ಈ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಆಷಾಢ ಏಕಾದಶಿ ವಿಶೇಷವೆಂದರೆ, ವಿಷ್ಣುಭಕ್ತರಿಂದ ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ವೈಷ್ಣವರೆಲ್ಲರೂ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಸಕಲ ಲೋಕ ಪರಿಪಾಲಕ ಶ್ರೀವಿಷ್ಣುವಿನ ಶಯನೋತ್ಸವ ವು ಆರಂಭವಾಗುತ್ತದೆ.
ಇಂದಿನಿಂದ ಶ್ರೀಹರಿ (ಮಹಾವಿಷ್ಣು) ನಾಲ್ಕು ತಿಂಗಳು ಕಾಲ ಯೋಗನಿದ್ರೆ ಯಲ್ಲಿ ತೊಡಗುವುದರಿಂದ ಈ ದಿನವನ್ನು ಶಯನಿ ಏಕಾದಶಿ ಎನ್ನಲಾಗುತ್ತದೆ. ಹಾಗಾಗಿಯೇ ಈ ಪ್ರಥಮ ಏಕಾದಶಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನದ ವೈಶಿಷ್ಟ್ಯಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿಯುವ ಪ್ರಯತ್ನ ಮಾಡೋಣ.
ಏಕಾದಶಿ ಎಂದರೇನು
ಹಿಂದೆ ಬಲಿಷ್ಠನಾಗಿದ್ದ ಮುರಾಸುರ ಎಂಬ ರಾಕ್ಷಸನು, ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿ ದರ್ಪದಿಂದ ಮೆರೆಯುತ್ತಿದ್ದ. ಇವನ ಉಪಟಳ ತಾಳಲಾರದೆ, ದೇವತೆಗಳು ಮುರನಿಂದ ರಕ್ಷಿಸುವಂತೆ ಶ್ರೀಹರಿಯನ್ನು ಪ್ರಾರ್ಥಿಸಿದರು.
ದೇವತೆಗಳ ಪ್ರಾರ್ಥನೆಗೆ ಒಲಿದ ಮಹಾವಿಷ್ಣು, ತನ್ನಲ್ಲಿದ್ದ ಅಸ್ತ್ರ, ಶಸ್ತ್ರಗಳನ್ನು ಮುರನ ಮೇಲೆ ಪ್ರಯೋಗಿಸಿದನು. ಇದರಿಂದ ಮುರಾಸುರನ ಹೊರತು ಉಳಿದ ಸಾಕಷ್ಟು ಮಂದಿ ರಾಕ್ಷಸರು ಹತರಾದರು. ವಿಷ್ಣುವಿನ ಹೊಡೆತಕ್ಕೆ ತತ್ತರಿಸಿ ಪರಾರಿಯಾದ ಮುರ, ಸಮಯ ಮತ್ತು ಅವಕಾಶಕ್ಕಾಗಿ ಕಾಯುತ್ತಿದ್ದ.
ಯುದ್ಧದ ನಂತರ ಶ್ರೀಹರಿ ಬದರಿ ಕ್ಷೇತ್ರಕ್ಕೆ ತೆರಳಿ ಅಲ್ಲಿನ ಒಂದು ಗುಹೆಯಲ್ಲಿ ಯೋಗನಿದ್ರೆಗೆ ಜಾರಿದ. ಇದೇ ಸರಿಯಾದ ಸಮಯವೆಂದು ಹೊಂಚು ಹಾಕಿ, ಅಲ್ಲಿಗೆ ಬಂದ ಮುರಾಸುರ ವಿಷ್ಣುವನ್ನು ಕೊಲ್ಲಲು ಯತ್ನಿಸಿದ. ಆಗ ಭಗವಂತನ ತೇಜಸ್ಸಿನಿಂದ ಅಸ್ತ್ರ ಶಸ್ತ್ರ ಸಜ್ಜಿತಳಾದ ಒಬ್ಬ ಕನ್ಯೆ ಅವತರಿಸಿ, ಮುರನನ್ನು ಸಂಹರಿಸಿದಳು. ಸಂತಸಗೊಂಡ ಶ್ರೀಪತಿ ಆಕೆಯನ್ನು ಅನುಗ್ರಹಿಸಿದ. ಈ ದಿನ ತಿಂಗಳ ಹನ್ನೊಂದನೇ ದಿನವಾಗಿತ್ತು. ಹಾಗಾಗಿ ಈ ದಿನ ನಿನ್ನ ಹೆಸರಲ್ಲಿ ಶ್ರದ್ಧಾ ಭಕ್ತಿಯಿಂದ ಯಾರು ನನ್ನ ಸಮೀಪ(ಉಪವಾಸ) ವಿದ್ದು ಸೇವಿಸುತ್ತಾರೋ ಅವರಿಗೆ ವಿಶೇಷ ಫಲ ನೀಡುತ್ತೇನೆ ಎಂದು ಹೇಳಿದ. ಅಂದಿನಿಂದ ಏಕಾದಶಿ ಆಚರಣೆ ಜಾರಿಗೆ ಬಂತು.
