ನೈಸರ್ಗಿಕವಾಗಿ ಹಗಲು ರಾತ್ರಿಗಳ ಒಂದು ದಿನದ ಲೆಕ್ಕದಲ್ಲಿ 365 ದಿನಗಳ ಒಂದು ವರ್ಷದ ಒಂದೊಂದೇ ನಿಲ್ದಾಣಗಳನ್ನು ದಾಟುತ್ತಾ ಸಂಜೆಯ ನಿಲ್ದಾಣ ತಲುಪಿರುವುದಕ್ಜೆ ಅತೃಪ್ತಿಯ ನಡುವೆ ಹೆಮ್ಮೆಯೂ ಇದೆ.
ಸಾಮಾನ್ಯವಾಗಿ ಶೂನ್ಯದಿಂದ ಪ್ರಾರಂಭವಾಗುವ ಜೀವನ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು.
ಜೀವ ಅಂಕುರವಾಗುವ ಘಳಿಗೆಯಿಂದ ಉಸಿರು ನಿಲ್ಲುವವರೆಗೆ ಇರುವ ಕಾಲವನ್ನು ಸರಳವಾಗಿ ಜೀವನ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ನಾವೇ ಅಧಿಪತಿಯಾದರೂ ನಮ್ಮ ಜೀವನ ಮಾತ್ರ ಬಹುತೇಕ ಪರಿಸ್ಥಿತಿಯ ಕೂಸು. ಬದುಕಿಗಾಗಿ ಹೋರಾಡುತ್ತಾ ಖಚಿತ ಸಾವಿಗೆ ಶರಣಾಗುವುದೇ ಅಂತಿಮ ಸತ್ಯ.
ಬದುಕಿನ ನಿಜವಾದ ಅರ್ಥ ಏನೇ ಇದ್ದರೂ,
ವ್ಯಾವಹಾರಿಕ ಜಗತ್ತಿನಲ್ಲಿ ಫಲಿತಾಂಶದ ಆಧಾರದಲ್ಲಿಯೇ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಭಾರತೀಯ ಸಮಾಜವನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡುವುದಾದರೆ ಅಧಿಕಾರ, ಹಣ, ಅಂತಸ್ತು, ಪ್ರಶಸ್ತಿ, ಜನಪ್ರಿಯತೆಗಳನ್ನೇ ಮಾನದಂಡಗಳಾಗಿ ಬಳಸಿ ಇವತ್ತಿನ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಅವರೇ ಆದರ್ಶ ವ್ಯಕ್ತಿಗಳು. ಅವರೇ ಬಹುತೇಕ ಜನಸಾಮಾನ್ಯರು ಜೀವನ ರೂಪಿಸಿಕೊಳ್ಳಲು ಪ್ರೇರೆಪಿಸುವ ಕನಸುಗಾರರು.
ತಂದೆ ತಾಯಿಗಳು, ಶಿಕ್ಷಕರು, ಸುತ್ತಲ ಸಮುದಾಯ ಎಲ್ಲರೂ ಇವರನ್ನೇ ಉದಾಹರಣೆ ನೀಡಿ ನೀವು ಅವರಂತೆಯೇ ಆಗಬೇಕು ಎಂದು ಒತ್ತಾಯಿಸುತ್ತಾರೆ.
ಎರಡನೆಯ ಹಂತದ ಯಶಸ್ಸು ಒಂದು ಒಳ್ಳೆಯ ಉದ್ಯೋಗ ಅಥವಾ ವ್ಯವಹಾರ, ಸ್ವಂತ ಮನೆ, ಒಂದಷ್ಟು ಆಸ್ತಿ, ಇತ್ತೀಚೆಗೆ ಒಂದು ಕಾರು, ಹೆಂಡತಿ ಮಕ್ಕಳು ಸಂಸಾರ ಹೊಂದಿರುವವರನ್ನು ಯಶಸ್ವಿ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ. ಮುಕ್ತ ಆರ್ಥಿಕ ವ್ಯವಸ್ಥೆಯೊಂದಿಗೆ ಹೆಚ್ಚು ಬೆಳವಣಿಗೆ ಕಂಡ ಈ ವರ್ಗ ತಮ್ಮ ಇಡೀ ಜೀವನವನ್ನು ಯಾವುದೇ ಅನೈತಿಕ ಬೆಲೆ ತೆತ್ತಾದರೂ, ತಮ್ಮನ್ನು ಅಪಮೌಲ್ಯಗೊಳಿಸಿಕೊಂಡಾದರೂ
ಅದನ್ನು ಲೆಕ್ಕಿಸದೆ ಆಸ್ತಿ ಹಣ ಸಂಪಾದನೆಗೆ ಪ್ರಯತ್ನಿಸುತ್ತದೆ.
