ಗಣೇಶ ಚೌತಿಯ ಆಚರಣೆ ಮತ್ತು ಮಹತ್ವ
ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ಥ ಜಂಬೂ ಫಲಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದ ಪಂಕಜಂ
ಗಜವದನ,ಪಾರ್ವತಿನಂದನ ಭೂತಗಣಾದಿಗಳಿಂದ ಸೇವಿಸಲ್ಪಡುವ ಮಹಾಗಣಪತಿ, ಹಣ್ಣುಗಳ ಸಾರವನ್ನು ಸವಿದು,ಭಕುತರ ಕಷ್ಟಗಳನ್ನು ನಾಶಮಾಡುವ ವಿಘ್ನನಿವಾರಕನ ಪಾದ ಕಮಲಗಳಿಗೆ ನಮಿಸುತ್ತಾ,ಗಣೇಶ ಚೌತಿಯ ವಿಶೇಷತೆಯನ್ನು ತಿಳಿಯೋಣ.
ಪ್ರಥಮ ಪೂಜಿತ ವರಸಿದ್ಧಿ,ವಿನಾಯಕ ಗೌರಿನಂದನ, ಈಶಸುತ ಗಣೇಶನ ಮಹಿಮೆಯನ್ನು ಕೊಂಡಾಡುತ್ತಾ ಭಾದ್ರಪದ ಚೌತಿಯಂದು ದೇಶ ವಿದೇಶಗಳಲ್ಲಿಯೂ ವಿಜೃಂಭಣೆಯಿಂದ ಪೂಜೆಮಾಡುತ್ತಾರೆ.ಶ್ರಾವಣ ಕಾಲಿಟ್ಟಾಗಲೇ ಜನರಿಗೆ ಭಾದ್ರಪದ ಗಣೇಶಚೌತಿಯ ಆಚರಣೆಯ ಸಂಭ್ರಮೋತ್ಸಾಹ ಮನದಲ್ಲಿ ಮೂಡಿರುತ್ತೆ.ಅದರಲ್ಲೂ ಮಕ್ಕಳಿಗಂತೂ ಗಣೇಶ ಚೌತಿ ಎಂದರೆ ಬೇರೆ ಹಬ್ಬಕ್ಕಿಂತಲೂ ಸಡಗರ.ಸುಂದರ ಗಣಪನ ಮೂರ್ತಿಯನ್ನು,ಗಣಪನ ಮೂರ್ತಿಮಾಡುವವರಲ್ಲಿ ,ಮುಂಚಿತವಾಗಿ ಕಾದಿಟ್ಟುಕೊಂಡು,ಗಣೇಶ ಚೌತಿ ಆಚರಿಸಲು ಹಂಬಲಿಸಿ ಕಾಯುವರು.
ಇಂತಹ ಅನುಪಮ ಮಹಿಮ ,ವಿದ್ಯಾದಾಯಕ,ಬುದ್ಧಿಪ್ರದಾಯಕ ಕರಿವದನ ಗಣಪ ಮೂರ್ತಿಯಾದದ್ದು ಹೇಗೆಂದು ಪುರಾಣ ಕಥೆಗಳ ಉಲ್ಲೇಖದಂತೆ ಎಲ್ಲರಿಗೂ ತಿಳಿದಿರುವುದೇ..
ಶಿವನರಸಿ ಗೌರಿ ಕೈಲಾಸದಲಿ ತನ್ನ ಏಕಾಂಗಿತನವ ದೂರಮಾಡಲು ಮಣ್ಣಿನಲಿ ಪುಟ್ಟ ಮೂರ್ತಿಯ ನಿರ್ಮಿಸಿ ಜೀವಕೊಟ್ಟು ತನ್ನ ಮಗನೆಂದು ಲಾಲಿಸಿ,
ಒಮ್ಮೆ ಸ್ನಾನಕ್ಕೆ ತೆರಳಿದಾಗ ಯಾರನ್ನೂ ಒಳಗೆ ಬಿಡದಂತೆ ಆದೇಶವಿತ್ತಳು.ಕೈಲಾಸದೊಡೆಯ ಶಿವ
ಸಂಚಾರ ಮುಗಿಸಿ ಬಂದಾಗ,ಬಾಲಕ ತಡೆದು ನಿಲ್ಲಿಸಿದ.
