December 23, 2024

Newsnap Kannada

The World at your finger tips!

deepa1

ಸಾವಿನ ಭಯದಿಂದ ಬದುಕು ಅಸಹನೀಯವಾಗಬೇಕೆ?

Spread the love

ಕೊರೋನ ಎಬೋಲಾ ಸಾರ್ಸ್ ಡೆಂಗ್ಯೂ ಚಿಕನ್ ಗುನ್ಯಾ ಬರ್ಡ್ ಪ್ಲೂ ಪ್ಲೇಗ್ ಪೋಲಿಯೋ ಸಿಡುಬು ಮುಂತಾದ ಸೂಕ್ಷ್ಮ ರೋಗಾಣುಗಳು……

ಭೂಕಂಪ ಸುನಾಮಿ ಕಾಳ್ಗಿಚ್ಚು ಜ್ವಾಲಾಮುಖಿ ಪ್ರವಾಹ ಬರ ಸುಂಟರಗಾಳಿ ಮೇಘ ಸ್ಫೋಟ
ಶೀತಗಾಳಿ, ತೀವ್ರ ತಾಪಮಾನ ಏರಿಕೆ ಇತ್ಯಾದಿ ಪ್ರಕೃತಿ ವಿಕೋಪಗಳು….

ಹೊಡೆದಾಟ ಯುದ್ಧ ಬಾಂಬು ಬಂದೂಕು ಭಯೋತ್ಪಾದನೆ ಮುಂತಾದ ಮಾನವನ ಸ್ವಯಂ ಕೃತ ಅಪರಾಧಗಳು…

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳೆಂಬ ಆಂತರ್ಯದ ಅಗ್ನಿಕುಂಡಗಳು…..,

ಬಿಪಿ ಶುಗರ್ ಥೈರಾಯ್ಡ್ ಗ್ಯಾಸ್ಟ್ರಿಕ್‌ ಕ್ಯಾನ್ಸರ್ ಹಾರ್ಟ್ ಅಟ್ಯಾಕ್ ಮುಂತಾದ ದಿನನಿತ್ಯದ ತೊಂದರೆಗಳು….

ಒಂದೇ ಎರಡೇ ಸೃಷ್ಟಿಯ ಆರಂಭದಿಂದ ಬಹುಶಃ ಅಂತ್ಯದವರೆಗೂ ಜೀವಿಗಳನ್ನು ಕಾಡುತ್ತಲೇ ಇರುತ್ತದೆ. ಆ ಸವಾಲುಗಳನ್ನು ಇಲ್ಲಿಯವರೆಗೂ ಎದುರಿಸುತ್ತಲೇ ಬಂದಿದ್ದೇವೆ.
ಮುಂದೆ…… ಗೊತ್ತಿಲ್ಲ.
ಏನು ಬೇಕಾದರೂ ಆಗಬಹುದು.

ಒಂದೊಂದೂ ಅನುಭವ ಪಾಠ ಎಚ್ಚರಿಕೆ.
ನಿರ್ದಿಷ್ಟ ಉತ್ತರ ಸಿಗುವುದಿಲ್ಲ….

ಇದನ್ನು ಹೀಗೆ ಅರ್ಥೈಸಬಹುದು.

ಮನುಷ್ಯನಿಗೆ ಮತ್ತೆ ಮತ್ತೆ ತನ್ನ ಮಿತಿಯನ್ನು ತೋರಿಸುತ್ತಿರುವ ಎಬೋಲಾ ಸಾರ್ಸ್ ಕೊರೋನಾ ಮುಂತಾದ ಯಕ್ಚಿತ್ ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು……..

