ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು.
ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ.
ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ ಮೌಲ್ವಿಗಳು, ಚರ್ಚುಗಳ ಫಾದರ್ ಸಿಸ್ಟರುಗಳು, ಬೌದ್ದ ಸನ್ಯಾಸಿಗಳು, ಜೈನ ಮುನಿಗಳು, ಸಿಖ್ ಗುರುಗಳು ಮತ್ತು ಇನ್ನೂ ಈ ರೀತಿಯ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು.
ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು, ಯೋಗ ಧ್ಯಾನ ಶಿಬಿರಗಳು ಇತ್ಯಾದಿಗಳನ್ನು ಸ್ಥಾಪಿಸಿಕೊಂಡು ಜನರಿಗೆ ಅನ್ನ ವಿದ್ಯೆ ಆಶ್ರಯ ನೀಡುತ್ತಾ ತನ್ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಕೇಂದ್ರಗಳು ಅಧ್ಯಾತ್ಮ ತಿಳಿಸಿ ಕೊಡುತ್ತವೆ.
ಮಾಧ್ಯಮಗಳ ಜನಪ್ರಿಯತೆಯ ಲಾಭ ಪಡೆದು ಜ್ಯೋತಿಷ್ಯ ಭವಿಷ್ಯ ಸಂಖ್ಯಾಶಾಸ್ತ್ರ, ವಾಸ್ತು ಯಂತ್ರ ಮಂತ್ರ ಹೋಮ ಹವನಗಳನ್ನು ಮುಂತಾದ ಆಚರಣೆಗಳ ಮುಖಾಂತರ ಅಧ್ಯಾತ್ಮಿಕ ಚಿಂತನೆಗಳನ್ನು ಹೇಳುವುದು.
ತಮ್ಮ ಅಧ್ಯಯನ ಜ್ಞಾನ ಅನುಭವಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಾತ್ಮಿಕ ಚಿಂತನೆಗಳನ್ನು ಬೋದಿಸುವ ಸಂತರು.
ಇನ್ನು ಕಾರ್ಪೊರೇಟ್ ಶೈಲಿಯ ಅಧ್ಯಾತ್ಮಿಕ ಚಿಂತಕರುಗಳಾದ
ಬಾಬಾ ರಾಮದೇವ್ – ಶ್ರೀ ರವಿಶಂಕರ್ ಗುರೂಜಿ – ಕಲ್ಕಿ ಭಗವಾನ್ – ನಿತ್ಯಾನಂದ ಸ್ವಾಮಿ – ಇನ್ನೂ ಹಲವರು ಭಾರತೀಯ ಸಮಾಜದ ಬಹಳಷ್ಟು ಜನರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರುತ್ತಿದ್ದಾರೆ.
ಮನುಷ್ಯನ ಬದುಕು ಸಂಕೀರ್ಣ – ಸಂಘರ್ಷ – ಒತ್ತಡಕ್ಕೆ ಒಳಗಾದಂತೆ ಅಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ಬರತೊಡಗಿದೆ.
ಅಧ್ಯಾತ್ಮ ವೈಜ್ಞಾನಿಕವಾಗಿರಲಿ, ವೈಚಾರಿಕವಾಗಿರಲಿ, ನಂಬಿಕೆಯಾಗಿರಲಿ, ಧಾರ್ಮಿಕ ಆಚರಣೆಯಾಗಿರಲಿ ಅದನ್ನು ಕಲಿಯುವುದರಿಂದ ಅರ್ಥಮಾಡಿಕೊಳ್ಳುವುದರಿಂದ, ಅನುಸರಿಸುವುದರಿಂದ ಅಂತಹ ಹೆಚ್ಚಿನ ತೊಂದರೆ ಏನೂ ಇಲ್ಲ. ಬದಲಾಗಿ ಒಂದಷ್ಟು ಲಾಭವೇ ಉಂಟು.
ಆದರೆ ತೊಂದರೆ ಇರುವುದು ಅಧ್ಯಾತ್ಮಿಕ ಗುರುಗಳಿಂದ ಮತ್ತು ಅಧ್ಯಾತ್ಮಿಕತೆಯನ್ನು ಆ ಗುರುಗಳು ವ್ಯಾಪಾರಿಕರಣ ಮಾಡಿ, ಶೋಷಣೆಯ ಅಸ್ತ್ರವಾಗಿ ಉಪಯೋಗಿಸಿ, ಅದನ್ನು ತಪ್ಪಾಗಿ ಅರ್ಥೈಸಿ ಜನರನ್ನು ದಾರಿ ತಪ್ಪಿಸಿ, ದೇವ ಮಾನವರೆಂದು ತಮ್ಮನ್ನು ತಾವೇ ಕರೆದುಕೊಂಡು ಸಮಾಜದ ನಿಯಂತ್ರಣ ಸಾಧಿಸಲು ಪ್ರಯತ್ನಿಸುವುದರಲ್ಲಿ.
