November 25, 2024

Newsnap Kannada

The World at your finger tips!

bjp,congress,election

Which party will sumalatha join? Congress & BJP involved

ಸುಮಲತಾ ಬಿಜೆಪಿ ಸೇರಲು ವಿಧಿಸಿರುವ ಮೂರು ಷರತ್ತುಗಳು ? ಬಿಜೆಪಿ ನಾಯಕರಿಗೆ ಬಿಸಿ ತುಪ್ಪ

Spread the love

ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಲು ರಾಮಾಯಣದಲ್ಲಿ ದಶರಥನಿಗೆ ಕೈಕೇಯಿ ಕೇಳಿದ ರೀತಿಯಲ್ಲಿ ಮೂರು ವರಗಳನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ. ಈ ವರಗಳನ್ನು ( ಷರತ್ತುಗಳನ್ನು) ಕೇಳಿ ಬಿಜೆಪಿ ನಾಯಕರು ಶಾಕ್ ನಿಂದ ಇನ್ನೂ ಹೊರ ಬಂದಿಲ್ಲ.

ಸಂಸದೆ ಸುಮಲತಾ ಬಿಜೆಪಿಗೆ ಈಗ ಬಿಸಿ ತುಪ್ಪ. ಅದೇ ರೀತಿ ಸುಮಲತಾರಿಗೂ ಸಹ ಒಂದು ರೀತಿಯಲ್ಲಿ ಬಿಜೆಪಿ ಅನಿವಾರ್ಯವೂ ಆಗಿದೆ.

ಮಂಡ್ಯ ರಾಜಕಾರಣ ಎಂದರೆ ರಾಜ್ಯದಲ್ಲಿ ಸಂಚಲನಕ್ಕೆ ನಾಂದಿ ಹಾಡುವ ಜಿಲ್ಲೆ. ಬಿಜೆಪಿಯ ನಾಯಕರು ಹಳೇ ಮೈಸೂರು ಪ್ರಾಂತದಲ್ಲಿ ಪಕ್ಷವನ್ನು ಬಲಪಡಿಸುವ ಸಂಕಲ್ಪ ಮಾಡಿದ ನಂತರ ಮಂಡ್ಯ ಜಿಲ್ಲೆಯಿಂದಲೇ ಆಪರೇಷನ್ ಗೆ ಕೈ ಹಾಕಿದ್ದಾರೆ.

ಬಿಜೆಪಿಗೆ ಸುಮಾಲತಾ ಮತ್ತು ಸುಮಲತಾಗೆ ಬಿಜೆಪಿ ಅನಿವಾರ್ಯವಾಗಿದೆ. ಆ ಮಾತು ಬೇರೆ. ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಕ್ಷವೊಂದರ ಅವಶ್ಯಕತೆ ಸಂಸದೆಗೆ ಇದ್ದೇ ಇದೆ. ಹೀಗಾಗಿ ಬಿಜೆಪಿಗೆ ಸೇರಿಕೊಳ್ಳುವ ಅಥವಾ ಅವರನ್ನು ಸೇರಿಸಿಕೊಳ್ಳುವ ತೆರೆ ಮರೆಯ ಕಸರತ್ತು ಈಗ ಎಲ್ಲವೂ ಬಹಿರಂಗವಾಗಿದೆ.

ಮಂಡ್ಯದಲ್ಲಿ ಬಿಜೆಪಿ ಕಟ್ಟುವುದು ಸುಲಭದ ಮಾತಲ್ಲ. ಜೆಡಿಎಸ್ – ಕಾಂಗ್ರೆಸ್ಸಿನ ಭುಜ ಬಲದ ಶಕ್ತಿ ಕುಂದಿಸಿ ಬಿಜೆಪಿಗೆ ಬಲ ತುಂಬುವ ಧೀಮಂತ ವರ್ಚಸ್ಸು ಇರುವುದು ಸಂಸದೆ ಸುಮಲತಾಗೆ ಮಾತ್ರ ಎನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ಬಿಜೆಪಿ ವರಿಷ್ಠರು ಸಂಸದೆಗೆ ಮಣಿಹಾಕುವ ನಿರ್ಧಾರ ಮಾಡದೇ ಇರಲಾರರು. ಆದರೆ ಮೇಡಂ ಹಾಕಿರುವ ಷರತ್ತು ಗಳು ತಲೆ ತಿರುಗುವಂತೆ ಮಾಡಿವೆ.

