ಶಿವಮ್ಮನ ವರ್ಕ್ ಫ್ರಂ ಹೋಂ ಪುರಾಣ

Team Newsnap
6 Min Read

…………..ಓಂ ಮಹಾವಿಷ್ಣು ಧನ್ವಂತರಿ ಸ್ವರೂಪ ಔಷಧ ಚಕ್ರ ನಾರಾಯಣಾಯ ನಮ: ಕೋರೋನಾಸುರನನ್ನು ಸಂಹಾರ ಮಾಡಿ ಕಾಪಾಡು ತಂದೆ. ಸರ್ವೇಜನಾಃ ಸುಖಿನೋ ಭವಂತು. ಮಂಗಳಾರತಿ ಎತ್ತಿ ಇತ್ತ ತಿರುಗಿದರೆ ಮನೆಯಲ್ಲಿ ಘೋರ ಯುದ್ಧ. ನನ್ನ ಅರ್ಧಾಂಗಿ ಸೌಟಿನ ಸಮೇತ ಯುದ್ಧ ಕ್ಷೇತ್ರಕ್ಕಿಳಿದಿದ್ದಾಳೆ. ಎದುರು ಪಾರ್ಟಿಯಲ್ಲಿ ನಮ್ಮ ಕೆಲಸದಾಕೆ ಶಿವಮ್ಮ. ತಾನು ಯಾರಿಗೇನು ಕಮ್ಮಿ ಎಂದು ಪೊರಕೆಯನ್ನೆ ತನ್ನ ಅಸ್ತ್ರವಾಗಿಸಿದ್ದಾಳೆ.
‘ನೀವೇ ಯೋಳಿ ಸಾಮಿ, ಇದು ನಾಯಾನಾ ದರುಮಾನಾ…’
‘ಅವ್ರೇನು ಹೇಳ್ತಾರೆ. ಈ ಮನೆ ಯಜಮಾನಿ ನಾನು. ನಾನು ಹೇಳಿದ ಮೇಲೆ ಮುಗೀತು. ಸರಕಾರದ ಆದೇಶದ ಹಾಗೆ… ನೀನೂ ಪಾಲಿಸಬೇಕು ನಿಮ್ಮಪ್ಪಾನು ಪಾಲಿಸಬೇಕು…..’ ನನ್ನಾಕೆಯ ಅಂಬೋಣ.
‘ ಬೋ ಪಸಂದಾಗಿದೆ ನಿಮ್ಮ ಮಾತು. ಸತ್ತು ಸಿವನ ಪಾದ ಸೇರ್ಕೊಂಡಿರೋ ನಮ್ಮಪ್ಪ ಬಂದು ನೀವು ಯೋಳಿದಂತೆ ಕೇಳಬೇಕಾ. ಈ ಕರೋನಾ ಇರೋದು ನಿಮಗೆ ಮಾತ್ರಾನಾ. ನಂಗೇನು ಇಲ್ವಾ….? ನಿಮ್ಮ ಮಗ ಸೊಸೆ ಮನೆಯಾಗೆ ಕುಂತುಕೆಲ್ಸಾ ಮಾಡ್ಕತವ್ರೆ. ನಿಮ್ಮ ಮೊಮ್ಮೊಕ್ಕಳು ಸಾಲೇನೇ ಮನೆಗೆ ತಂದವ್ರೆ. ನಾನು ಬರಾಕಿಲ್ಲ ಅಂದರೆ ಈತೊಂದು ಮಾತಾ….’
ನನಗಂತೂ ಇವರ ವಾದದ ಸರಣಿ ತಲೆ ಬುಡ ಅರ್ಥವಾಗಲಿಲ್ಲ.
ಯಾರಾದರೂ ಹೇಳಿ ಸಾಯಬಾರ್ದ. ಏನು ನಿಮ್ಮ ಸಮಸ್ಯೆ?’
‘ಇಲ್ಕೇಳಿ ಬುದ್ದಿ …..’ ಶಿವಮ್ಮ ಪೊರಕೆಯನ್ನು ನನ್ನ ಮುಖಕ್ಕೆ ಹಿಡಿದರೆ
‘ರೀ ಇಲ್ಲಿ ಕೇಳಿ . …’ ಇವಳು ಸೌಟಿನಲ್ಲಿ ನನ್ನ ಹೊಟ್ಟೆಯನ್ನು ತಿವಿದಳು.
