ಪತ್ರಕರ್ತರ ಫೋನ್ ಕಿತ್ತುಕೊಂಡ ಪ್ರಕರಣ – ಸಲ್ಲು ಮತ್ತೆ ಕೋರ್ಟ್ ಕಟಕಟೆಗೆ

Team Newsnap
1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್ (ಸಲ್ಲು) ಯಾವಾಗಲೂ ತಮ್ಮ ಟೆರರ್ ಮಾತು, ಕೋಪಕ್ಕೆ ಬಿ’ಟೌನ್‌ನಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಯಾವಾಗಲೂ ಸಿಡಿ-ಸಿಡಿ ಎನ್ನುವ ಸಲ್ಲು, ಆ ಕಾರಣಕ್ಕಾಗಿಯೇ ಟ್ರೋಲ್‌ಗೆ ಗುರಿ ಆಗುತ್ತಾರೆ.

ಈಗ ಪತ್ರಕರ್ತರ ಫೋನ್ ಕಿತ್ತುಕೊಂಡಿದ್ದಕ್ಕೆ ಸಲ್ಲುಭಾಯ್ ಬಾಂಬೆ ಹೈಕೋರ್ಟ್ ನ ಕಟಕಟೆಯಲ್ಲಿ ನಿಲ್ಲುವಂತಾಗಿದೆ.

ಸಲ್ಮಾನ್‌ಗೆ ಕಾನೂನು ಸಂಬಂಧಿಸಿ ತೊಂದರೆಗಳು ಎಂದಿಗೂ ಮುಗಿಯುವುದಿಲ್ಲ . ಇತ್ತೀಚೆಗಷ್ಟೇ ತಮ್ಮ ಪನ್ವೆಲ್ ಫಾರ್ಮ್‍ಹೌಸ್ ಮತ್ತು ಕೃಷ್ಣಮೃಗ ಪ್ರಕರಣದಲ್ಲಿ ಸಲ್ಲು ಸಿಲುಕಿಕೊಂಡಿದ್ದರು.

ಈಗ ಮತ್ತೊಂದು ಕಾನೂನು ವಿವಾದ ಇವರಿಗೆ ತಳಕು ಹಾಕಿಕೊಂಡಿದೆ. ಸಲ್ಲು 2019ರಲ್ಲಿ ಪತ್ರಕರ್ತರ ಫೋನ್ ಕಿತ್ತುಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಲ್ಮಾನ್ ಅವರನ್ನು ಏಪ್ರಿಲ್ 5 ರಂದು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೋರ್ಟ್ ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಮುಂಬೈನ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳಲು ಸಲ್ಲು ತನಗೆ ನೀಡಲಾದ ಸಮನ್ಸ್ ವಿರುದ್ಧ ಬಾಂಬೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.

2019ರಲ್ಲಿ ಪತ್ರಕರ್ತರು ನೀಡಿದ ದೂರಿನ ಮೇರೆಗೆ ಸಲ್ಮಾನ್ ಹಾಗೂ ಅವರ ಅಂಗರಕ್ಷಕ ನವಾಜ್ ಶೇಖ್‌ಗೆ  ‘ಸಮನ್ಸ್’ ನೀಡಲಾಗಿದೆ.

ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಿಂದ ಈ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ವರದಿಯನ್ನು ಸಲ್ಲಿಸಿದ್ದಾರೆ. ಘಟನೆಯ ದಿನದಂದು ದೂರುದಾರರು ಮತ್ತು ಸಲ್ಮಾನ್, ನವಾಜ್ ಶೇಖ್ ನಡುವೆ ವಾಗ್ವಾದ ಸಂಭವಿಸಿದೆ. ಈ ವೇಳೆ ಸಲ್ಮಾನ್, ನವಾಜ್ ಶೇಖ್ ವರದಿಗಾರರ ಫೋನ್ ಕಿತ್ತುಕೊಂಡಿದ್ದಾರೆ ಎಂದು ವರದಿ ಮಾಡಿದ್ದಾರೆ.

Share This Article
Leave a comment