ಕೆ.ಎನ್. ರವಿ
ಮತ್ತೊಬ್ಬರ ಸಂತೋಷದಲ್ಲಿ ಖುಷಿ ಕಾಣುವ ಸಂಕಲ್ಪ ಈಡೇರಿದರೆ ಅದು ಸಿದ್ಧಾರ್ಥ, ಬುದ್ಧನಾದಂತೆ.
ಪ್ರತಿಯೊಬ್ಬರ ಬದುಕಿನಲ್ಲೂ ನಾನಾ ರೀತಿಯ ವ್ಯಕ್ತಿಗಳು ಬಂದು ಹೋಗುತ್ತಾರೆ. ಪಾಠ ಕಲಿಸುತ್ತಾರೆ. ಅನುಭವ ನೀಡುತ್ತಾರೆ. ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ತುಂಬುತ್ತಾರೆ.ಎಲ್ಲರಿಗೂ ಈ ಭಾಗ್ಯ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ! ಬದುಕಿನ ಅನಾವರಣ ಆಗಬೇಕು. ಆಗಲೇ ವಾಸ್ತವದ ಅರಿವು ಸಿಗುವುದು. ಈಗಿನ ಪೀಳಿಗೆಗೆ ಇಂತಹ ಮಾತುಗಳು ರುಚಿಸುವುದಿಲ್ಲ, ಅವರು ಜೀರ್ಣಿಸಿ ಕೊಳ್ಳಲಾರರು
.
70 ದಶಕದ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಮೇಷ್ಟ್ರುಗಳು ನಿತ್ಯವೂ ಒಂದು ಒಳ್ಳೆಯ ಕೆಲಸ ಮಾಡಿ. ಅದನ್ನು ನಿಮ್ಮ ನೋಟು ಬುಕ್ ನಲ್ಲಿ ಯಾವ ಒಳ್ಳೆಯ ಕೆಲಸ ಮಾಡಿದ್ದೀರಿ ಎನ್ನುವುದನ್ನು ಬರೆದು ತನ್ನಿ ಎಂದು ಹೇಳುತ್ತಿದ್ದರು. ವಿದ್ಯಾರ್ಥಿಗಳು ಮಾತ್ರ ಒಳ್ಳೆಯ ಕೆಲಸ ಮಾಡುತ್ತಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ನಿತ್ಯವೂ ಪ್ರೇಯರ್ ಆದ ಮೇಲೆ ಕ್ಲಾಸ್ ನಲ್ಲಿ ಒಳ್ಳೆಯ ಕೆಲಸ ಏನು ಮಾಡಿದೆವು ಎನ್ನುವ ಪಟ್ಟಿಯನ್ನು ಮಾತ್ರ ತೋರಿಸುತ್ತಿದ್ದರು. ಅಂದಿನ ಕಾಲದ ಮೇಷ್ಟ್ರಿಗೆ ಪ್ರತಿ ವಿದ್ಯಾರ್ಥಿ ಗಳಲ್ಲೂ ಸಂಸ್ಕಾರ, ಮಾನವೀಯ ಯುತ ಶಿಕ್ಷಣ
ತುಂಬಬೇಕು ಎಂಬ ಆಶಯ-ಉದ್ದೇಶ ಹೊರತಾಗಿ ಬೇರೆ ಏನೂ ಇರಲಿಲ್ಲ. ಆದರೆ ಈಗ ಶಿಕ್ಷಣ ಯಥೇಚ್ಛವಾಗಿದೆ. ಸಂಸ್ಕಾರ ಇಲ್ಲ. ಇದರಿಂದಾಗಿಯೇ ಸಮಾಜದ ದಿಕ್ಕು – ದಾರಿಗಳು ಬೇರೆಯಾಗಿವೆ.ಬಹುತೇಕ ಸರ್ಕಾರಿ ಶಾಲೆಯಲ್ಲಿ ಓದಿದ ಒಬ್ಬ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಗುಣಗಳನ್ನು ಕಲಿಯುತ್ತಾನೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಇದು ಸತ್ಯಘಟನೆ. ಕಥೆಯಲ್ಲ. ಜೀವನದ ಒಂದು ಪರಿಚಯ ಎನ್ನುವುದು ಸಾಮಾಜಿಕ ಜಾಲದಲ್ಲಿ ಹರಿದಾಡಿದ ಕಥೆಯೇ ಸಾಕ್ಷಿ.
