ಹೋರಾಟಕ್ಕೆ ಬರುವುದಾಗಿ ಹೇಳಿಲ್ಲ: ಸಿದ್ದು

Team Newsnap
1 Min Read

ಕುರುಬರನ್ನು ಎಸ್‌ಟಿಗೆ ಸೇರಿಸುವ ವಿಷಯ ಕುರಿತ ಹೋರಾಟಕ್ಕೆ ನನ್ನನ್ನು ಯಾರು ಕರೆದಿಲ್ಲ. ನಾನು ಬರುವುದಾಗಿ ಹೇಳೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.


ಕುರುಬರ ನಾಯಕ ಎಂದು ನಾನೇ ಹಣೆಗೆ ಪಟ್ಟಿ ಕಟ್ಟಿಕೊಂಡು ಹೇಳೋಕೆ ಆಗೋಲ್ಲ. ರಾಜ್ಯದ ಜನರು ಗುರುತಿಸಬೇಕು. ಈಶ್ವರಪ್ಪ ಅವರೇ ಕುರುಬರ ನಾಯಕ ಅಂದುಕೊಳ್ಳಲಿ ಎಂದು ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು. ಕುರುಬ ಸಮುದಾಯವನ್ನು ಒಡೆಯಲು ಆರ್‌ಎಸ್‌ಎಸ್‌ನವರು ಸಚಿವ ಈಶ್ವರಪ್ಪ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಈ ಸಮುದಾಯವನ್ನು ಕೇವಲ ಎಸ್‌ಟಿ ಸಮುದಾಯಕ್ಕೆ ಸೇರಿಸಿ ಎಂದು ಹೋರಾಟ ಮಾಡುವುದಲ್ಲ. ಎಸ್‌ಟಿ ಮೀಸಲು ಪ್ರಮಾಣವನ್ನು ಶೇ. ೨೦ರಷ್ಟು ಹೆಚ್ಚಿಸಲು ಹೋರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈಶ್ವರಪ್ಪ ಅವರಿಗೆ ಸ್ವಂತ ಬುದ್ಧಿ ಇಲ್ಲ. ದಿಢೀರ್ ಎಂದು ಕುರುಬರ ಬಗ್ಗೆ ಕಾಳಜಿ ಬಂದಿದೆ. ಸಮುದಾಯದ ಮಠ ಮಾಡುವಾಗ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಉಡುಪಿ ಮಠದಲ್ಲಿ ಕನಕನಕಿಂಡಿ ವಿವಾದ ಉದ್ಭವಿಸಿದಾಗ ಎಲ್ಲಿ ಹೋಗಿದ್ದರು. ಈಗ ಪಾದಯಾತ್ರೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಕುಟುಕಿದರಲ್ಲದೆ ಕುರುಬ ಸಮುದಾಯದ ಪ್ರಭಾವಿ ನಾಯಕ ಈಶ್ವರಪ್ಪ ಅಲ್ಲ ಎಂದರು ನಿಯೋಗ ಭೇಟಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ನಿಯೋಗ ಇಂದು ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಇದೇ ವೇಳೆ ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ದು ವಿರೋಧ ವ್ಯಕ್ತಪಡಿಸಿದ್ದಾರೆ.

Share This Article
Leave a comment