November 25, 2024

Newsnap Kannada

The World at your finger tips!

sidda

ಇದು ಆತ್ಮನಿರ್ಭರ ಅಲ್ಲ, ಆತ್ಮಬರ್ಬರ ಬಜೆಟ್: ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ

Spread the love

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಪರಿಹಾರಕ್ಕಾಗಿ “ಆತ್ಮನಿರ್ಭರ’ ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ‘ಆತ್ಮಬರ್ಬರ’ ಬಜೆಟ್ ನೀಡಿದ್ದಾರೆ. ಇದೊಂದು ರೀತಿಯಲ್ಲಿ “ಆತ್ಮ ಬರ್ಬಾದ್’ (ವಿನಾಶ) ಬಜೆಟ್ ಕೂಡಾ ಹೌದು ಎಂದು ವಿಧಾನ ಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ವ್ಯಂಗ್ಯ ಮಾಡಿದ್ದಾರೆ.

ಸೋಮವಾರ ಕೇಂದ್ರ ಬಜೆಟ್‌ 2021 ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಕೊರೊನಾದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ, ರೈತರ ಬೆಳೆಗೆ ಬೆಲೆ ಇಲ್ಲದೆ ದಿವಾಳಿ ಸ್ಥಿತಿಯಲ್ಲಿದ್ದಾರೆ, ಉದ್ಯಮಿಗಳು ಮಾರುಕಟ್ಟೆ ಇಲ್ಲದೆ ಕಷ್ಟದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಯಾವ ನಿರ್ದಿಷ್ಠ ಕ್ರಮಗಳು 2021-22ರ ಸಾಲಿನ ಬಜೆಟ್ ನಲ್ಲಿ ಇಲ್ಲ ಎಂದು ಟೀಕಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಲ್ಲಿದ್ದಲು, ಪಾಮ್ ಆಯಿಲ್, ಕಡಲೆ, ಬಟಾಣಿ, ಹತ್ತಿಯಿಂದ ಹಿಡಿದು ಸೇಬು, ಮದ್ಯದ ವರೆಗೆ ಎಲ್ಲದರ ಮೇಲೂ ಶೇಕಡಾ 2.5ರಿಂದ ಹಿಡಿದು ಶೇಕಡಾ ನೂರರ ವರೆಗೆ ಕೃಷಿ ಸೆಸ್ ಹೇರಲಾಗಿದೆ. ಇದರಿಂದಾಗುವ ಬೆಲೆ ಏರಿಕೆಗೆ ರೈತರೂ ಸೇರಿದಂತೆ ಎಲ್ಲರೂ ತಲೆಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನೀರಾವರಿ ಯೋಜನೆಗಳು, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆ ರಕ್ಷಣೆಗೆ ಕ್ರಮಗಳು, ಕಡಿಮೆ ಬಡ್ಡಿದರದಲ್ಲಿ ಸಾಲ, ಕಡಿಮೆ ಬೆಲೆಯಲ್ಲಿ ಬೀಜ-ಗೊಬ್ಬರ ಸೇರಿದಂತೆ ರೈತರ ಅವಶ್ಯಕತೆಗಳನ್ನು ಪೂರೈಸುವ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಸಂಸದರಾಗಿದ್ದರೂ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮೆಟ್ರೋ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್ ಗೆ ನೀಡಿರುವ ಅನುದಾನ ಹೊಸದೇನಲ್ಲ. ಉಳಿದಂತೆ ಹಣಕಾಸು ಸಚಿವರು ಒಮ್ಮೆಯೂ ಕರ್ನಾಟಕದ ಹೆಸರನ್ನೂ ಕೂಡಾ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!