ಶ್ರೇಷ್ಠ ಸಂಗೀತ ಸಾಧಕ, ಗಾಯನ ಗಾರುಡಿಗ ಎಸ್ ಪಿ ಬಿ ಇನ್ನಿಲ್ಲ

Team Newsnap
3 Min Read

ಶ್ರೇಷ್ಠ ಗಾಯಕ, ಸಂಗೀತ ಸಾಧಕ, ಗಾಯನ ಗಾರುಡಿಗ, ಸಂಗೀತ ನಿರ್ದೇಶಕ, ನಟ, ಕಂಠದಾನ ಕಲಾವಿದ ಎಸ್.ಪಿ.ಬಾಲಸುಬ್ರಮಣ್ಯಂ ವಿಧಿವಶರಾದರು.

ಆಗಸ್ಟ್ 5 ರಂದು ಕೊರೋನಾ ಸೋಂಕು ಧೃಡಪಟ್ಟಿದ್ದ ಹಿನ್ನಲೆಯಲ್ಲಿ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ 1 -04 ನಿಮಿಷಕ್ಕೆ
ಕೊನೆಯುಸಿರೆಳೆದರು.

1946 ಜೂನ್ 4 ರಂದು ಜನಿಸಿದ ಎಸ್ ಪಿ ಬಿ ಅವರು ಪತ್ನಿ ಸರಸ್ವತಿ, ಪುತ್ರ ಚರಣ್ , ಪುತ್ರಿ ಪಲ್ಲವಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ದೇಶದಾದ್ಯಂತ ಅನೇಕ ಸಂಗೀತ ಸಾಧಕರು, ನಟರು, ಅಭಿಮಾನಿಗಳು ಅವರ ಆರೋಗ್ಯ ಚೇತರಿಕೆಗೋಸ್ಕರ ಪ್ರಾರ್ಥನೆ ಮಾಡಿದ್ದರು. ತಮಿಳು ನಟ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ಕಲಾವಿದರು ಎಸ್.ಪಿ.ಬಿಯವರ ಆರೋಗ್ಯ ಚೇತರಿಗೆ ಪ್ರಾರ್ಥಿಸಿ ಅಹೋರಾತ್ರಿ ಅವರ ಹಾಡುಗಳನ್ನು ಹಾಡುತ್ತ ಕಳೆದಿದ್ದರು. ಯಾರ ಪ್ರಾರ್ಥನೆಯೂ ಫಲಿಸದೇ ಎಸ್.ಪಿ.ಬಿಯವರು ಇಹಲೋಕ ತ್ಯಜಿಸಿದ್ದಾರೆ.

ಆಸ್ಪತ್ರೆಗೆ ಸೇರಿದ ದಿನದಿಂದಲೂ ಅವರ ಆರೋಗ್ಯ ಸ್ಥಿತಿ ಏರುಪೇರಿನಿಂದ ಕೂಡಿತ್ತು. ಕೆಲವು ಬಾರಿ ಅವ್ರು ಚೇತರಿಸಿಕೊಳ್ಳುತ್ತಿದ್ದರು. ಮತ್ತೆ ಕೆಲವು ಬಾರಿ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿತ್ತು. ಇಸಿಎಂಓ ಹಾಗೂ ವೆಂಟಿಲೇಟರ್ ಮೂಲಕ ಅವರು ಇಷ್ಟು ದಿನ ಜೀವ ಹಿಡಿದುಕೊಂಡಿದ್ದರು. ಆದರೆ ನಿನ್ನೆ ಎಂಜಿಎಂ ಆಸ್ಪತ್ರೆಯ ವೈದ್ಯರು ‘ಎಸ್.ಪಿ.ಬಿ ಯವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದು ಇನ್ನು 24 ಗಂಟೆಗಳವರೆಗೆ ಏನೂ ಹೇಳಲಾಗುವದಿಲ್ಲ’ ಎಂದು ಹೇಳಿದ್ದರು.

ಹಾಗೆಯೇ ನಿನ್ನೆ ಎಸ್.ಪಿ.ಬಿ ಪುತ್ರ ಚರಣ್ , ‘ತಂದೆಯವರ ಆರೋಗ್ಯ ಸುಧಾರಣೆಯಾಗಿದೆ. ಇನ್ನು 4-5 ದಿನಗಳಲ್ಲಿ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡುವದಾಗಿ ಹೇಳಿದ್ದಾರೆ. ತಂದೆಯವರು ಕ್ಷೇಮವಾಗಿ ಮನೆಗೆ ಹಿಂದಿರುಗಲಿದ್ದಾರೆ’ ಎಂದು ಹೇಳಿದ್ದರು.

ಹರಿಕಥಾ ವಿದ್ವಾನ್ ರ ಪುತ್ರ

ಎಸ್.ಪಿ.ಬಿ ಯವರ ಪೂರ್ಣ ಹೆಸರು ಶ್ರೀಪತಿ ಪಂಡಿತರಾಧ್ಯುಲ ಬಾಲ ಸುಬ್ರಮಣ್ಯಂ. ಆಂಧ್ರ ಪ್ರದೇಶದ ನೆಲ್ಲೂರ್ ಜಿಲ್ಲೆಯ ಕೊನೇಟಮ್ಮಪೇಟಾ ಗ್ರಾಮದಲ್ಲಿ ಜನಿಸಿದರು. ತಂದೆ ಎಸ್.ಪಿ. ಸಾಂಬಮೂರ್ತಿಯವರು ಹರಿಕಥಾ ವಿದ್ವಾನ್ ಆಗಿದ್ದವರು. ತಾಯಿ ಶಕುಂತಲಮ್ಮ. ಇವರು ಯಾವುದೇ ಶಾಸ್ತ್ರೀಯ ಸಂಗೀತವನ್ನೂ ಕಲಿತವರಲ್ಲ. ೧೯೬೬ ರಲ್ಲಿ ಬಾಲು ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ‘ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ’ ಎಂದು ಯಾವಾಗಲೂ ಹೇಳುತ್ತಿದ್ದರು.

ಕನ್ನಡದ ಮಗ

ಎಸ್.ಪಿ.ಬಿ.ಯವರು ತೆಲುಗು ಭಾಷಿಕರಾದರೂ ಕನ್ನಡದ ಮಗನೇನೋ ಎಂಬಷ್ಟು ಕನ್ನಡಕ್ಕೆ ಹತ್ತಿರವಾದವರು. ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ತಮ್ಮ ಅಧಿಪತ್ಯವನ್ನು ಸಾಧಿಸಿದ್ದರು. ಆಗ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಬಾಲು ಎಲ್ಲಾ ಚಿತ್ರರಂಗಗಳನ್ನೂ ನಿಧಾನವಾಗಿ ಆವರಿಸಿಕೊಳ್ಳತೊಡಗಿದರು. ಬಾಲ ಸುಬ್ರಮಣ್ಯಂ ಹಿಂದಿಯಲ್ಲೂ ಹಾಡಿ ಸೈ ಅನ್ನಿಸಿಕೊಂಡರು. ಆದರೆ ಹಿಂದಿ ಚಿತ್ರರಂಗದಲ್ಲಿನ ರಾಜಕೀಯದಿಂದಾಗಿ ಅಲ್ಲಿ ಸರಿಯಾಗಿ ಪುರಸ್ಕೃತರಾಗಲಿಲ್ಲ. ಆದರೆ ಅವರು ಅದಕ್ಕೇನೂ ಬೇಜಾರು ಮಾಡಿಕೊಳ್ಳಲಿಲ್ಲ.

ಕನ್ನಡದ ಶತಾಯುಷಿ, ಪ್ರೊ. ಜಿ. ವೆಂಕಟಸುಬ್ಬಯ್ಯನವರು ಎಸ್.ಪಿ.ಬಿ.ಯವರನ್ನು ಹೆಮ್ಮೆಯಿಂದ ‘ಕನ್ನಡದ ದತ್ತುಪುತ್ರ’ ಎಂದು ಕರೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲ ಭಾಷೆಗಳಲ್ಲೂ ಈವರೆಗೂ ಎಸ್.ಪಿ.ಬಿ.ಯವರು 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಕೇವಲ ಗಾಯಕರಷ್ಟೇ ಅಲ್ಲದೇ ಕಂಠದಾನ ಕಲಾವಿದರೂ ಆಗಿದ್ದರು. ರಜನಿಕಾಂತ್, ಕಮಲ್ ಹಾಸನ್ ಅವರ ತಮಿಳು ಚಿತ್ರಗಳು ತೆಲುಗಿಗೆ ಡಬ್ ಆದಾಗ, ಅವರಿಗೆ ಬಾಲು ಅವರೇ ಧ್ವನಿ ನೀಡಬೇಕಾಗಿತ್ತು. ಇಲ್ಲದಿದ್ದರೆ ಸ್ವತಃ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರೇ ತೆಲುಗಿಗೆ ಚಿತ್ರಗಳನ್ನು ಡಬ್ ಮಾಡಲು ಒಪ್ಪುತ್ತಿರಲಿಲ್ಲ.

ಪ್ರಶಸ್ತಿ ಗಳ ಸುರಿ ಮಳೆ

ಬಾಲಸುಬ್ರಮಣ್ಯಂ ಸಂಗೀತ ಕೃಷಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು, 25 ಬಾರಿ ಆಂಧ್ರಪ್ರದೇಶ ಸರ್ಕಾರದ ‘ನಂದಿ’ ಪ್ರಶಸ್ತಿ, 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ, ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್, ಪದ್ಮಭೂಷಣ, ಪದ್ಮಶ್ರೀ ಹೀಗೆ ಅನೇಕ ಪ್ರಶಸ್ತಿಗಳಿಗೆ ಬಾಲಸುಬ್ರಮಣ್ಯಂ ಅವರು ಭಾಜನರಾಗಿದ್ದಾರೆ.

ಇಷ್ಟೆಲ್ಲ ಸಾಧನೆಗಳನ್ನು ಮಾಡಿದ ಸಂಗೀತ ಸಂಗೀತ ಕ್ಷೇತ್ರದ ದಿಗ್ಗಜ, ತಮ್ಮ ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಚಿರನಿದ್ರೆಗೆ ಜಾರಿದ್ದಾರೆ.

Share This Article
2 Comments