September 26, 2021

Newsnap Kannada

The World at your finger tips!

ಶುಗರ್ ಬಂತು ಶುಗರ್

Spread the love

‘ಅಮ್ಮಾ, ಅಪ್ಪ ಬಂದ್ರು’
‘ಬಂದ್ರಾ, ಭಗವಂತ ಕಾಪಾಡಪ್ಪ. ನಾರಾಯಣ, ವಾಸುದೇವ, ಶ್ರೀಹರಿ, ಲಕ್ಷ್ಮೀ ನರಸಿಂಹ, ಗುರುಗಳೇ ಯಾರಾದ್ರೂ ಕಾಪಾಡಿ. ನಿಮ್ಮನ್ನೆಲ್ಲಾ ಇಷ್ಟು ವರ್ಷ ಪೂಜೆ ಮಾಡಿದೆ.

ನಂಗೋಸ್ಕರ ಏನೂ ಕೇಳಿಲ್ಲ. ಕೇಳಿದ್ದೆಲ್ಲಾ ಮಕ್ಕಳಿಗೋಸ್ಕರ’ ಶಾರದಮ್ಮನವರು ಇದ್ದ ಬದ್ದ ದೇವರನ್ನೆಲ್ಲಾ ತಿವಿದೂ ತಿವಿದೂ ಎಬ್ಬಿಸುತ್ತಿದ್ದರೆ, ಮಕ್ಕಳಿಗೆ ನಗು. ಅವರ ಹಣೆಯಲ್ಲಿ ಬೆವರು ಹನಿಗಳು ಸಾಲುಗಟ್ಟಿದ್ದವು.

‘ಬಿಡೆನು ನಿನ್ನ ಪಾದ’ ಅಂತ ದೇವರ ಮನೆಯಲ್ಲಿ ಆಸೀನರಾಗಿದ್ದಾರೆ. ಮನೆಯಲ್ಲಿ ಜನವೋ ಜನ. ನರಸಿಂಹಮೂರ್ತಿಗಳಿಗೆ ಅರವತ್ತು ವರ್ಷದ ಶಾಂತಿ. ಅತಿ ಕಡಿಮೆ ಎಂದರೂ ಐವತ್ತು ಜನರಿದ್ದರು. 90 ವರ್ಷದ ಅವರ ತಾಯಿ ಲಕ್ಷಮ್ಮನವರು ಬಿಪಿ, ಶುಗರ್ ಯಾವುದೂ ಇಲ್ಲದೆ, ಕನ್ನಡಕವಿಲ್ಲದೇ ಧಾರಾವಾಹಿಗಳನ್ನು ಓದಿಕೊಂಡು, ನೋಡಿಕೊಂಡು ಆರಾಮವಾಗಿದ್ದರೆ, ಅವರ ಸೊಸೆ ಶಾರದ ಬಿ ಪಿಯನ್ನು ಅಪ್ಪಿಕೊಂಡಾಗಿತ್ತು.

ಈಗ ಇದ್ದಕ್ಕಿದ್ದಂತೆ ಈ ಶುಗರ್ ಎಂಬ ಗುಮ್ಮ. ರಕ್ತ ಪರೀಕ್ಷೆ ಮಾಡಿಸುವಂತೆ ಡಾಕ್ಟರು ಹೇಳಿದ್ದೇ ಅವರ ದುಗುಡಕ್ಕೆ ಕಾರಣವಾಗಿತ್ತು. ಅವರ ಅಣ್ಣ ವೆಂಕಟೇಶಮೂರ್ತಿಗಳು ಶುಗರ್ ಫ್ಯಾಕ್ಟರಿಯ ಪಾರ್ಟ್ ನರ್ ಆಗಿ ಹತ್ತು ವರ್ಷಗಳು ಕಳೆದಿತ್ತು. ‘welcome ಶಾರದ ವೆಲ್ಕಂ. ಈ ಕಹಿ ಪ್ರಪಂಚಕ್ಕೆ ನಿನಗೆ ಸ್ವಾಗತ. ಏನೂ ಯೋಚ್ನೆ ಮಾಡ್ಬೇಡ. ನಂಗೆ ಹತ್ತ್ ವರ್ಷದಿಂದ ಇದೆ. ನಾನೇನಾದ್ರೂ ಬೇಜಾರು ಮಾಡಿಕೂಂಡಿದೀನಾ? ದಿನಾ ರಾತ್ರಿ ಒಂದು ಚಮಚ ಮೆಂತ್ಯೆ ನೀರಲ್ಲಿ ನೆನಸಿಡು. ಬೆಳಿಗ್ಗೆ ಎದ್ದು ಕುಡಿ. ನೋಡ್ತಾ ಇರು ಹೇಗೆ ನಿನ್ನ ಶುಗರ್ ಕಂಟ್ರೋಲ್ಗೆ ಬರುತ್ತೆ ಅಂತ. ಹ್ಹೀ ಹ್ಹೀ ಹ್ಹೀ ಹ್ಹೀ’ ಎಂದು ತಮ್ಮ ಜೋಕಿಗೆ ತಾವೇ ನಕ್ಕರು.


