November 18, 2024

Newsnap Kannada

The World at your finger tips!

sampth bandana

ಮಾಜಿ ಮೇಯರ್, ‘ ಅಖಂಡ ಬೆಂಕಿ’ ಸಂಪತ್ ರಾಜ್ ಬಂಧನ!

Spread the love

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಬಂಧನವಾಗಿದೆ. ತಲೆ ಮರೆಸಿಕೊಂಡು‌ ಓಡಾಡುತ್ತಿದ್ದ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

ನಿನ್ನೆ ರಾತ್ರಿ ಫ್ರೇಜರ್ ಟೌನ್​ನಲ್ಲಿರುವ ತನ್ನ ಸ್ನೇಹಿತನ ಮನೆಗೆ ಸಂಪತ್ ರಾಜ್ ಬಂದಿರುವ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈಗ ಸಿಸಿಬಿ ಬಲೆಯಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಆಟ ಸಾಮಾನ್ಯವಾದುದ್ದೇನಲ್ಲ. ಸಿಸಿಬಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ‌ ರಾಜ್ ಓಡಾಡಿದ ಪರಿ ಮಾತ್ರ ರಣ ರೋಚಕ.

ಕಳೆದೊಂದು ತಿಂಗಳಿನಿಂದ ಸಂಪತ್ ರಾಜ್ ಆಟಾಟೋಪ ಖಾಕಿಯನ್ನು ನಿಗಿ ನಿಗಿ ಕೆಂಡವಾಗಿಸಿತ್ತು. ನಾಪತ್ತೆಯಾಗುವ ಮುನ್ನ ಮಾಜಿ ಮೇಯರ್ ಮಾಡಿದ ಹೈಡ್ರಾಮಾ ಹೀಗಿತ್ತು:

ಸಂಪತ್​ರಾಜ್ ಹೈಡ್ರಾಮ ಟೈಮ್​ಲೈನ್: 

  • ಕರೋನಾ ಚಿಕಿತ್ಸೆ ಗಾಗಿ ಸೆ 14: ಮೊದಲ ಬಾರಿಗೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು ಸಂಪತ್.
  • ಅ. 3: ಈ ದಿನದಂದು ಸಂಪತ್ ರಾಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್

” ಅ. 4: ಎರಡನೇ ಬಾರಿಗೆ ಆಸ್ಪತ್ರೆ ಸೇರಿದ ಸಂಪತ್ ರಾಜ್

  • ಅ. 14: ಎರಡನೇ ಬಾರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿ ಜಾಮೀನು‌ ಅರ್ಜಿ ಸಲ್ಲಿಸಿದ್ದರು
  • ಅ. 16: ಜಾಮೀನು ಅರ್ಜಿ ತಿರಸ್ಕಾರವಾದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲು
  • ಅ. 17: ಸಂಪತ್ ರಾಜ್ ಡಿಸ್​ಚಾರ್ಜ್ ಬಗ್ಗೆ ಮಾಹಿತಿ ಕೋರಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟೀಸ್ ಕೊಟ್ಟ ಸಿಸಿಬಿ
  • ಅ. 23: ಡಿಸ್ಚಾರ್ಜ್ ಆಗಿ ತಲೆ ಮರೆಸಿಕೊಂಡು ಸಂಪತ್ ರಾಜ್ ಪರಾರಿ.

ಪೋಲೀಸರನ್ನು ತರಾಟೆಗೆ ತೆಗೆದುಕೊಂಡ ಕೋಟ್೯ :

ನಾಲ್ಕೈದು ಬಾರಿ ಕೊರೋನಾ ನೆಪವೊಡ್ಡಿ ಹೈ ಡ್ರಾಮಾ ಆಡಿದ್ದ ಸಂಪತ್ ರಾಜ್, ಕೊನೆಗೆ ಹೈ ಕೋರ್ಟ್​ಗೆ ಜಾಮೀನು ಅರ್ಜಿ ಪುನಃ ಸಲ್ಲಿಸಿದ್ದ. ಆದ್ರೆ ನ್ಯಾಯಾಲಯದ ವಿಭಾಗೀಯ ಪೀಠ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಅಲ್ಲದೆ ಈ ಪ್ರಕರಣ ಸಂಬಂಧ ಸಿಸಿಬಿ ತನಿಖಾಧಿಕಾರಿಗಳನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ತಮ್ಮ ತನಿಖೆಯ ವೇಗ ಹೆಚ್ಚಿಸಿದ ಸಿಸಿಬಿ ಅಧಿಕಾರಿಗಳು ಕೊನೆಗೂ ಈಗ ಸಂಪತ್ ರಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಸಿಸಿಬಿ ಅಧಿಕಾರಿಗಳು 50 ಪುಟಗಳ ಮಧ್ಯಂತರ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು.