ವೃದ್ಧರಿಗೆ ನಾನೇಕೆ ಸಹಾಯ ಮಾಡಬೇಕು?
ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು. ಒಂದು ಸಣ್ಣ ಕೈಚೀಲ ಹೆಗಲಿಗಿತ್ತು. ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿದ್ದಾರೆನ್ನುವುದು ದೃಢವಾಗಿತ್ತು. ಅವರ ಕೈಯಲ್ಲಿ ಹಿಡಿದಿದ್ದ ಒಂದು ಚೂರು ಕಾಗದ ನೋಡುತ್ತಾ, ಇದು ಆನಂದ್ ಮನೇನಾ, ಯೋಗಾನಂದ ರಸ್ತೇನಾ ಅಂತ ನನ್ನನ್ನೇ ಕೇಳಿದರು.ಹೌದು ಸಾರ್. ನಾನೇ ಆನಂದ್ ಎಂದೆ. ನೀವು ಸರಿಯಾದ ವಿಳಾಸಕ್ಕೆ ಬಂದಿದ್ದೀರಿ. ತಾವು ಯಾರು ಎಂದೆ. ಆ ವೃದ್ದರ ಕೈಗಳು ನಡುಗುತ್ತಿದ್ದವು. ತುಟಿ ಒಣಗಿತ್ತು, ನಾಲಿಗೆಯಿಂದ ತುಟಿ ಸವರಿಕೊಳ್ಳುತ್ತಾ ಒಂದು ಪತ್ರವನ್ನು ನನ್ನ ಕೈಗಿತ್ತರು.ನಾನು ಕಣಯ್ಯ ನಿಮ್ಮ ತಂದೆಯ ಸ್ನೇಹಿತ. ನಿಮ್ಮ ಹಳ್ಳಿಯಿಂದಲೇ ಬಂದಿದ್ದೇನೆ. ನಿಮ್ಮ ತಂದೆಯವರು ಈ ಪತ್ರವನ್ನು ನಿಮಗೆ ತಲುಪಿಸಿ, ನನ್ನ ಮಗ ನಿಮಗೆ ಸಹಾಯ ಮಾಡುತ್ತಾನೆ ಎಂದು ಹೇಳಿದರು. ನಿನ್ನನ್ನು ನಂಬಿಕೊಂಡು ಬಂದಿದ್ದೇನೆ ಕಣಯ್ಯ ಎಂದು ಬಹು ಆತ್ಮೀಯವಾಗಿ ಆ ವೃದ್ಧರು ಹೇಳಿದರು. ನಾನು ಆಶ್ಚರ್ಯದಿಂದ ನಮ್ಮ ತಂದೆಯವರು ನಿಮಗೆ ಲೇಟರ್
ಕೊಟ್ರಾ ? ಎಂದೆ. ಸರಿ ಎಂದು ಲೇಟರ್ ಓದಲು ಆರಂಭಿಸಿದೆ
.