ಶಾರದಮ್ಮನ ಮುಖ ಕಪ್ಪಿಟ್ಟಿತು. ಸಿಹಿ ತಿಂಡಿಗಳೆಲ್ಲಾ ಅವರ ಮುಂದೆ ಪೆರೇಡ್ ಮಾಡಿದವು. ಬಾಯಲ್ಲಿ ಜೊಲ್ಲು ಸುರಿದು ಅವರುಟ್ಟಿದ್ದ ಹದಿನೈದು ಸಾವಿರದ ಮೈಸೂರು ಸಿಲ್ಕ್ ಸೀರೆ ಒದ್ದೆಯಾಗಿ ಹೋಯಿತು.ಅವರನ್ನು ಬಲವಂತವಾಗಿ ಬಲಿಪೀಠಕ್ಕೆ ಕೊಂಡೊಯ್ದಂತಿತ್ತು.

ಇತ್ತೀಚೆಗಂತೂ ನರಸಿಂಹಮೂರ್ತಿಗಳು ಒಟ್ಟೊಟ್ಟಿಗೆ ಐದಾರು ಕೆ.ಜಿ ಸಕ್ಕರೆ ತರುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಸಕ್ಕರೆ ಮತ್ತು ತೆಂಗಿನಕಾಯಿ ಕಂಡರೆ ಸಾಕು ಶಾರದಮ್ಮನವರ ಕೈ ಚುರುಕಾಗಿ ಓಡುತ್ತಿತ್ತು. ‘ಮಕ್ಕಳಿಗೆ ಕೊಬ್ಬರಿ ಮಿಠಾಯಿ ಅಂದ್ರೆ ತುಂಬಾ ಇಷ್ಟ ಅಂದ್ರೆ, ಅದಕ್ಕೆ ಮಾಡಿದೆ’ ಅಲ್ಲಿ ಮಕ್ಕಳೆಲ್ಲಾ ಡಯಟ್ಟು. ಯಾರೂ ಮುಟ್ಟುತ್ತಿರಲಿಲ್ಲ. ಮೂರ್ತಿಗಳು ಒಂದೋ ಎರಡೋ ಬಾಯಿಗೆ ಹಾಕಿಕೊಂಡರೆ ಮುಗಿಯಿತು.ಮಿಕ್ಕಿದ್ದೆಲ್ಲವನ್ನೂ ಶಾರದಮ್ಮನವರು ಮುಲಾಜಿಲ್ಲದೆ ಮುಕ್ಕುತ್ತಿದ್ದರು.

ಮನೆಯಲ್ಲಿ ಏನೇ ಕಾರ್ಯಕ್ರಮವಿರಲಿ ಕನಿಷ್ಠ ಪಕ್ಷ ಮೂರ್ನಾಲಕ್ಕು ಸಿಹಿ ತಿಂಡಿಗಳು ಬೇಕೇ ಬೇಕು. ಅವರಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಾಂತಾಯಿತು. ಮೆಂತ್ಯೆಯ ಕಹಿ ಬಾಯಲ್ಲಿ ಹರಡಿದಂತೆ ಮನಸ್ಸೆಲ್ಲಾ ಕಹಿಯಾಯಿತು. ಅತ್ತಿಗೆ ಶಾಂತಮ್ಮ ಏನೂ ಕಮ್ಮಿ ಇಲ್ಲ. ‘ಶಾರದ ನೀನು ಇವರ ಮಾತು ಕೇಳಬೇಡ. ನನ್ನ ಮಾತು ಕೇಳು. ಪ್ರತಿ ದಿನ ಒಂದು ಅಮೃತ ಬಳ್ಳಿ ಎಲೆ ತಿನ್ನು. ಗರಿಕೆ ಹುಲ್ಲಿನ ಜ್ಯೂಸ್ ಕುಡಿ’
ಮತ್ತೆ ವೆಂಕಟೇಶಮೂರ್ತಿಗಳೇನೂ ಸುಮ್ಮನೆ ಇರುವವರೇ? ‘ಓ ನೀನು ಸುಮ್ಮನಿರೆ. ಎಲ್ಲಿಂದ ತರೋದು ಆ ಅಮೃತ ಬಳ್ಳಿ ಎಲೆನಾ? ನಮ್ಮ ಅಪಾರ್ಟ್ಮೆಂಟುಗಳಲ್ಲಿ ಬೆಳೆಸೋಕೆ ಆಗುತ್ತಾ? ಇವಳ ಮಾತು ಕೇಳು. ಆಗಬಾರದ್ದು ಹೋಗಬಾರದ್ದು. ದೊಡ್ಡ ಡಾಕ್ಟ್ರು’ ‘ಹೌದು ರೀ, ನಿಮಗೆ ಶುಗರ್ ಬಂದು ಬರೀ ಹತ್ತು ವರ್ಷ. ಆದರೆ ನನಗೆ ಬಂದು ಹದಿನೈದಾಯ್ತು.

