ಸಂಜೀವಿನಿ ವ್ರತ (ಭೀಮನ ಅಮಾವಾಸ್ಯೆ)

Team Newsnap
3 Min Read

ಭೀಮನ ಅಮಾವಾಸ್ಯೆ ಎಂದರೆ ಹಿಂದೂ ಮಹಿಳೆಯರ ಪಾಲಿಗೆ ಅತ್ಯಂತ ಪವಿತ್ರ ಹಬ್ಬ.ಆಷಾಢ ಮಾಸದ ಕೊನೆಯ ದಿನ, ಅಂದರೆ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಆಚರಿಸುವ ಈ ಹಬ್ಬಕ್ಕೆ ಜ್ಯೋತಿರ್ಭೀಮೇಶ್ವರ ವ್ರತ ಎಂಬ ಹೆಸರೂ ಇದೆ.

ಮಡದಿಯು, ತನ್ನ ಪತಿಯ ಆಯುಷ್ಯ ಹೆಚ್ಚಲಿ, ಆತನಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ ಎಂದು ಭಕ್ತಿಯಿಂದ ಬೇಡಿ, ಪತಿಯನ್ನು ಪೂಜೆ ಮಾಡುವ ಈ ಹಬ್ಬವನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತದೆ.

ಆಷಾಢದ ಅಮಾವಾಸ್ಯೆ ಯಂದು ಗಂಡನ ಪೂಜೆ
ಮದುವೆಯಾದ ಮಹಿಳೆಯರು ಪತಿಯ ಆಯುಷ್ಯ ವೃದ್ಧಿಗಾಗಿ ಈ ವ್ರತ ಪಾಲಿಸಿದರೆ, ಮದುವೆಯಾಗದ ಯುವತಿಯರು ತಮಗೆ ಒಳ್ಳೆಯ ಪತಿ ಸಿಗಲಿ ಎಂಬ ಪ್ರಾರ್ಥನೆಯೊಂದಿಗೂ ಈ ವ್ರತ ಆಚರಿಸಬಹುದು.

ಪೌರಾಣಿಕ ಹಿನ್ನೆಲೆಯೇನು ?
ಪ್ರತಿವರ್ಷ ಭೀಮನ ಅಮಾವಾಸ್ಯೆ ವ್ರತ ಕೈಗೊಳ್ಳುವ ಹಲವರಿಗೆ ಅದರ ಪೌರಾಣಿಕ ಹಿನ್ನೆಲೆ ತಿಳಿದಿಲ್ಲ. ಪುರಾಣಗಳ ಪ್ರಕಾರ, ಮರಣ ಹೊಂದಿದ್ದ ಪತಿಯ ಪ್ರಾಣವನ್ನು ಉಳಿಸಿ ಕೊಳ್ಳು ವುದಕ್ಕಾಗಿ ಸತಿಯೊಬ್ಬಳು ಪಾರ್ವತಿ ಪರಶಿವನನ್ನು ಪ್ರಾರ್ಥಿಸುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿ ಶಿವನು ಆಕೆಯ ಪತಿಯನ್ನು ಬದುಕಿಸಿ ಕೊಟ್ಟು, ಸತಿ-ಪತಿಯರಿಗೆ ದೀರ್ಘಾಯುಷ್ಯದ ಆಶೀರ್ವಾದ ಮಾಡುತ್ತಾನೆ. ಹೀಗೆ ತನ್ನ ಪತಿಯನ್ನು ಬದುಕಿಸಿಕೊಳ್ಳಲು ಆಕೆ ಆಷಾಢ ಬಹುಳ(ಕೃಷ್ಣ ಪಕ್ಷ) ಅಮಾವಾಸ್ಯೆಯ ದಿನ ಕಠಿಣ ವ್ರತ ಕೈಗೊಂಡ ಕಾರಣ ಕ್ಕಾಗಿಯೇ ಆ ದಿನ ಹಿಂದು ಸ್ತ್ರೀಯರ ಪಾಲಿಗೆ ಪತಿಯ ಆಯುಷ್ಯ ವೃದ್ಧಿ ವ್ರತ ದಿನಾಚರಣೆಯೂ ಹೌದು.

