ಮದುವೆ…! ಈ ಸಂಧಾರ್ಭದಲ್ಲಿ ನನ್ನ ನೆನಪಿನ ಕೋಡಿ ಒಡೆದು ಒಂದೊಂದು ಪುಟವು ತೆರೆದು ಕೊಂಡಿತು.
ಸುಮಾರು ಐವತ್ತು ವರ್ಷದ ಹಿಂದೆ… ನಾನು ನನ್ನ ಅಣ್ಣಂದಿರು ಆಟವಾಡುತ್ತಿದ್ದೆವು. ಅಪ್ಪ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಹೀಗೆ ಆಡುವಾಗ, ನನ್ನ ಅಣ್ಣ ದುಂಧುಭಿ ನನಗೆ “ಕಪ್ಪೆ-ಕಪ್ಪೆ” ಎಂದು ರೇಗಿಸಿದ. ನಾನು ಬಿಕ್ಕಿ- ಬಿಕ್ಕಿ ಅಳಲು ಶುರು ಮಾಡಿದೆ. ಅಮ್ಮ ಓಡಿ ಬಂದು ನನಗೇ ಸಮಾಧಾನ ಮಾಡಿದಳು. ನನ್ನ ಮನ ಒಲಿಸಲು ಸ್ವರ್ಗಕ್ಕೆ ಕರೆದುಕೊಂಡು ಹೋದಳು.
ಸ್ವರ್ಗದಲ್ಲಿ ಅಮ್ಮನ ರೀತಿ ಬೇರೆ ಅಪ್ಸರೆಯರೆಲ್ಲ ನನ್ನನ್ನು ಮುದ್ದಾಡಿದರು. ಅವರೆಲ್ಲ ಸೇರಿ ನನ್ನ ಜನ್ಮದ ಕಥೆ ಹೇಳಿದರು. ಪುಟ್ಟ ಮಗುವ ಮನಸ್ಸಿಗೆ ಅರ್ಥವಾಗಿದ್ದು – ಅಪ್ಪ ಅಮ್ಮ ಹೆಣ್ಣು ಬೇಕೆಂದು ಹಂಬಲಿಸಿ ನನ್ನನ್ನು ಜನ್ಮವಿತ್ತರಂತೆ. ಆ ಕಥೆಯ ಕೆಲವು ಪದಗಳು ನನ್ನ ಮನಸಿಗೆ ನಾಟಿತು – ಶಿವ – ಪಾರ್ವತಿ – ಶಾಪ – ಭಾವೀ – ಹನ್ನೆರಡು ವರ್ಷ – ಕಪ್ಪೆ…
ಕುತೂಹಲದಿಂದ ಪಾರ್ವತಿಯ ಕಾಣಲು ಕೈಳಾಸಕ್ಕೆ ಹೋದೆ. ಗಿರಿಜೆ ನನ್ನ ಕಂಡು, “ಅರೇ, ನೀನು ಹೇಮಾಳ ಮಗಳು ತಾನೇ? ಬಾರಮ್ಮ ಕಂದ. ಎಷ್ಟು ಚಂದವಾಗಿದ್ದೀಯ. ಬಾ, ನಿನಗೆ ಹಣ್ಣು ಕೊಡುವೆ.” ಎಂದು ಪ್ರೀತಿ ತೋರಿದರು. ನನಗೂ ಅವರ ಮೇಲೆ ಗೌರವ ಹೆಚ್ಚಾಯಿತು. ಉಮ ಮಹೇಶ್ವರರು ನನಗೇ ಇಂತೆಂದರು, “ನೀನು ಧರ್ಮದ ದಾರಿಯಲ್ಲಿ ನಡೆ. ಒಬ್ಬ ಜಗದೇಕ ವೀರ ನಿನ್ನ ಕೈ ಹಿಡಿಯುವವನು. ಅವನು ನನ್ನ ಪರಮ ಭಕ್ತ. ಆದರೆ…”
ಆ ಮಹಾಬಲ ಏನೋ ಹೇಳುವಷ್ಟರಲ್ಲಿ ವಿಷ್ಣು ಅವರನ್ನು ತಡೆದರು. “ನಿನ್ನ ಹೆಸರು ಆ ಪಂಚಕನ್ಯೆ ಯರಲ್ಲಿ ಸೇರುವುದು ಅತ್ತೆಯಮ್ಮ.” ಎಂದು ಗೇಲಿ ಮಾಡಿದರು. ಅತ್ತೆನ? ನಾನು? ಇಷ್ಟು ಚಿಕ್ಕ ಹುಡುಗಿ? ಏನೋ ದೊಡ್ಡವರ ಮಾತೇ ಅರ್ಥವಾಗದು. ಎಲ್ಲ ಒಗಟೊಗಟು!
