90 ರ ದಶಕದಲ್ಲಿ ವಾಕಿಟಾಕಿಯಲ್ಲಿ ಸುದ್ದಿಕೊಡುತ್ತಿದ್ದ ಪತ್ರಕರ್ತ ಅ.ಚ.ಶಿವಣ್ಣ

Team Newsnap
2 Min Read
  • ಪತ್ರಕರ್ತರು ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ಮಾಧ್ಯಮಗಳಲ್ಲಿರಬೇಕು
  • ಕೆಯೂಡಬ್ಲ್ಯೂಜೆ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ

ಬೆಂಗಳೂರು :

ಪತ್ರಕರ್ತರಿಗೆ ಹಲವಾರು ಪರಿಸ್ಥಿತಿಗಳಲ್ಲಿ ನಿಭೀರ್ತಿಯಿಂದ ವೃತ್ತಿ ನಿಭಾಯಿಸುವ ಪರಿಸ್ಥಿತಿ ಇಂದು ಮಾಧ್ಯಮದಲ್ಲಿಲ್ಲ. ಹೊಂದಾಣಿಕೆಯ ವೃತ್ತಿ ಧರ್ಮ ಇಂದು ಪರ್ತಕರ್ತರ ಪರಿಸ್ಥಿತಿಯಾಗಿದೆ ಎಂದು ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಅವರು ವಿಷಾದಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯೂಡಬ್ಲ್ಯೂಜೆ) ಹಮ್ಮಿಕೊಂಡಿದ್ದ ’ಮನೆಯಂಗಳದಲ್ಲಿ ಮನದುಂಬಿ’ ನಮನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಕರ್ತರು ವೃತ್ತಿ ಬದ್ಧತೆಯನ್ನು ಉಳಿಸಿಕೊಳ್ಳಲು ಸದಾ ಜಾಗೃತವಾಗಿರಬೇಕು ಎಂದರು.

ವಾಕಿಟಾಕಿ ವರದಿಗಾರಿಕೆ:

ತೊಂಬತ್ತರ ದಶಕದಲ್ಲಿ ಪೊಲೀಸರನ್ನು ಹೊರತುಪಡಿಸಿ ಯಾರೂ ವಾಕಿಟಾಕಿ ಬಳಸುವಂತಿರಲಿಲ್ಲ. ಸಂಜೆವಾಣಿ ಪತ್ರಿಕೆಗೆ ವೇಗವಾಗಿ ಸುದ್ದಿ ಕೊಡಬೇಕು ಎನ್ನುವ ನಿಟ್ಟಿನಲ್ಲಿ ವಾಕಿಟಾಕಿ ಅಳವಡಿಸಿದ್ದು ಆ ಕಾಲಘಟ್ಟದಲ್ಲಿ ಕ್ರಾಂತಿಕಾರಿ ಹೆಜ್ಜೆ. ಅಂದಿನ ದಿನಗಳಲ್ಲಿ ತಾವು ಪತ್ರಿಕೆಗೆ ವರದಿ ಮಾಡುವ ವೇಳೆ ವಾಕಿಟಾಕಿ ಬಳಸಿ ಸುದ್ದಿ ಕೊಡುತ್ತಿದ್ದೆವು. ಅದೆಲ್ಲವೂ ಮರೆಯಲಾರದ ಘಟನೆ ಎಂದು ತಮ್ಮ ನೆನಪನ್ನು ಮೆಲುಕಿ ಹಾಕಿದರು. ಅದನ್ನು ಬಳಸಲು ಲೈಸೆನ್ಸ್ ಪಡೆಯುವುದೇ ಒಂದು ಹರಸಾಹಸವಾಗಿತ್ತು ಎಂದೂ ಅವರು ಹೇಳಿದರು.

