ಛೇ ಛೇ ಕನ್ನಡ ಟಿವಿ ವಾಹಿನಿಗಳೇ ಮತ್ತು ಅದರ ಎಲ್ಲಾ ಸಿಬ್ಬಂದಿ ವರ್ಗದವರೇ ರಾಕ್ಷಸರೆಂದರೆ ಬೇರೆ ಯಾರೂ ಅಲ್ಲ ಅದು ನೀವೇ…..
ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ, ಮನಸ್ಸಿನಲ್ಲಿ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಿ
ಪೋಲೀಸರನ್ನು ಪ್ರಚೋದಿಸಿ ಅಮಾಯಕ ಬಡವರು ದುರ್ಬಲರನ್ನು ಲಾಠಿಯಲ್ಲಿ ಹೊಡೆಸುವ ಪರಮ ಕಿರಾತಕರು ನೀವು.
ಅಯ್ಯೋ ಪಾಪಿಗಳ ಇಡೀ ಜೀವ ಸಂಕುಲ ಹೋರಾಡುವುದು ಬದುಕಲೇ ಹೊರತು ಸಾಯಲು ಅಲ್ಲ. ಎಲ್ಲರಿಗೂ ಸಾವಿನ ಭಯ ಬದುಕುವ ಛಲ ಇದ್ದೇ ಇರುತ್ತದೆ. ಆದರೆ ಹೊಟ್ಟೆ ಪಾಡಿಗಾಗಿ ಏನೋ ಒಂದಷ್ಟು ಆಸೆಯಿಂದ ದುಡಿಯುತ್ತಾರೆ. ಅವರು ಕೊಲೆ ಮಾಡಿಲ್ಲ, ಅತ್ಯಾಚಾರ ಮಾಡಿಲ್ಲ, ದರೋಡೆ ವಂಚನೆ ಮಾಡಿಲ್ಲ. ಕೇವಲ ಮಾಸ್ಕ್ ಧರಿಸಿಲ್ಲ ಅಥವಾ ಸರ್ಕಾರದ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಓಡಾಡಿರಬಹುದು. ಅಷ್ಟಕ್ಕೇ ಹೊಡೆಯುವ ದೊಡ್ಡ ಶಿಕ್ಷೆ ಸಾರ್ವಜನಿಕವಾಗಿ ಕೊಡಲು ಇದೇನು ರಾಜ ಪ್ರಭುತ್ವವೇ…..
ಅಯ್ಯೋ ನೀಚರ, ಏಟು ತಿಂದವರ ಮನೆಯವರು ಆ ದೃಶ್ಯಗಳನ್ನು ನೋಡಿದರೆ ಅವರ ಮನಸ್ಥಿತಿ ಹೇಗಿರಬಹುದು ಊಹಿಸಿ ಅಥವಾ ಏಟು ತಿಂದವರಿಗೆ ಈ ನೆಲದ ಮೇಲೆ ಈ ಸಮಾಜದ ಮೇಲೆ ಹೇಗೆ ಗೌರವ ಮೂಡಲು ಸಾಧ್ಯ. ಬದಲಾಗಿ ಇನ್ನೂ ದ್ವೇಷ ಹೆಚ್ಚಾಗುತ್ತದೆ.
ಕೊರೋನಾ ಕೊರೋನಾ ಎಂದು ಇಡೀ ಮಾನವೀಯತೆಗೆ ಕೊಳ್ಳಿ ಇಡುತ್ತಿದ್ದೀರಿ. ಲಾಠಿ ಮುಖಾಂತರ ಕೊರೋನಾ ನಿಯಂತ್ರಿಸಲು ಸಾಧ್ಯವೇ ? ಮನೆಯಲ್ಲೇ ಕುಳಿತರೆ ಊಟ ತಿಂಡಿ ಮನೆ ಬಾಡಿಗೆ ವಿದ್ಯುತ್ ನೀರಿನ ಬಿಲ್ ನೀವು ಕೊಡುತ್ತೀರ ಮಾಧ್ಯಮಗಳೇ…..