ಅಮ್ಮ ನನ್ನನ್ನು ಹುಡುಕಿ ಅಲ್ಲಿಗೆ ಬಂದಳು. ನಾವು ನಮ್ಮ ಮನೆಗೆ ಹಿಂತಿರುಗಿದೆವು. ನನ್ನ ಅಪ್ಪ ಒಬ್ಬ ದೊಡ್ಡ ವಾಸ್ತು ಶಿಲ್ಪಿ. ಅವರ ಕೆಲಸದಲ್ಲಿ ಅವರನ್ನು ಮೀರಿಸುವವರು ಇನ್ನೊಬ್ಬರಿರಲಿಲ್ಲ. ದೊಡ್ಡ ದೊಡ್ಡ ರಾಜ ಮಹಾರಾಜರು ಅವರನ್ನು ಕಾಣಲು ಬರುತ್ತಿದ್ದರು. ಅಪ್ಪನೂ ಕೆಲಸದ ಪರವಾಗಿ ಏಳೇಳು ಲೋಕ ಸುತ್ತುತ್ತಿದ್ದರು. ಹೀಗೆ ಒಂದು ಬಾರಿ ಇಂದ್ರನು ತನ್ನ ಅರಮನೆ ನವೀಕರಿಸಲು ಕರೆದನಂತೆ. ದೇವಲೋಕಕ್ಕೆ ಹೋದಾಗ, ಅಮ್ಮ ನನ್ನು ಕಂಡು, ಇಬ್ಬರಲ್ಲಿ ಪ್ರೀತಿ ಹುಟ್ಟಿ, ಮದುವೆಯಾದರಂತೆ. ಅವರ ಸಂಗಮದ ಸಾಕ್ಷಿಯಾಗಿ ನನ್ನ ಅಣ್ಣಂದಿರು ಹಾಗೂ ನಾನು ಜನ್ಮ ತಾಳಿದೆವು.
ಅಂದು ನನ್ನ ಅಪ್ಪನಿಗೆ ರಾಕ್ಷಸ ರಾಜನ ಆಸ್ಥಾನದಿಂದ ಒಂದು ಕರೆ ಬಂದಿತ್ತು. ಆತನಿಗೆ ಒಂದು ರಾಜಧಾನಿ ಕಟ್ಟಬೇಕಿತ್ತು. ಹಿಂದೆಂದೂ ಕಟ್ಟಿರ ಬಾರದು – ಮುಂದೆಂದು ಕಟ್ಟ ಬಾರದು. ಅಷ್ಟು ವೈಭವದಿಂದ ಕೂಡಿರುವಂತಹ ಬಂಗಾರದ ಭವ್ಯ ರಾಜ ಭವನ. ಅಪ್ಪ ಈ ಕೆಲಸಕ್ಕೆ ಒಪ್ಪಿದ್ದರು. ದುಡ್ಡಿನ ಆಸೆಯಿಂದಲ್ಲ. ಆ ರಾಜನ ಮೇಲಿನ ಭಯದಿಂದ.