ಏಕಾದಶಿ ಆಚರಣೆ:
ಈ ದಿನ ನಿರಾಹಾರಿಯಾಗಿ ಶುದ್ಧ ದೇಹ ಹಾಗೂ ಮನಸ್ಸಿನಿಂದ ಶ್ರೀಹರಿಯನ್ನು ಅರ್ಚಿಸಬೇಕು. ಊಟ, ಉಪಹಾರದ ಜತೆ ಏಲಕ್ಕಿ, ಪಚ್ಚಕರ್ಪೂರ, ಶ್ರೀಗಂಧಾದಿ ಸುಗಂಧ ದ್ರವ್ಯಗಳನ್ನು ವರ್ಜಿಸಬೇಕು.
ಯಥಾಶಕ್ತಿ ದೇವರನ್ನು ಸೇವಿಸಿ, ರಾತ್ರಿ ಜಾಗರಣೆ ಮಾಡಿ ಮರುದಿನ (ದ್ವಾದಶಿ) ಮುಂಜಾನೆ ದೇವರಪೂಜೆ ಮಾಡಿ ತೀರ್ಥ ಪ್ರಸಾದ(ಭೋಜನ) ಸ್ವೀಕರಿಸಬೇಕು. ಇದು ಏಕಾದಶಿ ಆಚರಣೆಯ ವಿಧಾನ. ಶ್ರದ್ಧಾವಂತರು ಏಕಾದಶಿಯ ಹಿಂದಿನ ದಿನ ಅಂದರೆ ದಶಮಿಯ ದಿನ ರಾತ್ರಿ ಊಟದ ಬದಲು ಫಲಹಾರ ಸೇವಿಸುತ್ತಾರೆ.
ವೈಜ್ಞಾನಿಕವಾಗಿ ಏಕಾದಶಿ ವ್ರತ ಆರೋಗ್ಯಕ್ಕೆ ಸಹಕಾರಿ. ಲಂಘನಂ ಪರಮೌಷಧಂ ಎಂಬಂತೆ ಉಪವಾಸ ಮಾಡುವುದು ಆರೋಗ್ಯಕ್ಕೆ ಒಳಿತು. ಹದಿನೈದು ದಿನಕ್ಕೊಮ್ಮೆ ದೇಹಕ್ಕೆ ಬಿಡುವು ನೀಡಬೇಕೆಂಬುದು ಆಯುರ್ವೇದ ಹೇಳುತ್ತದೆ. ದೇಹದಲ್ಲಿ ಜೀರ್ಣಕ್ರಿಯೆಗೆ ತೊಡಗುವ ಅಂಗಗಳಿಗೆ ವಿಶ್ರಾಂತಿ ಅಗತ್ಯವಿದೆ. ತಿಂಗಳಲ್ಲಿ ಎರಡು ದಿನ ಈ ರೀತಿ ಉಪವಾಸಾಚರಣೆ ಮಾಡಿದರೆ ಸ್ವಾಮಿ ಕಾರ್ಯದ ಜತೆ ಸ್ವಕಾರ್ಯ ವೂ ಆಗುತ್ತದೆ. ಶ್ರೀಹರಿಯ ಸೇವೆಯ ಪುಣ್ಯದ ಜತೆ, ಆರೋಗ್ಯ ವೃದ್ಧಿಯಾಗುತ್ತದೆ.