‘ಅಯ್ಯೋ ಪರಮಾತ್ಮ ಮೊದಲು ಇವರಿಬ್ಬರಿಂದ ಕಾಪಾಡಪ್ಪ. ಕೋರೋನಾದಿಂದ ಆಮೇಲೆ ಕಾಪಾಡು….’ ಮೊದಲೇ ಜನಿವಾರವಾಗಿದ್ದ ತನ್ನ ಸೆರಗನ್ನು ಭದ್ರವಾಗಿ ಸಿಕ್ಕಿಸಿಕೊಂಡು ಶಿವಮ್ಮ ತನ್ನ ಹಕ್ಕಿನ ಹೋರಾಟಕ್ಕಾಗಿ ನನ್ನವಳ ದನಿಯನ್ನು ಅಡಗಿಸಿ ಬಿಟ್ಟಳು.
‘ಸೋಮಿ ಈಗ ಎಲ್ಲಾರು ಮನೀಲೆ ಕುಂತು ಕೆಲ್ಸಾ ಮಾಡ್ತಾರೆ. ನಾನು ಮನೆಯಾಗೆ ಕುಂತು ಕೆಲ್ಸಾ ಮಾಡ್ತೀನಿ ಅಂದೆ. ಅದಕ್ಕೆ ನಿಮ್ಮ ಎಂಡ್ರು ಒಪ್ಕಳಾಕೆ ಇಲ್ಲಾಂತೀನಿ. ನೀವ್ ಯೋಳಿ ಸಾಮಿ ಈಗ ನನ್ನ ಮಾತಲ್ಲಿ ನಾಯಾ ಐತೆ ತಾನೇ…?
‘ಅಲ್ಲ ಶಿವಮ್ಮ, ನಮ್ಮ ಮನೆ ಕಸಾನಾ ನೀನು ನಿಮ್ಮ ಮನೆಯಲ್ಲಿ ಹೇಗೆ ಗುಡಿಸ್ತೀಯ? ನಮ್ಮ ಮನೆ ಪಾತ್ರೆ ನಿಮ್ಮ ಮನೆಯಲ್ಲಿ ಹೇಗೆ ತೊಳಿತೀಯ…? ಇದು ಸಾಧ್ಯಾನಾ…. ಸುಮ್ನೆ ವಾದ ಮಾಡದೆ ಕೆಲಸಕ್ಕೆ ಬಾ. …’ ಎಲ್ಲಿದ್ದಳೋ ನನ್ನವಳು ಮೂಗು ತೂರಿಸಿದಳು.
‘ಆಗಕಿಲ್ಲ ಅಮ್ಮಾರೆ. ಬೇಕಾರೆ ವಾಟ್ಸ್ ಅಪ್ನಾಗೆ ಕಾಲ್ ಆಕೀ, ಯಾವುದು ಎಂಗೆ ಮಾಡಬೇಕು ಅಂತಾ ಯೋಳ್ತೀನಿ. ಅದೂ ಅಲ್ದೆ ನನ್ನ ಯಜಮಾನಪ್ಪ ಕೂಡ ಮನೆಯಾಗೆ ಕೆಲ್ಸಾ ಮಾಡ್ತಾವ್ನೆ. ಇಷ್ಟು ಜಿನಾ ತಂಗಳು ಪಂಗಳು ತಿಂಕೊಂಡಿದ್ದ. ಈಗಲಾದ್ರೂ ಬಿಸಿ ಬಿಸಿಯಾಗಿ ಮಾಡ್ ಆಕ್ತೀನೀ. …. ಅಮ್ಮ ಇಕೋಳಿ ನಿಮ್ಮ ಪೊರಕೆ …….’