ಅಧ್ಯಾತ್ಮ ತುಂಬಾ ಸರಳ ಸಹಜ ಸಾಮಾನ್ಯವಾಗಿದ್ದಾಗ ಸರ್ವರ ಒಳಿತಿಗಾಗಿ ಉಪಯೋಗಿಸಿದಾಗ, ನಿರಪೇಕ್ಷ ಸ್ಥಿತಿ ತಲುಪಿದಾಗ ಮತ್ತು ಅದರಲ್ಲಿ ಒಂದಷ್ಟು ನಿಯಂತ್ರಣ ಸಾಧಿಸಿದಾಗ ಅದರ ಲಾಭ ಸಿಗಬಹುದು. ಅದು ತೀರಾ ವೈಯಕ್ತಿಕ.
ಆದರೆ ಅಧ್ಯಾತ್ಮ ಇದನ್ನು ಹೊರತುಪಡಿಸಿ ಇತರ ಚಟುವಟಿಕೆಯಾದಾಗ…..
ಈ ಹಿನ್ನೆಲೆಯಲ್ಲಿ ಜಗ್ಗಿ ವಾಸುದೇವ್ ಅವರನ್ನು ನೋಡೋಣ…..
ಆಕರ್ಷಕ ನಿಲುವಿನ, ಕಂಚಿನ ಕಂಠದ, ಉತ್ತಮ ಭಾಷಾ ಹಿಡಿತದ, ನೋಡುವ ಕೇಳುವ ಭಕ್ತರಿಗೆ ಸಮ್ಮೋಹನ ಗೊಳಿಸುವ ವಾಕ್ಚಾತುರ್ಯದ ವಾಸುದೇವ್ ಈಶಾ ಫೌಂಡೇಶನ್ ಹೆಸರಿನಲ್ಲಿ ಬಹುದೊಡ್ಡ ಆಶ್ರಮ ಸ್ಥಾಪಿಸಿದ್ದಾರೆ. ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತುಂಬಾ ಸಂತೋಷ ಮತ್ತು ಅವರ ಸ್ವಾತಂತ್ರ್ಯ – ಸಾಧನೆ. ಅದನ್ನು ಗೌರವಿಸುತ್ತಾ…..
ಸದ್ಗುರುಗಳೇ, ಜಗದ್ಗುರುಗಳೇ, ಶ್ರೀಶ್ರೀಶ್ರೀಗಳೇ, ಮಹರ್ಷಿಗಳೇ,
ಸ್ವಾಮೀಜಿಗಳೇ,
ಮೋಕ್ಷದ ಮಾರ್ಗದಲ್ಲಿ ಈಗಾಗಲೇ ಜ್ಞಾನ ಯೋಗ ಭಕ್ತಿ ಯೋಗ ಕರ್ಮ ಯೋಗ ರಾಜ ಯೋಗ ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಅದನ್ನು ಅಸಂಖ್ಯಾತ ಚಿಂತಕರು ನಾನಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ವಿವಿಧ ಅರ್ಥಗಳನ್ನು ನೀಡಿದ್ದಾರೆ. ಏನೇ ಆಗಲಿ ಅಂತಿಮವಾಗಿ ಅದೊಂದು ಇಡೀ ಬದುಕಿನ ನಿರಂತರ ಕ್ರಿಯೆ. ಅದು ಯಾವುದೇ 24 ಗಂಟೆಗಳ ಅಥವಾ ಒಂದು ವಾರದ ಅಥವಾ ಒಂದು ತಿಂಗಳ ಅಥವಾ ಒಂದು ವರ್ಷದ ಕೋರ್ಸ್ ಆಗಲು ಸಾಧ್ಯವಿಲ್ಲ. ಅದನ್ನು ಸಾವಿರದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಕಲಿಯಲೂ ಆಗುವುದಿಲ್ಲ ಮತ್ತು ಹಣ ಪಡೆದು ಕಲಿಸಲೂ ಆಗುವುದಿಲ್ಲ.
ಸಾಮಾನ್ಯ ಜನ ನಿಮ್ಮಂತೆ ಪ್ರಶಾಂತ ಪರಿಸರದಲ್ಲಿ ಸೇವಕ ಸೇವಕಿಯರ ಸಹಾಯದ ನೆರಳಲ್ಲಿ, ಯಾವುದೇ ಜವಾಬ್ದಾರಿ ನಿರ್ವಹಿಸದೆ ಕಲಿಯಲು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದೇಶದಲ್ಲಿ ಕೋಟ್ಯಂತರ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ.
