November 22, 2024

Newsnap Kannada

The World at your finger tips!

shankar nag 696x350 1

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 9

Spread the love

ಆಟೋರಾಜ ನಿಗೆ 66 ನೇ ಹುಟ್ಟುಹಬ್ಬ 

ನಟ ಶಂಕರ್ ನಾಗ್ ನಮ್ಮನ್ನು ಅಗಲಿ 30 ವರ್ಷಗಳೇ ಕಳೆದಿವೆ. ಈಗಲೂ ಅವರು ಎಲ್ಲರೆದೆಯಲ್ಲೂ ಭದ್ರವಾಗಿ ಕುಳಿತಿದ್ದಾರೆ. ಪ್ರತಿಯೊಬ್ಬ ಆಟೋ ಚಾಲಕನ ಮನಸ್ಸಿನಲ್ಲಿ ರಾಜನಂತೆ ಮಿನುಗುತ್ತಿದ್ದಾರೆ. ಇಂತಹ ಶಂಕರ್‌ ನಾಗ್ ಅವರಿಗೆ ಇಂದು (ನ.09) ಜನ್ಮದಿನದ ಸಂಭ್ರಮ.

ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80 ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ನಾಗ್ ಸಹೋದರರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು.

43245481ed52ff2095299b0ddbfdc0af

ಬಾಲ್ಯ

ಶಂಕರ ನಾಗರಕಟ್ಟೆ 1954 ರಲ್ಲಿ ಹೊನ್ನಾವರ ಹತ್ತಿರದ ಮಲ್ಲಾಪುರದಲ್ಲಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಾತೃಭಾಷೆ ಕೊಂಕಣಿಯಾದರೂ ಮನೆಯಲ್ಲಿ ಎಲ್ಲರೂ ಕನ್ನಡ ಮತ್ತು ಮರಾಠಿ ಭಾಷೆಯನ್ನು ಮಾತನಾಡುತ್ತಿದ್ದರು. ಶಿರಾಲಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ನಂತರ ಅಣ್ಣ ಅನಂತನಾಗ್ ಓದುತ್ತಿದ್ದ ಮುಂಬೈನ ಶಾಲೆಗೆ ಸೇರಿದರು. ಅನಂತನಾಗ್‌ರು ನಾಟಕರಂಗದಲ್ಲಿ ಸಕ್ರಿಯವಾಗಿದ್ದರಿಂದ ಶಂಕರ ಕೂಡ ಮರಾಠಿ ನಾಟಕರಂಗದತ್ತ ಸೆಳೆಯಲ್ಪಟ್ಟರು. ಇಲ್ಲಿಯೇ ಒಂದು ನಾಟಕ ರಿಹರ್ಸಲ್‌ನಲ್ಲಿ ತಮ್ಮ ಭಾವಿ ಪತ್ನಿ ಅರುಂಧತಿನಾಗ್ ರನ್ನು ಭೇಟಿಯಾದರು. ಬ್ಯಾಂಕ್‌ನಲ್ಲಿ ಕ್ಲರ್ಕ್ ಉದ್ಯೋಗ ಮಾಡುತ್ತಲೇ ನಾಟಕರಂಗದಲ್ಲಿ ಸಕ್ರಿಯವಾಗಿದ್ದರು. ಅ‍ಷ್ಟೋತ್ತಿಗಾಗಲೇ ಅನಂತ್ ಕೆಲವು ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಅಣ್ಣನ ಹಾದಿಯನ್ನೇ ಹಿಡಿದ ಶಂಕರ್ ಚಿತ್ರಗಳಲ್ಲಿ ನಟಿಸಲು ತೊಡಗಿದರು.

ಚಿತ್ರರಂಗ ಪ್ರವೇಶ

shankar 1553164203

1978 ರಲ್ಲಿ ತೆರೆಕಂಡ ಮರಾಠಿ ಚಿತ್ರ ಸರ್ವಕಾಶಿ ಶಂಕರ್ ಅಭಿನಯದ ಮೊದಲ ಚಿತ್ರ.ಅದೇ ಸಮಯದಲ್ಲಿ ಬೆಂಗಳೂರಿಗೆ ಸ್ಥಳಾಂತರದವಾದ ಶಂಕರ್ ಗೀರೀಶ್ ಕಾರ್ನಾಡ್ ರ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. 1978 ರಿಂದ ಮುಂದಿನ ಹನ್ನೆರೆಡು ವರ್ಷದಲ್ಲಿ 90 ಚಿತ್ರಗಳಲ್ಲಿ ನಟಿಸಿದ ಶಂಕರ್ ಕೆಲವು ಚಿತ್ರಗಳನ್ನು ಅಣ್ಣ ಅನಂತರ ಜೊತೆ ಸೇರಿ ನಿರ್ಮಿಸಿದ್ದಾರೆ. ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಆಕರ್ಷಕ ನೋಟಗಳಿಂದ ಗಮನ ಸೆಳೆದಿದ್ದ ಶಂಕರ್ ಹಲವಾರು ನಿರ್ಮಾಪಕರ ಹಾಟ್ ಫೇವರೇಟ್ ನಟನಾಗಿದ್ದರು. ಇವರು ನಿಜವಾಗಲೂ ಕರಾಟೆ ಕಲಿಯದಿದ್ದರೂ ಚಿತ್ರವೊಂದರ ಸಾಹಸ ದೃಶ್ಯಗಳಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿದರಿಂದ ಇವರಿಗೆಕರಾಟೆ ಕಿಂಗ್’ ಎಂಬ ಬಿರುದು ಬಂತು. ಆ ಕಾಲದ ಪ್ರಮುಖ ನಟರಾಗಿದ್ದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಜೊತೆ ತೆರೆಹಂಚಿಕೊಂಡ ಕೀರ್ತಿ ಇವರಿಗೆ ಸಲ್ಲಬೇಕು. ಎರಡು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ

ಶಂಕರ್ ಮೊದಲು ನಿರ್ದೇಶಿಸಿದ್ದು ಅನಂತನಾಗ್ ಮತ್ತು ತಾವು ಮುಖ್ಯಭೂಮಿಕೆಯಲ್ಲಿದ್ದ ಮಿಂಚಿನ ಓಟ' ಚಿತ್ರ. ಈ ಚಿತ್ರ ಹಲವಾರು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.ನಂತರಜನುಮ ಜನುಮದ ಅನುಬಂಧ, ಗೀತಾ ಚಿತ್ರಗಳನ್ನು ನಿರ್ದೇಶಿಸಿದರು. ಹಿಂದಿಯಲ್ಲಿ ವಿನೋದ್ ಮೆಹ್ರಾ ಅಭಿನಯದಲಾಲಚ್ ಚಿತ್ರವನ್ನು ನಿರ್ದೇಶಿಸಿದರು. ಹೊಸ ತೀರ್ಪು, ನೋಡಿ ಸ್ವಾಮಿ ನಾವಿರೋದೆ ಹೀಗೆ ನಿರ್ದೇಶಿಸಿದ ಶಂಕರ್ 1984 ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಆಕ್ಸಿಡೆಂಟ್ ನಿರ್ದೇಶಿಸಿದರು. ಇವರು ನಿರ್ದೇಶಿಸಿದ ಎಲ್ಲಾ ಚಿತ್ರಗಳು ವಾಣಿಜ್ಯವಾಗಿ ಅಷ್ಟು ಲಾಭ ತರದಿದ್ದರೂ ಸಮಾಜಿಕ ಕಳಕಳಿ ಮತ್ತು ಪ್ರಯೋಗಶೀಲತೆಯಿಂದ ಕೂಡಿರುತ್ತಿದ್ದವು. ಇವರ ನಿರ್ದೇಶನದ ಪ್ರಯೋಗಶೀಲತೆಗೆ ಕೀರಿಟಪ್ರಾಯ ಚಿತ್ರ `ಒಂದು ಮುತ್ತಿನ ಕಥೆ’. ಡಾ.ರಾಜ್‌ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಸಾಗರಾಳದಲ್ಲಿ ಚಿತ್ರೀಕರಿಸಬೇಕಿತ್ತು. ಆಗ ಭಾರತದಲ್ಲಿ ನೀರಿನಾಳದಲ್ಲಿನ ದೃಶ್ಯ ಸೆರೆಹಿಡಿವ ಕ್ಯಾಮೆರಾ ಇರದಿದ್ದರಿಂದ ಕೆನೆಡಾಗೆ ಹೋಗಿ ಕ್ಯಾಮೆರಾ ತಂದರು. ನಂತರ ಲಂಡನ್‌ಗೆ ಹೋಗಿ ಚಿತ್ರದಲ್ಲಿನ ಆಕ್ಟೋಪಸ್ ಆಕೃತಿಯನ್ನು ತಂದರು. ಚಿತ್ರದಲ್ಲಿ ರಾಜ್ ಆಕ್ಸಿಜನ್ ಮಾಸ್ಕ್ ಇಲ್ಲದೇ ಆಕ್ಟೋಪಸ್ ಜೊತೆ ಹೋರಾಡುವ ಸನ್ನಿವೇಶವನ್ನು ಸೆರೆಹಿಡಿದಿದ್ದು ಮಾಲ್ಡೀವ್ಸನ ಸಮುದ್ರ ತೀರದಲ್ಲಿ.