ನಮ್ಮ ಮನೇಲಿ ನಮ್ಮ ಅಪ್ಪ, ಅಮ್ಮಾ, ಅಣ್ಣ, ನನ್ನ ತಂಗಿ ಎಲ್ಲರಿಗೂ ಇದೆ. ಅವರೆಲ್ಲಾ ಇದನ್ನೇ ತಿಂದು ಶುಗರ್ ಹಿಡಿತದಲ್ಲಿ ಇಟ್ಟುಕೊಂಡಿರೋದು. ನಾವೆಲ್ಲಾ ಶುಗರ್ ಸಂಸ್ಥೆಯ ಕಾರ್ಯಕಾರಿ ಸದಸ್ಯರು’ ಕೊನೆಗೆ ಗಂಡ-ಹೆಂಡತಿ ಪರಸ್ಪರ ಕಚ್ಚಾಟವನ್ನು ಮುಂದುವರೆಸಿದರೆ ಮಿಕ್ಕವರಿಗೆ ಬಿಟ್ಟಿ ಮನರಂಜನೆ. ‘ಅಷ್ಟೇ ಯಾಕೆ ನಿಮ್ಮ ಮನೆಯವರೆಲ್ಲ ‘ಕುಡಿದ ನೀರು ಅಲ್ಲಾಡದ ಸಂಘದ ಸದಸ್ಯರು. ಅದಕ್ಕೆ ಶುಗರ್ ಬಂದಿರೋದು’


ಅಲ್ಲಿ ಹಸೆಮಣೆ ಮೇಲೆ ಕೂರಲು ಪುರೋಹಿತರು ಅರ್ಜೆಂಟು ಮಾಡುತ್ತಿದ್ದಾರೆ ಇಲ್ಲಿ ಶಾರದಮ್ಮನವರು ದೇವರಮನೆ ಬಿಟ್ಟು ಹೊರಗೇ ಬರುವುದಿಲ್ಲ ಅಂತ ಹಠ ಹಿಡಿದಿದ್ದಾರೆ. ಮಕ್ಕಳ ಒತ್ತಾಯದ ಮೇರೆಗೆ ಶಾರದಮ್ಮನವರು ಹಸೆ ಏರಿದರು. ಅವರ ಕೋಪವೆಲ್ಲಾ ಅವರ ಗಂಡನ ಕಡೆ ತಿರುಗಿತು.