ಮುದ್ರಾಧಾರಣೆ:
ಈ ದಿನ ತಾಮ್ರದಿಂದ ತಯಾರಿಸಿದ ಶ್ರೀವಿಷ್ಣುವಿನ ಚಿಹ್ನೆಗಳಾದ ಸುದರ್ಶನ(ಚಕ್ರ) ಹಾಗೂ ಪಾಂಚಜನ್ಯ (ಶಂಖ) ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ದೇಹದ ಮೇಲೆ ಒತ್ತಲಾಗುತ್ತದೆ. ಇಂದು ಎಲ್ಲ ಮಾಧ್ವ ಮಠಾಧಿಪತಿಗಳು ಈ ಕಾಯಕ ನಡೆಸುತ್ತಾರೆ. ಯತಿಗಳು ಬೆಳಗ್ಗೆ ಸಂಸ್ಥಾನ ಪೂಜೆ ನಡೆಸುತ್ತಾರೆ. ಇದೇ ವೇಳೆ ಶ್ರೀಸುದರ್ಶನ ಹೋಮ ನಡೆಯುತ್ತದೆ, ಪೂರ್ಣಾಹುತಿಯ ನಂತರ ಗುರುಗಳು ತಾಮ್ರದಿಂದ ತಯಾರಿಸಿದ ಮುದ್ರೆಗಳನ್ನು ಅದೇ ಅಗ್ನಿ(ಬೆಂಕಿ)ಯಲ್ಲಿ ಕಾಯಿಸಿ ಸ್ವಯಂ ಮುದ್ರೆ ಹಚ್ಚಿಕೊಳ್ಳುತ್ತಾರೆ. ನಂತರ ಶಿಷ್ಯರಾದಿಯಾಗಿ ಎಲ್ಲರಿಗೂ ಮುದ್ರೆ ಹಾಕುತ್ತಾರೆ.
ತಪ್ತ ಮುದ್ರಾಧಾರಣೆಗೆ ಧಾರ್ಮಿಕ ಆಚರಣೆಯ ಜತೆ ವೈಜ್ಞಾನಿಕ ಕಾರಣವೂ ಇದೆ. ಹಿಂದೆ ಆಷಾಢ ಬಂತೆಂದರೆ ಮಳೆಗಾಲ ಜೋರು, ಸದಾ ಎಡೆಬಿಡದೆ ಸುರಿಯುವ ಮಳೆ ಜನರನ್ನು ರೋಗಗಳಿಂದ ಭಾಧಿಸುತ್ತಿತ್ತು. ಮಳೆಯ ಶೀತದಿಂದ ಹಲವಾರು ರೋಗಗಳು ಬರುತ್ತಿದ್ದವು. ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಲೋಹದಿಂದ ದೇಹದ ಮೇಲೆ ಸೂಕ್ತ ಸ್ಥಳದಲ್ಲಿ ಮುದ್ರೆ ಹಾಕಿಕೊಂಡರೆ ಕೆಲ ರೋಗಗಳನ್ನು ನಿಯಂತ್ರಿಸಬಹುದಿತ್ತು. ಇದಕ್ಕೆ ಉದಾಹರಣೆ ಹಿಂದಿನ ದಿನಗಳಲ್ಲಿ ಗೋವುಗಳಿಗೆ ಕಾಯಿಲೆ ಬಂದರೆ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ಠಸ್ಸೆಯಿಂದ ಚುಟುಕೆ ಹಾಕಲಾಗುತ್ತಿತ್ತು.
ಅಂದಿನ ಕಾಲಕ್ಕೆ ಸ್ವತಃ ವಿಜ್ಞಾನದ ಆಳವನ್ನು ಅರಿತಿದ್ದ ಸರ್ವಜ್ಞಾಚಾರ್ಯರು (ಶ್ರೀಮಧ್ವಾಚಾರ್ಯರು) ಶ್ರೀಹರಿಯ ಲಾಂಛನಗಳನ್ನು ದೇಹದ ಮೇಲೆ ಧರಿಸುವ ಪದ್ಧತಿಯನ್ನು ಕಡ್ಡಾಯಗೊಳಿಸಿದರು.
