ಇದು ಕೊಪ್ಪಳದ ಸುತ್ತಮುತ್ತಲ ಹಳ್ಳಿಗಳ ಬಯಲಾಟದ ಕಲಾವಿದರಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿರುವ ಹೆಸರು. ಷಡಕ್ಷರಯ್ಯನವರು ಕೊಪ್ಪಳದ ಮುದ್ದಾಬಳ್ಳಿ ಎಂಬ ಹಳ್ಳಿಯವರು. ಇವರು ಕೊಪ್ಪಳದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಯಲಾಟ ಕಲಿಸುತ್ತಿದ್ದ ಮೇಷ್ಟ್ರು. ಬಯಲಾಟದ ಮಾಂತ್ರಿಕ ಎಂದೇ ಆ ಭಾಗದಲ್ಲಿ ಖ್ಯಾತಿ ಪಡೆದವರು. ಇವರು ನಿರ್ದೇಶಿಸಿದ ಬಯಲಾಟಗಳೆಲ್ಲವೂ ಇವರಿಗೆ ಈ ಖ್ಯಾತಿಯನ್ನ ತಂದುಕೊಟ್ಟಿವೆ.
ಷಡಕ್ಷರಯ್ಯ ಸೊಪ್ಪಿಮಠ ಕೊಪ್ಪಳದ ಮುದ್ದಾಬಳ್ಳಿಯಲ್ಲಿ ಜೂನ್ 4, 1916 ರಂದು ಜನಿಸಿದರು. ತಂದೆ ಸಂಗಯ್ಯ ಸೊಪ್ಪಿಮಠ, ತಾಯಿ ಕೊಟ್ರಮ್ಮ. ಮುದ್ದಾಬಳ್ಳಿ ಮತ್ತು ಗೊಂಡಬಾಳಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. 1940ರ ದಶಕದ ಆಸುಪಾಸಿನಲ್ಲಿ ಯಾರಾದರೂ 7ನೇ ತರಗತಿಯವರೆಗೂ ಓದಿದ್ದರೆ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕನ ಕೆಲಸ ಸಿಗುತ್ತಿತ್ತು. ಆದರೆ ಇವರು ನಾನು ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡುವದಿಲ್ಲ ಎಂದು ಹೇಳಿ ಬಯಲಾಟವನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿದರು. ‘ಸಂಪೂರ್ಣ ರಾಮಾಯಣ’ ‘ಹೇಮರೆಡ್ಡಿ ಮಲ್ಲಮ್ಮ’ ‘ರಾಮಾಂಜನೇಯ ಯುದ್ಧ’ ‘ಕರ್ಣ ಪರ್ವ’ ಇವರು ನಿರ್ದೇಶಿಸಿದ ಬಯಲಾಟಗಳಲ್ಲಿ ಕೆಲವು ಪ್ರಮುಖವಾದವು. ಅಲ್ಲದೇ ‘ರಕ್ತ ರಾತ್ರಿ’ ಎಂಬ ನಾಟಕವನ್ನೂ ನಿರ್ದೇಶನ ಮಾಡಿದ್ದಾರೆ.
ಬಯಲಾಟವೆಂಬುದು ಯಕ್ಷಗಾನದ ಒಂದು ರೂಪ. ಇದು ನೃತ್ಯ ಮತ್ತು ನಾಟಕಗಳ ಮಿಶ್ರಣ. ಈ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡ ಷಡಕ್ಷರಯ್ಯನವರು ತಮ್ಮ ಊರಿನಲ್ಲಿ ಹಾಗೂ ಸುತ್ತ ಮುತ್ತಲ ಹಳ್ಳಿಗಳಲ್ಲಿ ಈ ಕಲೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾದರು. ತಮ್ಮ ಊರಿನಲ್ಲಿದ್ದ ಕೃಷಿ ಭೂಮಿಯಿಂದ ಮತ್ತು ಬಯಲಾಟ ಕಲಿಸುತ್ತಿದ್ದುದ್ದರಿಂದ ಬರುತ್ತಿದ್ದ ದವಸ, ಧಾನ್ಯಗಳೇ ಇವರ ಕುಟುಂಬದ ಆದಾಯದ ಮೂಲ.
