ಶಶಿಕಲಾ ನಟರಾಜನ್ ಕೇಂದ್ರ ಕಾರಾಗೃಹ ದಿಂದ ಬಿಡುಗಡೆ

Team Newsnap
1 Min Read

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ 4 ವರ್ಷ ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ (65) ಶಿಕ್ಷೆಯ ಅವಧಿ ಇಂದಿಗೆ ಪೂರ್ಣಗೊಂಡಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ನಟರಾಜನ್ ಗೆ ಸಾಮಾನ್ಯ ರೋಗಿಗಳಂತೆ ಚಿಕಿತ್ಸೆ ನೀಡಬಹುದು ಎಂದು ಜೈಲು ಅಧೀಕ್ಷಕರು, ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರದ ಮುಖೇನ ಹೇಳಿದ್ದಾರೆ.

ಶಶಿಕಲಾ ಅವರ ಉಸಿರಾಟದ ವೇಗ ಸಾಮಾನ್ಯ ರೀತಿಯಲ್ಲಿದೆ, ದೇಹದಲ್ಲಿ ಆಮ್ಲಜನಕದ ಪ್ರಮಾಣವೂ ಉತ್ತಮವಾಗಿದೆ. ಆರೋಗ್ಯವಾಗಿರುವ ಅವರನ್ನು 10 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

1990ರ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಜಯಲಲಿತಾ -ಆಪ್ತ ಗೆಳತಿ ಶಶಿಕಲಾ, ಇಳವರಸಿ , ಸುಧಾಕರನ್ ಸೇರಿದಂತೆ ಇತರರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪದಡಿ ಕೇಸು ದಾಖಲಿಸಲಾಗಿತ್ತು. 2014ರಲ್ಲಿ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿತ್ತು.

ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಆರೋಪಿಗಳಿಗೆ ಶಿಕ್ಷೆಯನ್ನು ಖಚಿತಪಡಿಸಿತ್ತು.

ಶಶಿಕಲಾ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿ 2017ರ ಫೆ.15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸೇರ್ಪಡೆಯಾಗಿದ್ದರು.

ನಾಲ್ಕು ವರ್ಷದ ಶಿಕ್ಷೆಯ ಜತೆಗೆ 10 ಕೋಟಿ ರು.ಗಳ ದಂಡವನ್ನು ನ್ಯಾಯಾಲಯ ವಿಧಿಸಿತ್ತು. ದಂಡ ಪಾವತಿಸಲು ವಿಫಲವಾದರೆ ಮತ್ತೆ ಒಂದು ವರ್ಷ ಶಿಕ್ಷೆ ಅನುಭವಿಸುವ ತೀರ್ಪು ನೀಡಲಾಗಿತ್ತು. ಆದರೆ ಶಶಿಕಲಾ ಅವರು ನ್ಯಾಯಾಲಯಕ್ಕೆ 10 ಕೋಟಿ 10 ಸಾವಿರ ರೂ. ದಂಡವನ್ನು ಪಾವತಿಸಿದ್ದಾರೆ. ಅವರು ಶಿಕ್ಷೆಯಿಂದ ಸಂಪೂರ್ಣವಾಗಿ ಮುಕ್ತವಾಗಿದ್ದಾರೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಇಂದು ಬೆಳಗ್ಗೆ 9.45ರ ಸುಮಾರಿಗೆ ವೈದ್ಯಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಶಿಕ್ಷೆಯಿಂದ ಮುಕ್ತರಾಗಿರುವ ಶಶಿಕಲಾ ಅವರು ಕೋವಿಡ್ ಚಿಕಿತ್ಸೆ ಪೂರ್ಣಗೊಂಡ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

ತಮಿಳುನಾಡಿನ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲೇ ಶಶಿಕಲಾ ಅವರ ಬಿಡುಗಡೆ ರಾಜಕೀಯ ಕುತೂಹಲವನ್ನು ಕೆರಳಿಸಿದೆ.

Share This Article
Leave a comment