ವಿಭಿನ್ನ ಆಚರಣೆಯ ಸಿರಿಯಾಳ ಷಷ್ಠಿ

Team Newsnap
2 Min Read

ಶ್ರಾವಣದ ನಾಗರ ಪಂಚಮಿಯ ಬೆನ್ನಲ್ಲೇ ಮತ್ತೊಂದು ಹಬ್ಬವನ್ನು ಆಚರಿಸಲಾಗುತ್ತದೆ. ಮಲೆನಾಡು ಪ್ರಾಂತ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಈ ಸಿರಿಯಾಳ ಷಷ್ಠಿ ಹಬ್ಬ ಇಂದಿಗೂ ಕೆಲವೆಡೆ ಆಚರಣೆಯಲ್ಲಿದೆ.


ಈಶ್ವರನೇ ಸಿರಿಯಾಳನನ್ನು ವಿಧ ವಿಧವಾಗಿ ಪರೀಕ್ಷಿಸಿ ಅವನ ಮಗನನ್ನೇ ಆಹಾರವಾಗಿ ಕೇಳಿದಾಗ ತನ್ನ ಮಗನನ್ನೇ ಬಳಸಿ ಅಡುಗೆ ತಯಾರಿಸಿ, ಬಡಿಸಿ ವರಗಳನ್ನು ಪಡೆದ ಪರಮೇಶ್ವರನ ಪರಮಭಕ್ತನಾದ ಭಕ್ತ ಸಿರಿಯಾಳನ ಕತೆ ಎಲ್ಲರಿಗೂ ಗೊತ್ತೇ ಇದೆ. ಇದು ಚಲನಚಿತ್ರ ರೂಪದಲ್ಲೂ ಲಭ್ಯವಿದೆ.


ಇದರ ಐತಿಹ್ಯವಾಗಿ ಸಿರಿಯಾಳ ಷಷ್ಠಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಸಿರಿಯಾಳ ಷಷ್ಠಿ ಬಾಗಿನ ಕೊಡುವ ಹಬ್ಬ ಎಂದು ಕರೆಯಲಾಗುತ್ತದೆ.


ನಾಗರ ಪಂಚಮಿ ಹಾಗೂ ಸಿರಿಯಾಳ ಷಷ್ಠಿ ಒಂದು ರೀತಿಯಲ್ಲಿ ಅವಳಿ ಹಬ್ಬಗಳೆಂದು ಹೇಳಬಹುದು. ಶ್ರಾವಣ ಮಾಸದ ಪಂಚಮಿಯಂದು ನಾಗರ ಪಂಚಮಿ ಆಚರಿಸಿದರೆ ಮಾರನೇ ದಿನವಾದ ಷಷ್ಠಿಯಂದು ಸಿರಿಯಾಳ ಷಷ್ಠಿಯನ್ನು ಆಚರಿಸಲಾಗುತ್ತದೆ. ಇದನ್ನು ವಿಶೇಷವಾಗಿ ಗಂಡು ಮಕ್ಕಳ ತಾಯಂದಿರು ಮಾಡುವುದು. ಈ ಹಬ್ಬವೂ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.