ಶಿವಮ್ಮನ ಮಾತಿನಲ್ಲೂ ಸತ್ಯ ಇದೆ ಎನಿಸಿತು. ವಾರಿಯರ್ ಗಳನ್ನು ಬಿಟ್ಟರೆ ಮತ್ತೆಲ್ಲಾ ಕಚೇರಿಗಳಲ್ಲಿ ತನ್ನ ನೌಕರರ ಹಿತರಕ್ಷಣೆಗೆ alternate days ಸೌಕರ್ಯ, Work from Home ಸೌಕರ್ಯ ಒದಗಿಸಿದೆ. ಅಂತಾದ್ದರಲ್ಲಿ ಶಿವಮ್ಮನಿಗೆ ನಾವು ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. ಬೆಳಿಗ್ಗೆ ನಾವೆಲ್ಲಾ ಏಳುವ ಮುನ್ನ ಬರುತ್ತಾಳೆ ಬಾಗಿಲು ಸಾರಿಸಿ ರಂಗೋಲಿ ಎಳೆಯುತ್ತಾಳೆ. ತಾಂ ಥೈ ಥೈ ಥೈ ತಾಂ ಎಂದು ತನ್ನ ಬಡ ನಡುವನ್ನು ಬಳಕಿಸುತ್ತಾ ಕಸ ಗುಡಿಸುತ್ತಾಳೆ. ಸಾಲ್ಸ ಮಾಡುವ ರೀತಿಯಲ್ಲಿ ಕೋಲನ್ನು ಅತ್ತ ಇತ್ತ ಸರಿಸುತ್ತಾ ಒರೆಸುತ್ತಾಳೆ ಯಕ್ಷಗಾನದ ರೀತಿಯಲ್ಲಿ ಪಾತ್ರೆ ತೊಳೆಯುತ್ತಾಳೆ ಒಂದೇ ಎರಡೇ? ಇದರ ಮಧ್ಯೆ ಇವಳು ಕೇಳುವ ಕೊತ್ತಂಬರಿ ಸೊಪ್ಪು,ಕರಿಬೇವು ತಂದು ಕೊಡುತ್ತಾಳೆ. ಇವಳ ಕೆಲಸ ಮುಗಿಯುವ ವೇಳೆಗೆ ವಾಷಿಂಗ್ ಮಶೀನೂ ‘ ಶಿವಮ್ಮ… ಶಿವೂ……’ ಎಂದು ರಾಗವಾಗಿ ಕರೆದರೆ ಮನೆ ಮಂದಿಯ ಬಟ್ಟೆಯನ್ನೆಲ್ಲಾ ಹರವುತ್ತಾಳೆ.
‘ಎನಾರ ಯೋಳಿ ಸಾಮಿ. ನಾಳೆಯಿಂದ ನಾನು ಬರಾಕಿಲ್ಲ. ಅದೇನೋ ಅಂತಾರಲ್ಲ ಸೋಮಿ ಮನೆಯಾಗೆ ಕೆಲ್ಸಾ ಅಂತಾ ಇಂಗ್ಲೀಸ್ನಾಗೆ. ಅದು ನಾಳಿಕಿಂದಾವ. …’
‘ಅಲ್ಲ ಶಿವಮ್ಮ. ನಿನ್ನ ಗಂಡ ಪ್ಯೂನ್ ಕೆಲ್ಸಾ ಮಾಡೋದು ಅಲ್ವಾ….” ಅವನೇನೂ Work from Home ಮಾಡ್ತಾನೆ……..?
ಬರಿ ಪೂನ್ ಅಲ್ಲ ಸೂಮಿ ಎಡ್ ಪೂನು…. ಅವ್ನು ಆಫೀಸ್ ನಾಗೆ ಕಾಪಿ, ಟೀ ಅಂಚತಾನೆ. ಅದ್ನೆ ಮನೆಯಾಗೆ ಮಾಡ್ತಾನೆ. ನಾನು ಕಾಪಿ ಮಾಡಿಟ್ರೇ ಮನ್ಯಾಗೆ ಎಲ್ಲರ್ಗು ಕಾಪಿ ಕೊಡ್ತಾನೆ. ನಮ್ಮ ಮನೆ ಬಚ್ಚಲು ಪಿನೈಲ್ ಆಕೀ ತೊಳೀತಾನೇ. ಕುರ್ಚಿ ಮ್ಯಾಗೇ ಕುಂತು ತೂಕಡಿಸುತ್ತಾನೆ. ಅವ್ನು ಅಲ್ಲಿ ಮಾಡೋ ಕೆಲ್ಸಾನಾ ಮನ್ಯಾಗೆ ಮಾಡ್ತಾನೆ ಸೋಮಿ. …’
ಸರಿ ,ಸರಿ ಈಗ ನೀನು Work from Home ಅಂದರೆ ಮನೇಲೆ ಕೆಲ್ಸಾ ಮಾಡ್ತೀನಿ ಅಂತ ಹೇಳ್ತಾ ಇದೀಯಲ್ವ……?’’