ರಾಜೀನಾಮೆ ಸುದ್ದಿ ಪ್ರಸಂಗ
1992 ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುವುದು ಖಚಿತವಾಗುತ್ತಿದ್ದಂತೆ ಮತ್ತು 1996 ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದು ಖಚಿತವಾದಾಗ ಧೈರ್ಯ ಮಾಡಿ ಒಂದು ದಿನ ಮೊದಲೇ ’ರಾಜೀನಾಮೆ’ ಎಂದು ಪತ್ರಿಕೆಗೆ ಸುದ್ದಿ ಕೊಟ್ಟಿದ್ದೆ. ಯಾವುದೇ ಪ್ರಶ್ನಾರ್ಥಕ ಚಿಹ್ನೆ ಇಲ್ಲದೆ ಸುದ್ದಿ ಪ್ರಕಟಿಸಿದ್ದಕ್ಕೆ ಆಗ ದೊಡ್ಡ ಸಂಘರ್ಷದ ವಾತಾವರಣವನ್ನು ಎದುರಿಸಬೇಕಾಗಿ ಬಂತು ಎಂದು ನೆನಪಿಸಿಕೊಂಡರು.

ಕೆಯುಡಬ್ಲೂೃಜೆ ಹೆಜ್ಜೆ ಗುರುತು :

ನಾವಾಗ ವೃತ್ತಿಗೆ ಬಂದಾಗ ಕೆಯುಡಬ್ಲೂೃಜೆ ಸಂಘಟನೆ ಇತ್ತು. ಮಾತೆತ್ತಿದರೆ ಸ್ಟ್ರೈಕ್ ಮಾಡಲಾಗುತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕೆಯುಡಬ್ಲೂಜೆ ಸಂಘಟನೆಗೆ ಶಿವಾನಂದ ತಗಡೂರು ಹೊಸ ರೂಪ ನೀಡಿದ್ದಾರೆ. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ ನೆರವು ಕೊಡಿಸಿದ ಅವರ ಹೋರಾಟಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಬಾಗೂರು ನವಿಲೆ ಹೋರಾಟದಿಂದ ಬಂದ ತಗಡೂರು, ಕೆಯುಡಬ್ಲೂೃಜೆಗೆ ದೊಡ್ಡ ಆಸ್ತಿಯಾಗಿ ರೂಪುಗೊಂಡಿರುವುದು ಅಭಿಮಾನದ ಸಂಗತಿ ಎಂದು ಶಿವಣ್ಣ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘವು ಹಿರಿಯ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮವನ್ನು ಮುಂದುವರಿಸುತ್ತಿದ್ದು, ಮುಂದೊಮ್ಮೆ ಹಿರಿಯರ ಅನುಭವಗಳೆಲ್ಲಾ ಪುಸ್ತಕ ರೂಪದಲ್ಲಿ ಹೊರ ತರಲಾಗುವುದು. ಇದೆಲ್ಲವೂ ಮುಂದೆ ಉದಯೋನ್ಮುಖ ಪತ್ರಕರ್ತರಿಗೆ ಕೈಪಿಡಿ ಆಗಬಹುದೆನ್ನುವ ಆಶಯ ಸಂಘದ್ದಾಗಿದೆ ಎಂದರು.

ಸಮಾರಂಭದಲ್ಲಿ ಅ.ಚ.ಶಿವಣ್ಣ ಅವರ ಪತ್ನಿ ಹಾಗೂ ಹಿರಿಯ ಲೇಖಕಿ ಇಂದಿರಾ ಶಿವಣ್ಣ ಅವರನ್ನೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಪುತ್ರ ಡಾ. ದೀಪಕ್, ಸೊಸೆ ತೇಜಸ್ವಿನಿ ಪಾಟೀಲ್ ಸೇರಿದಂತೆ ಶಿವಣ್ಣ ಅವರ ಹಿತೈಷಿಗಳೂ ಭಾಗವಹಿಸಿದ್ದರು. ಕೆಯುಡಬ್ಲೂೃಜೆ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಸ್ವಾಗತಿಸಿದರು,

ಕೊನೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ. ಜಿಕ್ರಿಯಾ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ದೇವರಾಜ್, ಸದಸ್ಯರಾದ ಶರಣ ಬಸಪ್ಪ, ಗೊರೂರು ಪಂಕಜ, ಕ.ನಿ.ಪ ಜಮಖಂಡಿ ತಾಲೂಕು ಅಧ್ಯಕ್ಷ ಅಪ್ಪು ಪೋತರಾಜ್ ಮತ್ತಿತರರು ಹಾಜರಿದ್ದರು.

Share This Article
Leave a comment