ಪ್ರತಿಭಟನೆಯ ಹೊಸ ಅಸ್ತ್ರ; ಮಂಡ್ಯದ ಚಡ್ಡಿ ಮೆರವಣಿಗೆ

Team Newsnap
5 Min Read
pic credits: facebook.com
Kodase pic for Blurb
ಲಕ್ಷ್ಮಣ ಕೊಡಸೆ.

ಸ್ವಾತಂತ್ರ್ಯಾನಂತರ ನಡೆದ ಜನಾಂದೋಲನಗಳಲ್ಲಿ ಮಂಡ್ಯ ಜಿಲ್ಲೆಯದು ಗಮನಾರ್ಹವಾದ ಕೊಡುಗೆ. 1975-77 ರ ಅವಧಿಯಲ್ಲಿ ನಡೆದ ಬೃಹತ್ ಜನಾಂದೋಲನ ವರುಣಾ ನಾಲೆಗೆ ಸಂಬಂಧಿಸಿದ್ದು. ಆಗಿನ ಮೈಸೂರು ಜಿಲ್ಲೆಯ ಚಾಮರಾಜನಗರ ಪ್ರದೇಶಕ್ಕೆ ಕುಡಿಯುವ ನೀರಿನ ಸಲುವಾಗಿ ಕೃಷ್ಣರಾಜಸಾಗರದಿಂದ ವರುಣಾ ಮೂಲಕ ನೀರನ್ನು ಒಯ್ಯುವ ಯೋಜನೆ ಅದು. ಅರಸರ ವಿರುದ್ಧ ಅವರ ಪಕ್ಷದಲ್ಲಿಯೇ ಇದ್ದ ಮಂಡ್ಯದ ಮುಖಂಡರು ವರುಣಾ ನಾಲೆ ಆದರೆ ಮಂಡ್ಯದ ರೈತರಿಗೆ ನೀರಿನ ಕೊರತೆ ಆಗುತ್ತದೆ ಎಂದು ಗುಲ್ಲು ಎಬ್ಬಿಸಿದರು. ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂದು ಕಾಲೇಜು ವಿದ್ಯಾರ್ಥಿಗಳಲ್ಲಿ ಸುದ್ದಿ ಹಬ್ಬಿಸಿದಾಗ ವಿದ್ಯಾರ್ಥಿಗಳು ಸಂಘಟಿತರಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಂಡ್ಯ ಕ್ಲಬ್ನಲ್ಲಿ ವಿಶ್ರಮಿಸುತ್ತಿದ್ದ ಕೆ.ವಿ.ಶಂಕರಗೌಡರಿಗೆ ಮುತ್ತಿಗೆ ಹಾಕಿದರು. ಕಾಂಗ್ರೆಸ್ಸಿನಲ್ಲಿಯೇ ಇದ್ದರೂ ಅವರು ನೇಪಥ್ಯಕ್ಕೆ ಸರಿದಿದ್ದರು. ಅವರು ಹೋರಾಟದ ಮುಂಚೂಣಿಗೆ ಬಂದರು. ಅರಸರ ಸಂಪುಟದಲ್ಲಿದ್ದರೂ ಆ ವೇಳೆಗೆ ಅಂತರ ಕಾಯ್ದುಕೊಂಡಿದ್ದ ಎಸ್.ಎಂ.ಕೃಷ್ಣ ಇತರ ಕೆಲವು ಹಿರಿಯ ಸಚಿವರೊಂದಿಗೆ ಸೇರಿ ರಾಜೀನಾಮೆ ಸಲ್ಲಿಸಿ ಅರಸರಿಗೆ ಬಿಕ್ಕಟ್ಟು ಸೃಷ್ಟಿಸಿದರು. ಜಿಲ್ಲೆಯ ಜನರ ಎದುರು ತಮ್ಮ ರಾಜಕೀಯ ವ್ಯಕ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಅವರು ಸರ್ಕಾರದಿಂದ ಹೊರಬಂದರು. ಅವರೊಂದಿಗೆ ಹಿರಿಯರಾದ ಹುಚ್ಚಮಾಸ್ತಿಗೌಡರು, ಕೆ.ಎಚ್.ಪಾಟೀಲರು, ಎನ್.ಚಿಕ್ಕೇಗೌಡರು ಸೇರಿದಂತೆ ಎಂಟು ಮಂದಿ ಸಚಿವರು ರಾಜೀನಾಮೆ ಸಲ್ಲಿಸಿದರು. ಎಸ್.ಎಂ.ಕೃಷ್ಣ ಒಂದು ಹೆಜ್ಜೆ ಮುಂದೆ ಹೋಗಿ ಅರಸರನ್ನು ಬೆಂಬಲಿಸಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಾಗಿ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಒಂದು ದಿನದ ಉಪವಾಸಕ್ಕೂ ಕುಳಿತರು. ಶಾಮಿಯಾನದ ಅಡಿಯಲ್ಲಿ ದಪ್ಪನೆಯ ಹಾಸುಗೆಗಳನ್ನು ಹಾಸಿಕೊಂಡು ಕೃಷ್ಣ ಅವರು ಒಂದು ದಿನದ ಉಪವಾಸ ಕುಳಿತ ಚಿತ್ರ ಮತ್ತು ವರದಿ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಯಿತು. ಕೃಷ್ಣ ಅವರ ಪ್ರಾಯಶ್ಚಿತ್ತ ಉಪವಾಸದ ಬಗ್ಗೆ ಸ್ಥಳೀಯ ಮುಖಂಡರಲ್ಲಿಯೇ ಸಹಾನುಭೂತಿ ಇರಲಿಲ್ಲ. ಮಂಡ್ಯದಿಂದ ಪ್ರಕಟವಾಗುತ್ತಿದ್ದ ರಮೇಶ ಹುಲ್ಲುಕೆರೆ ಅವರ `ವೀಕ್ಷಕ’ ಪತ್ರಿಕೆ `ಕೃಷ್ಣ ಅವರು ಆರೋಗ್ಯದ ಕಾರಣಕ್ಕೆ ಇಲ್ಲಿ ಉಪವಾಸ ಕೂರುವ ಅಗತ್ಯ ಇರಲಿಲ್ಲ. ಎನಿಮಾ ತೆಗೆದುಕೊಂಡಿದ್ದರೆ ಸಾಕಿತ್ತು’ ಎಂದು ಬರೆದಿತ್ತು. ಆದರೂ ವರುಣಾ ನಾಲೆ ವಿರುದ್ಧ ಹೋರಾಟ ತೀವ್ರವಾಯಿತು. ದಿನವೂ ಸರದಿ ಉಪವಾಸ ನಡೆಯುತ್ತಿತ್ತು. ಸತ್ಯಾಗ್ರಹ ಶಿಬಿರಕ್ಕೆ ಹೋಗಿ ಆ ದಿನ ಯಾರು ಯಾರು ಉಪವಾಸ ಕುಳಿತಿದ್ದಾರೆ ಎಂದು ಅವರ ಹೆಸರುಗಳನ್ನು ನಾವು ಪತ್ರಕರ್ತರು ಬರೆದುಕೊಂಡು ಬರುತ್ತಿದ್ದೆವು.
ಆಗ ಮಂಡ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದವರು ಚಿರಂಜೀವ್ ಸಿಂಗ್. ದೇವರಾಜ ಅರಸರ ಆಪ್ತ ಕಾರ್ಯದರ್ಶಿ ಜೆ.ಸಿ.ಲಿನ್ ಅವರಿಗೆ ಸಹಾಯಕ ಅಧಿಕಾರಿಯಾಗಿ ಕೆಲವು ವರ್ಷ ಕೆಲಸ ಮಾಡಿದ್ದ, ಅರಸರ ವಿಶ್ವಾಸ ಗಳಿಸಿದ್ದ ಐಎಎಸ್ ಅಧಿಕಾರಿ. ವರುಣಾ ನಾಲೆ ವಿರುದ್ಧ ಮಂಡ್ಯದ ರೈತರು ನಡೆಸುತ್ತಿದ್ದ ಹೋರಾಟವನ್ನು ನಿಯಂತ್ರಣಕ್ಕೆ ತರುವುದಕ್ಕೆ ಸ್ವತಃ ಜಿಲ್ಲಾಧಿಕಾರಿ ಚಿರಂಜೀವ್ ಸಿಂಗ್ ಚಳವಳಿ ಮುಖಂಡರನ್ನು ಕರೆದು ಮಾತನಾಡುತ್ತಿದ್ದರು. `ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಮಾಡಬೇಡಿ’ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಜನರಲ್ಲಿ ಮುಕ್ತವಾಗಿ ಬೆರೆಯುತ್ತಿದ್ದ ಅವರ ನಡವಳಿಕೆ ಮಂಡ್ಯದ ಆಗಿನ ಯುವ ನಾಯಕರಲ್ಲಿ ಇಷ್ಟವಾಗುತ್ತಿತ್ತು. ಚಳವಳಿ ಮುಖಂಡರೊಂದಿಗೆ ಒಮ್ಮೆ ಮಾತನಾಡುವಾಗ `ಪಂಜಾಬಿನಲ್ಲಿ ರೈತರು ತಮ್ಮ ವಿಶೇಷ ಬ್ರಾಂಡ್ ಆದ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಸರ್ಕಾರದ ಗಮನ ಸೆಳೆಯುತ್ತಾರೆ. ಇಲ್ಲಿ ನಿಮ್ಮ ಮಂಡ್ಯದ ಜನರ ಸಾಮಾನ್ಯ ಚಹರೆ ಏನು? ಅದನ್ನು ಮುಂದೆ ಮಾಡಿ ಪ್ರತಿಭಟನೆ ನಡೆಸಿ’ ಎಂದು ಸಲಹೆ ನೀಡಿದ್ದರು. ಆಗ ಮೂಡಿದ್ದು ಚಡ್ಡಿ ಧರಿಸಿ ರೈತರು ಮೆರವಣಿಗೆ ನಡೆಸುವ ಕಲ್ಪನೆ. ಚಡ್ಡಿ ಮೆರವಣಿಗೆಗೆ ದಿನ ನಿಗದಿಪಡಿಸಿ ನಡೆಸಿದ ಪ್ರಚಾರಕ್ಕೆ ದೊಡ್ಡಪ್ರಮಾಣದಲ್ಲಿ ಬೆಂಬಲ ಸಿಕ್ಕಿತು.
ಚಡ್ಡಿ ಮೆರವಣಿಗೆ ಆ ದಿನಗಳಲ್ಲಿ ಅತ್ಯಂತ ದೊಡ್ಡದಾಗಿ ಸಂಘಟಿತವಾದ ಪ್ರತಿಭಟನೆ. ಪಟ್ಟಾಪಟ್ಟಿ ಚಡ್ಡಿ ಧರಿಸಿ ಹೆಗಲ ಮೇಲೆ ಟವೆಲ್ ಹಾಕಿಕೊಂಡು ಮುಖಂಡರೂ, ಕಾರ್ಯಕರ್ತರೂ, ರೈತಯುವಕರೂ ಉತ್ಸಾಹದಿಂದ ಸತ್ಯಾಗ್ರಹ ಶಿಬಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೋಗಿ ಮನವಿ ಸಲ್ಲಿಸುವ ಕಾರ್ಯಕ್ರಮ. ಜೊತೆಗೆ ಎತ್ತಿನ ಗಾಡಿಗಳೂ, ಟ್ರ್ಯಾಕ್ಟರ್ಗಳೂ ರೈತ ಸಮುದಾಯದ ಬೆಂಬಲಕ್ಕೆ ಜೊತೆಯಾಗಿದ್ದವು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದ ಮೆರವಣಿಗೆ ಸರ್ಕಾರಿ ಬಸ್ ನಿಲ್ದಾಣದ ಮುಂದೆ ಸಾಗುತ್ತಿದ್ದಂತೆ ಕಿಡಿಗೇಡಿಗಳ ಕಲ್ಲು ತೂರಾಟದಿಂದ ಉಗ್ರ ಸ್ವರೂಪ ತಾಳಿತು. ಅವರನ್ನು ನಿಯಂತ್ರಿಸಲು ಮೆರವಣಿಗೆಯ ಹಿಂದೆ, ಆಜುಬಾಜು ಸಾಗುತ್ತಿದ್ದ ಮೀಸಲು ಪಡೆ ಪೊಲೀಸರು ಲಘುವಾಗಿ ಲಾಠಿಯನ್ನೂ ಬೀಸಬೇಕಾಯಿತು. ಚಳವಳಿನಿರತ ರೈತರಲ್ಲಿ ಶಾಂತಿ ಕದಡಬೇಡಿ ಎಂದು ಉಪದೇಶ ನೀಡಲು ತಮ್ಮ ಕಾರಿನಿಂದ ಕೆಳಕ್ಕೆ ಇಳಿದ ಜಿಲ್ಲಾಧಿಕಾರಿ ಚಿರಂಜೀವ್ ಸಿಂಗ್ ಅವರಿಗೂ ಮೀಸಲು ಪಡೆಯ ಪೇದೆಯೊಬ್ಬ ಲಾಠಿಯ ರುಚಿ ತೋರಿಸಿದ್ದನಂತೆ. ಆದರೂ ಅವರು ಧೃತಿಗೆಡದೆ ಉದ್ರಿಕ್ತ ಜನರ ಮಧ್ಯೆ ಸಾಗಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು ಎಂದು ಚಳವಳಿಯ ವಿವರಗಳನ್ನು ಪತ್ರಕರ್ತರಲ್ಲಿ ಹಂಚಿಕೊಳ್ಳುತ್ತಿದ್ದ ಮುಖಂಡರು ಜಿಲ್ಲಾಧಿಕಾರಿಯ ಬಗ್ಗೆ ಮೆಚ್ಚುಗೆಯಿಂದ ಹೇಳುತ್ತಿದ್ದರು.
ಕೆಲವು ದಿನಗಳು ವರುಣಾ ನಾಲೆ ವಿರುದ್ಧ ಚಳವಳಿ ನಡೆಯಿತು. ಅದು ನಿಜವಾಗಿಯೂ ರಾಜಕೀಯ ಪ್ರತಿಷ್ಠೆಗಾಗಿ ನಡೆದ ಚಳವಳಿ ಎಂದು ಚಳವಳಿಯ ಮುಖಂಡರೇ ಖಾಸಗಿಯಾಗಿ ಹೇಳುತ್ತಿದ್ದರು. ಮಂಡ್ಯದ ಜನರಿಗೆ ನೀರಿನ ಯಾವ ಕೊರತೆಯೂ ಆಗುವುದಿಲ್ಲ ಎಂಬ ಹೇಳಿಕೆಗಳನ್ನು ಸರ್ಕಾರದ ಕಡೆಯಿಂದ ಬೆಂಗಳೂರಿನಲ್ಲಿ ಕೊಡಿಸಲಾಗುತ್ತಿತ್ತು. ದೇವರಾಜ ಅರಸರನ್ನೇ ಗುರಿಯಾಗಿಸಿ ಸಂಘಟಿಸಿದ್ದ ಚಳವಳಿಗೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ.ದೇವೇಗೌಡರು ಬೆಂಬಲಿಸಿದ್ದರು. ಕಾಂಗ್ರೆಸ್ಸಿನಲ್ಲಿದ್ದ ಅರಸು ವಿರೋಧಿಗಳು ಮತ್ತು ಪ್ರತಿಪಕ್ಷವಾಗಿದ್ದ ಸಂಸ್ಥಾ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಒಂದಾಗಿ ಅರಸರಿಗೆ ಮಂಡ್ಯಕ್ಕೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದರು. ಅವರ ಮೇಲೆ ಹಲ್ಲೆ ನಡೆಸುವ ಬೆದರಿಕೆಯೂ ಇತ್ತು. ಲಿಂಗಯ್ಯನವರು ಮಾತ್ರ ಸ್ಥಳೀಯರ ವಿರೋಧದ ಕಾರಣ ಕೆಲವು ಕಾಲ ತಟಸ್ತರಾಗಿದ್ದರು. ಲಿಂಗಯ್ಯನವರದು