ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್…..
ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ…….……..
ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 600 ಟನ್.
ಅಮೆರಿಕ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 6000 ಟನ್.
ಭಾರತ ಇಲ್ಲಿಯವರೆಗೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಗೆದ್ದ ಒಟ್ಟು ಪದಕಗಳು ಸುಮಾರು 28.
ಅಮೆರಿಕ ಗೆದ್ದ ಒಟ್ಟು ಪದಕಗಳು ಸುಮಾರು 2250.
ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 35 ಲಕ್ಷ ಕೋಟಿ.
ಅಮೆರಿಕದ ಬಜೆಟ್ ಗಾತ್ರ ಸುಮಾರು 400 ಲಕ್ಷ ಕೋಟಿ.
ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಚೀನಾದ ಬಜೆಟ್ ಸುಮಾರು 100 ಲಕ್ಷ ಕೋಟಿ.
ಅಮೆರಿಕದ ರಕ್ಷಣಾ ಬಜೆಟ್ ಸುಮಾರು 150 ಲಕ್ಷ ಕೋಟಿ.
ಭಾರತದ ರಕ್ಷಣಾ ಬಜೆಟ್ ಸುಮಾರು 6/8 ಲಕ್ಷ ಕೋಟಿ.
ಭಾರತದ ಜನಸಂಖ್ಯೆ ಸುಮಾರು 128 ಕೋಟಿ.
ಅಮೆರಿಕದ ಜನಸಂಖ್ಯೆ ಸುಮಾರು 32 ಕೋಟಿ.
ವಿಸ್ತೀರ್ಣದಲ್ಲಿಯೂ ಅಮೆರಿಕ ಭಾರತಕ್ಕಿಂತ ಬಹಳ ದೊಡ್ಡದಾಗಿದೆ.
ತಲಾ ಆದಾಯದ ವ್ಯತ್ಯಾಸವಂತೂ ಅಜಗಜಾಂತರವಿದೆ.
ಭಾರತದ ನಿಜವಾದ ಆದಾಯ ಸುಮಾರು 23 ಲಕ್ಷ ಕೋಟಿಗಳು ಮಾತ್ರ. ಉಳಿದದ್ದು ಸಾಲ ಮತ್ತು ಇತರ ಮೂಲಗಳು.
ಅಂದರೆ ನಮ್ಮ ಈಗಿನ ಸ್ಥಿತಿ ಮತ್ತು ಸಾಗಬೇಕಾದ ಹಾದಿಯ ಒಂದು ಕಲ್ಪನೆ ಮಾಡಿಕೊಳ್ಳಿ.
ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವಿದೆ. ಅಮೆರಿಕ ಬಜೆಟ್ ನ ಬಹುಪಾಲು ಸದುಪಯೋಗವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ ತುಂಬಾ ಇರುವುದರಿಂದ ಇರುವ ಹಣದ ಬಹುಪಾಲು ದುರುಪಯೋಗವಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಇದು ಮತ್ತೊಂದು ಹೊಡೆತ.
ಬಜೆಟ್ ಗಳು ಮತ್ತು ನಮ್ಮ ದೇಶದ ಅಭಿವೃದ್ಧಿ…..
ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು 70 ಕ್ಕಿಂತ ಹೆಚ್ಚು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ………….
ಯಾವ ಸರ್ಕಾರಗಳು ಸಹ ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ ಅಥವಾ ಜನರನ್ನು ನಾಶ ಮಾಡುವ ಯೋಜನೆಗಳನ್ನು ರೂಪಿಸುವುದಿಲ್ಲ. ಬಹಳ ಜನರಿಗೆ ಒಳ್ಳೆಯದಾಗಲಿ ಎಂಬ ಆಶಯವನ್ನೇ ಹೊಂದಿರುತ್ತವೆ.
1950 ಮತ್ತು 2021 ರ ನಡುವೆ ಭಾರತದ ಅಭಿವೃದ್ಧಿ ಸುಮಾರಾಗಿ ಆಗಿದೆ. ವಿಶ್ವ ಸಮುದಾಯ ಕೂಡಾ ತಂತ್ರಜ್ಞಾನದ ಸಹಾಯದಿಂದ ಪ್ರಗತಿಯ ಪಥದಲ್ಲಿದೆ.
ಭಾರತದ ಮಟ್ಟಿಗೆ ಅಭಿವೃದ್ಧಿ ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಶೇಕಡಾ 50% ಕ್ಕೂ ಹೆಚ್ಚು ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.
ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.
ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.
ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಷಯವಿದೆ. ಆದಾಯ ತೆರಿಗೆ ವಿನಾಯಿತಿ, ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ ಇನ್ನೂ ಮುಂತಾದ ಯೋಜನೆಗಳು ಚಾಚೂ ತಪ್ಪದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸಂಪೂರ್ಣ ಜಾರಿಯಾಗುತ್ತದೆ. ಕಾರಣ ಈ ಯೋಜನೆಗಳು ಈಗಾಗಲೇ ವಿದ್ಯಾವಂತರಾಗಿರುವ ಮತ್ತು ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಜನಗಳು ಇವುಗಳನ್ನು ಸ್ವತಃ ಅಥವಾ ಮಧ್ಯವರ್ತಿಗಳ ಮುಖಾಂತರ ಜಾರಿಯಾದ ಮಧ್ಯರಾತ್ರಿಯಿಂದಲೇ ಲಾಭ ಪಡೆದುಕೊಳ್ಳುತ್ತಾರೆ.
ಆದರೆ, ಇನ್ನೂ ಕೆಲವು ಯೋಜನೆಗಳು ಇವೆ. ಉದಾಹರಣೆಗೆ ಗರೀಬೀ ಹಠವೋ, ನರೇಗಾ, ಆಹಾರ ಭದ್ರತೆ, ಬೇಟಿ ಬಚಾವೋ ಬೇಟಿ ಪಡಾವೋ , ಸ್ವಚ್ಛ ಭಾರತ್, ಆಯುಷ್ಮಾನ್ ಮುಂತಾದ ಯೋಜನೆಗಳು ಅದರ ನಿಜ ರೂಪದಲ್ಲಿ ಜನರಿಗೆ ತಲುಪುವುದು ತುಂಬಾ ಕಷ್ಟವಿದೆ.
ಜನರಲ್ಲಿ ಇರುವ ಅಜ್ಞಾನ ಬಡತನ ದಾಖಲೆ ಮತ್ತು ಮಾಹಿತಿಯ ಕೊರತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷತನ ಮತ್ತು ಸೋಮಾರಿತನ, ಅಸೂಯೆ ಮುಂತಾದ ಕಾರಣಗಳು ಇವುಗಳನ್ನು ಜಾರಿಯಾಗಲು ಬಿಡುವುದಿಲ್ಲ.
ಪಾರ್ಲಿಮೆಂಟ್ ಅಥವಾ ವಿಧಾನಸೌದದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ,
ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ.
ಇದು ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳಿಗೂ ಸಮನಾಗಿ ಅನ್ವಯ……
- ವಿವೇಕಾನಂದ. ಹೆಚ್.ಕೆ.
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
More Stories
ಮಳೆ ನಿಂತರೂ ಮರದ ಹನಿ ನಿಲ್ಲದು
ನಮ್ಮ ಸಮೃದ್ಧ ಚಾಮರಾಜನಗರದ ಮಹದೇಶ್ವರ ಮಲೆಯ ಸುತ್ತಾಮುತ್ತಾ
ತಾಯ್ತನ ಮತ್ತು ಗಟ್ಟಿತನ