ಇನ್ನು ತೀರಾ ಅಪ್ರಸ್ತುತರು ಮತ್ತು ಅತ್ಯಂತ ಕೀಳಾಗಿ ಕಾಣಲ್ಪಡುವ ಮತ್ತು ಮುಖ್ಯವಾಹಿನಿಯಿಂದ ಬಹುದೂರ ಇರುವ ಭಿಕ್ಷುಕರು, ಬೀದಿ ವೇಶ್ಯೆಯರು, ಅಲೆಮಾರಿಗಳು, ರಸ್ತೆಗಳಲ್ಲಿಯೇ ವಾಸಿಸುವರು ಇತ್ಯಾದಿಗಳು ಅತ್ಯಂತ ನಿರ್ಲಕ್ಷಿತರಾಗಿ ದಿನನಿತ್ಯದ ಊಟ ತಿಂಡಿಗಳಿಗೇ ಒದ್ದಾಡುತ್ತಾ ಬದುಕುವ ಇವರನ್ನು ಅಸಲಿಗೆ ಮನುಷ್ಯರೆಂದು ಪರಿಗಣಿಸುವುದೇ ಕಡಿಮೆ. ಅಪರೂಪಕ್ಕೆ ಸಿಗುವ ಒಳ್ಳೆಯ ಊಟ, ಬೆಚ್ಚಗಿನ ಆಶ್ರಯವೇ ಇವರಿಗೆ ಸಂಭ್ರಮ. ಇನ್ನು ಸಫಲತೆ ವಿಫಲತೆಯ ಪ್ರಶ್ನೆ ಉದ್ಭವಿಸುವುದೇ ಇಲ್ಲ.
ಆದರೆ ಇನ್ನೊಂದು ಬಹುಸಂಖ್ಯಾತ ಕೆಳ ಮಧ್ಯಮ ವರ್ಗ ಒಂದಿದೆ. ರೈತ, ಕಾರ್ಮಿಕ ಇತ್ಯಾದಿಗಳನ್ನು ಒಳಗೊಂಡಿರುವ ಜನ ಸಮುದಾಯ.
ಸಣ್ಣ ಬಾಡಿಗೆ ಮನೆಗಳಲ್ಲೋ, ವಠಾರಗಳಲ್ಲೋ, ಗ್ರಾಮೀಣ ಪ್ರದೇಶಗಳಲ್ಲಾದರೆ ಗುಡಿಸಲುಗಳಲ್ಲೋ ವಾಸಿಸುತ್ತಾ, ಇರುವ ಸ್ಥಿತಿಗಿಂತ ಕೆಳಗಿಳಿಯಲೂ ಮನಸ್ಸೊಪ್ಪದೆ, ಮೇಲೇರಲೂ ಸಾಧ್ಯವಾಗದೆ ಸದಾ ಗೊಣಗುತ್ತಾ ಸರ್ಕಾರಿ ಶಾಲೆ, ಸರ್ಕಾರಿ ನ್ಯಾಯಬೆಲೆ ಅಂಗಡಿ, ಸರ್ಕಾರಿ ಆಸ್ಪತ್ರೆ ಮೇಲೆಯೇ ಹೆಚ್ಚು ಅವಲಂಬಿತವಾಗಿ, ಚುನಾವಣಾ ಸಮಯದಲ್ಲಿ ಸಿಗುವ ನಾಲ್ಕು ಕಾಸಿಗೆ ಆಸೆಪಡುತ್ತಾ, ಹಬ್ಬ ಹರಿದಿನ ಜಾತ್ರೆಗಳನ್ನು ಸಂಭ್ರಮಿಸುತ್ತಾ, ಮದುವೆ ಮುಂಜಿ ನಾಮಕರಣಗಳನ್ನೇ ಜೀವನದ ಬಹುದೊಡ್ಡ ಸಾಧನೆಗಳೆಂಬಂತೆ ಭಾವಿಸುತ್ತಾ, ದೇವರು, ಧರ್ಮ, ಸಂಪ್ರದಾಯಗಳನ್ನು ಪಾಲಿಸುತ್ತಾ, ಜ್ಯೋತಿಷಿಗಳ ಮಾತನ್ನು ನಂಬುತ್ತಾ, ಹಣವೇ ಬದುಕು ಅದಿಲ್ಲದೆ ಬದುಕೇ ವ್ಯರ್ಥ ಎಂದು ಕಲ್ಪಿಸಿಕೊಳ್ಳುತ್ತಾ, ಅದನ್ನು ಗಳಿಸಲು ಇಡೀ ಬದುಕನ್ನು ಸವೆಸುತ್ತಾ, ಆ ಪಕ್ಷವೋ, ಈ ಪಕ್ಷವೋ,
ಪ್ರಜಾಪ್ರಭುತ್ವವೋ, ಸರ್ವಾಧಿಕಾರವೋ, ಸತ್ಯವೋ, ಅಸತ್ಯವೋ, ಒಟ್ಟಿನಲ್ಲಿ ಒಂದಷ್ಟು ಹಣ ಗಳಿಕೆಯಾದರೆ ಸಾಕು ಎಂಬ ಮನಸ್ಥಿತಿಯ ಜನರು.