‘ಏನ್ರೀ ರಿಪೋರ್ಟ್ ನೋಡಿದ್ರಾ? ಹೀಗೆ ದಿಮ್ಮನೆ ರಂಗ ಅಂತ ಕೂತರೆ?’
‘ಅಯ್ಯೋ, ಬಿಡೆ ಆ ರಿಪೋರ್ಟು. ಆಮೇಲೆ ನೋಡಿದ್ರಾಯ್ತ. ಈಗ ಕಾರ್ಯಕ್ರಮದ ಕಡೆ ಗಮನ ಕೊಡು. ನನಗೆ ಜೀವನದಲ್ಲಿ ಒಂದೇ ಸಲ ಅರವತ್ತಾಗೋದು. ಇದು ಲೈಫ್ ಟೈಮ್ ಸಾಧನೆ ಕಣೆ. ಜೋಯಿಸರೆ ನಾನು ರೆಡಿ ಶುರು ಮಾಡಿ’ ಎಂದು ಅಚ್ಚುಕಟ್ಟಾಗಿ ಆಚಮನ ಮಾಡುತ್ತಾ ಹೆಂಡತಿಯತ್ತ ನೋಡಿ ಮುಸಿ ಮುಸಿ ನಕ್ಕರು. ಇಲ್ಲಿ ಶಾರದಮ್ಮನವರಿಗೆ ಪುಕ ಪುಕ. ಅವರಿಗೆ ಕಾರ್ಯಕ್ರಮದಲ್ಲಿ ಆಸಕ್ತಿಯೇ ಇಲ್ಲ. ಯಾರು ಏನು ಕೇಳಿದರೂ ಗಮನವೆಲ್ಲಾ ಆ ರಿಪೋರ್ಟ್ ಕಡೆಗೆ. ‘ಅಯ್ಯೋ ಕತ್ತೇಗೂ ಅರವತ್ತಾಗುತ್ತೆ ಬಿಡಿ’ ಎಂದು ಮುಖ ದಪ್ಪಗೆ ಇಟ್ಟುಕೊಂಡು ಒಲ್ಲದ ಮನಸ್ಸಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಅಂತೂ ಇಂತೂ ಹಳೇ ಹೆಂಡ್ತಿಗೆ ಹೊಸ ತಾಳಿ ಬಿಗಿದು ರಾಯರು ಏನೂ ನಡೆದೇ ಇಲ್ಲವೇನೋ ಎನ್ನುವ ಹಾಗೆ ಕುಳಿತು ಬಿಟ್ಟಿದ್ದರು. ಮನೆಯಲ್ಲೆಲ್ಲಾ ಗುಸುಗುಸು ಪಿಸುಪಿಸು. ಹೇಗೋ ಏನೋ ಕಿವಿಯಿಂದ ಕಿವಿಗೆ ಹರಡಿ ಈಗ ಮನೆಯಲ್ಲಿದ್ದವರಿಗೆಲ್ಲಾ ತಿಳಿಯಿತು ‘ಶಾರದನಿಗೆ ಶುಗರ್ ಅಂತೆ. ಅತ್ತೆ ಲಕ್ಷಮ್ಮನವರ ಕಿವಿಗೆ ಬಿದ್ದದ್ದೇ ತಡ. ಯಾರೂ ನನ್ನ ಸೊಸೆ ಶಾರದೆಗಾ? ಇವಳಿಗೇನು ವಯಸ್ಸಾಗಿತ್ತೂಂತ ಸಕ್ಕರೆ ಕಾಯಿಲೆ. ಲಕ್ಷಣವಾಗಿ ತಿಂದುಂಡುಕೊಂಡು ಆರಾಮಾಗಿ ಇರುವ ವಯಸ್ಸು’ ಕೈಲಾಗದಿದ್ದರೂ ಎದ್ದು ಹೋಗಿ ಸೊಸೆಯ ಕಿವಿಯಲ್ಲಿ ಉಸುರಿದರು.


’ನೀನೇನೂ ಯೋಚ್ನೆ ಮಾಡ್ಬೇಡ ಶಾರದ. ಈ ಡಾಕ್ಟ್ರುಗಳು ಸುಮ್ನೆ ಏನೇನೋ ಹೇಳ್ತಾರೆ. ಬೆಳಿಗ್ಗೆ ಎದ್ದು ವಾಕಿಂಗ್ ಹೋಗು. ಸಕ್ಕರೆ ಕಡಿಮೆ ಮಾಡು ಸಾಕು. ಎಲ್ಲ ಸರಿ ಹೋಗುತ್ತೆ’
‘ಮ್ಚ ಮ್ಚ ನೋಡಿ ಅತ್ತೆ, ಪ್ರಪಂಚದಲ್ಲಿ ಎಷ್ಟು ಜನ ಇದಾರೆ. ನಾನೇ ಬೇಕಾಗಿತ್ತಾ ಇದಕ್ಕೆ? ಹಾಳಾದ್ದು, ಎಲ್ಲಿ ಬಂದು ವಕ್ಕರಿಸಿತೋ, ನನ್ನ ಗ್ರಹಚಾರ. ತಿಂದುಂಡೋ ಸಮಯದಲ್ಲಿ ಕೈಯಲ್ಲಿ ಕಾಸೇ ಇರಲಿಲ್ಲ. ಈಗ ಕೈತುಂಬಾ ಕಾಸಿದೆ ಆದ್ರೆ’
‘ ಯಜಮಾನರ ಕೈಗೆ ನೀರು ಬಿಡೀಮ್ಮಾ’ ಪುರೋಹಿತರು ಆಗಾಗ ತಮ್ಮ ಇರುವನ್ನು ತೋರಿಸಿಕೊಳ್ಳುತ್ತಿದ್ದರು.


