಾವರಿ ಸೌಲಭ್ಯದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಜಮೀನಿನ ಸ್ವಾಧೀನ ಪ್ರಕ್ರಿಯೆ ಸರಿಯಲ್ಲ. ಆ ಜಾಗವನ್ನು ಬಿಟ್ಟು ಶುಷ್ಕ ಪ್ರದೇಶದ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆ ಭಾಗದ ರೈತರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಬೇಕು ಮತ್ತು ಇನ್ನೊಮ್ಮೆ ಸರ್ವೇ ಕಾರ್ಯವನ್ನು ನಡೆಸಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ನಾಗಮಂಗಲ ಶಾಸಕರಾದ ಸುರೇಶ್ ಗೌಡ, ಮಾಗಡಿ ಶಾಸಕರಾದ ಎ ಮಂಜುನಾಥ್ ಅವರ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಅವಕಾಶ ಇರುವ ಪ್ರದೇಶಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಅಲ್ಲದೆ, ಅಧಿಕಾರಿಗಳನ್ನು ಸರ್ವೇ ಕಾರ್ಯಕ್ಕೆ ಕಳುಹಿಸಿ ಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಸಚಿವರ ಸ್ಪಂದಿಸಿ ಸ್ಥಳದಲ್ಲೆ ಅಧಿಕಾರಿಗಳಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಐಎಡಿಬಿ ಸಿಇಓ ಶಿವಶಂಕರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಉಪಸ್ಥಿತರಿದ್ದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು