ಕೆ.ಎನ್.ರವಿ
ನಾನು ಸಾವಿಗೆ ಹೆದರುವುದಿಲ್ಲ. ಯಾಕೆ ಅಂದ್ರ ನಾನು ಸಾಯುವ ತನಕ ಅದು ಹತ್ತಿರ ಬರೋಲ್ಲಾ ಎಂದು ವರಕವಿ ಬೇಂದ್ರೆ ಹೇಳಿದ ಮಾತು ಕಠೋರ ಸತ್ಯವಾಗಿದೆ.
ಭಯಾನಕ ಕೋವಿಡ್ ಸಾರಾಸಗಟಾಗಿ ಎಲ್ಲರನ್ನೂ ತೆಗೆದುಕೊಂಡು ಹೋಗಲು ಟೊಂಕ ಕಟ್ಟಿ ನಿಂತ ಹಾಗೆ ಇದೆ. ಸಾವಿಗೂ ರನ್ನಿಂಗ್ ರೇಸ್ ಶುರುವಾಗಿದೆ ! ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾವು ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆಯೋ ಎಂಬ ಭಯ ಕ್ಷಣ ಮಾತ್ರ ಎಲ್ಲರನ್ನೂ ಕಾಡುತ್ತಿದೆ.
ಕಳೆದ 6 ತಿಂಗಳಲ್ಲಿ ಸಾಕಷ್ಟು ಜೀವಗಳು ಮಣ್ಣಿನಲ್ಲಿ ಮಣ್ಣಾಗಿವೆ. ಬೆಂಕಿಯಲ್ಲಿ ಬೆಂದು ಹೋಗಿವೆ. ಇಂದು ಇದ್ದವರು, ನಾಳೆ ಇರುವುದಿಲ್ಲ. ನನಗೆ ವಯಸ್ಸಾಗಿದೆ ಸಾವು ಖಚಿತ ಎಂದು ಹೇಳಿ ಆಸ್ಪತ್ರೆಗೆ ಸೇರಿದವರು, ನಾನು ಕರೋನಾ ಗೆದ್ದು ಬಂದೆ ಎಂದು ಅನೇಕ ವಯೋವೃದ್ಧರು ಜೀವ ಗೆದ್ದು ಪ್ರಶಸ್ತಿ ಪಡೆದು ಬೀಗಿದವರೂ ಇದ್ದಾರೆ. ಅದು ಆ ವೃದ್ಧರುಗಳಲ್ಲಿ ಇರುವ ಆತ್ಮ ವಿಶ್ವಾಸದ ಪ್ರತಿಫಲ.
ಪ್ಲೆಕ್ಸ್ ಗಳೇ ಮೂಕ ಸಾಕ್ಷಿ :
ಕೊರೋನಾ ಪೀಡಿತ ಅನೇಕ ಯುವಕರ ಬದುಕು ಮಾತ್ರ ಕಳವಳಕಾರಿಯಾಗಿದೆ. ನಾನು ಚೆನ್ನಾಗಿ ಇದ್ದೇನೆ ಎಂದು ಹೇಳುವ ಮಧ್ಯ ವಯಸ್ಸಿನ ಹಾಗೂ ಯುವಕರು ಸಾವನ್ನು ಜಯಿಸಲು ಸಾಧ್ಯವಾಗುತ್ತಿಲ್ಲ. ಚೇತರಿಸಿಕೊಳ್ಳುತ್ತಿರುವೆ ಎಂದು ಹೇಳಿದವರೂ ಮರು ದಿನ ಇಹಲೋಕವನ್ನು ತ್ಯಜಿಸಿ ಹೋಗಿರುತ್ತಾರೆ ಎನ್ನುವುದಕ್ಕೆ ಆಯಾ ಪಟ್ಟಣ, ಹಳ್ಳಿಗಳಲ್ಲಿನ ಸರ್ಕಲ್ ಗಳಲ್ಲಿ ಭಾವಚಿತ್ರಕ್ಕೆ ಹಾರ ಹಾಕಿ ನೇತಾಡುವ ಪ್ಲೆಕ್ಸ್ ಗಳೇ ಮೂಕ ಸಾಕ್ಷಿ. ನಮಗೆ ತುಂಬಾ ಬೇಕಾದವರು ಅಥವಾ ಮುಖ ಪರಿಚಯ ಇರುವ ವ್ಯಕ್ತಿಗಳು ಸತ್ತಿದ್ದೇ ಗೊತ್ತಾಗುವುದಿಲ್ಲ.ಫ್ಲೆಕ್ಸ್ ಗಳಲ್ಲಿ ಆ ವ್ಯಕ್ತಿಯ ಸಾವಿನ ಸತ್ಯವನ್ನು ಸಾರಿ ಹೇಳುತ್ತವೆ.
ಸಾವಿನ ಮನೆಯ ಕದ ತಟ್ಟಬೇಡಿ:
ಈ ಕೊರೋನಾ ಭೀತಿಯಿಂದಾಗಿ ಶವ ಸಂಸ್ಕಾರಕ್ಕೂ ಹೋಗುವ ಭಾಗ್ಯ ಇರಲಿ, ಅಂತಿಮವಾಗಿ ಮುಖ ದರ್ಶನದ ಅವಕಾಶವೂ ಸಿಗುವುದಿಲ್ಲ. ಬದುಕಿನ ಆಸೆ, ಕನಸು ಇಟ್ಟುಕೊಂಡ ಬಹುತೇಕರನ್ನು ಸ್ಮಶಾನ ಸೇರಿಸುವ ಸಂಕಲ್ಪ ಮಾಡಿರುವ ಈ ಕೊರೋನಾ, ಬದುಕಿರುವ ಕುಟುಂಬದವರನ್ನು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಕೊರೋನಾ ಪೀಡಿತರನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಲಕ್ಷ ,ಲಕ್ಷ ಗಟ್ಟಲೆ ಬಿಲ್ ಪಾವತಿಸುವ ಹೊಣೆ ಕುಟುಂಬದವರು. ಆಸ್ಪತ್ರೆಗೆ ಸೇರಿರುವ ಒಬ್ಬ ವ್ಯಕ್ತಿ ಬದುಕಿ ಬಂದರೆ ಬಂಪರ್, ತೀರಿ ಹೋದರೆ ಬದುಕಿದವರು ನಿತ್ಯ ಸಾಯುವ ಸ್ಥಿತಿ. ಯಾರಿಗೆ ಹೇಳೋಣ ಈ ಗೋಳು.
ಕೊರೋನಾ ಸಾವಿನ ಪ್ರಕರಣಗಳನ್ನು ಕೇಳಿದರೆ ಸಾಕು, ಸಾವು ನಮಗೂ ಹೀಗೆ ಬರಬಹುದಾ ಎಂಬ ಸಂಶಯ ಮಿಂಚಿನಂತೆ ಒಮ್ಮೆ ಎಲ್ಲರ ತಲೆಯಲ್ಲೂ ಬಂದೇ ಬಿಡುತ್ತದೆ. ಆದರೂ ಸುಧಾರಿಸಿಕೊಂಡು ಸಾವಿನ ಮನೆಯ ಕದ ತಟ್ಟದಂತೆ ನೋಡಿಕೊಳ್ಳಲು ಜಾಗೃತರಾಗುತ್ತವೆ. ಸಾವು ಸದಾ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಸಾವು ಯಾರಿಗೆ, ಯಾವಾಗ, ಎಲ್ಲಿ , ಹೇಗೆ ಬರುತ್ತದೆ ಎಂದು ಹೇಳುವುದು ಬ್ರಹ್ಮನಿಂದಲೂ ಸಾಧ್ಯವಿಲ್ಲದ ಮಾತು. ಎಲ್ಲರೂ ಸಾವಿನಿಂದ ಸೇಫ್ ಆಗಲು ನೋಡುತ್ತಾರೆ. ನನಗೆ ಚಿಕ್ಕ ಮಕ್ಕಳಿವೆ. ಸಂಸಾರದ ಜವಾಬ್ದಾರಿ ಇದೆ. ಎಲ್ಲವೂ ಈಗಷ್ಟೇ ಆರಂಭವಾಗಿದೆ ಎಂದು ಹೇಳುವ ವ್ಯಕ್ತಿ ಸಾವಿನ ಕರೆ ಬಂದಾಗ ಎಲ್ಲವನ್ನೂ ಬಿಟ್ಟು ಹೇಳದೇ ಹೋಗಿ ಬಿಡುತ್ತಾನೆ.
ಶತಮಾನದ ಹಿಂದೆ ಕಾಡಿದ್ದ ಪ್ಲೇಗ್ :
ಯಾರಿಗೂ ಗೊತ್ತಿರಲಿಲ್ಲ. ಈ ಕೊರೋನಾ ಇಷ್ಟೊಂದು ಭೀಕರವಾಗಿರುತ್ತದೆ. ಮತ್ತೆ ಅದಕ್ಕೆ ಸಾವೊಂದೇ ಟಾರ್ಗೆಟ್ ಎನ್ನುವುದು. 1920ರಲ್ಲಿ ಮಾಹಾ ಮಾರಿ ಪ್ಲೇಗ್ ಕೋಟಿಗಟ್ಟಲೆ ಜನರ ಜೀವ ಬಲಿಯಾಯಿತಂತೆ. 2020 ರಲ್ಲೂ ಕೂಡ ಕೊರೋನಾ ವಿಶ್ವದಲ್ಲಿ ಕೋಟಿಗೂ ಹೆಚ್ಚು ಜನರನ್ನು ಜೀವ ಬಲಿ ತೆಗೆದುಕೊಂಡಿದೆ. ಕೊರೋನಾ ಎಪೆಕ್ಟ್ ನಿಂದಾಗಿ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಬುಡಮೇಲಾಗಿದೆ. ಎಲ್ಲಾ ಕ್ಷೇತ್ರಗಳ ಸಂಬಂಧ, ವ್ಯವಹಾರಗಳು ಮೂರಾಬಟ್ಟೆಯಾಗಿವೆ.
ಕೊರೋನಾದಿಂದಾಗಿ ಸಾಮಾಜಿಕ ವ್ಯವಸ್ಥೆ ಬದಲಾಗಿದೆ. ಸಂಬಂಧಗಳ ಕೊಂಡಿ ಕಳಚಿವೆ. ನಾನು ಬದುಕಿದರೆ ಸಾಕು ಎನ್ನುವ ಮನಸ್ಥಿತಿಗೆ ಮನುಷ್ಯರು ಬಂದಿದ್ದಾರೆ. ಎಂತಹ ಕಠೋರ ನಿರ್ಧಾರ. ದಯೆ, ಮಾನವೀಯತೆಗೆ ಅವಕಾಶವೇ ಇಲ್ಲದಂತೆ ಕಾಡತೊಡಗಿದೆ ಈ ಕೊರೋನಾ.
ಬಂಧುವೊಬ್ಬರ ಆಘಾತಕಾರಿ ಸಾವು :
ನನ್ನ ಬಂಧುವೊಬ್ಬರು ಕೊರೋನಾ ಸೋಂಕಿಗೆ ಒಳಗಾಗಿ, ಆಸ್ಪತ್ರೆಗೆ ದಾಖಲಾದರು. ಆದರೆ ಅಲ್ಲಿನ ವಾತಾವರಣ ನೋಡಿ ಅವರ ಆತ್ಮ ಸ್ಥೈರ್ಯ ಕುಸಿದು ಹೋಯಿತು. ಅಧೀರರಾದರು. ಹೆಂಡತಿ, ಮಕ್ಕಳಿಗೂ ಸಹ ಯಾವುದೇ ವಿಷಯ ತಿಳಿಸದೇ ತೀರಿ ಹೋದರು. 60 ರ ಗಡಿ ದಾಟಿದ ವಯಸ್ಸು. ಆದರೆ ಯಾವುದೇ ಜವಾಬ್ದಾರಿ ಇನ್ನೂ ಪೂರ್ಣ ಗೊಂಡಿರಲಿಲ್ಲ. ಆ ಬಂಧುವಿಗೆ ಯಾವುದೇ ಕಾಯಿಲೆಯೂ ಇರಲಿಲ್ಲ. ಕೊರೋನಾ ಎದುರಿಸುವ ಧೈರ್ಯವೂ ಇತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆ ವಾತಾವರಣ, ಹೆಚ್ಚುತ್ತಿರುವ ಸೋಂಕಿತರ ಸಾವಿನ ಸಂಖ್ಯೆಗಳು ಎದೆ ಝಲ್ ಎನಿಸುವಂತೆ ಮಾಡಿದವು. ನಾನು ಸಹ ಸತ್ತು ಹೋಗುವೆ ಎನ್ನುವ ನಿರ್ಧಾರ ಮನಸ್ಸಿಗೆ ನಾಟಿ ಹೋಯಿತು. ಆಗ ಆತ್ಮ ಸ್ಥೈರ್ಯ ಕುಸಿದು ಹೋಯಿತು. ಮನಸ್ಸಿಗೆ ಆದ ಆಘಾತ ಪ್ರಾಣವನ್ನೇ ಬಲಿ ಪಡೆಯಿತು. ಇಂತಹ ಪ್ರಕರಣಗಳೇ ಸಾವಿನ ಸಂಖ್ಯೆ ಹೆಚ್ಚಿಸಲು ಕಾರಣವಾಗಿವೆ ಎನ್ನುತ್ತಾರೆ ತಜ್ಞ ವೈದ್ಯರು.
ನಮ್ಮ ನಿರ್ಲಕ್ಷ್ಯತೆ, ಉದಾಸೀನತೆ, ನನಗೆ ಏನೂ ಆಗುವುದಿಲ್ಲ ಎಂಬ ಬಂಡ ದೈರ್ಯ ಎಲ್ಲವೂ ಕೊರೋನಾ ಎದುರಿಸುವ ಅಸ್ತ್ರಗಳೇನೂ ಅಲ್ಲ. ಇವೆಲ್ಲವೂ ಕೊರೋನಾ ಸೋಂಕಿಗೆ ನೆರವಾಗುವ ಅಂಶಗಳು. ಸದಾ ಎಚ್ಚರಿಕೆಯಿಂದ ಇರಬೇಕು ಎನ್ನುವ ಮಂತ್ರ. ಹಾಗೊಂದು ವೇಳೆ ಕೊರೋನಾ ಸೋಂಕಿಗೆ ಒಳಗಾದರೆ ಆತ್ಮ ಸ್ಥೈರ್ಯ ಮಾತ್ರ ಕುಸಿಯದಿರಲಿ. ಆ ನಿಟ್ಟಿನಲ್ಲಿ ಗಟ್ಟಿ ಮನಸ್ಸು ರೂಢಿಸಿಕೊಳ್ಳಬೇಕು. ಯಾವ ಜೀವನ ಶೈಲಿಯನ್ನು ಅಳವಡಿಸಿಕೊಂಡು ಸಂಕಷ್ಟದಿಂದ ಪಾರಾಗಬೇಕು ಎಂಬ ಜಾಣತನ ನಮ್ಮಲ್ಲಿಯೇ ಇರಬೇಕು.
ಔಷದೋಪಾಚಾರ ಎಷ್ಟು ಮುಖ್ಯವೋ ಮುಂಜಾಗೃತೆಯೂ ಅಷ್ಟೇ ಮುಖ್ಯ. ಕೊರೋನಾ ಪ್ರತಿಯೊಬ್ಬರಿಗೂ ಬದುಕಿನ ಪಾಠ ಹೇಳಿಕೊಟ್ಟಿದೆ. ಪ್ರಕೃತಿಯ ಮುನಿಸಿನ ಮತ್ತೊಂದು
ರೂಪವೂ ಇದೇ ಆಗಿದೆ. ಮನುಷ್ಯ ತನ್ನ ಇತಿ, ಮಿತಿ, ವ್ಯವಸ್ಥೆಯ ಚೌಕಟ್ಟನ್ನು ಅರಿತು ನಡೆಯಬೇಕು ಎನ್ನುವುದನ್ನು ಕೊರೋನಾ ಚೆನ್ನಾಗಿ ಹೇಳಿ ಕೊಟ್ಟಿದೆ. ಈಗಲೂ ನಾವು ಪಾಠ ಕಲಿಯದೇ ಹೋದರೆ ಕಲಿಯುಗ ಅಂತ್ಯ ಆರಂಭವಾಗಿದೆ ಎಂದರ್ಥ.
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್