ತಾವು ಕೊಡಿಸಿರುವ ದುಬಾರಿ ಸೀರೆಯಲ್ಲಿ ಕಣ್ಣೊರೆಸಿಕೊಳ್ಳುತ್ತಿರುವುದು ನೋಡಿ ರಾಯರು ಹೆಂಡತಿಯನ್ನು ತಡೆದು, ‘ಲೇ ಲೇ ಸಾಕೇ, ಈಗೇನು ರಿಪೋರ್ಟ್ ನೋಡಿಬಿಟ್ಯಾ? ಶುಗರ್ರೂ ಇಲ್ಲ, ಗಿಗ್ಗರ್ರೂ ಇಲ್ಲ’ ಖಡಾಖಂಡಿತವಾಗಿ ನುಡಿದಾಗ
‘ಸದ್ಯ, ನಿನ್ನ ಬಾಯಿಗೆ ಸಕ್ಕರೆ ಹಾಕಾ’ ಎಂದರು ಮುದ್ದಿನ ಸೊಸೆಯ ಅತ್ತೆ. ಶಾಸ್ತ್ರಗಳೆಲ್ಲ ಮುಗಿಸಿ ‘ವಧೂ-ವರರಿಗೆ ಆರತಿ ಎತ್ತಿ, ಓದಿಸುವವರೆಲ್ಲಾ ಓದಿಸಬಹುದು’ ಎಂದು ಪುರೋಹಿತರು ಹಸಿರು ನಿಶಾನೆ ತೋರಿಸಿದ್ದೇ ತಡ, ನೆರೆದಿದ್ದ ನೆಂಟರಿಷ್ಟರು ಉಡುಗೊರೆಯನ್ನು ಹೊತ್ತು ತಂದು ಓದಿಸಿದರು.

ವೆಂಕಟೇಶ ಮೂರ್ತಿಗಳು ಬೊಚ್ಚು ಬಾಯನ್ನು ಒಳಕ್ಕೂ ಹೊರಕ್ಕೂ ಮಾಡುತ್ತಾ. ‘ಶಾರೀ, ಅಪ್ಪನ ಆಸ್ತೀಲಿ ನಿಂಗೆ ನಿನ್ನ ಭಾಗದ್ದೂಂತ ಮನೆ ಬಂದಿದೆ. ಒಪ್ಪಿಸ್ಕೋ, ಹ್ಹೀ ಹ್ಹೀ ಹ್ಹೀ ಹ್ಹೀ’ ಎಂದು ತಮ್ಮ ಹೆಂಡತಿಯ ಮುಖ ನೋಡುವ ಧೈರ್ಯವಿಲ್ಲದೆ ತಂಗಿಯನ್ನು ನೋಡಿದರು ಶಾರದೆಯ ಮುಖ ಅರಳಿತು. ಎಷ್ಟೋ ವರ್ಷಗಳಿಂದ ಬಗೆಹರಿಯದೆ ಇದ್ದ ಆಸ್ತಿಯ ವ್ಯಾಜ್ಯ ಕೊನೆಗೂ ಒಂದು ಅಂತ್ಯ ಕಂಡಿತ್ತು. ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ಎಂದು ಅವಳ ಭಾಗದ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು ಮೂರ್ತಿಗಳು. ಶಾರದೆಗೆ ಒಳ್ಳೆ ರೇಷ್ಮೆ ಸೀರೆಗಳು ಬಂದವು. ಉಡುಗೊರೆಗಳನ್ನು ನೋಡುತ್ತಾ ಶುಗರ್ ಭೂತವನ್ನು ಮರೆತೇಬಿಟ್ಟಿದ್ದರು ಶಾರದಮ್ಮನವರು.


ಎಲ್ಲ ಕಲಾಪಗಳು ಮುಗಿದು ಅತಿಥಿಗಳಿಗೆ ಊಟೋಪಚಾರ ಮುಗಿದರೂ ರಾಯರು ರಿಪೋರ್ಟ್ ಸುದ್ದೀನೆ ಎತ್ತುತ್ತಿಲ್ಲ. ಬಂದವರಿಗೆಲ್ಲಾ ಉಡುಗೊರೆ ಕೊಟ್ಟ ನಂತರ ಮನೆಯಲ್ಲಿ ಸ್ವಲ್ಪ ವಿರಮಿಸುವಂತಾಯ್ತು. ಎಲ್ಲರೂ ಶುಗರ್ ವಿಷಯ ಮರೆತು ಪರಸ್ಪರ ಕುಶಲೋಪರಿಯಲ್ಲಿ ಮಗ್ನರಾಗಿದ್ದರು.


‘ಅಬ್ಬ ಈ ಕರೋನ ಗಲಾಟೆ ಮಧ್ಯೆ ಅಂತೂ ನನ್ನ ಮಗನ ಷಷ್ಠಿಪೂರ್ತಿ ಸಾಂಗವಾಗಿ ನಡೀತು’ ಎಂದರು ಲಕ್ಷಮ್ಮ. ಮಕ್ಕಳು ಸಾರ್ಥಕತೆಯ ಭಾವವನ್ನು ಅನುಭವಿಸುತ್ತಿದ್ದರೆ ಶಾರದಮ್ಮನವರ ಮನಸ್ಸು ಮಾತ್ರ ಇವರು ಯಾವಾಗ ರಿಪೋರ್ಟ್ ತೋರಿಸುವರೋ ಸದ್ಯ, ಇಲ್ಲ ಎಂದು ಬಿಟ್ಟರೆ ಸಾಕು ಎಂದು ಪರಿತಪಿಸುತ್ತಿದ್ದರು.