ನಿಮಗೆ ತಾಖತ್ತು ಇದ್ದರೆ ರಾಜಕೀಯ ಸಮಾವೇಶಗಳಿಗೆ ನುಗ್ಗಿ ಹೊಡೆಯಿರಿ, ಭ್ರಷ್ಟ ವ್ಯವಸ್ಥೆಯ ಜನರೇ ತುಂಬಿರುವ ವಿಧಾನಸೌಧಕ್ಕೆ ಲಾಠಿ ಬೀಸಿ, ಭ್ರಷ್ಟ ಕಳ್ಳ ಕಾಳಸಂತೆಕೋರರಿಗೆ ಕೈ ಮಾಡಿ, ಆಹಾರ ಕಲಬೆರಕೆ, ವೈದ್ಯಕೀಯ ಮಾಫಿಯಾ, ಕಪ್ಪು ಹಣದ ಖದೀಮರಿಗೆ ಪಾಠ ಕಲಿಸಿ.
ಅದು ಬಿಟ್ಟು ಮುಗ್ಧ, ಹೊಟ್ಟೆ ಪಾಡಿನ, ಪೋಲೀಸರನ್ನು ಕಂಡರೆ ಭಯ ಪಡುವ ಜನರಿಗೆ ವಯಸ್ಸನ್ನು ನೋಡದೆ ಹೊಡೆಯುವುದು ಮತ್ತು ಅದನ್ನು ಇಡೀ ರಾಜ್ಯ ನೋಡುವಂತೆ ಬಿಸಿ ಬಿಸಿ ಕಜ್ಜಾಯ ಎಂದು ವ್ಯಂಗ್ಯವಾಗಿ ತೋರಿಸುವುದು ರಾಕ್ಷಸ ಗುಣದವರಿಗೆ ಮಾತ್ರ ಸಾಧ್ಯ.
ಕೊರೋನಾ ಬಂದು ಸತ್ತರೂ ಚಿಂತೆ ಇಲ್ಲ. ಆದರೆ ಪೋಲೀಸರಿಂದ ಈ ಮಧ್ಯ ವಯಸ್ಸಿನಲ್ಲಿ ಹೊಡೆತ ತಿನ್ನುವುದನ್ನು ಇಡೀ ರಾಜ್ಯ ನೋಡುವುದು ನನ್ನಿಂದ ಸಹಿಸಲಾಗುತ್ತಿಲ್ಲ ಎಂದು ಹಿರಿಯರೊಬ್ಬರು ರಾತ್ರಿ ಕರೆ ಮಾಡಿ ನೊಂದು ಕೊಂಡರು. ಪೋಲಿಸರು ಹೊಡೆದದ್ದು ಅವರಿಗೆ ಹೆಚ್ಚು ನೋವಾಗಲಿಲ್ಲ. ಅದನ್ನು ಮಾಧ್ಯಮಗಳು ಆಗಾಗ ಇಡೀ ರಾಜ್ಯಕ್ಕೆ ತೋರಿಸುವುದರಿಂದ ಅವರಿಗೆ ಊಟವೇ ಸೇರುತ್ತಿಲ್ಲ. ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ನನ್ನ ಕೈಲಾದಷ್ಟು ಸಮಾಧಾನ ಹೇಳಿದ್ದೇನೆ.
ಇದನ್ನು ಖುದ್ದು ವೀಕ್ಷಿಸಿದ ನನ್ನ ಗೆಳೆಯರು ಪೋಲೀಸ್ ಕಮಿಷನರ್ ಕಚೇರಿಗೆ ಫೋನ್ ಮಾಡಿ ಹಿಂಸೆಯನ್ನು ಖಂಡಿಸಿದ್ದಾರೆ.
ಅನೇಕ ತರಕಾರಿ ಮಾರುವ, ಊಟ ನೀಡುವ, ಆಟೋ ಓಡಿಸುವ, ಮೀನು ಮಾರುವ ಜನರ ಮೇಲೆ ಸಾಕಷ್ಟು ಹಲ್ಲೆಗಳು ನಡೆದಿವೆ. ಇದಕ್ಕೆ ಮುಖ್ಯ ಕಾರಣ ಮಾಧ್ಯಮಗಳೇ…..