ಒಬ್ಬ ಹೆಣ್ಣು ಮಗಳಿಗೆ ಅಪ್ಪನೆಂದರೆ ಅರಿಂದಮ. ನಮ್ಮ ಕಲ್ಪನೆಯಲ್ಲೂ ನಮ್ಮ ತಂದೆ ಸೋಲುವುದು ಊಹಿಸಲಾರೆವು. ಅಪ್ಪ ಹೆದರಿದ್ದಾರೆಂದರೆ ಆ ವ್ಯಕ್ತಿಯ ಮೇಲೆ ಕೋಪ, ಹತಾಶೆ ಉಕ್ಕಲಾರಂಭಿಸಿತು. ಕಾಣಬೇಕು ಎಂದು ಹಂಬಲಿಸಿದೆ. ಅಪ್ಪನ ಕೆಲಸ ಮುಗಿಯುವ ಹಂತದಲ್ಲಿದ್ದಾಗ ಅವಕಾಶ ಒದಗಿ ಬಂತು. ಅವರೊಡನೆ ಲಂಕೆಗೆ ಮೊದಲ ಬಾರಿಗೆ ಹೋದೆ. ಕದ್ದು – ಮುಚ್ಚಿ ಆ ಅಜಾತಶತ್ರುವನ್ನು ಕಾಣಲು ಮನ ತುಡಿಯುತ್ತಿತ್ತು. ‘ಅವರು’ ಬಂದರು. ಆ ತೇಜಸ್ಸು ನೋಡಲಾಗದೆ ತಲೆ ತಗ್ಗಿಸಿದೆ. ನನಗೆ ತಿಳಿಯದೆ ನಾನು ನಾಚಿ ನೀರಾಗಿ ಹೋಗಿದ್ದೆ. ‘ಅವರು’, “ಭಲೇ ಮಯಾಸುರ, ಭಲೇ! ನಿನ್ನ ನಿರ್ಮಾಣದ ಕೌಶಲ್ಯಕ್ಕೆ ನಾವು ಮಾರಿ ಹೋದೆವು. ಏನು ಬೇಕೋ ಕೇಳು.” ಎಂದರು. ನಾನು ನಾಚಿಕೆಯಿಂದ ಓಡಿ ಬಂದೆ.
ಕೈಲಾಸದಿಂದ ನನಗೆ ಕರೆ ಬಂದಿತ್ತು. ಒಂದು ಮಹತ್ಕಾರ್ಯಕ್ಕಾಗಿ ನನ್ನನ್ನು ಕರೆದೋಯಿದರು. ಅಲ್ಲಿ ನನಗೆ ಆಶ್ಚರ್ಯ ಕಾದಿತ್ತು. ನನ್ನ ವಿವಾಹದ ಮಾತು ಕಥೆ ನಡೆದಿತ್ತು. ಶಿವನು ನನ್ನ ತಾಯಿಯನ್ನು ಕುರಿತು, “ರಾವಣ ನನ್ನ ಪರಮ ಭಕ್ತ. ನಮ್ಮ ಹುಡುಗಿಗೆ ತಕ್ಕ ವರ.” ಎಂದರು. ‘ಅವರ’ ಹೆಸರು ಕೇಳಿ ನನ್ನ ಅಂಗಾಲು ಮಂಜಿನಲ್ಲಿ ರಂಗೋಲಿ ಹಾಕಿದವು. ‘ಅವರು’ ಬಂದರು.
