ಮಂಡ್ಯ ಪ್ರಕರಣಕ್ಕೆ ಸುಪ್ರೀಂ ತೀರ್ಪು: ವಿಚ್ಛೇದಿತ ಪುತ್ರಿಗೆ ಅನುಕಂಪದ ಕೆಲಸ ನೀಡುವಂತಿಲ್ಲ

Team Newsnap
1 Min Read
NEET-PG 2021 - Counseling for 1,456 seats only: Supreme

ಸರ್ಕಾರಿ ನೌಕರರು ಮರಣ ಹೊಂದಿದ ಬಳಿಕ ಅವರ ಪುತ್ರಿ ವಿವಾಹ ವಿಚ್ಛೇದನ ಪಡೆದರೆ ಅಂತಹವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲ.

ಮಂಡ್ಯ ಪ್ರಕರಣವೊಂದರ ಅರ್ಜಿಯನ್ನು ಇತ್ಯರ್ಥ ಮಾಡಿರುವ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಮಂಡ್ಯ ಜಿಲ್ಲಾ ಖಜಾನೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಿ. ಪಿ. ಭಾಗ್ಯಮ್ಮ ಪುತ್ರಿ ವಿ. ಸೌಮ್ಯಶ್ರೀ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಈ ಆದೇಶ ಪ್ರಶ್ನೆ ಮಾಡಿ ರಾಜ್ಯ ಸರ್ಕಾರದ ಖಜಾನೆ ನಿರ್ದೇಶಕರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.‌

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರ ಪೀಠವು ಸೌಮ್ಯಶ್ರೀ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಹೇಳಿದೆ.

‘ಕರ್ನಾಟಕ ನಾಗರಿಕ ಸೇವಾ (ಸಹಾನುಭೂತಿ ಆಧಾರದ ನೇಮಕಾತಿ) ನಿಯಮಗಳು – 1996’ ಪ್ರಕಾರ, ಸರ್ಕಾರಿ ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಅವಕಾಶವಿಲ್ಲ. ಉದ್ಯೋಗಿಯನ್ನೇ ಅವಲಂಬಿಸಿದ್ದ ಮದುವೆಯಾಗದ ಅಥವಾ ವಿಧವೆ ಪುತ್ರಿಗೆ ಮಾತ್ರ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬಹುದಾಗಿದೆ ಎಂದು ಪೀಠ ಹೇಳಿದೆ.

ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ 2021ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ‘ವಿಚ್ಛೇದಿತ ಪುತ್ರಿ’ಯನ್ನೂ ಸೇರ್ಪಡೆಗೊಳಿಸಲಾಗಿದೆ. ಆದರೆ, ಉದ್ಯೋಗಿ ಮರಣ ಹೊಂದಿದ ನಂತರ ವಿಚ್ಛೇದನ ಪಡೆದ ಸಂದರ್ಭದಲ್ಲಿ ಇದನ್ನು ಪರಿಗಣಿಸಲಾಗದು ಎಂದು ಕೋರ್ಟ್ ಹೇಳಿದೆ.

ಸೌಮ್ಯಶ್ರೀ ಅವರ ವಿವಾಹ ಸಿಂಧುವಾಗಿದ್ದಾಗಲೇ 2012ರ ಮಾರ್ಚ್ 25ರಂದು ಪಿ. ಭಾಗ್ಯಮ್ಮ ಮೃತಪಟ್ಟಿದ್ದರು. 2012ರ ಸೆಪ್ಟೆಂಬರ್ 12ರಂದು ಸೌಮ್ಯಶ್ರೀ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಅವರ ವಿಚ್ಛೇದನವನ್ನು 2013ರ ಮಾರ್ಚ್ 20ರಂದು ಮಂಡ್ಯದ ನ್ಯಾಯಾಲಯವು ಊರ್ಜಿತಗೊಳಿಸಿತ್ತು.


2013ರ ಮಾರ್ಚ್ 21ರಂದು ಸೌಮ್ಯಶ್ರೀ ಅನುಕಂಪದ ಆಧಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.ಈಗ ಈ ತೀರ್ಪಿನಿಂದ ಸೌಮ್ಯ ಶ್ರೀ ಕೆಲಸ ಕಳೆದುಕೊಳ್ಳುವ ಅನಿವಾರ್ಯತೆ ಬಂದಿದೆ.‌

Share This Article
Leave a comment