ಬೌದ್ಧಿಕ ವ್ಯಕ್ತಿತ್ವ. ರಾಜಕೀಯ ಮುಖಂಡರಂತೆ ನೇರಾನೇರ ಟೀಕಾಸ್ತ್ರ ಪ್ರಯೋಗ ಮಾಡುವ ಜಾಯಮಾನವಲ್ಲ. ಕೈಯಲ್ಲೊಂದು ಪತ್ರಿಕೆ. ಜೊತೆಗೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನ. ಮಂಡ್ಯದ ಸಾಮಾಜಿಕ ಸಂರಚನೆಯನ್ನು ಚೆನ್ನಾಗಿಯೇ ತಿಳಿದಿದ್ದ ಅರಸರು ಅಲ್ಲಿನ ಪ್ರಬಲ ಜಾತಿ ಮುಖಂಡರ ವಿರೋಧವನ್ನು ಸ್ಥಳೀಯ ನಾಯಕರನ್ನು ಮುಂದಿಟ್ಟುಕೊಂಡು ಎದುರಿಸಲು ಲಿಂಗಯ್ಯನವರನ್ನೂ ಉತ್ತೇಜಿಸುತ್ತಿದ್ದರು. ಕೃಷ್ಣ ಅವರು ತಮ್ಮನ್ನು ತ್ಯಜಿಸಿದ ನಂತರ ಅಲ್ಲಿಂದಲೇ ಪರ್ಯಾಯ ನಾಯಕತ್ವವನ್ನು ಅರಸುವ ತಂತ್ರವಾಗಿ ಲಿಂಗಯ್ಯನವರಿಗೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನಕ್ಕಿಂತ ಉನ್ನತ ಸ್ಥಾನ ಕೊಟ್ಟರು. ಅದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ. ಸಂಪುಟದರ್ಜೆ ಸಚಿವ ಸ್ಥಾನದ ಅಧಿಕಾರ ಗೌರವ ಇದ್ದ ಹುದ್ದೆ. ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸ್ಥಾನ ಕೃಷ್ಣ ಅವರ ಬೆಂಬಲಿಗ ಎಂದು ಹೆಸರಾಗಿದ್ದ ಕೆ.ಎನ್.ನಾಗೇಗೌಡರಿಗೆ ಸಿಕ್ಕಿತು. ಎರಡೂ ಗುಂಪುಗಳ ಮಧ್ಯೆ ಸಮತೋಲನ ಸಾಧಿಸುವ ರಾಜೀಸೂತ್ರ. ಆದರೆ ವರುಣಾ ನಾಲೆಯ ನೆಪದಲ್ಲಿ ಶುರುವಾದ ವಿರೋಧ ಅನೇಕ ತಿಂಗಳ ನಂತರ ಮಂಡ್ಯದ ರೈತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೆಂಗಳೂರಿಗೆ ಜಾಥಾ ಹೋಗಿ ಕಬ್ಬನ್ ಪಾರ್ಕಿನಲ್ಲಿ ಸಮಾವೇಶಗೊಂಡು ಅಲ್ಲಿಗೇ ಮುಖ್ಯಮಂತ್ರಿ ದೇವರಾಜ ಅರಸರನ್ನು ಕರೆಸುವವರೆಗೆ ಮುಂದುವರಿಯಿತು. ಮಂಡ್ಯದ ರೈತರ ಬೃಹತ್ ಪ್ರತಿಭಟನೆಯ ಸ್ಥಳಕ್ಕೆ ಬಂದು ದೇವರಾಜ ಅರಸರು ಯಾವ ಸಂದರ್ಭದಲ್ಲೂ ಮಂಡ್ಯ ರೈತರಿಗೆ ವರುಣಾ ನಾಲೆಯ ಕಾರಣದಿಂದ ನೀರಿನ ಪಾಲಿನಲ್ಲಿ ಕೊರತೆ ಆಗುವುದಿಲ್ಲ ಎಂದು ಭರವಸೆ ಕೊಡಬೇಕಾಯಿತು. ಆ ನಂತರವೇ ವರುಣಾ ನಾಲೆ ವಿರುದ್ಧದ ಹೋರಾಟ ನಿಂತಿತು.
(ಆಕರ:`ಮಿತ್ರಲಾಭ’, ಅನುಭವಗಳ ಮಾಲಿಕೆ, 2020)

Share This Article
1 Comment