“ಹೇ, ಶಿವನೆ! ನೋಡು ನನ್ನ ಭವ್ಯ ಅರಮನೆ ನಿರ್ಮಾಣವಾಯಿತು. ನನ್ನ ವರ್ಚಸ್ಸು ಏಳೇಳು ಲೋಕ ಪಸರಿಸಿದೆ. ಇಷ್ಟು ದೊಡ್ಡ ಸಾಮ್ರಾಜ್ಯಕ್ಕೆ ಗೌರಿಯೇ ತಕ್ಕ ಸಾಮ್ರಾಜ್ಞಿ. ದಯಮಾಡಿ ಕಳುಹಿಸಿ ಕೊಡು.” ಎಂದರು. ಅವರ ಮಾತಿಗೆ ಶಿವನು ಜೋರಾಗಿ ನಕ್ಕು ಬಿಟ್ಟು ನನ್ನನ್ನು ‘ಅವರ’ ಮುಂದೆ ದೂಡಿದರು. ದಶಾನನನು ನನ್ನನ್ನು ಮೇಲಿನಿಂದ ಕೆಳಗೆ ಶೃಂಗಾರಭರಿತವಾಗಿ ನೋಡಿ ಮನಸಾರೆ ಒಪ್ಪಿದರು. ನಮ್ಮಿಬ್ಬರ ವಿವಾಹ ವಿಜೃಂಭಣೆಯಿಂದ ನೆರೆವೇರಿತು. ಭಕ್ತಿಪೂರ್ವಕವಾಗಿ ನಾವಿಬ್ಬರೂ ಶಿವನ ಆಶೀರ್ವಾದ ಪಡೆದೆವು. ಆಗ ಶಿವನು, “ರಾವಣ, ಇವಳು ಮಯಾಸುರ ಹಾಗೂ ಹೇಮಾಳ ಪುತ್ರಿ, ಮಂಡೋದರಿ. ನೀನು ತಿಳಿದಂತೆ ಪಾರ್ವತಿಯಲ್ಲ.” ಎಂದರು. ಕೊಂಚ ನಿರಾಶೆಯಾದರೂ, ನನ್ನವರು ನನ್ನನ್ನು ಪ್ರೀತಿಯಿಂದ ಸ್ವೀಕರಿಸಿದ್ದರು.
ಪುಷ್ಪಕ ವಿಮಾನವೇರಿ ಸುವರ್ಣ ಲಂಕೆಗೆ ನಾವು ಹಾರಿದೆವು. ಸ್ವರ್ಗವನ್ನೆ ನಾಚಿಸುವಂತಹ ವೈಭವ. ಸತಿ – ಪತಿಯರಿಬ್ಬರು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದೆವು. ಅವರ ಪಾಂಡಿತ್ಯಕ್ಕೆ ನಾನು ಬೆರಗಾಗಿದ್ದೆ. ಅವರು ವೀಣೆ ನುಡಿಸಿದರೆ ಎಲ್ಲ ಜೀವರಾಶಿಗಳು ಆ ನಾದದಿಂದ ಕುಣಿಯುತ್ತಿದ್ದವು. ಮೋಡಗಳು ಮಳೆ ಸುರಿಸುತ್ತಿದ್ದವು. ಇಂತಹ ಪಂಡಿತನನ್ನು ಪತಿಯಾಗಿ ಪಡೆಯಲು ನಾನು ಶಿವ ಪರ್ವತಿಯರಿಗೆ ನಾನು ಸದಾ ಚಿರಋಣಿ. ನನ್ನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ನಮ್ಮ ಪ್ರೇಮದ ಸಂಕೇತವಾಗಿ ಒಬ್ಬ ಹೆಣ್ಣು ಮಗಳು ಹುಟ್ಟಿದ್ದಳು. ತುಂಬಾ ಸುಂದರವಾದ ಮಗು. ಅಶೋಕ ವನದ ಎಲ್ಲ ಹೂವು ಅವಳ ಮುಂದೆ ತೃಣಕ್ಕೆ ಸಮಾನ. ನಮ್ಮಿಬ್ಬರಿಗೂ ಅವಳೆಂದರೆ ಪಂಚ ಪ್ರಾಣ.
ಆ ಮಗುವಿಗೆ ಶಿವನ ಆಶೀರ್ವಾದ ಕೊಡಿಸಲು ಕೈಳಾಸಕ್ಕೆ ಹೊರೆಟೆವು. ಮಾರ್ಗದಲ್ಲಿ, ಕೈಳಾಸಕ್ಕೆ ಸ್ವಲ್ಪವೇ ದೂರದಲ್ಲಿ ಭೀಕರ ಭೂಕಂಪನ ಉಂಟಾಯಿತು. ಇಳೆ ಬಾಯಿ ತೆರೆದು ನಮ್ಮ ಮಗಳನ್ನು ನುಂಗಿದಳು. ಮಗಳನ್ನು ಕಳೆದುಕೊಂಡ ನಮಗೆ ದೊಡ್ಡ ಆಘಾತವಾಯಿತು. ‘ಅವರಂತೂ’ ಕುಗ್ಗಿಹೋದರು. ಅದರ ಪರಿಣಾಮವಾಗಿ ಅವರ ರಾಜಕೀಯ ಜೀವನವೂ ಕದಡಿತು. ಯಾವಾಗಲೂ ಮಲಗಿರುವ ಒಬ್ಬ ತಮ್ಮ. ಇನ್ನೊಬ್ಬ ತಾನಾಯಿತು ತನ್ನ ವಿಷ್ಣು ಪೂಜೆಯಾಯಿತು ಎಂದು ಕೂತವನು. ಈ ಇಬ್ಬರಿಂದಲೂ ನಮಗೆ ಬೆಂಬಲ ಸಿಗಲಿಲ್ಲ.
ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳಲ್ಲು ನನ್ನ ನಾದಿನಿಯ ಗಂಡ ದಂಡೆತ್ತಿ ಬಂದಿದ. ಅವಳಿಗೆ ಸದಾ ನಮ್ಮ ಮೇಲೆ ಅಸೂಯೆ. ಹೆಣ್ಣು ಮಗಳು ತವರಿಗೆ ಒಳಿತು ಬಯಸುವುದರ ಬದಲು ಸದಾ ದುರ್ಮಾರ್ಗವಾಗಿ ನಡೆಯುತ್ತಿದ್ದಳು. ‘ಇವರನ್ನು’ ಕುರಿತು ನಾನು ಹೇಳಿದೆ, “ನೋಡಿ ಮಗಳು ಹಿಂತಿರುಗಿ ಬರುವುದಿಲ್ಲ. ಆದರೆ ನೀವು ಒಬ್ಬ ರಾಜ. ನಿಮ್ಮ ಪ್ರಜೆಗಳೂ ನಿಮ್ಮ ಮಕ್ಕಳಿದ್ದ ಹಾಗೆ. ಅವರನ್ನೂ ರಕ್ಷಿಸುವುದು ನಿಮ್ಮ ಧರ್ಮ.” ಅವರಿಗೆ ಮನವರಿಕೆಯಾಗಿ ಆ ದುಷ್ಟನನ್ನು ಸಂಹರಿಸಿದರು. ನನ್ನ ನಾದಿನಿಯ ಗೋಳು ಹೇಳತೀರದು. ಅವಳಿಗೆ ತವರೆ ದಿಕ್ಕಾಯಿತು.
ಬೇರೆಲ್ಲಾ ಸುಗಮವಾಗಿ ಸಾಗುತ್ತಿತ್ತು. ನಮಗೆ ಮೂವರು ಗಂಡು ಮಕ್ಕಳಾದರು. ಮೂರ್ವರೂ ಮಹಾ ಪರಾಕ್ರಮಿ ಹಾಗೂ ವಿಧ್ವಾಂಸರಾದರು. ಒಬ್ಬನಂತೂ ಇಂದ್ರನನ್ನೇ ಗೆದ್ದು ಬೀಗಿದನು. ತಂದೆ ತಾಯಿಯರಿಗೆ ಇನ್ನೇನು ಬೇಕು? ನಮ್ಮ ಜೀವನ ನಾಲ್ಕು ಜನಕ್ಕೆ ಮಾದರಿಯಂತಾಗಿತ್ತು.
ಯಾರ ದೃಷ್ಠಿ ಬಿತ್ತೋ ಏನೋ! ಒಂದು ದಿನ ನನ್ನ ನಾದಿನಿ ಅಳುತ್ತಾ ಬಂದಳು. ಅವಳ ಮುಖವೆಲ್ಲ ರಕ್ತ ಸಿಕ್ತವಾಗಿತ್ತು. ಅವಳನ್ನು ಕಂಡೊಡನೆ ನನ್ನವರು ಗುಡುಗಿದರು. ದಪ್ಪ ದಪ್ಪ ಹೆಜ್ಜೆ ಹಾಕಿ ಎಲ್ಲೋ ಹೊರಟರು. ಹಿಂತಿರುಗುವಾಗ ಓರ್ವ ಸುಂದರ ಯುವತಿಯೊಡನೆ ಬಂದರು. ಅವಳ ಕಣ್ಣೀರು ಕಂಡರೆ ನನ್ನ ಕರುಳು ಚುರುಗುಟ್ಟಿತು. ಅವಳನ್ನು ನೋಡಿದ ಕೂಡಲೇ ಗುರುತು ಸಿಕ್ಕಿತು. ಅಯ್ಯೋ, ಇದೆಂತಹ ಅನಾಹುತಕ್ಕೆ ನಾಂದಿ ಎಂದು ಮರುಗಿದೆ.