ಏನೋ ನೆನಪು ಮಾಡಿಕೊಂಡವನಂತೆ ಅವರ ಮೈದುನ ಸತ್ಯ
‘ಅತ್ತಿಗೆ ಈ ಮೆಡಿಕಲ್ ಸ್ಟೋರ್ಸ್ ನಲ್ಲಿ ಒಂದು ರೀತಿಯ ಟೀ ಸಿಗುತ್ತೆ. ನನ್ನ ಸ್ನೇಹಿತ ಅದನ್ನು ತೊಗೊಳ್ತಾ ಇದಾನೆ. ಪೂರ್ತಿ ಕಂಟ್ರೋಲ್ ಗೆ ಬಂದಿದೆ. ಈಗ ನೋಡಿ ಅವ್ನು, ದಿನಕ್ಕೆ ಎರಡು ಹೊತ್ತೂ ಟೀ ಕುಡೀತಾನೆ. ಸ್ವೀಟು ಗೀಟು ಎಲ್ಲಾ ತಿಂತಾನೆ’
‘ಏಯ್ ಅದೆಲ್ಲಾ ತೊಗೋಬಾರ್ದು. ದಿನಾ ಯೋಗಾ ಮಾಡ್ಬೇಕು. ನೀವು ತೂಕ ಇಳಿಸಿಕೊಳ್ಳಬೇಕು’ ಹೀಗೆ ಮರೆತು ಹೋಗಿದ್ದ ವಿಷಯ ಮತ್ತೆ ಗರಿಗೆದರಿತು.


ಹೋಮಿಯೋಪತಿ ತೊಗೋ ಎಂದು ಒಬ್ಬರೆಂದರೆ ಆಯುರ್ವೇದಿಕ್ ಒಳ್ಳೆಯದು ಎಂದು ಮತ್ತೊಬ್ಬರು. ಯುನಾನೀನೇ ಸರಿಯಪ್ಪ ಅಂತ ಮಗದೊಬ್ಬರು.ಇವರ ಗಲಾಟೆಗೆ ಆ ಸಕ್ಕರೆ ಕಾಯಿಲೆ ಹೆದರಿ ಓಡಬೇಕಷ್ಟೇ. ರಾಯರು ಮಾತ್ರ ಆರಾಮವಾಗಿ ಎಲೆ ಅಡಿಕೆ ಹಾಕಿಕೊಂಡು ನೆಂಟರಿಷ್ಟರ ನಡುವೆ ಪಟ್ಟಾಂಗ ಹೊಡೆಯುತ್ತಿದ್ದಾರೆ. ರಿಪೋರ್ಟ್ ಸುದ್ದಿಯೇ ಇಲ್ಲ. ಕೊನೆಗೆ ಕಾದು ಸಾಕಾಗಿ ಶಾರದಮ್ಮನವರು
‘ಲೇ ಅದಿತಿ ಒಂದೆರೆಡು ಮೈಸೂರು ಪಾಕು ತೊಗೊಂಡು ಬಾರೆ’ ಎಂದು ಮಗಳಿಗೆ ಆಜ್ಞೆಯನ್ನಿತ್ತರು. ಒಂದು ಕ್ಷಣ ನಿಶಬ್ಧ. ಎಲ್ಲರೂ ಶಾರದಮ್ಮನವರತ್ತ ತಿರುಗಿ ನೋಡುವವರೆ.


‘ಇವರು ತಾವಾಯಿತು ತಮ್ಮ ಅರವತ್ತು ವರ್ಷದ ಶಾಂತಿ ಆಯ್ತು ಅನ್ನೋ ಹಾಗೆ ಕೂತಿದಾರೆ. ಇಲ್ಲಿ ನನ್ನ ಕಷ್ಟ ನನಗೆ. ಇವರಿಗೆ ಯಾವಾಗ ಮನಸ್ಸು ಬರುತ್ತೊ ಆಗ ರಿಪೋರ್ಟ್ ತೋರಿಸಲಿ. ಅಲ್ಲಿಯವರೆಗೆ ನನಗೆ ಏನೂ ಆಗಿಲ್ಲ’ ಎಂದು ಆನಂದವಾಗಿ ಮೈಸೂರುಪಾಕು ಆಸ್ವಾದಿಸುತ್ತಾ ಕ್ಷಣಾರ್ಧದಲ್ಲಿ ತಿಂದು ಮುಗಿಸಿದರು. ‘ಅದೂ ಸರೀನೇ’ ಎಂದು ಉಳಿದವರೂ ಅವರಿಗೆ ಕಂಪೆನಿ ನೀಡಿದರು.