ಪ್ರೀಯ ಆನಂದ್ ಗೆ ಆಶೀರ್ವಾದಗಳು ಈ ಪತ್ರವನ್ನು ನಿನಗೆ ಕೊಡುತ್ತಾ ಇರುವ ವ್ಯಕ್ತಿ ನಂಗೆ ಸ್ನೇಹಿತರು ಮತ್ತು ತುಂಬಾ ಬೇಕಾದವರು. ರಾಮಯ್ಯ ಅಂತ ಹೆಸರು. ಬಹಳ ಪ್ರಾಮಾಣಿಕ. ಇವರಿಗೆ ಒಬ್ಬನೇ ಮಗ. ಕೆಲವು
ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀರಿ ಹೋದ. ಅಪಘಾತಕ್ಕೆ ಸಿಗುವ ಪರಿಹಾರವನ್ನು ಪಡೆಯಲು ಕೂಡ ರಾಮಯ್ಯ ಒಪ್ಪಿರಲಿಲ್ಲ. ನಾನೇ ಅವರನ್ನು ಒತ್ತಾಯಿಸಿ ಪರಿಹಾರ ಪಡೆಯಲು ಒಪ್ಪಿಸಿದೆ. ಯಾಕೆ ಗೊತ್ತಾ? ಜೀವನಕ್ಕೆ ಬೇರೆ ಆದಾಯವೇ ಇಲ್ಲದ ದಂಪತಿಗಳಿಗೆ ಈ ಪರಿಹಾರದ ಹಣ ಜೀವನಕ್ಕೆ ಆಧಾರವಾಗುತ್ತೆ. ಹೋಗಿ ಪರಿಹಾರದ ಹಣವನ್ನಾದರೂ ತನ್ನಿ ಎಂದು ಕಳುಹಿಸಿದ್ದೇನೆ. ಅಪಘಾತಕ್ಕೆ ಸಂಬಂಧಪಟ್ಟ ಎಲ್ಲಾ ಕಾಗದ ಪತ್ರಗಳನ್ನು ಕಳಿಸಿದ್ದೇನೆ. ಅವರ ಮಗ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯ ಕಚೇರಿ ನೀನು ವಾಸ ಇರುವ
ಹೈದರಾಬಾದ್ ನಲ್ಲಿದೆ. ಇವರು ಹೈದರಾಬಾದ್ಗೆ ಎಂದೂ ಬಂದಿಲ್ಲ. ಅಲ್ಲಿನ ಭಾಷೆ ಬರೋಲ್ಲಾ. ಅವರಿಗೆ ನೀನು ಸಹಾಯ ಮಾಡುವೆ ಎಂದು ನಂಬಿರುತ್ತೇನೆ. ನಿನ್ನ ಆರೋಗ್ಯವನ್ನು ನೋಡಿಕೋ. ಸಮಯ ಸಿಕ್ಕಾಗ ಬಂದು ನಮ್ಮನ್ನು ಭೇಟಿ ಮಾಡು.
- ಇಂತಿ, ನಿನ್ನ ಪ್ರೀತಿಯ ತಂದೆ.
ಈ ಪತ್ರ ನೋಡಿದ ಕೂಡಲೇ ನಾನು ಸರ್ಕಾರಿ ಶಾಲೆಯಲ್ಲಿ ಓದುವಾಗ ದಿನಕ್ಕೊಂದು ಒಳ್ಳೆಯ ಕೆಲಸ ಎಂದು ಬರೆದುಕೊಂಡು ಹೋಗುತ್ತಿದ್ದುದು ನೆನಪಿಗೆ ಬಂತು. ಆಗ ಒಳ್ಳೆಯ ಕೆಲಸ ಮಾಡಲಿ, ಬಿಡಲಿ. ಮೇಷ್ಟ್ರುಗಳ ಹೆದರಿಕೆಗೆ ಆ ಒಳ್ಳೆಯ ಕೆಲಸಗಳನ್ನು ಮಾಡಿದೆವು ಎಂದು ಬರೆದು ಕೊಂಡು ಹೋಗುತ್ತಿದ್ದೆವು. ಆದರೆ ಈಗ ಜೀವನದಲ್ಲಿ ನಿಜಕ್ಕೂ ಒಬ್ಬ ವಯೋವೃದ್ಧರಿಗೆ ಸಹಾಯ ಮಾಡಿ, ಮೇಷ್ಟ್ರು ಹೇಳಿ ಕೊಟ್ಟ ಪರೋಪಕಾರ ಮಾಡುವ ಕೆಲಸದ ಅವಕಾಶ ಸಿಕ್ಕಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳಿದೆ.