ಹೇಗೆಂದರೆ, ಒಂದು ಕಡೆ ಸ್ಮಶಾನ ತೋರಿಸುವುದು, ಮತ್ತೊಂದು ಕಡೆ ರೋಗಿಗಳ ನರಳಾಟ, ಇನ್ನೊಂದು ಕಡೆ ಜನರು ಗುಂಪು ಗೂಡುವುದನ್ನು ತೋರಿಸಿ ಪೋಲೀಸರು ಏನೂ ಮಾಡುತ್ತಿಲ್ಲ ಎಂದು ಕೂಗಾಡುತ್ತಾರೆ. ಆಗ ಕೆಲವು ಪೋಲೀಸರು ಮಾಧ್ಯಮಗಳನ್ನು ಕರೆಸಿಕೊಂಡು ಸಿಕ್ಕಸಿಕ್ಕವರಿಗೆ ಬಾರಿಸಿ ಅದನ್ನು ಈ ರಾಕ್ಷಸ ಮಾಧ್ಯಮಗಳ ಪ್ರತಿನಿಧಿಗಳು ವಿವಿಧ ಕೋನಗಳಲ್ಲಿ ಉತ್ಸಾಹದಿಂದ ಚಿತ್ರಿಸಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸುವುದು, ಅದರಿಂದ ಸರ್ಕಾರ ಒಂದಷ್ಟು ಲಾಕ್ ಡೌನ್ ಯಶಸ್ವಿಯಾದಂತೆ ಸಮಾಧಾನ ಮಾಡಿಕೊಳ್ಳುವುದು.
ಮಾಧ್ಯಮಗಳು ಕೊರೋನಾ ವಾರಿಯರ್ಸ್ ಅಂತೆ. ವಾಸ್ತವವಾಗಿ ಕೊರೋನಾ ಸಾವು ಹೆಚ್ಚಾಗಲು ಮತ್ತು ಆಡಳಿತ ಯಂತ್ರ ವಿಫಲವಾಗಿ ಆರ್ಥಿಕ ಮತ್ತು ಶೈಕ್ಷಣಿಕ ವ್ಯವಸ್ಥೆ ಕುಸಿಯಲು ಪರೋಕ್ಷವಾಗಿ ದೃಶ್ಯ ಮಾಧ್ಯಮಗಳು ಸಹ ಕಾರಣ ಎಂಬುದು ಅನೇಕ ಗೆಳೆಯರ ಅಭಿಪ್ರಾಯ. ಸುದ್ದಿಗಳ ಮಹತ್ವವೇ ಅರಿಯದೆ ಜನಪ್ರಿಯತೆ ಮತ್ತು ಹಣಗಳಿಕೆಯ ದುರಾಸೆಗೆ ಬಿದ್ದು ಇಲ್ಲ ಸಲ್ಲದ ಗಾಳಿ ಸುದ್ದಿಗಳನ್ನು ಹಸಿ ಹಸಿಯಾಗಿ ತೋರಿಸಿ ಜನರಲ್ಲಿ ಮಾನಸಿಕ ಖಿನ್ನತೆಗೆ ಕಾರಣರಾದವರು ಇದೇ ಮಾಧ್ಯಮಗಳು.
ಮಾಧ್ಯಮ ಸ್ವಾತಂತ್ರ್ಯ ಮತ್ತು ಪೋಲೀಸ್ ವ್ಯವಸ್ಥೆಯ ಶ್ರಮವನ್ನು ಗೌರವಿಸುತ್ತಾ…….
ದಯವಿಟ್ಟು ಅರ್ಥಮಾಡಿಕೊಳ್ಳಿ. ಈ ದೇಶದಲ್ಲಿ ಯಾವುದೇ ಕಾನೂನನ್ನು ಅದರ ನಿಜ ರೂಪದಲ್ಲಿ ಸಂಪೂರ್ಣ ಅನುಸರಿಸಲು ಯಾರಿಂದಲೂ ಸಾಧ್ಯವಿಲ್ಲ. ಭಾರತೀಯ ಸಮಾಜ ಅತ್ಯಂತ ಸಂಕೀರ್ಣ ಜೀವನ ಶೈಲಿಯನ್ನು ಹೊಂದಿದೆ. ಅದಕ್ಕೆ ಹಲವಾರು ಕಾರಣಗಳಿವೆ. ಹಾಗೆ ನೋಡಿದರೆ ಕೊರೋನಾ ವೈರಸ್ ಎರಡನೇ ಅಲೆ ಇಷ್ಟೊಂದು ವ್ಯಾಪಕವಾಗಿ ಹರಡಲು ಚುನಾವಣಾ ಆಯೋಗ ಮತ್ತು ರಾಜಕಾರಣಿಗಳು ಬಹುಮುಖ್ಯ ಕಾರಣ. ಅವರಿಗೆ ಮೊದಲು ಶಿಕ್ಷೆ ವಿಧಿಸಬೇಕು. ಇತ್ತೀಚೆಗೆ ಕೂಡ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ಅದರಲ್ಲಿ ರಾಜಕೀಯ ನಾಯಕರು ಸಾರ್ವಜನಿಕವಾಗಿ ಗುಂಪುಗುಂಪಾಗಿ ಮತ ಯಾಚಿಸಿದ್ದನ್ನು ಇದೇ ಮಾಧ್ಯಮಗಳು ತೋರಿಸಿವೆ. ಆಗ ಲಾಠಿ ಬೀಸದ ಪೋಲೀಸರು ಸಾಮಾನ್ಯರ ಬಗ್ಗೆ ಏಕೆ ಅಸಹನೆ ಮತ್ತು ತಾರತಮ್ಯ.