“ಅಮ್ಮನ ಆಜ್ಞೆ ಒಳಗೆ ಬಿಡಲಾರೆನೆಂದು”.ತನ್ನನ್ನೇ
ತಡೆದನೆಂಬ ಕೋಪದಲ್ಲಿ ಪರಶಿವ ಬಾಲಕನ ತಲೆತರಿದ.
ಗೌರಿದೇವಿ ರುಂಡವಿಲ್ಲದ ಮಗನ ದೇಹ ನೋಡಿ
ದು:ಖದಿಂದ ಬಾಲಕನಿಗೆ ಪುನಃ ಪ್ರಾಣ ನೀಡಲು
ಆಗ್ರಹಿಸಲು,ಶಿವನ ಆದೇಶದಂತೆ ,ಅವನ ಗಣಗಳು
ಉತ್ತರ ದಿಕ್ಕಿನಲ್ಲಿ ಮಲಗಿದ ಆನೆಯ ತಲೆಯನ್ನೇ
ತಂದಾಗ,ಅದನ್ನೇ ಬಾಲಕನಿಗೆ ಜೋಡಿಸಲು,ತಟ್ಟನೆ
ಜೀವಿತನಾದ ಗೌರಿ ಕುವರ.ಗಜದ ತಲೆ ಹೊಂದಿದವ
ಗಜವದನನಾದ.ದೇವಾನುದೇವತೆಗಳು
ಹರಸಿ ಒಬ್ಬೊಬ್ಬರು ಒಂದು ಶಕ್ತಿ ಅವನಿಗೆ ದಯಪಾಲಿಸಿ
ಸರ್ವಕಾರ್ಯದಲ್ಲೂ ಪ್ರಥಮ ಪೂಜಿನಾಗುವಂತೆ
ವರವಿತ್ತರು.ಪ್ರಮಥ ಗಣಗಳ ಒಡೆಯನನ್ನಾಗಿಸಿದ
ಪರಮೇಶ್ವರ ಮಗನಿಗೆ ಗಣಪತಿ ಎಂದು ಕರೆದ.
ಅಂದಿನಿಂದ ಜಗತ್ತಿನಲ್ಲಿ ಮೊದಲ ಪೂಜೆ ಗಣಪನಿಗೆ.
ಬ್ರಹ್ಮದೇವ ಕೂಡ ತನ್ನ ಸೃಷ್ಟಿ ಕಾರ್ಯವನ್ನು ನಿರ್ವಿಘ್ನವಾಗಿ ನಡೆಸಿಕೊಡಬೇಕೆಂದು ಗಣಪನಿಗೆ ಬೇಡಿದ.ಇಂದ್ರಾದಿ ದೇವತೆಗಳು ಕೂಡ ಗಣಪನಿಗೆ
ಮೊದಲ ಪೂಜೆ ಸಲ್ಲಿಸಿದರು.
ಗಣಪತಿ ಹೀಗೇ ತಾನು ಪ್ರಥಮ ಪೂಜಿತನೆನಿಸಿ
ಸುರಲೋಕ ನರಲೋಕದಲ್ಲಿ ಸರ್ವರಿಂದ ಪೂಜೆಗೊಳ್ಳುವ ದೇವ.
ಜಗತ್ತನ್ನು ಸುತ್ತಿ ಬಂದವರಿಗೆ ಬಹುಮಾನವೆಂಬ ಮಾತು ಪರಮೇಶ್ವರ, ಪಾರ್ವತಿ ,ಷಣ್ಮುಖಮತ್ತು ಗಣಪತಿಗೆ ಹೇಳಲು ಕುಮಾರ ನವಿಲೇರಿ ಹೊರಟೇಬಿಟ್ಟ.ಆದರೆ ಜಾಣ ಗಣಪತಿ,ತಂದೆ ತಾಯಿಯರೇ ನನಗೆ ಜಗತ್ತು ಎಂದು ಮೂರು ಪ್ರದಕ್ಷಿಣೆ ಬಂದು,ಮಾತಾಪಿತೃಗಳು ಎಲ್ಲಕ್ಕಿಂತ ಹೆಚ್ಚೆಂದು ತೋರಿಸಿದವ.ಮಾತೃವಾಕ್ಯವನ್ನು ಪಾಲಿಸಿದವ.