ದುರಾಸೆ, ದುರಹಂಕಾರ, ದುರಾಭ್ಯಾಸ, ದುರ್ನಡತೆ, ದುರ್ಬಳಕೆ, ದುರಾಚಾರ, ದುರ್ಬುದ್ದಿ, ದುಷ್ಟುತನ, ದುಕ್ಷೃತ್ಯಗಳಿಗೆ ಪಾಠ ಕಲಿಸಲು ಮತ್ತೆ ಮತ್ತೆ ವಿವಿಧ ರೂಪದಲ್ಲಿ ಪುನರ್ ಜನ್ಮ ಪಡೆಯುತ್ತಿರುವ ಸೂಕ್ಷ್ಮಾಣು ಜೀವಿಗಳು……

ನಮ್ಮದು ಲಕ್ಷ ಲಕ್ಷ ಕೋಟಿ ಬಜೆಟ್,
ನಮ್ಮಲ್ಲಿ ವಿಶ್ವವನ್ನೇ ನಾಶ ಮಾಡುವ ಬಾಂಬುಗಳಿವೆ,
ಈ ಜಾಗ ಆ ಪ್ರದೇಶ ಎಲ್ಲವೂ ನಮಗೆ ಸೇರಬೇಕಾಗಿದ್ದು,
ನೀರು ಭೂಮಿ ಆಕಾಶ ಎಲ್ಲದರ ಮೇಲೂ ನಮಗೆ ನಿಯಂತ್ರಣ ಬೇಕು……

ಈಗ ನೋಡಿ ಒಂದು ಯಕ್ಚಿತ್ ಸೂಕ್ಷ್ಮ ರೋಗಾಣು ಜೀವಿ ಮನುಷ್ಯನ ಜೀವವನ್ನೇ ತರಗೆಲೆಗಳಂತೆ ಗುಡಿಸಿಹಾಕುತ್ತಿದೆ. ಇಡೀ ವಿಶ್ವ ಬೆಚ್ಚಿ ಬಿದ್ದಿದೆ.
ಒಂದು ವೇಳೆ ಇದರ ಮೇಲೆ ಜಯ ಸಾಧಿಸಿದರೆ ಮತ್ತೊಂದು ವೈರಸ್ ಮತ್ತೆ ದಾಳಿ ಮಾಡುತ್ತದೆ. ಇದು ನಿರಂತರ ಹೋರಾಟ……

ಹಾಗೆಂದು ಸುಮ್ಮನೆ ಕುಳಿತುಕೊಳ್ಳಲ್ಲಿಕ್ಕೆ ಆಗುತ್ತದೆಯೇ ? ಅಭಿವೃದ್ಧಿ ಬೇಡವೇ ? ಸವಾಲು ಸ್ವೀಕರಿಸದೆ ಸನ್ಯಾಸಿಗಳಾಗಬೇಕೆ ? ಸಾವಿಗೆ ಹೆದರಿ ಬದುಕನ್ನು ವ್ಯರ್ಥ ಮಾಡಿಕೊಳ್ಳಬೇಕೆ ?

ತೀರಾ ಒಳ್ಳೆಯವರಾದರೆ ದುಷ್ಟರು ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನೇ ಇಲ್ಲವಾಗಿಸುತ್ತಾರೆ. ಅವರಿಂದ ರಕ್ಷಣೆಗಾಗಿ ನಾವು ಕ್ರೂರ ಶಸ್ತ್ರಾಸ್ತ್ರಗಳನ್ನು ಹೊಂದಿರಬೇಕು. ಅದೇ ಶಸ್ತ್ರಾಸ್ತ್ರಗಳು ನಮ್ಮಲ್ಲಿ ಕ್ರೂರತನ ಬೆಳೆಸುತ್ತದೆ. ಅದೇ ಕ್ರೌರ್ಯ ನಮ್ಮಲ್ಲಿ ಮಹತ್ವಾಕಾಂಕ್ಷೆಯ ಸ್ವಾರ್ಥ ಪ್ರೇರೇಪಿಸಿ ಮತ್ತಷ್ಟು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ.