ಸಿರಿಯಾಳ ಷಷ್ಠಿ ದಿನದಂದು ಸುಮಂಗಲಿಯರು ಅಭ್ಯಂಜನ ಮಾಡಿ, ಪೂಜೆ ಮಾಡಿ, ಅಡುಗೆಗಳನ್ನು ತಯಾರಿಸಿ ಅದನ್ನೇ ಬಾಗಿನ ರೂಪದಲ್ಲಿ ನೀಡುವ ಪದ್ಧತಿ ಇದೆ. ಭಕ್ತ ಸಿರಿಯಾಳ ಯಾವ ರೀತಿ ಮಗನನ್ನೇ ಬಳಸಿ ಅಡುಗೆ ತಯಾರಿಸಿ ಅತಿಥಿಗೆ ಬಡಿಸಿದ ರೀತಿಯಲ್ಲೇ ಇದನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಮಗನನ್ನೇ ಬಳಸಿ ಅಡುಗೆ ತಯಾರಿಸಿದಂತೆ ನಾಲ್ಕು ಬಗೆಯ ಅನ್ನ, ಭಕ್ಷ್ಯಗಳನ್ನು ತಯಾರಿಸಿ ಬಾಳೆ ಎಲೆಯ ಮೇಲೆ ಬಡಿಸಿ ಅದನ್ನೇ ಬಾಗಿನದ ರೂಪದಲ್ಲಿ ನೀಡಿ. ಪುತ್ರನ ಆಯಸ್ಸು ಆರೋಗ್ಯ ವೃದ್ಧಿಯಾಗಲಿ ಎಂದು ಆಚರಿಸುವ ಹಿನ್ನೆಲೆ ಇದೆ.



ಈ ಹಬ್ಬದ ವಿಶೇಷವೇನೆಂದರೆ ಸಿರಿಯಾಳ ಷಷ್ಠಿ ಬಾಗಿನವನ್ನು ಗಂಡು ಮಕ್ಕಳ ತಾಯಂದಿರೇ ಒಬ್ಬರಿಗೊಬ್ಬರು ಬಾಗಿನ ಕೊಟ್ಟು ತೆಗೆದುಕೊಳ್ಳುವ ಪರಿಪಾಠವಿದೆ. ಈ ಹಬ್ಬವನ್ನು ಗಂಡು ಮಕ್ಕಳ ತಾಯಂದಿರು ಮಾತ್ರ ಆಚರಿಸುವುದು.ಮಾಡಿದ ಅಡುಗೆಗಳನ್ನ ಬಾಗಿನ ನೀಡುವುದೇ ದೇವರಿಗೆ ನೈವೇದ್ಯ ಮಾಡಿದಂತೆ ಎಂಬ ನಂಬಿಕೆಯಿದೆ.


ಈ ಬಾಗಿನ ಕೊಡುವ ಸಂದರ್ಭದಲ್ಲಿ ಗಂಡು ಮಕ್ಕಳು ಮನೆಯಲ್ಲಿ ಇರಬಾರದೆಂಬ ಪ್ರತೀತಿ. ಇದನ್ನು ಕೊಡುವುದು, ತೆಗೆದುಕೊಳ್ಳುವುದನ್ನು ಗಂಡು ಮಕ್ಕಳು ನೋಡಬಾರದೆಂಬ ಪ್ರತೀತಿ.ಒಂದು ವೇಳೆ ಇದ್ದರೂ ಮನೆಯ ಸೂರಿನಿಂದ ಆಚೆ ಕಳಿಸಿ ಬಾಗಿನ ನೀಡಲಾಗುತ್ತದೆ. ಬಾಗಿನ ಸ್ವೀಕರಿಸಿದ ಮಹಿಳೆಯರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಊಟ ಮಾಡಬೇಕೆಂಬ ಪದ್ಧತಿ.

ಶ್ರಾವಣ ಮಾಸವನ್ನು ಹಬ್ಬಗಳ ಸಾಲು ಎಂದೇ ಕರೆಯಲಾಗುತ್ತದೆ. ಭೀಮನ ಅಮಾವಾಸ್ಯೆ, ಮಂಗಳ ಗೌರಿ, ನಾಗರ ಪಂಚಮಿ, ಸಿರಿಯಾಳ ಷಷ್ಠಿ ಒಂದರ ಹಿಂದೆ ಮತ್ತೊಂದು. ಕೆಲವೊಮ್ಮೆ ವಾರವಿಡೀ ಹಬ್ಬಗಳು, ಪಾಯಸದ ಊಟದ ಸಂಭ್ರಮಗಳು.

image 8

ಕಾವೇರಿ ಭಾರದ್ವಾಜ್

Share This Article
Leave a comment