ಹೀಗೆ ಮಹಾಗಣಪತಿಯ ಬಗ್ಗೆ ಬಹಳ ಕಥೆಗಳಿವೆ.
ಒಮ್ಮೆ ಲಂಬೋದರ ಗಣಪ ಸಂಚಾರದಲ್ಲಿರಲು,ತಾನೇ ಸುಂದರನೆಂಬ ಅಹಂಕಾರದ ಚಂದಿರ,ವಿನಾಯಕನ
ಹೊಟ್ಟೆ ನೋಡಿ ಅಪಹಾಸ್ಯ ಮಾಡಿದನಂತೆ ಆಗ
ಚಂದ್ರನಿಗೆ ಗಣಪತಿ ಶಾಪವಿತ್ತ.ಗರ್ವ ಅಹಂಕಾರದಿಂದ
ಮೆರೆವ ನಿನ್ನನ್ನು “ಭಾದ್ರಪದ ಚೌತಿಯಂದು ಯಾರು
ನೋಡುವರೋ ಅವರಿಗೆ ಮಿಥ್ಯಾಪವಾದ ಉಂಟಾಗಲಿ
ಎಂದು” ನಂತರ ಚಂದ್ರ ತನ್ನ ಶಾಪವಿಮೋಚನೆಗಾಗಿ
ತಪ್ಪಾಯಿತೆಂದು ಬೇಡಿಕೊಳ್ಳಲು,ವಿನಾಯಕ ಕರುಣೆಯಿಂದ ಯುಗಾದಿಯ ಬಿದಿಗೆ ಚಂದ್ರ ದರ್ಶನಮಾಡಿದರೆ ಮತ್ತು ಸ್ಯಮಂತಕೋಪಾಖ್ಯಾನ
ಕಥೆ ಓದಿದರೆ,ಕೇಳಿದರೆ ಮಿಥ್ಯಾಪವಾದ ದೂರಾಗುವುದೆಂದು ವಿಶಾಪ ನೀಡಿದ.ಅಂದಿನಿಂದ
ಇಂದಿನವರೆಗೂ ಭಾದ್ರಪದ ಚೌತಿ ವಿನಾಯಕ ಚೌತಿಯ
ಆಚರಣೆ ಅಮೋಘವಾಗಿ ನಡೆಯುತ್ತಿದೆ.ದಕ್ಷಿಣ
ಭಾರತದಲ್ಲಿ ಸುಮಂಗಲಿಯರು ಭಾದ್ರಪದ ತದಿಗೆ
ಸ್ವರ್ಣಗೌರಿ ವ್ರತ ಆಚರಿಸುತ್ತಾರೆ.ತವರಿಗೆ ಮಗಳು
ಬಂದಂತೆ ಭಾವಿಸಿ ಗೌರೀದೇವಿಗೆ ಭವ್ಯ ಸ್ವಾಗತಕೋರಿ
ಮುತೈದೆ ಬಾಗಿನ ನೀಡುತ್ತಾರೆ.ಮಾರನೇ ದಿನವೇ
ಗಣೇಶ ಚೌತಿ.ಅಮ್ಮನನ್ನು ಕರೆದೊಯ್ಯಲು ಮಗ ವಿನಾಯಕ ಬರುವನೆಂದು,ಗಣಪನನ್ನು ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಕರೆತಂದು,ದಿವ್ಯವಾದ ಮಂಟಪದಲ್ಲಿ ಪ್ರತಿಷ್ಟಾಪಿಸಿ
ಹೂವು ತೋರಣ ಬಾಳೆಕಂಬದಲ್ಲಿ ಅಲಂಕಾರ ಮಾಡಿ
ನಾನಾ ಗೆಜ್ಜೆವಸ್ತ್ರ,ಹಾರಾದಿಗಳು,ಗರಿಕೆ,ಅರ್ಕ ಪುಷ್ಪ ಗಳಿಂದ ,ಅನೇಕ ಫಲ,ಭಕ್ಷ್ಯಭೋಜ್ಯ,ಮೋದಕ,