ಮೂರು ಷರತ್ತುಗಳು !

ಈ ಕಾರಣಕ್ಕಾಗಿಯೇ ಸಂಸದೆ ಸುಮಲತಾ ಕೂಡ ಮೂರು ಷರತ್ತುಗಳನ್ನು ಹಾಕಿದ್ದಾರೆಂದು ತಿಳಿದು ಬಂದಿದೆ

  1. ಈಗಲೇ ನಂಗೆ ಕೇಂದ್ರದಲ್ಲಿ ಮಂತ್ರಿ ಭಾಗ್ಯ ಕಲ್ಪಿಸಬೇಕು
  2. ನನ್ನ ಮಗ ಅಭಿಷೇಕ್ ನಿಗೆ ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬೇಕು
  3. ಮಂಡ್ಯ ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಷಯದಲ್ಲಿ ನಂಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬೇಕು.

ಬಿಜೆಪಿ ಎಲ್ಲಾ ನಾಯಕರು ನನ್ನನ್ನೇ ನಾಯಕಿ ಎಂದು ಒಪ್ಪಿಕೊಳ್ಳಬೇಕು ಎಂಬುದು ಪರೋಕ್ಷ ಷರತ್ತುಗಳು, ಮೂಲ ಬಿಜೆಪಿ ನಾಯಕರಿಗೆ ಹಾಗೂ ಬಾವುಟ ಕಟ್ಟಿ ಜಿಲ್ಲೆಯಲ್ಲಿ ಬಿಜೆಪಿ ಹೆಸರು ಉಳಿಸಿದ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿದೆ.

ಒಟ್ಟಾರೆ ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಕ್ಕೆ ಫಲ ಸಿಗಬೇಕು. ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಮಂದಿ MLA ಗಳನ್ನು ಗೆಲ್ಲಿಸಬೇಕು ಎಂಬ ಸಂಕಲ್ಪವನ್ನು ಬಿಜೆಪಿ ನಾಯಕರು ಮಾಡಿದ್ದಾರೆ.

ಈ ಕಾರಣಕ್ಕಾಗಿ ಮೇ 3-4 ರಂದು ರಾಜ್ಯಕ್ಕೆ ಭೇಟಿ ನೀಡುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸುಮಲತಾ ಅವರಿಗೆ ಭೇಟಿ ಮಾಡಿಸಿ ಮಾತುಕತೆ ಮಾಡಿಸುವ ಲೆಕ್ಕಾಚಾರವೂ ನಡೆದಿದೆ.

ಲೆಕ್ಕಾಚಾರ ಹಾಗೂ ಬಿಜೆಪಿ ಸೇರ್ಪಡೆ ಬಗ್ಗೆ ಖಡಾಖಂಡಿತವಾಗಿ ಹೇಳಿರುವ ಸಂಸದೆ ಸುಮಲತಾ, ನಾನು ಎಲ್ಲಿ ಬಿಜೆಪಿ ಸೇರುವೆ ಅಂತ ಹೇಳಿದ್ದೇನೆ. ಜಿಲ್ಲೆಯ ಜನರ ಅಭಿಪ್ರಾಯ ಪಡೆದ ನಂತರ ಸೂಕ್ತ ನಿರ್ಧಾರ ಮಾಡುವೆ. ಅಲ್ಲಿಯವರೆಗೂ ಯಾವುದೇ ಲೆಕ್ಕಾಚಾರ, ಊಹಾಪೋಹ ಬೇಡ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!