ಮತ್ತೆ ಉಕ್ರೇನ್ ಹೋಗಲ್ಲ ವಿದ್ಯಾರ್ಥಿಗಳ ಶಪಥ : ಇಲ್ಲೇ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಸಿಎಂ ಅಭಯ

Team Newsnap
1 Min Read

ಯುದ್ಧದ ಕಾರಣಕ್ಕಾಗಿ ಉಕ್ರೇನಿನಿಂದ ವಾಪಸು ಬಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿಯೇ ವಿದ್ಯಾಭ್ಯಾಸ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿದ್ದ ನಿಯೋಗ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದರು.

ukren stu1

ಯುಕ್ರೇನನಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳು ಮಾತನಾಡಿ ಧೈರ್ಯ ತುಂಬಿ, ಇಲ್ಲಿಗೆ ಬರಲು ಸಹಕಾರ ನೀಡಿದ ಎಲ್ಲರಿಗೂ ವಿದ್ಯಾರ್ಥಿಗಳಾದ ಗಗನ್ ಗೌಡ, ತನ್ಮಯಿ, ಲಿಖಿತ ಸೇರಿದಂತೆ ಹಲವರು ಧನ್ಯವಾದ ಸಲ್ಲಿಸಿದರು.

ಪ್ರತಿಯೊಬ್ಬರ ಜೀವ ಮುಖ್ಯ. ನಾವು ಮತ್ತೆ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಸಿದ್ಧರಿಲ್ಲ. ವಿದ್ಯಾರ್ಥಿಗಳು ಕೂಡ ಅಲ್ಲಿಗೆ ಹೋಗಲು ತಯಾರಿಲ್ಲ ಎಂದು ಅಲ್ಲಿನ ಯುದ್ಧದ ಆತಂಕಕಾರಿ ಸನ್ನಿವೇಶವನ್ನು ವಿವರಿಸಿದರು.

ಸಿಎಂ ಭರವಸೆ:

ಉಕ್ರೇನ್ ನಿಂದ ಹಿಂತಿರುಗಿದ ವಿದ್ಯಾರ್ಥಿಗಳಿಗೆ ಇಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ‌. ಈ ಬಗ್ಗೆ ಯಾರು ಆತಂಕಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.

ಶೀಘ್ರವಾಗಿ ದೆಹಲಿಗೆ ಹೋಗುತ್ತಿದ್ದು, ಈ ಸಮಸ್ಯೆ ಬಗ್ಗೆ ಪ್ರಧಾನಿ ಜೊತೆಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುವುದಾಗಿಯೂ ಸಿಎಂ ತಿಳಿಸಿದರು.

ಆತಂಕ ಬೇಡ:

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯ ಇಲ್ಲ.‌ ನಿಮ್ಮ ನೆರವಿಗೆ ನಾವಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ, ಸಚಿವ ಗೋಪಾಲಯ್ಯ ಅವರು ಭರವಸೆ ನೀಡಿದರು.

ನಿಯೋಗದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕೇಶವಮೂರ್ತಿ, ಸುಜಾತ ಮತ್ತಿತರರು ಇದ್ದರು.

Share This Article
Leave a comment