ಸ್ವಲ್ಪ ಕಾಲದ ನಂತರ ಬಯಲಾಟದ ಪ್ರದರ್ಶನಗಳ ಬೇಡಿಕೆ ಕುಗ್ಗಿದ್ದರಿಂದ ಇವರ ಬಯಲಾಟದ ಚಟುವಟಿಕೆಗಳು ಬರುಬರುತ್ತಾ ಕಡಿಮೆಯಾಯಿತು. ಇದೇ ಸಮಯದಲ್ಲಿ ಧಾರಾವಾಡದಲ್ಲಿ ಆಕಾಶವಾಣಿ ಕೇಂದ್ರ ಪ್ರಾರಂಭವಾದ ನಂತರ ಇವರ ಪ್ರತಿಭೆಯನ್ನು ಗುರುತಿಸಿ ರೇಡೀಯೋ ನಾಟಕಗಳನ್ನು ಮಾಡಲು ಕೇಳಿಕೊಂಡಿತು. ಷಡಕ್ಷರಯ್ಯನವರು ಧಾರವಾಡದ ಆಕಾಶವಾಣಿಗೆ ಅನೇಕ ಬಯಲಾಟಗಳನ್ನು ತಮ್ಮ ತಂಡದಿಂದ ನಿರ್ದೇಶನ ಮಾಡಿಕೊಟ್ಟರು.
ಬಯಲಾಟ ಕಲಿಸುವದರ ಜೊತೆಗೆ ಇವರು ತಬಲಾ ವಾದನ, ಹಾರ್ಮೋನಿಯಂ ನುಡಿಸುವುದು, ಪಿಟೀಲು ನುಡಿಸುವುದು, ರಂಗ ಗೀತೆಗಳನ್ನು ಹಾಡುವುದು ಮುಂತಾದವುಗಳಲ್ಲಿ ಪರಿಣಿತರಾಗಿದ್ದರು. ಕನ್ನಡದ ಜೊತೆಗೆ ಉರ್ದು, ತೆಲುಗು, ಹಿಂದಿ ಭಾಷೆಗಳನ್ನ ಓದಲು, ಬರೆಯಲು ಕಲಿತಿದ್ದರು. ಅಲ್ಲದೆ ಪುರಾಣ-ಪ್ರವಚನಗಳ ವಾಚನ, ಕೀರ್ತನೆಗಳ ವಾಚನ, ಜ್ಯೋತಿಷ್ಯ ಶಾಸ್ತ್ರ, ಮುಂತಾದವುಗಳಲ್ಲಿ ಸಹ ಪರಿಣಿತರಾಗಿದ್ದರು. ಇವರು ರೇಡಿಯೋ ನಾಟಕಕ್ಕಾಗಿ ಬರೆದ ನಾಟಕದ ಕೆಲವು ಹಸ್ತ ಪ್ರತಿಗಳನ್ನ ಹಂಪಿ ಕನ್ನಡ ವಿಶ್ವವಿದ್ಯಾಲಯದವರು ಸಂಗ್ರಹಿಸಿ ಇಟ್ಟಿದ್ದಾರೆ.
ಜೀವನಪೂರ್ತಿ ಬಯಲಾಟ ಕಲಿಸಲು ಬೇರೆ ಬೇರೆ ಊರುಗಳಿಗೆ ಓಡಾಡಿದ ಇವರು ಅಗೋಚರ ಪ್ರತಿಭೆಯಾಗಿಯೇ ತಮ್ಮ ಬದುಕನ್ನು ಕಳೆದರು. ಯಾವ ಸಂಘ ಸಂಸ್ಥೆಯವರು, ಸರ್ಕಾರದ ಯಾವ ಸಾಂಸ್ಕೃತಿಕ ಇಲಾಖೆಯವರು ಇವರ ಶ್ರಮವನ್ನು ಗುರುತಿಸಲಿಲ್ಲ. ಸರ್ಕಾರದಿಂದ ಕಲಾವಿದರಿಗಾಗಿ ಕೊಡುವ ಮಾಶಾಸನಕ್ಕೆ ಅರ್ಜಿ ನೀಡಿದರೂ, ಮಾಶಾಸನ ದೊರೆತದ್ದು ಇವರ ಮರಣಾನಂತರ. ಷಡಕ್ಷರಯ್ಯನವರು ತಮ್ಮ ಕೊನೆಗಾಲದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿ ಫೆಬ್ರುವರಿ 1, 1983ರಲ್ಲಿ ನಿಧನರಾದರು.
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