ತುಳುನಾಡಿನಲ್ಲಿ ಇಂದಿಗೂ ಮಾಧ್ವರಲ್ಲದೇ ಉಳಿದ ಹಲವಾರು ಮಂದಿ ಮುದ್ರೆ ಹಾಕಿಸಿಕೊಳ್ಳುತ್ತಾರೆ. ಜತೆಗೆ ವಿದೇಶೀಯ ಅನ್ಯ ಮತದವರು ಮುದ್ರಾ ಧಾರಣೆ ಮಾಡಿಸಿಕೊಳ್ಳುತ್ತಾರೆ.
ಶಯನಿ ಏಕಾದಶಿ:
ಇಂದಿನಿಂದ ನಾಲ್ಕು ತಿಂಗಳಕಾಲ ವಿಷ್ಣು ಶಯನೋತ್ಸವ. ಮಹಾವಿಷ್ಣುವನ್ನು ಪೂಜಿಸಿ, ಯೋಗನಿದ್ರೆಯಲ್ಲಿ ತೊಡಗುವಂತೆ ಪ್ರಾರ್ಥಿಸಲಾಗುತ್ತದೆ. ಈ ಆಚರಣೆ ಹೆಚ್ಚಾಗಿ ಘಟ್ಟ(ಕರಾವಳಿ)ದ ಕೆಳಗಿನ ಪ್ರದೇಶಗಳಲ್ಲಿ ಆಚರಿಸಲಾಗುತ್ತೆ. ಇಂದಿನಿಂದ ಈ ಭಾಗದ ದೇವಾಲಯಗಳಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತೆಗೆಯುವುದಿಲ್ಲ ಹಾಗಾಗಿ ಉತ್ಸವಗಳನ್ನು ಆಚರಿಸುವುದಿಲ್ಲ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಪ್ರಭೋದೋತ್ಸವ ನಡೆಸಿ, ಮಹಾವಿಷ್ಣುವನ್ನು ಯೋಗ ನಿದ್ರೆಯಿಂದ ಎಬ್ಬಿಸಲಾಗುತ್ತಿದೆ.
ಚಾತುರ್ಮಾಸ:
ಇಂದಿನಿಂದ ನಾಲ್ಕು ತಿಂಗಳ ಕಾಲ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ಎನ್ನುತ್ತೇವೆ. ಈ ನಾಲ್ಕು ತಿಂಗಳು ಯತಿಗಳು ಹಾಗೂ ಆಚಾರ್ಯತ್ವ ಪಾಲನೆ ಮಾಡುವ ಸದ್ಗೃಹಸ್ಥರು ಈ ವ್ರತವನ್ನು ಹಿಡಿಯುತ್ತಾರೆ.
ಇಂದಿನಿಂದ ಒಂದೊಂದು ತಿಂಗಳು ಒಂದೊಂದು ವ್ರತವನ್ನು ಆಚರಿಸಬೇಕು. ಈ ನಾಲ್ಕು ತಿಂಗಳು ಮಳೆಗಾಲದಿಂದ ಕೂಡಿವೆ. ಆಷಾಢ ಹಾಗೂ ಶ್ರಾವಣ ಮಾಸದಲ್ಲಿ ಗ್ರೀಷ್ಮ ಮತ್ತು ವರ್ಷ ಋತುಗಳ ಸಮಾಗಮ. ಈ ವೇಳೆ ಮಳೆ ಹೆಚ್ಚು. ಪುರಾತನ ಕಾಲದಲ್ಲಿ ಮನೆ, ಮಠಗಳಿಂದ ಹೊರಗೆ ಕಾಲಿಡಲಾರದಷ್ಟು ಮಳೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಯತಿಗಳ ಸಂಚಾರಕ್ಕೆ ಇದು ಅಡ್ಡಿಯಾಗುತ್ತಿತ್ತು. ಇದಲ್ಲದೇ ಮಳೆಗಾಲದಲ್ಲಿ ಸಣ್ಣ ಕ್ರಿಮಿ, ಕೀಟಗಳ ಉತ್ಪತ್ತಿಯೂ ಜೋರು. ಹೊರಗೆ ಸಂಚರಿಸುವಾಗ ಯತಿಗಳು ಕಾಲಿಗೆ ಹಾಕಿಕೊಳ್ಳುತ್ತಿದ್ದ ಮರದ ಹಾವುಗೆ(ಪಾದುಕೆ)ಗಳಿಗೆ ಸಿಕ್ಕ ಕೀಟಗಳು ಸಾಯುವ ಸಾಧ್ಯತೆ ಹೆಚ್ಚು. ಅಹಿಂಸೆಯೇ ಪರಮಧರ್ಮ ಎಂದರಿತಿದ್ದ ಯತಿಗಳು ಕೀಟಗಳ ಸಾವಿಗೆ ಕಾರಣರಾಗುತ್ತಿರಲಿಲ್ಲ. ಹಾಗಾಗಿ ಹೊರಗೆ ಸಂಚರಿಸುತ್ತಿರಲಿಲ್ಲ. (ಇದು ಹಿಂದೂ ಧರ್ಮೀಯ ಯತಿಗಳಷ್ಟೇ ಅಲ್ಲ ಜೈನ, ಬೌದ್ಧ ಧರ್ಮ ಸೇರಿದಂತೆ ಹಲವಾರು ಧರ್ಮೀಯ ಯತಿಗಳು ಪಾಲಿಸುತ್ತಾರೆ.)
ಇದರ ಜತೆಗೆ ಪುಣ್ಯ ಸಂಚಯನ ಮಾಡುವ ದಕ್ಷಿಣಾಯನ ಪುಣ್ಯಕಾಲ ಕೂಡಿರುತ್ತಿದ್ದ ಕಾರಣ ಯತಿಗಳು ಒಂದೆಡೆ ವ್ರತಕ್ಕೆ ಕೂರುತ್ತಿದ್ದರು. ಇನ್ನು ಇವರ ಶಿಷ್ಯರು ಶ್ರದ್ಧಾವಂತರಾದ ಕಾರಣ ಗುರುಗಳ ಮಾರ್ಗ ಅನುಸರಿಸಿ ಅವರೂ ವ್ರತಕ್ಕೆ ಕೂರುತ್ತಿದ್ದರು.
ಮೊದಲ ತಿಂಗಳು ಶಾಕವ್ರತ : ಈ ತಿಂಗಳಲ್ಲಿ ತರಕಾರಿ, ಬಾಳೆಹಣ್ಣು, ಕೇಸರಿ, ಪಚ್ಚಕರ್ಪೂರ ಇತ್ಯಾದಿ ಸುಗಂಧ ದ್ರವ್ಯಗಳನ್ನು ಬಳಸುವಂತಿಲ್ಲ. ಮಾವಿನ ಹಣ್ಣಿನ ಹೊರತಾಗಿ ಬೇರೆ ಹಣ್ಣುಗಳನ್ನು ದೇವರಿಗೆ ಸಮರ್ಪಿಸುವಂತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಹಿಂದೆ ವ್ಯಾಪಾರ ದೃಷ್ಠಿಯಿಂದ ತರಕಾರಿ ಬೆಳೆಯುತ್ತಿರಲಿಲ್ಲ. ಜನರು ಅವರ ಅಗತ್ಯಕ್ಕೆ ತಕ್ಕಹಾಗೆ ಹಿತ್ತಲು ಹಾಗೂ ಕೈತೋಟದಲ್ಲಿ ತರಕಾರಿ ಬೆಳೆದುಕೊಳ್ಳುತ್ತಿದ್ದರು. ಮಳೆಗಾಲದ ಆರಂಭದ ದಿನಗಳಲ್ಲಿ ಭೂಮಿಯಲ್ಲಿ ಅಮಿತ ಉಷ್ಣಾಂಶವಿರುತ್ತದೆ. ಈ ಕಾಲದಲ್ಲಿ ಬೆಳೆದ ತರಕಾರಿಯಲ್ಲೂ ಈ ಉಷ್ಣಾಂಶ ಇರುವುದರಿಂದ ತರಕಾರಿ ಬಳಕೆ ಉತ್ತಮವಲ್ಲವೆಂದು ನಿಷೇಧಿಸಲಾಗಿತ್ತು.
