ಆರ್ ಎಸ್ ಎಸ್ ತಾಲಿಬಾನ್ ಎಂದ ಸಿದ್ದರಾಮಯ್ಯನಿಗೆ ಇಬ್ಬರು ಸಚಿವರ ತಿರುಗೇಟು

Team Newsnap
1 Min Read

ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಕುರಿತ ಹೇಳಿಕೆಗಳ ಬಗ್ಗೆ ರಾಜ್ಯದ ಇಬ್ಬರು ಸಚಿವರು ಸೋಮವಾರ ಎರಡು ಪ್ರತ್ಯೇಕ ಸ್ಥಳಗಳಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.


ಕಾರವಾರದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ ಎಂದರು. ಬಿಜೆಪಿಯವರು ಹಿಟ್ಲರ್ ಸಂಸ್ಕೃತಿಯವರು ಎಂದು ಸಿದ್ದರಾಮಯ್ಯ ಆಡಿದ ಮಾತಿಗೆ ಸಚಿವರ ಪ್ರತಿಕ್ರಿಯೆ ಕೇಳಿದಾಗ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಹುಮ್ಮಸ್ಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಡ್ಡಿಯಾಗಿದ್ದಾರೆ. ಹಾಗಾಗಿ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಾರೆ ಎಂದು ಕುಟುಕಿದರು.


ಸಿದ್ದರಾಮಯ್ಯ ಹೇಳಿಕೆಗಳಿಂದ ಏನೂ ಆಗಲ್ಲ. ಅವರು ವಿಧಾನಸಭೆಯಲ್ಲೂ ಇದನ್ನೇ ಹೇಳಿದ್ದರು. ಮುಖ್ಯಮಂತ್ರಿ ಬಸವರಾಜ¨ಬೊಮ್ಮಾಯಿಯವರು ಅಲ್ಲಿ ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಅವರಿಗೆ ಸಮಾಧಾನ ಆದಂತೆ ಕಾಣುತ್ತಿಲ್ಲ ಎಂದು ಟೀಕಿಸಿದರು.


ಇನ್ನು ರಾಯಚೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್, ದೇಶದಲ್ಲಿ ವಾಕ್ ಸ್ವಾತಂತ್ರ್ಯ ವಿದೆ ಎಂದು ಬಾಯಿಗೆ ಬಂದಂತೆ ಮಾತಾಡ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಗರಂ ಆದರು.


ಬಿಜೆಪಿಯವರು ಕೋಮುವಾದಿಗಳು ಅನ್ನೋ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿ, ಸಿದ್ದರಾಮಯ್ಯ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಗಳಾಗಿದ್ದವರು. ವಾಕ್‌ಸ್ವಾತಂತ್ರ್ಯ ವಿದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರು ಏನೋ ಮಾತಾಡ್ತಾರೆ ಅಂತ ನಾವು ಮಾತನಾಡೋಕೆ ಆಗಲ್ಲ ಎಂದರು.

Share This Article
Leave a comment