ಶಿವ ಪಾರ್ವತಿಯ ವಿವಾಹ ದಿನ
ಪುರಾಣಗಳ ಪ್ರಕಾರ ಶಿವ-ಪಾರ್ವತಿಯರು ವಿವಾಹವಾಗಿದ್ದು ಇದೇ ದಿನವಂತೆ. ಆದರ್ಶ ಸತಿ-ಪತಿಯರಾದ ಶಿವ-ಪಾರ್ವತಿಯಂತೆ ಬದುಕುವ ಸಂಕಲ್ಪ ಕೈಗೊಳ್ಳುವುದಕ್ಕೂ ಈ ದಿನ ಒಂದು ನೆಪ. ಸಂತಾನ ಮತ್ತು ಶಕ್ತಿಯ ಸಂಕೇತವಾದ ಪಾರ್ವತಿಯನ್ನು ಪೂಜಿಸಿ ಹೆಂಗಳೆಯರು ತಮಗೂ ಆ ಶಕ್ತಿಯನ್ನು ಕಲ್ಪಿಸುವಂತೆ ಬೇಡುತ್ತಾರೆ.

ಸಂಜೀವಿನಿ ವ್ರತ
ಪತಿಗೆ ದೀರ್ಘಾಯುಷ್ಯ ನೀಡಿದ ಕಾರಣಕ್ಕೆ ಈ ವೃತಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕರೆಯುತ್ತಾರೆ. ಒಮ್ಮೆ ವ್ರತ ಆರಂಭಿಸಿದರೆ ಐದು ವರ್ಷ, ಒಂಭತ್ತು ಅಥವಾ ಹದಿನಾರು ವರ್ಷ ವ್ರತಾಚರಣೆ ಮಾಡಬೇಕು. ವ್ರತ ಸಂಪೂರ್ಣವಾದ ವರ್ಷ ಒಂದಷ್ಟು ಜನರಿಗೆ ಅನ್ನದಾನ ಮಾಡಬೇಕು ಎಂಬುದು ವ್ರತದ ನಿಯಮ.

ಹೊಸದಾಗಿ ಮದುವೆಯಾದ ಆಷಾಢ ಮಾಸವೆಂದು ತವರು ಮನೆಗೆ ಹೋದ ಪತ್ನಿ ಪತಿಯ ಪೂಜೆಗೆಂದು ಭೀಮನ ಅಮಾವಾಸ್ಯೆಯಂದು ಹಿಂದಿರುಗುತ್ತಾಳೆ. ಮತ್ತೆ ಶ್ರಾವಣ ಮಾಸ ಆರಂಭವಾಗಿ ಹಬ್ಬಗಳ ಸಾಲು ಶುರುವಾಗುತ್ತದೆ.

ಪೂಜೆ ಮಾಡುವುದು ಹೇಗೆ ?
ಅಕ್ಕಿ, ತೆಂಗಿನಕಾಯಿ, ಅರಿಶಿಣ-ಕುಂಕುಮವನ್ನು ಒಂದು ತಟ್ಟೆಯಲ್ಲಿ ಇಟ್ಟು, ಅದರ ಮೇಲೆ ತುಪ್ಪದ ದೀಪ ಹಚ್ಚಿದ ಎರಡು ದೀಪದ ಕಂಬ ಇಡಬೇಕು. ನಂತರ ಶಿವ-ಪಾರ್ವತಿಯರನ್ನು ಆರಾಧಿಸುತ್ತ, ಭಕ್ತಿಯಿಂದ ಪೂಜೆ ಮಾಡಬೇಕು. ಒಂಬತ್ತು ಗಂಟಿನ ಗೌರಿ ದಾರದ ಜೊತೆಗೆ ಉಳಿದ ಪೂಜಾ ಸಾಮಗ್ರಿ(ದಿನವೂ ಬಳಸುವ)ಗಳನ್ನು ಬಳಸಿ ಪೂಜೆ ಮಾಡಬೇಕು. ಪೂಜೆ ಮುಗಿದ ನಂತರ ಗೌರಿ ದಾರವನ್ನು ಕಂಕಣದಂತೆ ಕೈಗೆ ಕಟ್ಟಿಕೊಳ್ಳ ಬೇಕು.ಹೀಗೆ ಕಂಕಣ ಕಟ್ಟಿಕೊಂಡು, ಪತಿಯ ಪಾದಗಳಿಗೆ ನಮಸ್ಕರಿಸಿ, ಪಾದಪೂಜೆ ಮಾಡಿ ಆಶೀರ್ವಾದ ತೆಗೆದುಕೊಳ್ಳುವುದು ವಾಡಿಕೆ.