‘ಹೌದು ಸೋಮಿ. ನಿಮ್ಮೊಬ್ಬರಿಗೆ ಈ ಮನೆಯಾಗೆ ಒಸಿ ಬುದ್ದಿ ಇರೋದು. ‘
ನನ್ನವಳು ಮೂತಿ ತಿವಿಯುತ್ತ ರಪ ರಪ ಎಂದು ಅಡುಗೆ ಮನೆ ಸೇರಿದಳು. ಇಲ್ಲಿ ಬಡಪಾಯಿ ನಾನು ಸಿಕ್ಕಿಕೊಂಡೆ. ನನ್ನವಳಿಗೂ ನ್ಯಾಯ ಒದಗಿಸಬೇಕು ಶಿವಮ್ಮನಿಗೂ ನ್ಯಾಯ ಒದಗಿಸಬೇಕು. ಇನ್ನು ಮಕ್ಕಳು ಹರ ಎನ್ನುವುದಿಲ್ಲ ಶಿವಾ ಎನ್ನುವುದಿಲ್ಲ. ಮಗ ಸೊಸೆ ಒಂದು ಲ್ಯಾಪ್ ಟಾಪ್ ಮುಂದೆ ಪ್ರತಿಷ್ಠಾಪಿಸಿದರೆ ಇನ್ನು ಮೊಮ್ಮೊಗ ಕಂಪ್ಯೂಟರ್ ಮುಂದೆ ಆಸೀನ, ಅದೇನಾದರೂ ಕೆಟ್ಟು ಹೋದರೆ ‘ಅಜ್ಜ ಸ್ವಲ್ಪ ನಿನ್ನ ಮೊಬೈಲು ಕೊಡು ಎಂದು’ ಕೊಡುವ ಮೊದಲೇ ನನ್ನ ಮೊಬೈಲ್ ಕಿತ್ತುಕೂಂಡು ಅದರಲ್ಲೇ ತನ್ನ ಶಾಲೆಯ ಆನ್ ಲೈನ್ ಕೆಲಸ ಪೂರೈಸಿಕೊಳ್ಳುತ್ತಿದ್ದ. ಇನ್ನು ಇವಳಿಗೆ ಕೈ ತುಂಬಾ ಕೆಲಸ. ತಿಂಡಿ-ಅಡುಗೆ- ಜೊತೆಗೆ ಮಧ್ಯೆ ಮಧ್ಯೆ ಮಗ-ಸೊಸೆ, ಮೊಮ್ಮಗನಿಗೆ ಪಾನೀಯಂ ಸಮರ್ಪಯಾಮಿ ಎಂದು ಕಾಫಿ-ಟೀ-ಹಾಲು- ಜ್ಯೂಸು ಸರಬರಾಜು. ಸಂಜೆಗೆ ಕುರುಕು ತಿಂಡಿಗಳು . ಇನ್ನು ಶಿವಮ್ಮ ಬರದೇ ಇದ್ದರೆ ಆ ಕೆಲಸವೂ ಇವಳ ಪಾಲಿಗೆ.
ನಾನು ಯೋಚಿಸಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ, ‘ಶಿವಮ್ಮ. ನಿನ್ನ ಗಂಡ ಆಫೀಸಿನಲ್ಲಿ ಹೆಡ್ ಪ್ಯುನ್ ಅಲ್ವಾ…..?
‘ಹೌದು ಸೋಮಿ……’
ನೀನು ನಮ್ಮ ಮನೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತೆ ಇದ್ದ ಹಾಗೆ. ….’
‘ಐಯ್ ಅಂಗಂದ್ರೇನು…? ಒಸಿ ಅರ್ಥಾ ಆಗೋ ಅಂಗೆ ಯೋಳಿ ಸೋಮಿ. ‘
‘ಈಗ ನಮ್ಮ ಮನೆ ಆಫೀಸು ಅಂತಿಟ್ಕೋ ಇಲ್ಲಿ ಮ್ಯಾನೇಜರು ಇವಳು. ಅಂದರೆ ನನ್ನಾಕೆ. ನಾನು ಸೂಪರಿಂಟೆಂಡೆಂಟು. ನೀನು ನನ್ನ ಕೈ ಕೆಳಗೆ ಕೆಲ್ಸಾ ಮಾಡೋ ನೌಕರಳು. ನೀನು ನಮ್ಮ ಮನೆಯಲ್ಲಿ ನಿನ್ನ ಗಂಡನಿಗಿಂತ ಹೆಚ್ಚಿನ ಹುದ್ದೆಯಲ್ಲಿದ್ದೀಯಾ. ನೀನಾದಮೇಲೆ ನಿನ್ನ ಕೈ ಕೆಳಗೆ ನಿನ್ನ ಗಂಡ ಹೆಡ್ ಪ್ಯೂನು….’
ಅಂಗಾ …… ಒ ಅದ್ಕೆ……….?
‘ಹಾಗಾಗಿ ನೀನು alternate days option ತೊಗೋ.
‘ಯೇ ನೀವು ಅದೇನು ಯೋಳ್ತೀರೋ ……….. ಇಲ್ ಕೇಳಿ ಸೋಮಿ ನಾನು ನಾಳೆಯಿಂದ ಕೆಲಸಕ್ಕೆ ಬರಾಕಿಲ್ಲ. ನೀವು ಸಂಬಳ ಮಾತ್ರ ಕೊಡ್ತೀರಾ…..ಆಗಬೈದಾ…?