ಇದಾದ ಬಳಿಕ ಅಗಿದ್ದೆಲ್ಲಾ ವಿನಾಶ. ಒಂದು ಕಪಿಯು ಲಗ್ಗೆ ಇಟ್ಟು ನಮ್ಮ ಲಂಕೆಯನ್ನು ಸುಟ್ಟು ಹಾಕಿತ್ತು. ನನ್ನ ಅಪ್ಪನ ಪರಿಶ್ರಮವೆಲ್ಲ ಬೂದಿಯಾಯಿತು. ಬಹಳ ಆಸಕ್ತಿಯಿಂದ ಕಟ್ಟಿದ ಲಂಕೆ. ನಮಗೆಲ್ಲ ತುಂಬಾ ಹೆಮ್ಮೆಯಿದ್ದ ಲಂಕೆ. ಅವಳ ಕಣ್ಣೀರಿನಿಂದ ಸುಟ್ಟಿ ಹೋಯಿತು. ವಿಭೀಷಣ ಆ ರಾಮನ ಕಡೆ ಸೇರಿದ್ದನಂತೆ. ಉಂಡ ಮನೆಗೆ ಎರಡು ಬಗೆಯೋ ದ್ರೋಹಿ. ನನ್ನ ರಕ್ತ ಕುದಿಯಿತು. ಎಲ್ಲೊ ಒಂದು ಮೂಲೆಯಲ್ಲಿ ನನ್ನವರ ತಪ್ಪು ನನಗೆ ತಿಳಿದಿತ್ತು. ನಾನು ಅವರನ್ನು ಕಂಡು ಹೇಳಿದೆ. “ಅವಳು ಯಾರೆಂದು ತಿಳಿದಿರಿ? ನಿಮಗೆ ಯಾಕೆ ಈ ದುರ್ಬುಧ್ಧಿ? ಅವಳ ಪತಿಯೊಡನೆ ಅವಳನ್ನು ಕಳುಹಿಸಿ ಕೊಡಿ” ಎಂದೆ.
ಅದಿಕ್ಕೆ ಅವರು, “ನನಗೆ ಗೊತ್ತು ಮಂಡೋದರಿ. ಸ್ವಲ್ಪ ಯೋಚಿಸು, ನಿನಗೆ ನಮ್ಮ ಇಂದ್ರಜಿತುವಿನ ಮೇಲೆ ಹೆಚ್ಚು ಪ್ರೀತಿ. ಯಾಕೆ ಹೇಳು? ಅವನು ನನಗಿಂತ ದೊಡ್ಡ ಸಾಧನೆ ಮಾಡಿದ್ದಾನೆ ಎಂದು ತಾನೇ. ಯಾವಾಗಲೂ ಹಾಗೆ. ನಮನ್ನು ಮೀರಿಸುವಂತಹ ಕೌಶಲ್ಯ ನಮ್ಮ ಮಕ್ಕಳಲ್ಲಿ ಕಾಣುತ್ತೇವೆ. ಆಗ ನಮ್ಮ ಜೀವನ ಸಾರ್ಥಕ. ಹಾಗೆಯೇ ನನಗೆ ಈ ಸೀತಾಪತಿ ಯಾರೆಂದು ತಿಳಿದಿದೆ. ಇದಕ್ಕಿಂತಹ ಸುಯೋಗ ನನಗೆ ಬರಲು ಸಾಧ್ಯವೇ ಇಲ್ಲ.” ಎಂದು ಪಂಚಾಂಗವನ್ನು ನೋಡುತ್ತಿದ್ದರು. ನನ್ನವರು ಮಹಾ ಬ್ರಾಹ್ಮಣ. ತನ್ನ ಶತ್ರುವಿಗೆ ತಾನೇ ರಣಕಂಕಣವನ್ನು ಕಟ್ಟಿ ಬಂದ ಮಹಾ ಪ್ರತಾಪಿ. ಇದನ್ನು ತಿಳಿದು ನನ್ನ ಜೀವನ ಧನ್ಯವಾಯಿತು. ಅವರ ಈ ಭಂಡ ಧೈರ್ಯಕ್ಕೆ ಮನ ಕಲಕಿದರೂ ಆರತಿ ಎತ್ತಿ ಕಳುಹಿಸಿದೆ. “ನಾತಿಚರಾಮಿ” ಎಂದು ಅಗ್ನಿ ಸಾಕ್ಷಿಯಾಗಿ ಕೈ ಹಿಡಿದ್ದಿದ್ದೆನಲ್ಲ.
