ಶ್ರೀರಂಗಪಟ್ಟಣದಲ್ಲಿ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ಹೋರಾಟ ಇದೀಗ ಮತ್ತೊಂದು ಸ್ವರೂಪವನ್ನು ಪಡೆದುಕೊಂಡಿದೆ.
ಜಾಮಿಯಾ ಮಸೀದಿ ವಿರುದ್ಧ ನಡೆಯುತ್ತಿದ್ದ ಹೋರಾಟವನ್ನು ಈಗ ಹಿಂದೂ ಕಾರ್ಯಕರ್ತರು ಪೊಲೀಸರ ವಿರುದ್ಧ ಆರಂಭಿಸಿದ್ದಾರೆ
ಕಳೆದ ಭಾನುವಾರ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಅಲ್ಲ ಮಂದಿರ ಎಂದು ಸಾವಿರಾರು ಹಿಂದೂ ಕಾರ್ಯಕರ್ತರು ಸಂಕೀರ್ತನಾ ಯಾತ್ರೆಯ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿ ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ನಡೆದ ಸಂಕೀರ್ತನಾ ಯಾತ್ರೆ ಮೆರವಣಿಗೆಯ ವೇಳೆ ಗಂಜಾಂ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತನೋರ್ವ ಬಾಳೆದಿಂಡನ್ನು ಅನ್ಯಕೋಮಿನವರ ಮನೆಯ ಮೇಲೆ ಎಸೆದಿದ್ದ.
ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಪಾಂಡವಪುರ ಮೂಲದ ಶಶಾಂಕ್ ಎಂಬಾತ ಬಾಳೆದಿಂಡನ್ನು ಎಸೆದಿದ್ದು ಎಂದು ಸಿಸಿಟಿವಿ ಆಧರಿಸಿ ಶ್ರೀರಂಗಪಟ್ಟಣ ಪೊಲೀಸರು ಶಶಾಂಕ್‌ನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಪೊಲೀಸರು ಶಶಾಂಕ್‌ಗೆ 53 ಮುಸ್ಲಿಂ ರಾಷ್ಟ್ರಗಳಿವೆ.. ನಿನ್ನ ರುಂಡ-ಮುಂಡ ಕತ್ತರಿಸುತ್ತಾರೆ ಎಂದು ಬೆದರಿಸಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಹೀಗೆ ಬೆದರಿಕೆ ಹಾಕಿರುವ ಪೊಲೀಸ್‌ನನ್ನು ಸಸ್ಪೆಂಡ್ ಮಾಡುವುದರ ಜೊತೆಗೆ ಆತನ ಮೇಲೆ ಎಫ್‌ಐಆರ್ ದಾಖಲು ಮಾಡಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗ ಪ್ರತಿಭಟನೆ ನಡೆಸಿದರು
ಪೊಲೀಸರ ವಿರುದ್ಧ ಜಾಮಿಯಾ ಮಸೀದಿ ಎದುರು ನಿನ್ನೆ ರಾತ್ರಿ ಇಡೀ ಪೆಂಡಾಲ್ ಹಾಕಿಕೊಂಡು ಹಿಂದೂ ಕಾರ್ಯಕರ್ತರು ಪ್ರತಿಭಟಿಸಿದರು. ಜೊತೆಗೆ ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಪ್ರತಿಭಟನಾನಿರತ ಕಾರ್ಯಕರ್ತರನ್ನು ಮನವೊಲಿಸುವ ಕೆಲಸಕ್ಕೆ ಎಸ್ಪಿ ಯತೀಶ್ ಮುಂದಾದರೂ ಹಿಂದೂ ಕಾರ್ಯಕರ್ತರು ಮಾತ್ರ ಬೆದರಿಕೆ ಹಾಕಿದ ಪೊಲೀಸ್‌ನನ್ನು ಸಸ್ಪೆಂಡ್ ಮಾಡಿ ಆತನ ಮೇಲೆ ಎಫ್‌ಐಆರ್ ದಾಖಲು ಮಾಡುವವರೆಗೆ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದು ಮಳೆಯಲ್ಲೇ ಪ್ರತಿಭಟನೆ ಮುಂದುವರೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಸರ್ಕಲ್ ಇನ್‌ಸ್ಪೆಕ್ಟರ್ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತರ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ದೂರು ದಾಖಲಾದ ಹಿನ್ನೆಲೆ ಹಿಂದೂ ಸಂಘಟನೆಗಳು ಪ್ರತಿಭಟನೆ ಕೈ ಬಿಟ್ಟಿವೆ.