ಗೇಟ್ ಮುಂದೆ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ರಾಮಯ್ಯನವರನ್ನು ಹಿಂದೆ – ಮುಂದೆ ಯೋಚಿಸದೇ ಒಳಗೆ ಕರೆದೆ. ಕುಡಿಯಲು ನೀರು ಕೊಟ್ಟು, ಏನಾದ್ರೂ ತಿನ್ನುತ್ತೀರಾ ಎಂದೆ.ಪಾಪ ಸಂಕೋಚಕ್ಕೆ ಬೇಡ ಎಂದರು. ಆದರೆ ಅವರೂ ತಿಂಡಿ – ಊಟ ಕೂಡ ಮಾಡಿಲ್ಲ ಎನ್ನುವುದು ಅವರ ಬಾಡಿ ಹೋದ ಮುಖದಿಂದಲೇ ಗೊತ್ತಾಗುತ್ತಿತ್ತು. ನಾನೇ ದೋಸೆ ಮಾಡಿ, ಚಟ್ನಿ, ಉಪ್ಪಿನಕಾಯಿ ಹಾಕಿ ಕೊಟ್ಟೆ . ನಾನು ಒಳಗೆ ಹೋಗಿ ಕೆಲವರಿಗೆ ಫೋನ್ ಮಾಡಿ ಬಂದೆ. ಅಷ್ಟರಲ್ಲಿ ಅವರು ದೋಸೆ ತಿಂದು ಮುಗಿಸಿದ್ದರು.ರಾಮಯ್ಯನವರು ತಂದಿದ್ದ ಕೆಲವು ಕಾಗದ ಪತ್ರಗಳನ್ನು ನನಗೆ ಕೊಡುತ್ತಾ, ಅಪಘಾತದಲ್ಲಿ ತೀರಿ ಹೋದ ಮಗನ ಫೋಟೋ ಸಹ ಕೊಟ್ಟರು. 22 ವರ್ಷದ ಯುವಕ. ತಂದೆ – ತಾಯಿ ಸ್ಥಿತಿ ಮತ್ತು ಇಳಿವಯಸ್ಸಿನ ಆ ವೃದ್ಧರು ನಡೆಸಿರುವ ಹೋರಾಟ ಜೀವನವನ್ನು ನೆನಸಿಕೊಂಡು ನನ್ನ ಕಣ್ಣುಗಳು ಕೂಡ ಒದ್ದೆಯಾದವು.
ನನಗೆ ಒಬ್ಬನೇ ಮಗ ಮಹೇಶ. ಚೆನ್ನಾಗಿ ಓದಿದ, ಹೈದ್ರಾಬಾದ್ ನಲ್ಲಿ ಒಳ್ಳೇ ಕೆಲಸ ಸಿಕ್ಕಿತು. ನಮ್ಮ ಜೀವನದ ಕೊನೆಯಲ್ಲಿ ನಮಗೆ ಆಸರೆಯಾಗುವ ಭರವಸೆ ಕೊಟ್ಟು, ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋದ ಎಂದು ರಾಮಯ್ಯ ಕಣ್ಣೀರು ಹಾಕಿದರು. ಆಗ ಅಕ್ಷರಶಃ ನಾನು ಅತ್ತು ಬಿಟ್ಟೆ. ನಾನು ಆ ಘಟನೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ನಿಮ್ಮ ತಂದೆಯವರ ಒತ್ತಾಯದ ಮೇಲೆ ಪರಿಹಾರದ ಹಣ ಪಡೆಯಲು ಬಂದಿದ್ದೇನೆ. ನನಗೂ ವಯಸ್ಸಾಯಿತು, ನನ್ನ ಹೆಂಡತಿಗೆ ಆರೋಗ್ಯ ಸಮಸ್ಯೆ ಇದೆ. ಎಂದು ಹೇಳಿ ಮಾತು ಮುಗಿಸಿದರು ರಾಮಯ್ಯ.
ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿ ನಿಮಗೆ ಬರಬೇಕಾದ ಎಲ್ಲಾ ಪ್ರಯತ್ನ ಮಾಡಿ ಪರಿಹಾರ ಕೊಡಿಸುವೆ ಎಂದು ದೇವರ ಮೇಲೆ ಭಾರ ಹಾಕಿ ರಾಮಯ್ಯನವರಿಗೆ ಭರವಸೆ ಕೊಟ್ಟು ಅವರನ್ನು ನಮ್ಮ ಮನೆಯಲ್ಲೇ ಮಲಗಿಸಿಕೊಂಡೆ.ಮರುದಿನ ಬೆಳಗ್ಗೆ ಎದ್ದು, ಹೋಟೆಲ್ನಲ್ಲಿ ಟಿಫಿನ್ ಮಾಡಿ ಅವರನ್ನು ವಿಮಾ ಕಚೇರಿಯ ಮುಖ್ಯ ಆಫೀಸ್ ಬಳಿ ಕರೆದೊಯ್ದೆ. ಆಗ ಅವರು, ನೀನು ನಿನ್ನ ಆಫೀಸ್ಗೆ ಹೋಗಿ ಬಾರಪ್ಪ, ತುಂಬಾ ಧನ್ಯವಾದಗಳು ಎಂದು ಹೇಳಿದರು. ಇಲ್ಲ ಸಾರ್. ನಾನು ಈ ದಿನ ರಜಾ ಹಾಕಿದ್ದೇನೆ. ನಿಮ್ಮ ಕೆಲಸ ಮುಗಿಯುವವರೆಗೂ ಜೊತೆಯಲ್ಲೇ ಇರುತ್ತೇನೆ ಎಂದಾಗ ರಾಮಯ್ಯನವರಿಗೆ ಮಗನೇ ಜೊತೆಯಲ್ಲಿ ಇದಷ್ಟು ಸಂತೋಷ ಆಯ್ತು. ಕೊನೆಗೂ ವಿಮಾ ಕಚೇರಿಯಲ್ಲಿ ಹೋರಾಟ ಮಾಡಿ ಸಂಜೆ ಹೊತ್ತಿಗೆ ಪರಿಹಾರದ ಚೆಕ್ ಪಡೆದುಕೊಂಡೆವು.
ರಾಮಯ್ಯನವರಿಗೆ ಖುಷಿ, ಮತ್ತೊಂದು ಕಡೆ ದುಃಖವೂ ಆಯಿತು. ಮಗನನ್ನು ಕಳೆದು ಕೊಂಡು ಹಣ ಪಡೆಯುವ ದುರ್ದೈವ ಬಂತಲ್ಲ ಎಂದು ಕಣ್ಣೀರು ಹಾಕಿದರು. ನೀವು ಬಹಳ ಉಪಕಾರ ಮಾಡಿದ್ದೀಯಾಪ್ಪ ಎಂದು ನಂಗೆ ಹಾರೈಸಿ, ಹಳ್ಳಿಯಲ್ಲಿ ಪತ್ನಿ ಒಬ್ಬಳೇ ಇದ್ದಾಳೆ. ಹಳ್ಳಿಗೆ ವಾಪಸ್ಸು ಹೋಗುತ್ತೇನೆ ಎಂದು ರೆಡಿಯಾದರು.
ನಾನು ನಿಮ್ಮನ್ನು ಬಸ್ ನಿಲ್ದಾಣಕ್ಕೆ ಬಿಡುತ್ತೇನೆ ಎಂದು ಆಟೋ ಹತ್ತಿಸಿಕೊಂಡು ಹೊರಟೆ. ಬಸ್ಸಿನ ಟಿಕೆಟ್ ತೆಗೆದು ಕೊಟ್ಟೆ, ದಾರಿಯಲ್ಲಿ ತಿನ್ನಲು ಸ್ವಲ್ಪ ಹಣ್ಣುಗಳನ್ನು ತೆಗೆದು ಕೊಟ್ಟೆ ಆಗಲೂ ಅವರ ಕಣ್ಣಂಚಿನಲ್ಲಿ ನೀರು ಸುರಿಯುತ್ತಲಿತ್ತು. ಆನಂದ್ ನಿಮ್ಮಿಂದ ನನಗೆ ಬಹಳ ಉಪಕಾರ ಆಯಿತು. ನಿಮ್ಮ ಮಾನವೀಯ ಗುಣ ಮತ್ತು ಸಂಸ್ಕಾರ ಈಗಿನ ಎಲ್ಲಾ ಯುವಕರಿಗೂ ವರದಾನವಾಗಿ ಬಂದರೆ ಸಮಾಜದ ದೃಷ್ಠಿಕೋನವೇ ಬದಲಾಗುತ್ತದೆ ಎಂದು ರಾಮಯ್ಯ ಮನಸಾರೆ ಹೇಳಿ, ನಿನ್ನ ಎಲ್ಲಾ ಉಪಕಾರ ಕೆಲಸಗಳನ್ನು ನಿನ್ನ ತಂದೆಗೆ ತಿಳಿಸುವೆ
ಎಂದು ಬಸ್ ಏರಿ ಕುಳಿತರು.