ಸಂಜೆಯ ಬಿಸಿ ಕಾಫಿ ಸೇವನೆಯ ನಂತರ ಎಲ್ಲರೂ ತಂತಮ್ಮ ಮನೆಗಳತ್ತ ಪಾದ ಬೆಳೆಸಿದರು. ರಾತ್ರಿ ರಾಯರು ಊಟ ಬೇಡ ಎಂದು ಮಜ್ಜಿಗೆ ಕುಡಿದು ಪಲ್ಲಂಗವನ್ನೇರಿದರು. ಶಾರದಮ್ಮ, ರಿಪೋರ್ಟ್ ತೋರಿಸಲಿಲ್ಲ ತನ್ನ ಗಂಡ ಎಂದು ಸ್ವಲ್ಪ ಮುನಿಸಿಕೊಂಡೇ ಮೆಲ್ಲನೆ ಪಕ್ಕಕ್ಕೆ ತಿರುಗಿ ಮಲಗಿದರು. ರಾಯರು ನಿಧಾನವಾಗಿ ‘ಶಾರದ ಈವತ್ತು ಮೈಸೂರುಪಾಕು ಜೊತೆಗೆ ಏನು ಸ್ವೀಟು ಮಾಡಿಸಿದ್ದು?’
‘ನಂಗೊತ್ತಿಲ್ಲ’
‘ಹೋಳಿಗೇನಾ?’
‘ಇರಬಹುದು’
ಎಲಾ ಇವಳಾ. ಸ್ವೀಟು ಇಂತಹದ್ದೇ ಆಗಬೇಕು ಅಂತ ಆರ್ಡರ್ ಕೊಟ್ಟವಳು ನೀನೇ ಅಲ್ಲವೇ? ಯಾಕೋ ಆ ಗಲಾಟೇಲಿ ತಿಂದ ಹಾಗೆ ಆಗಲಿಲ್ಲ ಕಣೆ. ಹೋಗು ಎರಡು ತಟ್ಟೇಲಿ ಹೋಳಿಗೆ ತೆಗೆದುಕೊಂಡು ಬಾ. ನಿನ್ನ ಜೊತೆ ತಿಂದ ಹಾಗಾಗುತ್ತಾ?’
ಶಾರದಮ್ಮನವರಿಗೆ ಆಶ್ಚರ್ಯ! ‘ಏನ್ರೀ ಏನ್ ಹೇಳ್ತಾ ಇದೀರಿ, ಅಂದ್ರೆ ನಂಗೆ ಶುಗರ್ ಬಂದಿಲ್ಲ ಅಲ್ವಾ?’ ಅಂದವರೆ ಮುನಿಸು ಮರೆತು ಒಂದೇ ನೆಗೆತಕ್ಕೆ ಹಾರಿ ಎರಡು ತಟ್ಟೆಯಲ್ಲಿ ಹೋಳಿಗೆ ಅದರ ಮೇಲೊಂದಿಷ್ಟು ತುಪ್ಪ ಬಟ್ಟಲಲ್ಲಿ ಹಾಲು ತೆಗೆದುಕೊಂಡು ಬಂದರು.


‘ಆಹಾಹಾ ಅದೇನು ರುಚೀನೇ, ತಿನ್ನು ನಿಧಾನವಾಗಿ ತಿನ್ನು. ನೋಡು ಹೀಗೆ ನಿನ್ನ ಜೊತೆ ಮಾತಾಡ್ತಾ ತಿಂದ್ರೆ ರುಚಿ ಜಾಸ್ತಿ. ಅಲ್ಲಾ ನಿನ್ನೆ ಮೊನ್ನೆ ನಿನ್ನನ್ನ ನೋಡಕ್ಕೆ ಬಂದಹಾಗಿದೆ. ನೀನು ಅಪಸ್ವರದಲ್ಲಿ ‘ಇನ್ನು ದಯ ಬಾರದೇ, ಹಾಡು ಹೇಳಿದೆ. ಅದಕ್ಕೆ, ಅಮ್ಮಾ, ಸಾಕಮ್ಮ ಚೆನ್ನಾಗಿ ಹಾಡತೀಯ ತಾಯಿ. ಕಷ್ಟಪಟ್ಟು ಇವನನ್ನ ಹೆಣ್ಣು ನೋಡಕ್ಕೆ ಕರಕೊಂಡು ಬಂದಿದೀವಿ. ಆಮೇಲೆ ಹೊರಟು ಬಿಟ್ಟಾನು’ ಅಂತಾ ನಯವಾಗಿ ನಿನ್ನ ಹಾಡು ನಿಲ್ಲಿಸಿದ್ದು …’ ಶಾರದಾ ಹುಸಿಮುನಿಸು ತೋರಿ ‘ಸಾಕು ಸಾಕು’ ಎಂದು ರಾಯರ ಬಾಯಿ ಮುಚ್ಚಿಸಿದರು.