ಕಡುಬುಗಳು,ಪಂಚಕಜ್ಜಾಯಗಳನ್ನು ಮೋದಕ
ಪ್ರಿಯ ಗಣಪನಿಗೆ ನೈವೇದ್ಯಮಾಡಿ,ಗಾಯನ,ನರ್ತನ
ಸೇವೆ ಮಾಡುತ್ತಾರೆ.ಗಣೇಶ ಚೌತಿ ಎಂದರೆ ಮಹಾ
ಸುದಿನ.ಮಕ್ಕಳು ,ಹಿರಿಯರು,ಬಡವ,ಶ್ರೀಮಂತರೆಂಬ
ಭೇದವಿಲ್ಲದೆ ಭಕ್ತಿಯ ಮಹಾಪೂರದಲ್ಲಿ ವಿದ್ಯಾಧಿಪ
ಗಣಪನನ್ನು ಆರಾಧಿಸಿ ಭಜಿಸಿ,ಕಷ್ಟಗಳನ್ನು ನೀಗಿಸಿ
ವಿಘ್ನ ನಿವಾರಿಸಿ,ವಿದ್ಯೆ,ಬುದ್ಧಿ,ಯಶಸ್ಸು ಕರುಣಿಸು
ಎಂದು ಸುಮುಖನಿಗೆ ಬೇಡುತ್ತಾರೆ.
ಇಂತಹ ವಿಶೇಷ ದಿನದಂದು ವಿನಾಯಕನ ವ್ರತಮಾಡಿ
ಮಹಾಭಾರತದ ಧರ್ಮರಾಯ ಕುರುಕ್ಷೇತ್ರದಲ್ಲಿ
ವಿಜಯಪಡೆದನೆಂದು ಪುರಾಣ ಕಥೆಯ ಉಲ್ಲೇಖವಿದೆ.
ಕುಮಾರ ಸ್ವಾಮಿಯು ಪರಮೇಶ್ವರನಿಗೆ ಯಾವ ವ್ರತ
ಮಾಡಿದರೆ ವಿಜಯ ಯಶಸ್ಸು ಸರ್ವಮಂಗಳವು
ಉಂಟಾಗುವುದು ಎಂದು ತಂದೆ ಪರಮೇಶ್ವರನಲ್ಲಿ
ಕೇಳಿದಾಗ, ಗಣೇಶನ ವ್ರತ, ಭಾದ್ರಪದ ಚೌತಿ ಮಾಡಿದರೆ ಮಂಗಳವಾಗುವುದು ಎಂದು ಶಿವ ಹೇಳಿದ್ದನ್ನು ಸನತ್ ಕುಮಾರ ಋಷಿಗಳು ಧರ್ಮರಾಯನಿಗೆ ಹೇಳಿದಾಗ ಹಾಗೇ ಮಾಡಿದನಂತೆ ಯುಧಿಷ್ಠಿರ.
ಇನ್ನು ಚೌತಿಯಂದು ಚಂದ್ರನ ನೋಡಿದ ದೋಷ
ಶ್ರೀ ಕೃಷ್ಣನಿಗೂ ತಪ್ಪಲಿಲ್ಲ.ಸ್ಯಮಂತಕ ಮಣಿ ಕದ್ದನೆಂಬ
ಮಿಥ್ಯಾಪವಾದ ಹೊಂದಿದ. ಕೊನೆಗೆ ಗಣಪತಿ ವ್ರತ ಮಾಡಿದ ನಂತರವೇ ಪರಿಹಾರವಾದದ್ದು.ಹಾಗಾಗಿ ಗಣೇಶ ಚೌತಿಯಂದು ಸ್ಯಮಂತೋಪಾಖ್ಯಾನ ಕಥೆ ಕೇಳಿದರೆ ಅಪವಾದ ಪರಿಹಾರವಾಗುತ್ತೆಂದು ಸ್ವಯಂ ಗಣಪತಿಯೇ ಅನುಗ್ರಹಿಸಿದ್ದಾನೆನ್ನುವರು.
ಈ ಸ್ಯಮಂತೋಕೋಪಾಖ್ಯಾನ ಶ್ಲೋಕವನ್ನು ಚೌತಿ ಯಂದು ಹೇಳಿಕೊಳ್ಳುತ್ತಾರೆ.