ಭೀಮೇಶ್ವರನ ಪೂಜೆ
ಮೊದಲು ಎಂದಿನಂತೆ ವಿಘ್ನನಾಶಕ ಗಣಪತಿಯನ್ನು ಪೂಜಿಸಿ, ನಂತರ ಭೀಮೇಶ್ವರ ಅಂದರೆ ಶಿವನನ್ನು ಪೂಜಿಸಬೇಕು. ಗಣೇಶ ಅಷ್ಟೊತ್ತರ, ಶಿವ ಅಷ್ಟೋತ್ತರ ಹೇಳಬೇಕು.

ಇದು ಭೀಮನ ಹಬ್ಬವಲ್ಲ
ಭೀಮನ ಅಮಾವಾಸ್ಯ ಎಂದಿರುವ ಕಾರಣ ಹಲವರು ಇದನ್ನು ಪಂಚಪಾಂಡವರಲ್ಲೊಬ್ಬನಾದ ಭೀಮನ ಹಬ್ಬ ಎಂದು ತಪ್ಪುತಿಳಿದಿದ್ದೂ ಇದೆ. ಆದರೆ ಇದು ಭೀಮೇಶ್ವರ, ಅಂದರೆ ಈಶ್ವರನನ್ನು ಆರಾಧಿಸುವ ಹಬ್ಬ.

ಅದ್ಧೂರಿ ಆಚರಣೆ
ಕೆಲವೆಡೆ ಅದ್ಧೂರಿ ಮಂಟಪ ನಿರ್ಮಿಸಿ ಈ ವ್ರತ ಮಾಡುವವರೂ ಇದ್ದಾರೆ. ಮಂಗಳ ಸ್ನಾನ, ಗೋಧಿ ಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನೇ ನೈವೇದ್ಯಕ್ಕಾಗಿ ಬಳಸುವುದು ಶ್ರೇಷ್ಠ.ಕೆಲೆವೆಡೆ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಕಡಬು(ಸಿಹಿ ಇಲ್ಲದ), ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸಿಲ ಮೇಲೆ ಕೂತು ತನ್ನ ಮೊಣಕೈಯಿಂದ ಅದನ್ನು ತುಂಡರಿಸುತ್ತಾನೆ. ಸೋದರಿ ಆ ಸಮಯದಲ್ಲಿ ಅವನ ಬೆನ್ನ ಮೇಲೆ ಪ್ರೀತಿಯಿಂದ ಗುದ್ದುತ್ತಾಳೆ. ನಂತರ ಅಣ್ಣನ ಆಶೀರ್ವಾದ ಬೇಡುವ ಸೋದರಿ, ಫಲ ತಾಂಬೂಲ ನೀಡುತ್ತಾಳೆ.

ಅವಿವಾಹಿತ ಮಹಿಳೆಯರೂ ಆಚರಿಸಬಹುದು
ಈ ವ್ರತವನ್ನು ಅವಿವಾಹಿತ ಮಹಿಳೆಯರೂ ಆಚರಿಸುವುದಕ್ಕೆ ಅಡ್ಡಿಯಿಲ್ಲ. ಒಳ್ಳೆಯ ಪತಿ ಸಿಗಲಿ ಎಂದು ಪ್ರಾರ್ಥಿಸುತ್ತ, ಅವಿವಾಹಿತ ಯುವತಿಯರೂ ಕೈಗೆ ಕಂಕಣ ಕಟ್ಟಿಕೊಂಡು ಈ ವ್ರತ ಆಚರಿಸುತ್ತಾರೆ.

ವಿವಿಧೆಡೆ ಆಚರಣೆ
ಬೇರೆ ಬೇರೆ ಜಿಲ್ಲೆಗಳಲ್ಲಿ ಭೀಮನ ಅಮಾವಾಸ್ಯೆ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆದು ಆಚರಿಸುತ್ತಾರೆ. ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯ ಎಂದರೆ ಉತ್ತರ ಕನ್ನಡದ ಕಡೆ ಇದನ್ನೇ ಕೊಡೆ ಅಮಾವಾಸ್ಯೆ, ಅಳಿಯನ ಅಮಾವಾಸ್ಯೆ ಎನ್ನುತ್ತಾರೆ. ಮದುವೆಯಾದ ಮೊದಲ ವರುಷ, ಈ ದಿನದಂದು ಅಳಿಯನನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿ, ಅವರಿಗೆ ಛತ್ರಿ ಸೇರಿದಂತೆ ಕೆಲವು ಉಡುಗೊರೆ ನೀಡಿ ಕಳಿಸುವ ಪದ್ಧತಿ ಇದೆ.

Share This Article
Leave a comment