ಬಲವೇ ನ್ಯಾಯ ಎಂಬ ಸಿದ್ಧಾಂತ ಸೃಷ್ಟಿಯ ಆರಂಭದಿಂದ ಅಂತ್ಯದವರೆಗೂ ಇದ್ದೇ ಇರುತ್ತದೆ. ಆದ್ದರಿಂದ ನಾವು ಬಲಶಾಲಿಗಳಾಗಬೇಕು. ಅಂದರೆ ಈ ಕ್ಷಣದಲ್ಲಿ ಹಣ ಅಧಿಕಾರ ಶಸ್ತ್ರಾಸ್ತ್ರ ಸಂಗ್ರಹಣೆ ಎಲ್ಲರಿಗಿಂತ ಹೆಚ್ಚು ಇರಲೇಬೇಕು. ಅದನ್ನು ನ್ಯಾಯ ಮಾರ್ಗದಲ್ಲಿ ಪಡೆಯುವುದು ಸುಲಭವಲ್ಲ. ಅನ್ಯಾಯದ ಮಾರ್ಗ ಹೆಚ್ಚು ಸುಲಭ….

ದುರ್ಬಲರಾಗಿದ್ದ ಯಹೂದಿಗಳನ್ನು ನಾಜಿಗಳು ಹೊಡೆದೋಡಿಸಿದರು,
ದುರ್ಬಲ ಭಾರತೀಯರನ್ನು ಇಂಗ್ಲೀಷರು ದೋಚಿದರು.
ದುರ್ಬಲರಾಗಿದ್ದ ಟಿಬೆಟಿಯನ್ನರು ಚೀನಾ ಹೊಡೆದೋಡಿಸಿತು,
ದುರ್ಬಲ ರೋಹಿಂಗ್ಯಾಗಳನ್ನು ಬರ್ಮಾ ಹೊಡೆದೋಡಿಸಿತು,
ದುರ್ಬಲ ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕ ಪಾಕ್ ಮುಸ್ಲಿಮರು ಹೊಡೆದೋಡಿಸಿದರು.
ಪ್ರಬಲ ಇಸ್ರೇಲಿಗಳು ಪ್ಯಾಲಿಸ್ಟೈನಿಯರನ್ನು ಹೊಡೆದೋಡಿಸಿದರು

ಈಗ ಹೇಳಿ ಏನು ಮಾಡೋಣ.

ಜೊತೆಗೆ ನಾವು ನೆಮ್ಮದಿಯಾಗಿರಬೇಕಾದರೆ ಪ್ರಕೃತಿಯ ಮೇಲೆ ನಿಯಂತ್ರಣವನ್ನು ಸಾಧಿಸಬೇಕು. ಇಲ್ಲದಿದ್ದರೆ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಜೀವನವನ್ನು ಎಂಜಾಯ್ ಮಾಡಲು ಆಗುವುದಿಲ್ಲ.

ಈ ಬೃಹತ್ ಜನಸಂಖ್ಯೆಯಲ್ಲಿ, ವಿಸ್ತಾರ ಭೂ ಪ್ರದೇಶದಲ್ಲಿ ನಾನಾ ರೀತಿಯ ಚಿಂತನಾ ಕ್ರಮಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಸಮಸ್ಯೆ ಸವಾಲುಗಳನ್ನು ಸ್ವೀಕರಿಸುತ್ತ ಮುನ್ನಡೆಯಲೇ ಬೇಕು. ಬೇರೆ ದಾರಿ ಇಲ್ಲ.

ವೈರಸ್ ದಾಳಿಗಳನ್ನು ಎದುರಿಸುವು ಹೇಗೆ ?

ವೈದ್ಯಕೀಯ ಕ್ಷೇತ್ರದ ಮೇಲೆ ತುಂಬಾ ನಿರೀಕ್ಷೆಗಳು ಬೇಡ. ಹಾಗೆಯೇ ಆಯುರ್ವೇದ ಸೇರಿ ದೇಶಿ ಪದ್ದತಿಯ ಔಷಧಗಳು ಏನೋ ಪವಾಡ ಮಾಡುತ್ತದೆ ಎಂಬ ನಿರೀಕ್ಷೆಗಳೂ ಬೇಡ. ಸಾಮಾಜಿಕ ಜಾಲತಾಣಗಳ ಪಂಡಿತರ ಸುಳ್ಳು ಸುದ್ದಿಗಳು ಕೇಳಲು ಮಾತ್ರ ಚೆಂದ.