ಜೈಲು, ಆಸ್ಪತ್ರೆ, ಮುಷ್ಕರ, ಬಸ್ಸು, ರೈಲು, ಬೀದಿ ಬದಿಯ ಹೋಟೆಲ್, ಸಂತೆ ಜಾತ್ರೆಗೆಳು, ಉಚಿತ ಸೀರೆ ಪಂಚೆ, ಸಮಾರಂಭಗಳು, ದೇವಸ್ಥಾನಗಳು, ಉತ್ಸವಗಳ ಜೈಕಾರಗಳಲ್ಲಿ ತುಂಬಿ ತುಳುಕುವ ಜನರೇ ಇವರು.
ಉಚಿತ ಊಟಕ್ಕೆ ಮುಗಿಬೀಳುವ, ಹೆಣ್ಣಿನ ಶೀಲಕ್ಕೆ ಅತಿಹೆಚ್ಚು ಪ್ರಾಮುಖ್ಯತೆ ನೀಡುವ, ಸಣ್ಣ ಹಣ ಆಸ್ತಿಗಾಗಿ ಕೊಲೆಮಾಡುವ, ಪ್ರೇಮ ವೈಫಲ್ಯ, ಕೌಟುಂಬಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಜನರೂ ಇವರೇ.
ಇದನ್ನೆಲ್ಲಾ ಗಮನಿಸುತ್ತಾ, ಇದರ ಭಾಗವಾಗಿ ಮುಂದಿನ ನಿಲ್ದಾಣಕ್ಕೆ ಪ್ರಯಾಣ ಸಾಗುತ್ತಿದೆ.
ಇಲ್ಲಿನ ಸಮಾಜದಲ್ಲಿ ಅತ್ಯುತ್ತಮ ಮೌಲ್ಯಗಳು, ಚಿಂತನೆಗಳು ಇದ್ದರೂ ಅವು ಪ್ರಾಯೋಗಿಕವಾಗಿ ಆಚರಣೆಗೆ ಬರದೆ ಬಹಳಷ್ಟು ವಿಫಲವಾಗಲು ಕಾರಣ ಇಲ್ಲಿನ ಆತ್ಮವಂಚಕ ಮನಸ್ಥಿತಿಗಳು. ಅಹಿಂಸೆಯ ಪ್ರತಿಪಾದನೆಯಲ್ಲಿಯೇ ಹಿಂಸೆಯ ವ್ಯಾಪಕತೆಯನ್ನು, ಹೆಣ್ಣಿನ ಪೂಜನೀಯತೆಯಲ್ಲಿಯೇ ಆಕೆಯ ಶೋಷಣೆಯನ್ನು, ಸರಳತೆಯ ನೆರಳಲ್ಲೇ ಆಡಂಬರದ ಮನೋಭಾವವನ್ನು, ಧರ್ಮದ ಪಕ್ಕದಲ್ಲೇ ಕ್ರೌರ್ಯವನ್ನು ಇಲ್ಲಿ ಕಾಣಬಹುದು.
ಸತ್ಯ, ಪ್ರೀತಿ, ತ್ಯಾಗ, ಸೇವೆ, ನಿಸ್ವಾರ್ಥ, ಕರುಣೆ, ಶ್ರಮ, ಮಾನವೀಯತೆ, ಸಮಾನತೆ ಇವು ಅದರ ನಿಜ ಅರ್ಥದಲ್ಲಿ ಇರದೇ ಒಂದು ರೀತಿ MANAGING SKILLS ನ ವ್ಯಾವಹಾರಿಕ ಆಚರಣೆ ನಮ್ಮ ಮನಸ್ಸು ಮತ್ತು ಸಮಾಜದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ.