“ಸಿಂಹ:ಪ್ರಸೇನಮವಧೀತ್ ಸಿಂಹೋ ಜಾಂಬವತಾಹತ: !ಸುಕುಮಾರಕ ಮಾರೋದೀ:
ತವಹ್ಯೇಷ ಸ್ಯಮಂತಕ:!
ಇನ್ನು ಗಣಪತಿ ಪೂಜೆಯನ್ನು ಅವರವರ ಶಕ್ತ್ಯಾನುಸಾರ
ಭಕ್ತಿಯಿಂದ ಜನರು ಆಚರಿಸುವರು.ಬಂಗಾರ,ಬೆಳ್ಳಿ,
ಅಥವಾ ಮಣ್ಣಿನ ಮೂರ್ತಿಯಾದರೂ ಸರಿ,ಭದ್ರವಾದ
ಮಂಟಪ ಸ್ಥಾಪಿಸಿ,ಆಹ್ವಾನಿಸಿ,ಪ್ರಾಣ ಪ್ರತಿಷ್ಠೆ ಮಾಡಿ,
ಸರಿಯಾದ ಪೂಜಾವಿಧಾನಗಳಿಂದ ಮಂಗಳ ದ್ರವ್ಯ,
ಫಲ ಪುಷ್ಪಗಳಿಂದ ,ಗರಿಕೆಗಳಿಂದ ಪೂಜಿಸಿ,
ಇಪ್ಪತ್ತೊಂದು ಮೋದಕ ಕಡುಬುಗಳನ್ನು ನಿವೇದಿಸಿ
ಮಂತ್ರ ,ಗಾಯನ, ನರ್ತನ,ಸ್ತೋತ್ರಗಳಿಂದ,
ಶ್ಲೋಕಗಳನ್ನು ಹೇಳಿ,ಇಪ್ಪತ್ತೊಂದು ನಮಸ್ಕಾರ
ಗಜಮುಖನಿಗೆ ಸಲ್ಲಿಸಿ,ಬಂಧುಮಿತ್ರರೊಡನೆ ಭುಂಜಿಸಬೇಕು.ಸಂಜೆ ಭಕ್ತಿಯಿಂದ ಗಣೇಶನ ಪೂಜೆ
ಆರತಿ ಮಾಡಿ ಸ್ಯಮಂತೋಕೋಪಾಖ್ಯಾನ ಓದಿ
ಗಣಪತಿ ವಿಸರ್ಜನೆ ಮಂತ್ರದಿಂದ ಮಾಡಬೇಕು.
ಇನ್ನು ಗಣಪನಿಗೆ ಗರಿಕೆ ಏರಿಸುವುದೇಕೆ ಎಂಬುದಕ್ಕೆ
ಕಥೆ ಇದೆ.ಆ ಕಾಲದಲ್ಲಿ ಅನಲಾಸುರ ಎಂಬ ರಾಕ್ಷಸ
ಎಲ್ಲರಿಗೂ ತುಂಬಾ ಹಿಂಸೆ ಕೊಡುತ್ತಿದ್ದನಂತೆ,ಆಗ
ಮಹಾಗಣಪತಿ, ಅವನೊಡನೆ ಹೋರಾಡಿ ಕೊನೆಗೆ
ಅವನನ್ನು ನುಂಗಿಬಿಟ್ಟನಂತೆ.ಆಗ ಉರಿ ಹೊಟ್ಟೆಯುಬ್ಬರದಿಂದ ಒದ್ದಾಡುವ ಅವನ ತಲೆ
ಮೇಲೆ ಋಷಿ ಮುನಿಗಳು ಇಪ್ಪತ್ತೊಂದು ಗರಿಕೆ
ಇಟ್ಟರಂತೆ,ಗಣಪತಿಯ ಉರಿ ಪ್ರಕೋಪ ಆಗ ಶಾಂತವಾಯಿತೆಂದು ಕಥೆಯಿದೆ.ಹಾಗಾಗಿ ಗರಿಕೆ ಪ್ರಿಯ
ನೆಂದು ಹೇಳುವರು.