‘ಇರು, ಇರು ನೀನು ದಿನ ಬಿಟ್ಟು ದಿನ ರಜೆ ತೊಗೊ… ಸಂಬಳ ಪೂರ್ತಿ. ಜೊತೆಗೆ ಕರೋನಾ ಸ್ಪೆಷಲ್ಲು ಹೊಸ ಸೀರೆ , ಸ್ವೀಟ್ಸು, ಆಗಬಹುದಾ…..?
‘ ದಿನ ಬುಟ್ಟು ದಿನಾ ಕೆಲ್ಸಕ್ಕೆ ಬಾ ಅಂತೀರಿ. ಇದನ್ನೇ ತಿರುಗ್ಸಿ ಮುರುಗ್ಸಿ ಯೋಳಿದ್ರಿ. ಅಮ್ಮೋರಿಗಿಂತ ನೀವೇ ವಾಸಿ ಸೋಮಿ. ನನ್ನನ್ನ ಅದೇನೋ ನಿಮ್ಮ ಕೈ ಕೆಳಗೆ ಅಂದ್ರಿ, ಪರವಾಗಿಲ್ಲ ಸೋಮಿ ಅದಕ್ಕೆ ಅಲ್ಲವ್ರಾ ಗಾದೆ ಮಾಡಿರೋದು ಹುಣಸೆ ಮರಕ್ಕೆ ವಯಸ್ಸಾದ್ರು ಅದರ ಹುಳಿಗೆ ವಯಸ್ಸಾಯ್ತದಾ?😃
‘ಅಲ್ಲಮ್ಮಾ.. ನೀನು ಅಪಾರ್ಥ ಮಾಡಿಕೊ ಬೇಡಾ. ವಯಸ್ಸಿದ್ದಾಗಲೇ ನಾನು ಸರಿಯಾಗಿ ವರ್ಕ ಫ್ರಂ ಹೋಂ ಮಾಡಿದವನಲ್ಲ ಸರಿಯಾಗಿ ಮಾಡಿದ್ರೆ ಇನ್ನೊಂದೆರೆಡು ಮಕ್ಕಳಿರೋವು.. ಇನ್ನೂ ಎಕ್ಸ್ಟ್ರಾ ವರ್ಕ ಮಾಡಿದವನೇ ಅಲ್ಲ. 😃😃 ಈಗ ನಿಂಗೆ ಅರ್ಥಾ ಆಯ್ತಲ್ವಾ? , ತಾರೀಖನ್ನ ಗುರ್ತು ಮಾಡಿ ಕೊಡ್ತೀನಿ ಆ ದಿನಗಳು ಕೆಲಸಕ್ಕೆ ಬಂದರೆ ಆಯ್ತು…..’
‘ಒಂದು ಇಸ್ಯ ಸೋಮಿ . ನಾನು ದಿನ ಬುಟ್ಟು ದಿನ ಕೆಲಸಕ್ಕೆ ಬತ್ತೀನಿ ಅಂತ ಹಿಂದಿನ ದಿನದ ಕೆಲ್ಸ ಬಾಕಿ ಮಡ್ಗೋ ಅಂಗಿಲ್ಲ. ನಿಮ್ಮ ಎಂಡ್ರಿಗೆ ಒಸಿ ಅರ್ಥ ಆಗೋ ಅಂಗೆ ಯೋಳಿ. ನಾ ಬರ್ಲಾ………..?’
‘ಕಾಫಿ ಕುಡಕೊಂಡು ಹೋಗು ಶಿವಮ್ಮ …….’
‘ಒ ಅಂಗ ಒಸಿ ತಣ್ಣಗೆ ಶರಬತ್ತು ಕೊಟ್ಟಿದ್ರೆ ಸೊಂದಾಕಿತ್ತು. ಇರ್ಲಿ ಕೊಡಿ …. ಸೋಮಿ ನೀವು ಬೋ ಒಳ್ಳೆಯವ್ರು ಅದೇ ಹಳೆ ಹುಣಸೆ ಇದ್ದಂಗೆ . ’
ಈಗ ಬೇಸ್ತು ಬೀಳುವ ಸರದಿ ನನ್ನದಾಗಿತ್ತು.

usharani
ಟಿ ಆರ್ ಉಷಾರಾಣಿ,
ಭಾರತೀಯ ಸ್ಟೇಟ್ ಬ್ಯಾಂಕ್,
ಮಂಗಳೂರು
Share This Article
Leave a comment