ಮಾಲ್ಗುಡಿ ಡೇಸ್

90 ರ ದಶಕದಲ್ಲಿ ದೂರದರ್ಶನವೊಂದೆ ಏಕಮಾತ್ರ ಕಿರುತೆರೆ ವಾಹಿನಿಯಾಗಿತ್ತು. ದೂರದರ್ಶನದ ಆರಂಭದ ದಿನಗಳಲ್ಲಿ ಶಂಕರ ಪರಿಚಯ' ಎಂಬ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಆಗೆಲ್ಲಾ ದೂರದರ್ಶನವೇ ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸಲು ನಿರ್ಮಾಪಕರನ್ನು ಆಹ್ವಾನ ಮಾಡುತ್ತಿತ್ತು. ಈ ಆಹ್ವಾನವನ್ನು ಒಪ್ಪಿಕೊಂಡ ಶಂಕರ ನಾಗ್ಆರ್.ಕೆ.ನಾರಾಯಣ್‌'ರ ಮಾಲ್ಗುಡಿ ಡೇಸ್ ಪುಸ್ತಕವನ್ನು ಕಿರುತೆರೆ ಧಾರಾವಾಹಿ ಮಾಡಲು ನಿರ್ಧರಿಸಿದರು. ಹಿಂದಿ ಭಾಷೆಯಲ್ಲಿ ಸುಮಾರು 39 ಎಪಿಸೋಡ್‌ಗಳಲ್ಲಿ 1987 ರಲ್ಲಿ ಪ್ರಸಾರವಾದ ಈ ಸೀರಿಯಲ್ ರಾಷ್ಟ್ರವ್ಯಾಪ್ತಿ ಮನ್ನಣೆ ಪಡೆಯಿತು.

ನಾಟಕ-ರಂಗಭೂಮಿ ಸೇವೆ

ಮುಂಬೈನಲ್ಲಿ ಮರಾಠಿ ಮತ್ತು ಹಿಂದಿ ನಾಟಕಗಳಿಂದ ಶುರುವಾದ ರಂಗಭೂಮಿ ಸೇವೆ ಬೆಂಗಳೂರಿಗೆ ಬಂದ ಮೇಲೂ ಮುಂದುವರೆಯಿತು. ಅಣ್ಣ ಅನಂತನಾಗ್‌ರ ಜೊತೆ ಸೇರಿ ಸಂಕೇತ ಎಂಬ ಹವ್ಯಾಸಿ ನಾಟಕ ತಂಡ ಕಟ್ಟಿದರು.ಅಂಜು ಮಲ್ಲಿಗೆ',ಬ್ಯಾರಿಸ್ಟರ್’,ಸಂಧ್ಯಾ ಚಾಯ' ಮುಂತಾದ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ನಾಟಕಗಳಿಗಾಗಿಯೇ ಒಂದು ದೊಡ್ಡ ರಂಗಮಂದಿರ ಕಟ್ಟಿಸಬೇಕೆಂಬ ಆಸೆ ಹೊಂದಿದ್ದರು. ಈ ಆಸೆಯನ್ನು ಇವರ ಪತ್ನಿ ಅರುಂಧತಿನಾಗ್ರಂಗಶಂಕರ’ ರೂಪದಲ್ಲಿ ಈಡೇರಿಸಿದರು.

ಮರೆಯಾದ ಮಾಣಿಕ್ಯ

ಕೇವಲ 35 ವಯಸ್ಸಿನಲ್ಲೇ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರನಾಗ್‌ ಅಚಾನಕವಾಗಿ ನಮ್ಮನ್ನು ಆಗಲಿ ಹೋದರು.1990 ಸೆಪ್ಟಂಬರ್ 30 ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರ ವಲಯದ ಬಳಿ ಅಪಘಾತಕ್ಕೀಡಾಗಿ ನಿಧನರಾದರು. ಕನ್ನಡ ಚಿತ್ರರಂಗದ ಸೂರ್ಯ ಮಧ್ಯಾಹ್ನವೇ ಅಸ್ತಮಿಸಿದ.

ಶಂಕರನ ಕನಸುಗಳು

1.ಲಂಡನ್‌ನಲ್ಲಿನ ಮೇಟ್ರೋ ನೋಡಿದ್ದ ಇವರು ಬೆಂಗಳೂರಿಗೆ ಒಂದು ಮೆಟ್ರೋ ಇರಬೇಕೆಂದು ಒಂದು ನೀಲಿ ನಕ್ಷೆಯನ್ನು ಕೂಡ ತಯಾರಿಸಿದ್ದರು.

2.ಸರ್ಕಾರ ನಂದಿ ಬೆಟ್ಟಕ್ಕೆ ಒಂದು ರಜ್ಜುಪಥ (rope way) ಹಾಕಬೇಕೇಂದು ಬಯಸಿದ್ದರು.

3.ಕಡಿಮೆ ವೆಚ್ಚದ ಫ್ಯಾಬ್ರಿಕೇಟೇಡ್ ಮನೆ ನಿರ್ಮಾಣ ಯೋಜನೆ ರೂಪಸಿದ್ದರು.

4.ಬೆಂಗಳೂರಿನ ಹತ್ತಿರವಿರುವ ತಮ್ಮ ತೋಟದಲ್ಲಿ ಒಂದು ಕಂಟ್ರಿ ಕ್ಲಬ್ ಮಾಡಬೇಕೆಂದು ನಿರ್ಧರಿಸಿದ್ದರು.

`ಸಂಕೇತ ಇಲೆಕ್ಟ್ರಾನಿಕ್ಸ್’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಮೊದಲ ಇಲೆಕ್ಟ್ರಾನಿಕ್ ರಿಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿದ ಕೀರ್ತಿ ಕೂಡ ನಾಗ್ ಸಹೋದರರಿಗೆ ಸಲ್ಲಬೇಕು.

Copyright © All rights reserved Newsnap | Newsever by AF themes.
error: Content is protected !!