ಈ ದೇಶದಲ್ಲಿ ಅನೇಕ ದೊಡ್ಡವರಿಂದ ಪ್ರತಿ ಕ್ಷಣವೂ ಅನೇಕ ಕಾನೂನು ಉಲ್ಲಂಘನೆ ನಡೆಯುತ್ತಿದೆ. ಅವರಿಗೂ ಲಾಠಿ ಬೀಸುವ ಧೈರ್ಯ ನಿಮಗಿದೆಯೇ. ಜೀವ ಜೀವನದ ಆತಂಕದ ನಡುವೆ ಮನುಷ್ಯನ ಮನಸ್ಸು ನರಳುತ್ತಿರುವಾಗ ಕೆಲವರಿಂದ ಒಂದಷ್ಟು ಸಣ್ಣ ತಪ್ಪುಗಳು ಸಹಜ ಮತ್ತು ಅನಿವಾರ್ಯ. ಅದನ್ನು ಮಾನವೀಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಿ. ನಿರಂತರ ಅರಿವು ಮೂಡಿಸಿ. ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಅವ್ಯವಸ್ಥೆ ಇದ್ದೇ ಇರುತ್ತದೆ.
ಸಿಗರೇಟು, ಹೆಂಡ, ಗುಟ್ಕಾ, ಚುನಾವಣೆಯಲ್ಲಿ ಮತ ಖರೀದಿಸುವ, ಸತ್ತ ಹೆಣದ ಮೇಲೆ ಹಣ ಮಾಡುವ ಅನೇಕ ದಂಧೆಕೋರರಿಂದ ಈ ದೇಶದಲ್ಲಿ ಲಕ್ಷಾಂತರ ಮಂದಿ ಪ್ರತಿವರ್ಷ ಸಾಯುತ್ತಿದ್ದಾರೆ. ಅವರಿಗೆ ನೀಡದ ಲಾಠಿ ಶಿಕ್ಷೆ, ಮಾಸ್ಕ್ ಹಾಕದ, ಹೊಟ್ಟೆ ಪಾಡಿಗೆ ಸಣ್ಣ ನಿಯಮ ಉಲ್ಲಂಘಿಸುವ ಜನರಿಗೆ ನೀಡುವುದು ಯಾವ ನ್ಯಾಯ.
ಅದನ್ನು ಅತ್ಯಂತ ಹೇಯವಾಗಿ ಸಾರ್ವಜನಿಕವಾಗಿ ಪ್ರದರ್ಶಿಸುವುದು ಘೋರ ಪ್ರಮಾದ.
ಒಂದು ಸಾಂಕ್ರಾಮಿಕ ರೋಗವನ್ನು ಅರಿವಿನ ಭಯದಿಂದ ನಿವಾರಿಸುವುದ ಲಾಠಿ ಭಯದಿಂದ ನಿವಾರಿಸುವುದಕ್ಕಿಂತ ಹೆಚ್ಚು ಮಾನವೀಯ ಮತ್ತು ಪರಿಣಾಮಕಾರಿ, ಅದರಿಂದ ಭವಿಷ್ಯದ ಸಾಮಾಜಿಕ ದುಷ್ಪರಿಣಾಮಗಳು ಕಡಿಮೆ ಎಂಬ ಸಾರಾಂಶದೊಂದಿಗೆ……..
ಮಾಧ್ಯಮ ಮತ್ತು ಪೋಲೀಸ್ ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪ್ರಮುಖ ಅಂಗಗಳು ಎಂಬ ಅರಿವಿನೊಂದಿಗೆ……
ಅದನ್ನು ಇನ್ನಷ್ಟು ಮಾನವೀಯ ಗೊಳಿಸುವ ಅಗತ್ಯ ಮತ್ತು ಆಶಯದೊಂದಿಗೆ…….
- ವಿವೇಕಾನಂದ. ಹೆಚ್.ಕೆ.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!