ಕೊನೆಯ ಮಾತು
ಸಾರ್, ನಾನು ನಿಮ್ಮ ಸ್ನೇಹಿತರ ಮಗ ಆನಂದ ಅಲ್ಲ, ನನ್ನ ಹೆಸರು ಅರವಿಂದ. ನೀವು ತಪ್ಪು ವಿಳಾಸಕ್ಕೆ ಬಂದಿದ್ದಿರಿ. ನೀವು ಕೇಳಿದ ವಿಳಾಸ ಇನ್ನೂ 2 ಕಿಮಿ ದೂರದಲ್ಲಿ ಇತ್ತು. ನೀವು ಅದಾಗಲೇ ಸುಸ್ತಾಗಿದ್ದಿರಿ, ಕತ್ತಲು ಆಗಿತ್ತು. ನಿಮ್ಮನ್ನು ಮತ್ತೆ 2 ಕಿಮಿ ದೂರ ನಡೆಸಲು ನನಗೆ ಮನಸ್ಸಾಗಲಿಲ್ಲ. ನಾನೇ ಆನಂದ್ ಎಂದು ಸತ್ಯವನ್ನು ಹೇಳಿಬಿಟ್ಟೆ.
ನಿಮ್ಮ ಮಗ ಮಹೇಶ್ ಅಪಘಾತನದಲ್ಲಿ ತೀರಿ ಹೋದ ಘಟನೆ ಕೇಳಿ ನನ್ನ ಮನ ಕಲುಕಿ ಹೋಯಿತು. ಮನಸ್ಸಿಗೆ ಬಹಳ ನೋವಾಯಿತು. ಖೇಧವೂ ಆಯಿತು. ನೀವು ಕಳೆದುಕೊಂಡ ಮಗನನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಅದನ್ನು ಅರಿತು ನಿಮಗೆ ನನ್ನ ಕೈಲಾದ ಸಹಾಯ ಮಾಡಿದೆ. ಇದರಿಂದ ನನ್ನ ಮನಸ್ಸಿಗೂ ತೃಪ್ತಿ ಆಯಿತು ಎಂದು ಹೇಳುವಷ್ಟರಲ್ಲಿ ಬಸ್ ಹೊರಟು ನಿಂತಿತು. ಅವರು ನನ್ನ ಕೈ ಹಿಡಿದು, ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹೇಳಿದರು.
ನನ್ನ ತಂದೆಯವರು ತೀರಿಹೋಗಿ 15 ವರ್ಷಗಳು ಆಗಿತ್ತು. ರಾಮಯ್ಯ ಅವರನ್ನು ನೋಡಿದಾಗ, ನನ್ನ ತಂದೆಯವರು ವಾಪಸ್ಸು ಬಂದಿದ್ದಾರೆ ಎನ್ನಿಸಿತು. ವೃದ್ದರೊಬ್ಬರು ಸಹಾಯ ಕೇಳಿದಾಗ ನೀನು ಈ ರೀತಿಯಲ್ಲಿ ಸಹಾಯ ಮಾಡುತ್ತೀಯೋ, ಇಲ್ಲವೋ ಎನ್ನುವ ರೀತಿಯಲ್ಲಿ ನನ್ನ ತಂದೆಯವರೇ ಪರೀಕ್ಷೆ ಮಾಡಿದ ಹಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಗುರುಗಳು ಹೇಳಿ ಕೊಟ್ಟ ನೀತಿಯ ಪಾಠಗಳು ನಿಜಕ್ಕೂ ಸಾರ್ಥಕವಾಯಿತು ಎನಿಸಿತು. ಆ ವೇಳೆಯಲ್ಲಿ ನನ್ನ ತಂದೆ ನೆನೆದುಕೊಂಡು ಮನೆಯತ್ತ ಹೆಜ್ಜೆ ಹಾಕಿದೆ
Excellent!
ಮನತಟ್ಟುವ, ಮನಮುಟ್ಟುವ, ಮನ ಕಲಕುವ ಆತ್ಮೀಯ ಬರಹ