ಗಣೇಶ ಚೌತಿಯ ಆಚರಣೆ ಧಾರ್ಮಿಕತೆಯ ಜೊತೆಗೆ ರಾಷ್ಟ್ರದ ಏಕೀಕರಣ,ಭ್ರಾತೃತ್ವ, ಭಾವೈಕ್ಯತೆ ಮೂಡಿಸುವ ಹಬ್ಬ.ಸ್ವಾತಂತ್ರ್ಯ ಪೂರ್ವದಲ್ಲಿ
ಭಾರತೀಯರನ್ನು ಒಗ್ಗೂಡಿಸಲು ಸ್ವಾತಂತ್ರ್ಯ ಹೋರಾಟಗಾರ, ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚೌತಿಯ ಆಚರಣೆ ಮೊಟ್ಟಮೊದಲು
1893 ರಲ್ಲಿ ಸಾರ್ವಜನಿಕವಾಗಿ ಆಚರಣೆಗೆ ತಂದರು. 1894 ರಲ್ಲಿ ಎಲ್ಲರೊಂದಾಗಿ ವಿಜೃಂಭಣೆಯಿಂದ ಹಬ್ಬ ಆಚರಿಸುವುದರ ಜೊತೆಗೆ ನಾಡಿನ ರಕ್ಷಣೆಗಾಗಿ ದುಡಿಯುವಂತೆ ಪ್ರೇರೇಪಿಸಿದರು.
ಹಾಗಾಗಿ ಗಣೇಶ ಚೌತಿ ಜಾತಿ ಮತಗಳನ್ನು ಮೀರಿದ
ಸೌಹಾರ್ದತೆಯ ಹಬ್ಬ.
ಸರ್ವಶ್ರೇಷ್ಠ ಮಹಾಕಾಯ ಗಣಪತಿಯ ಹಬ್ಬವನ್ನು
ವಿಜೃಂಭಣೆಯಿಂದ ಆಚರಿಸೋಣ.ಆದರೆ ಪರಿಸರ
ಹಾಳಾಗದಂತೆ,ಶಬ್ಧಮಾಲಿನ್ಯವಾಗದಂತೆ ಸಹಜ ಸುಂದರ ಅಲಂಕಾರ,ಹಿತಮಿತವಾದ ಸಂಗೀತ ನಾಟ್ಯ,
ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ,ವಿದ್ಯಾಧಿಪ
ಹರಸುವಂತೆ ನಡೆದುಕೊಳ್ಳೋಣ.ಒಗ್ಗಟ್ಟಾಗಿ
ರಾಷ್ಟ್ರದ ಸನಾತನ ಧಾರ್ಮಿಕ ಪದ್ಧತಿಗಳನ್ನು ನಡೆಸಲು
ಯುವಪೀಳಿಗೆಗೆ ಅರಿವು ಮೂಡಿಸೋಣ.
ಗಣೇಶ ಚೌತಿ ಸರ್ವರಿಗೂ ಮಂಗಳವನ್ನು ಉಂಟುಮಾಡಲಿ.ಸಿದ್ಧಿವಿನಾಯಕ ವಿಘ್ನಗಳನ್ನು
ನಿವಾರಿಸಿ ಒಳ್ಳೆಯ ಕಾರ್ಯಗಳನ್ನು ನಡೆಸಿಕೊಡಲಿ.
- ಆರ್.ಬಿ.ಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ
- ನಟ ದರ್ಶನ್ಗೆ ಹೈಕೋರ್ಟ್ ಮಧ್ಯಂತರ ಜಾಮೀನು ವಿಸ್ತರಣೆ: ಬಿಗ್ ರಿಲೀಫ್
- ಪ್ರೊ.ವಿ.ಕೆ.ನಟರಾಜ್ ನಿಧನ
- ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ಚಿರತೆ
- ಮನೆಯಲ್ಲೇ ಬಾಂಬ್ ತಯಾರಿಕೆ ವೇಳೆ ಸ್ಫೋಟ: ಮೂವರು ದುರ್ಮರಣ
More Stories
” ಕರ್ಮ ರಿಟರ್ನ್ಸ್ ” ಅಂದ್ರೆ ಇಷ್ಟೇ ನೋಡಿ…..
ಸುಬ್ರಹ್ಮಣ್ಯ ಷಷ್ಠಿ
ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ (ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಕ್ಷೇತ್ರ ಪರಿಚಯ )