ಹೇಗೆ ಎಷ್ಟೇ ಪೋಲಿಸ್ ಕಾನೂನು ಭದ್ರತೆ ಇದ್ದರೂ ಕಳ್ಳರು ವಿವಿಧ ರೀತಿಯ ಹೊಸ ಹೊಸ ವಿಧಾನಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಾರೋ ಹಾಗೆಯೇ ರೋಗಗಳು ಸಹ ಮನುಷ್ಯನ ಮೇಲೆ ದಾಳಿ ಮಾಡುತ್ತಲೇ ಇರುತ್ತದೆ.

ಇದಕ್ಕೆ ಇರಬಹುದಾದ ಸಹಜ ಸ್ವಾಭಾವಿಕ ಪರಿಹಾರವೆಂದರೆ…..

ಅನುಭವದ ಜ್ಞಾನದಿಂದ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದು, ಸದಾ ಚಟುವಟಿಕೆಯಿಂದ ಇರುವುದು. ಪ್ರಕೃತಿಯಲ್ಲಿ ಸಿಗುವ ಆಹಾರವನ್ನೇ ಸಾಧ್ಯವಾದಷ್ಟು ಅದರ ಮೂಲ ಸ್ವರೂಪದಲ್ಲೇ ಸೇವಿಸುವುದು, ಮಾನಸಿಕವಾಗಿ ಸಾಕಷ್ಟು ದೃಢತೆಯನ್ನು ಕಾಪಾಡಿಕೊಳ್ಳುವುದು, ಸಿನಿಕತನದಿಂದ ದೂರವಿರುವುದು, ನನ್ನ ತಂದೆ ತಾಯಿ, ನನ್ನ ಮಕ್ಕಳು, ನನ್ನ ಸಂಸಾರ, ನನ್ನ ಆಸ್ತಿ, ನನ್ನ ಅಧಿಕಾರ ಮುಂತಾದ ಸ್ವಾರ್ಥಕ್ಕೆ – ಮೋಹಕ್ಕೆ ಅತಿಯಾಗಿ ಬಲಿಯಾಗದೆ ಈ ಬದುಕೊಂದು ಅಲ್ಪ ಕಾಲದ ತಾತ್ಕಾಲಿಕ ಪ್ರಯಾಣ, ಅದರಲ್ಲಿ ನಾನೊಬ್ಬ ಪ್ರಯಾಣಿಕ ಎಂದು ಪ್ರತಿ ದಿನವೂ ಭಾವಿಸುವುದು, ‌ಸಾಮಾನ್ಯ ಜ್ಞಾನ ಉಪಯೋಗಿಸಿ ಸಮಯ ಸಂದರ್ಭಕ್ಕೆ ತಕ್ಕಂತೆ ಬದುಕುವುದು,
ಅತಿ ಮುಖ್ಯವಾಗಿ ಅನಿವಾರ್ಯ ಸಾವನ್ನು ಘನತೆಯಿಂದ ಒಪ್ಪಿಕೊಂಡು ನಿರ್ಗಮಿಸುವುದು.

ಇದನ್ನು ಅಳವಡಿಸಿಕೊಂಡರೆ ಯಾವುದೇ ವೈರಸ್‌ಗಳು ಹೆಚ್ಚು ಹಾನಿ ಮಾಡುವುದಿಲ್ಲ. ಹಾಗೆಂದು ಶರಣಾಗತಿಯ ಅವಶ್ಯಕತೆ ಇಲ್ಲ. ಕೊನೆಯ ಉಸಿರಿನವರೆಗೂ ಹೋರಾಟ ಪ್ರತಿ ಜೀವಿಯ ಸಹಜ ಗುಣಲಕ್ಷಣಗಳು……

ಸಾವಿನ ಭಯದಿಂದ ಬದುಕು ಅಸಹನೀಯ ಮಾಡಿಕೊಳ್ಳುವುದು ಬೇಡ.

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!