ಇಷ್ಟೂ ದಿನ ಖಾಕಿ ಕಣ್ಣಿಗೆ ಬೀಳದ ಸಂಪತ್ ರಾಜ್ ಅಡಗಿ ಕೂತಿದ್ದು ಎಲ್ಲಿ ಅನ್ನೋದು ಕುತೂಹಲದ ಪ್ರಶ್ನೆ. ಆದರೆ ಸಿಸಿಬಿ ಮೂಲಗಳ ಪ್ರಕಾರ, ಈತ ತಲೆ ಮರೆಸಿಕೊಂಡು ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಹಲವು ಭಾಗದಲ್ಲಿ ಅಡಗಿ ಕೂತಿದ್ದನಂತೆ. ಒಂದು ಕಡೆ ಎರಡು ದಿನಕ್ಕಿಂತ ಹೆಚ್ಚು ಎಲ್ಲಿಯೂ‌ ಕೂರುತ್ತಿರಲಿಲ್ಲ. ಇದರ ಅರಿವು ಸಿಸಿಬಿ ಅಧಿಕಾರಿಗಳಿಗೆ ಇದ್ದಿದ್ದರೂ ಬಂಧಿಸೋಕೆ ಸಾಧ್ಯ ಆಗಿರಲಿಲ್ಲವಂತೆ.

ನಿನ್ನೆ ರಾತ್ರಿ ಬೆಂಗಳೂರಿಮ ಫ್ರೇಜರ್ ಟೌನ್ ತನ್ನ ಸ್ನೇಹಿತನ ನಿವಾಸಕ್ಕೆ ಬಂಧಿದ್ದ ವೇಳೆ ಸಿಸಿಬಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬಹಳ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ರಾತ್ರಿ 10ಕ್ಕೆ ಈತನನ್ನು ಬಂಧಿಸಿದ್ದಾರೆ. ಸದ್ಯ ಸಿಸಿಬಿ ವಶದಲ್ಲಿರುವ ಸಂಪತ್ ರಾಜ್​ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಏನಿದು ಗಲಭೆ ಪ್ರಕರಣ?

ಆಗಸ್ಟ್ 11ರ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಬೈರಸಂದ್ರದಲ್ಲಿ ಗಲಭೆಗಳಾಗಿದ್ದವು. ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಮ್ ಪ್ರವಾದಿ ಬಗ್ಗೆ ನಿಂದನಾತ್ಮಕ ಪ್ರತಿಕ್ರಿಯೆ ನೀಡಿದ ಕಾರಣವೊಡ್ಡಿ ಗಲಭೆಗಳು ನಡೆದು ಹಲವು ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಯಿತು. ಶಾಸಕ ಅಖಂಡರ ಮನೆಯನ್ನ ಕಿಡಿಗೇಡಿಗಳು ಸುಟ್ಟುಹಾಕಿದರು. ಅದೃಷ್ಟಕ್ಕೆ ಅಖಂಡರ ಮನೆಯ ಸದಸ್ಯರು ಸಕಾಲಕ್ಕೆ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತರು ದಾಳಿ ಮಾಡಿದ್ದರು.

ಈ ಪ್ರಕರಣಕ್ಕೆ ಸ್ಥಳೀಯ ರಾಜಕೀಯ ಪೈಪೋಟಿ ಕಾರಣ ಎಂಬ ಶಂಕೆ ಇದೆ. ಜೆಡಿಎಸ್​ನಿಂದ ಕಾಂಗ್ರೆಸ್​ಗೆ ವಲಸೆ ಬಂದಿದ್ದ ಅಖಂಡ ಶ್ರೀನಿವಾಸಮೂರ್ತಿ ಪುಲಿಕೇಶಿನಗರದಲ್ಲಿ ಹೊಂದಿದ್ದ ಹಿಡಿತವನ್ನು ದುರ್ಬಲಗೊಳಿಸಲು ಸಂಪತ್ ರಾಜ್ ಮತ್ತಿತರರು ಮಾಡಿದ ಪಿತೂರಿ ಇದು ಎಂಬ ಅನುಮಾನ ಇದೆ. ಸಿಸಿಬಿ ಅಧಿಕಾರಿಗಳೂ ಕೂಡ ಈ ಸಂಬಂಧ ಸಾಕ್ಷ್ಯಾಧಾರಗಳನ್ನ ಕಲೆಹಾಕಿದ್ದಾರೆ. ಈಗಾಗಲೇ ಹಲವರನ್ನ ಬಂಧಿಸಿ ವಿಚಾರಣೆ ಕೂಡ ನಡೆಸಿದ್ದಾರೆ.

ಸದ್ಯ ಸಿಸಿಬಿ ಪೊಲೀಸರು ಸಂಪತ್​ರಾಜ್​ನನ್ನು ಅಜ್ಞಾತ ಸ್ಥಳದಲ್ಲಿಟ್ಟಿದ್ದಾರೆ. ಇಂದು ಮಧ್ಯಾಹ್ನದ ನಂತರ ನ್ಯಾಯಾಲಯಕ್ಕೆ ಸಂಪತ್ ರಾಜ್​ನನ್ನು ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.

Copyright © All rights reserved Newsnap | Newsever by AF themes.
error: Content is protected !!