ನನ್ನ ಮುದ್ದಿನ ಇಂದ್ರಜಿತುವನ್ನು ಮೊಸದಿಂದ ಕೊಂದರು. ‘ಅವರನ್ನು’ ಸಂಹರಿಸುವ ವಿಶೇಷ ಬಾಣವನ್ನು ಅವಿತಿಟ್ಟಿದ್ದೆ. ಕಪಟಿ ಹನುಮನು ಕದ್ದೋಯ್ದನು. ಅವರು ಹೋಗಿ ಬಿಟ್ಟರು. ಒಳಗೊಳಗೆ ಸಂತೋಷ ಅನುಭವಿಸಿದ್ದು ಶೂರ್ಪನಖ. ಕೊನೆಗೂ ತನ್ನ ಹಗೆ ಸಾಧಿಸಿಯೇ ತೀರಿದಳು. ಈಗ ಎಲ್ಲ ಶೂನ್ಯ. ನಾಲ್ಕು ದಿಕ್ಕಲ್ಲೂ ಸೂತಕದ ಛಾಯೆ.
ಆ ನನ್ನ ಮೈದುನನನ್ನು ನಾನು ವಿವಾಹವಾಗಬೇಕಂತೆ. ಉಪ್ಪು ತಿಂದ ಮನೆಗೆ ಎರಡು ಬಗೆಯುವುವವನ ಜೊತೆ ನಾನು, ನಾನು? ನಾನು ಮದುವೆಯಾಗಲಾರೆ. ಬಹುಶಃ ಮೊದಲಿನಿಂದಲೂ ಅವನು ನನ್ನ ಮೋಹಿಸಿದ್ದಾನೋ ಏನೋ! ಶೂರ್ಪನಖಳ ಗಂಡ ದಂಡೆತ್ತಿ ಬಂದಾಗ ನಾನು ಆಡಿದ ಮಾತು ನೆನಪಾಯ್ತು. ನಾವು ರಾಜ ಮನೆತನದವರು. ನಮಗೆ ರಾಜ್ಯದ ಪ್ರತಿ ಕೆಲವು ಕರ್ತವ್ಯವಿರುತ್ತದೆ. ನಾನು ಈ ರಾಜ್ಯದ ಸಾಮ್ರಾಜ್ಣಿ. ಈ ರಾಜ್ಯದ ಭವಿಷ್ಯಕ್ಕಾಗಿ ಇದು ಅವಶ್ಯಕ. ಆದರೆ ಒಂದಂತೂ ಸತ್ಯ. ನಾನು ಇನ್ನೂ ಮುಂದೆ ರಾಣಿಯೇ ಹೊರತು, ಯಾವುದೇ ಕಾರಣಕ್ಕೂ ಅವನ ಹೆಂಡತಿಯಾಗುವುದಿಲ್ಲ. ಇದೆ ನನ್ನ ಕಡೆಯ ನಿರ್ಧಾರ. ವಿಧವೆಯಾಗಿ ಆ ಶಿವನಿಗೆ ಮುಖ ತೋರಿಸಲಾರೆ. ಆದುದರಿಂದ ಈ ಕಲ್ಯಾಣಕ್ಕೆ ನನ್ನ ಅಸ್ತು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)