ಆ ಕಾರಣಕ್ಕಾಗಿಯೇ ನಮ್ಮ ವ್ಯವಸ್ಥೆ ತೀರಾ ಅಧ್ಹಪತನಕ್ಕೂ ಇಳಿಯದೆ ಅಥವಾ ನೈಜ ನಾಗರೀಕತೆಯ ಕಡೆಗೂ ಸಾಗದೆ ಎಡಬಿಡಂಗಿ ಸ್ಥಿತಿಯಲ್ಲಿಯೇ ಸಾಗುತ್ತಿದೆ. ಇತ್ತೀಚಿನ ಜಾತಿ ಧರ್ಮ ಆಚರಣೆಗಳ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದನ್ನು ಸ್ಪಷ್ಟವಾಗಿ ಬಯಲು ಮಾಡುತ್ತಿದೆ. ಆರ್ಥಿಕ ಉದಾರೀಕರಣವೂ ಇಲ್ಲಿನ ಅವ್ಯವಸ್ಥೆ, ವ್ಯಕ್ತಿಗಳ ಮುಖವಾಡ ನಿಜರೂಪದಲ್ಲಿ ಪ್ರಕಟವಾಗಲು ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಅಭಿವ್ಯಕ್ತಿಯ ಪ್ರಕಾರಗಳು ಇದಕ್ಕೆ ಸಾಕ್ಷಿಯಾಗಿದೆ.
ಅತ್ಯಂತ ಮೌಲ್ಯಯುತ ಗೌರವಾನ್ವಿತ ಆದರ್ಶ ವ್ಯಕ್ತಿಗಿಂತ ಹಣ ಅಧಿಕಾರ ಹೊಂದಿದ ವ್ಯಕ್ತಿಯೇ ಹೆಚ್ಚಿನ ಮನ್ನಣೆ ಗಳಿಸುತ್ತಾನೆ. PHD ಮಾಡಿದವರಿಗಿಂತ INNOVA ಕಾರು ಹೊಂದಿದ ವ್ಯಕ್ತಿ ಹೆಚ್ಚು ಗೌರವಿಸಲ್ಪಡುತ್ತಾನೆ. ಪಂಚೆ ಟವಲ್ಲಿನ ವ್ಯಕ್ತಿಗಿಂತ ಸೂಟುಬೂಟಿನ ವ್ಯಕ್ತಿಗೆ ಮರ್ಯಾದೆ ಜಾಸ್ತಿ. ಇದು ಇಲ್ಲಿನ ಡಾಂಬಿಕ ವ್ಯವಸ್ಥೆಯ ಇನ್ನೊಂದು ಮುಖ.
ಇಂದಿನ ಅತ್ಯಂತ ಸಂಕೀರ್ಣ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೆ ವಾಸ್ತವಕ್ಕೆ ಹತ್ತಿರದ, ಜನರಿಗೆ – ಸಮಾಜಕ್ಕೆ ಹೆಚ್ಚಿನ ಉಪಯೋಗವಾಗುವ ಸತ್ಯದ ಹುಡುಕಾಟ ಅವಶ್ಯಕ.
ಆ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಿಗೆ ನಿರಂತರ ಪ್ರಯತ್ನಿಸೋಣ.
ಇಲ್ಲಿನ ನೀರು, ಗಾಳಿ, ಆಹಾರ ಸೇವಿಸಿ ಜೀವಿಸುತ್ತಿರುವ ನಾವು ಈ ಮಣ್ಣಿಗೆ ದ್ರೋಹ ಬಗೆಯುವುದು ಬೇಡ. ಯಾವುದೇ ತತ್ವ ಸಿದ್ಧಾಂತಗಳು ನಮ್ಮ ಮಾನವೀಯ, ಪ್ರಾಮಾಣಿಕ ಜೀವಪರ ಕಾಳಜಿಯನ್ನು ಅಡ್ಡಿಪಡಿಸದಿರಲಿ.
ನಮ್ಮ ಮುಂದಿನ ಗುರಿಯೂ ಕೂಡ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ, ಹಣ ಪ್ರಚಾರದ ಹಂಗಿಲ್ಲದೆ ನುಡಿದಂತೆ ನಡೆಯಲು ಪ್ರಯತ್ನಿಸುತ್ತಾ ಸತ್ಯದ ಹುಡುಕಾಟ ನಿರಂತರವಾಗಿರಲಿ.
ಹಾಗೇ ಸುಮ್ಮನೆ ಬದುಕಿನ ಇಳಿ ಸಂಜೆ ಎಂಬ ನಿಲ್ದಾಣದಲ್ಲಿ ನಿಂತು ನಮ್ಮ ಸುತ್ತಲ ವಾತಾವರಣವನ್ನು ಸರಳವಾಗಿ ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ.
ಎಂದಿನಂತೆ ಎಲ್ಲರೂ ಆತ್ಮಸಾಕ್ಷಿಗೆ ಅನುಗುಣವಾಗಿ ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿರೋಣ
ವಿವೇಕಾನಂದ. ಹೆಚ್ ಕೆ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