ಇದಲ್ಲದೆ ಜೋರು ಮಳೆಗಾಲವಾದ ಕಾರಣ ಹಣ್ಣುಗಳು ಕೆಡುತ್ತವೆ ಜತೆಗೆ ನಾವು ಸೇವಿಸಿದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಆಗೆಲ್ಲಾ ಈಗಿನಂತೆ ಸಂಚರಿಸಲು ವಾಹನಗಳಿರಲಿಲ್ಲ. ಮಳೆಯ ಕಾರಣ ಕೂತ ಕಡೆಯೇ ಹೆಚ್ಚು ಕಾಲ ಕಳೆಯುತ್ತಿದ್ದ ಜನರ ದೇಹದಲ್ಲಿ ಅಗತ್ಯಕಿಂತ ಪೋಷಕಾಂಶಗಳು ಹೆಚ್ಚಾಗಿ ಬೊಜ್ಜು, ಮತ್ತಿತರ ಅನಾರೋಗ್ಯ ಉಂಟಾಗುತ್ತಿತ್ತು.
ಹಾಗಾಗಿ ಈ ಪದಾರ್ಥಗಳನ್ಬು ನಿಷೇಧಿಸಿದ್ದರು ಈಗಲೂ ನಾವು ಗಮನಿಸಬಹುದು, ಈ ಆಚರಣೆ ಮಾಡುವ ಎಲ್ಲ ಯತಿಗಳು ಒಂದು ದಿನವೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಿಲ್ಲ. ಇದು ಸಕಾಲದಲ್ಲಿ ಮಾಡುವ ಆಚರಣೆಯ ಮಹತ್ವ.
ಎರಡನೇ ತಿಂಗಳು ದಧಿವ್ರತ : ಈ ತಿಂಗಳಲ್ಲಿ ಮೊಸರು ಬಳಸುವಂತಿಲ್ಲ. ಈ ತಿಂಗಳು ಜಿಟಿಪಿಟಿ ಮಳೆಗಾಲ, ಮೊಸರು ದೇಹಕ್ಕೆ ಒಗ್ಗುವುದಿಲ್ಲ. ಬದಲಿಗೆ ಶೀತವಾಗಿ ಕಾಡುತ್ತದೆ. ಹಾಗಾಗಿ ಮೊಸರಿಗೆ ನಿಷೇಧವಿದೆ.
ಮೂರನೆಯ ತಿಂಗಳು ಕ್ಷೀರ ವ್ರತ :ಈ ತಿಂಗಳು ಹಾಲು ಬಳಸುವಂತಿಲ್ಲ. ಈ ತಿಂಗಳಲ್ಲಿ ಮಳೆಯೂ ಉಂಟು ಬಿಸಿಲೂ ಉಂಟು. ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಕಫ ಕಟ್ಟುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಈ ತಿಂಗಳು ಹಾಲು ಬಳಕೆ ನಿಷೇಧಿಸಲಾಗಿದೆ.
ಕೊನೆಯ ತಿಂಗಳು ದ್ವಿದಳ ಧಾನ್ಯ ವ್ರತ : ಈ ತಿಂಗಳಲ್ಲಿ ರಾಗಿ, ಭತ್ತ, ಜೋಳ, ತೆಂಗು, ಬಾಳೆ ಇತ್ಯಾದಿ ಏಕದಳ ಪದಾರ್ಥಗಳನ್ನು ಬಳಸಬಹುದು. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಎಳ್ಳು, ಕಡಲೇ, ಹೆಸರು, ಉದ್ದು ಇತ್ಯಾದಿ ಧಾನ್ಯಗಳನ್ನು ಬಳಸುವಂತಿಲ್ಲ.
ಮುಂಗಾರಿನಲ್ಲಿ ಬೆಳೆದ ಈ ದ್ವಿದಳ ಧಾನ್ಯಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆಯಿಂದ ನಿಷೇಧ ಹೇರಲಾಗಿದೆ. ಈ ಆಚರಣೆಗಳನ್ನು ನಮ್ಮ ಪೂರ್ವಿಕರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಣೆಗೆ ತಂದರಾದರೂ ಇವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿದೆ. ಧರ್ಮ ಹಾಗೂ ವಿಜ್ಞಾನ ಒಂದಕ್ಕೊಂದು ಬೆಸೆದುಕೊಂಡಿವೆ.
ಇಂತಹ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ನಮ್ಮನ್ನು ಕಾಯುವ ಈ ಆಚರಣೆಗಳನ್ನು ನಾವು ಪಾಲಿಸೋಣ.