ಶಾರದಮ್ಮ ಸಂತೃಪ್ತಿಯಿಂದ ಹೋಳಿಗೆ ತಿಂದು ಮುಗಿಸಿ ಸೆರಗಲ್ಲೇ ಕೈ ಒರೆಸಿಕೊಂಡು ಬಂದು
‘ರೀ ಗಣೇಶನ ಹಬ್ಬಕ್ಕೆ ಕಡುಬು, ಮೋದಕ, ಎಳ್ಳುಂಡೆ ಎಲ್ಲ ಮಾಡಬೇಕು. ಸದ್ಯ ಈ ಶುಗರ್ ಭೂತ ತೊಲಗಿತಲ್ಲ ‘
ನಗು ನಗುತ್ತಾ ಕುಳಿತರು. ರಾಯರ ಕೈಯಲ್ಲಿ ರಿಪೋರ್ಟ್ ಇತ್ತು.
‘ಶಾರದ, ನಿನಗೆ 56 ವರ್ಷ. ಇಷ್ಟು ವರ್ಷ ಸುಮಾರು ಎಷ್ಟು ಸ್ವೀಟ್ ತಿಂದಿರಬಹುದು ಅಲ್ವಾ?’ ‘ಯಾಕೆ ಅದೇನು ಹಾಗೆ ಕೇಳ್ತೀರಿ?’
‘ಯಾಕೆ ಅಂದರೆ ಇನ್ನು ಮುಂದೆ ಸಿಹಿ ಮರೆತು ಬಿಡು. ಸ್ವಲ್ಪ ರೆಸ್ಟ್ ಕೊಡು. ಇದುವರೆಗೂ ನೀನು ಏನೇನು ತಿಂದಿಲ್ಲವೋ ಅವನ್ನೆಲ್ಲಾ ತಿನ್ನಬೇಕು. ಸಿಹಿ ತಿನ್ನುವ ತವಕದಲ್ಲಿ ಖಾರ, ಕಹಿ, ಒಗರು, ಹುಳಿ ಎಲ್ಲವನ್ನೂ ಮರೆತೇ ಬಿಟ್ಟಿದ್ದೇ ನೋಡು. ಇನ್ನು ಮುಂದೆ ಅದನ್ನೆಲ್ಲ ತಿನ್ನಬೇಕು. ಜೀವಿತಾವಧಿಯಲ್ಲಿ ಮುಕ್ಕಾಲು ಭಾಗ ಸಿಹಿ ತಿಂದಾಗಿದೆ ಇನ್ನು ಕಾಲು ಭಾಗದಲ್ಲಿ ಈ ರುಚಿಯೆಲ್ಲಾ ನೋಡೋಣ ಏನಂತೀಯ?’
ಶಾರದಮ್ಮನವರ ಮುಖ ಕಪ್ಪಿಟ್ಟಿತು. ‘ಅಂದ್ರೆ ನಂಗೆ ಶುಗರ್ ಬಂತಾ?’
‘ಅಯ್ಯೋ ಬರಲಿ ಬಿಡೆ ಅದೇನು ಮೋಹಿನೀನಾ ಅಥವಾ ದೆವ್ವಾನಾ? ನಿನ್ನ ಭಾಗಕ್ಕೆ ಬಂದ ಮನೇನ ಆನಂದವಾಗಿ ಒಪ್ಪಿಸಿಕೊಂಡೆ. ನಿಮ್ಮಪ್ಪನ ಆಸ್ತಿ ಬೇಕು ನಿಮ್ಮಪ್ಪನ ಶುಗರ್ ಬೇಡ್ವಾ ನಿಂಗೆ?’
‘ಏನ್ರೀ ಇಷ್ಟು ಒಗಟಾಗಿ ಮಾತಾಡ್ತೀರಿ. ಅಂದ್ರೆ ನಂಗೆ ಶುಗರ್ ಇದ್ಯಾ?’

‘ಅಯ್ಯಯ್ಯೋ ಕೊನೆಗೂ ಬಂದೇ ಬಿಡ್ತಲ್ರೀ’ ಶಾರದಮ್ಮನವರಿಗೆ ತಿಂದ ಹೋಳಿಗೆ ಕಹಿ ಕಹಿ ಭಾಸವಾಗತೊಡಗಿತು.

ಟಿ.ಆರ್.ಉಷಾರಾಣಿ
ಮಂಗಳೂರು
error: Content is protected !!