ಇಂತಹ ಸನ್ನಿವೇಶದಲ್ಲಿ ಅಧ್ಯಾತ್ಮನ್ನು ಹೈಜಾಕ್ ಮಾಡಿರುವ ನೀವು ಕಾರ್ಪೊರೇಟ್ ಶೈಲಿಯಲ್ಲಿ ವಾಣಿಜ್ಯೀಕರಣ ಮಾಡಿರುವಿರಿ. ಅಧ್ಯಾತ್ಮಿಕತೆಯ ಹೆಸರಿನಲ್ಲಿ ಭಕ್ತರನ್ನು ಸೆಳೆದು ನಂತರ ಆ ಜನಪ್ರಿಯತೆಯನ್ನು ಬೇರೆ ವಿಷಯಗಳಿಗೆ ಉಪಯೋಗಿಸಿಕೊಳ್ಳುತ್ತಿರುವಿರಿ. ನಿಮ್ಮ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಿರುವಿರಿ.
ಅದು ನಿಮ್ಮ ಸಂವಿಧಾನಾತ್ಮಕ ಹಕ್ಕು ನಿಜ. ಹಾಗೆಯೇ ನಿಮ್ಮ ಸ್ವಾರ್ಥದ ಹುನ್ನಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಕೂಡ.
ಇಡೀ ಜಗತ್ತು ಹಣದ ಹಿಂದೆ ಬಿದ್ದು ಮಾನವೀಯ ಮೌಲ್ಯಗಳು ಅವಸಾನದ ಅಂಚಿನಲ್ಲಿ ಇರುವಾಗ ಅಧ್ಯಾತ್ಮ ಮನುಷ್ಯರನ್ನು ಮಾನವೀಯ ನಡವಳಿಕೆಗೆ ಸೆಳೆಯುವ ಮಾರ್ಗವಾಗಿ ಬಳಸುವ ಬದಲಾಗಿ ನೀವು ಸಹ ಅಧ್ಯಾತ್ಮವನ್ನು ಹಣ ಮಾಡುವ ಪ್ರಚಾರ ಪಡೆಯುವ ಸಲುವಾಗಿ ಉಪಯೋಗಿಸಿದರೆ ಜಗತ್ತಿನ ಮುಂದಿನ ಗತಿಯೇನು ?
ಅಲ್ಲದೆ ಅಧ್ಯಾತ್ಮ ಬಿಟ್ಟು ಸಮಾಜ ಸೇವೆ ಮತ್ತು ವ್ಯಾಪಾರದ ಮುಖವಾಡ ಧರಿಸಿದರೆ ಅಧ್ಯಾತ್ಮದ ಆಳ ಅರಿವಾಗುವುದು ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವವರು ಯಾರು. ಯಾವುದೇ ಕಾರಣದಿಂದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಜನರಿಂದ ಹಣ ವಸೂಲಿ ಮಾಡುವುದು ಈ ದೇಶದಲ್ಲಿ ಎಷ್ಟೊಂದು ಅಪಾಯಕಾರಿ ನಿಮಗೆ ತಿಳಿದಿಲ್ಲವೇ.
ಒಂದು ವೇಳೆ ನಿಮಗೆ ಸಾರ್ವಜನಿಕ ಸೇವೆ ಮಾಡಬೇಕೆಂಬ ಬಯಕೆ ಇದ್ದರೆ ನಿಮ್ಮ ಹಣಕಾಸಿನ ಮಿತಿಯಲ್ಲಿ ಅಥವಾ ನೀವು ಸರ್ಕಾರದ ಮೇಲೆ ಪ್ರಭಾವ ಬೀರಿ ಸಲಹೆ ನೀಡಿ ಅಥವಾ ಹಣಕಾಸು ರಹಿತ ಸೇವೆ ಮಾಡಿ. ಇಲ್ಲದಿದ್ದರೆ……
ಉದಾಹರಣೆಗೆ,
ಪತ್ರಿಕೋದ್ಯಮಿಗಳು ಪತ್ರಿಕಾ ಧರ್ಮ ಬಿಟ್ಟು ರಿಯಾಲಿಟಿ ಎಕ್ಸ್ಪೋ, ಫರ್ನಿಚರ್ ಎಕ್ಸ್ಪೋ, ಪುಡ್ ಮೇಳ ಮುಂತಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಮೂಲ ವೃತ್ತಿಗೆ ನ್ಯಾಯ ಸಲ್ಲಿಸದೆ ಇನ್ನೇನೋ ಹಣ ಮಾಡಲು ಹೋಗಿ ಈಗಾಗಲೇ ಬೆಲೆ ಕಳೆದುಕೊಂಡಿಲ್ಲವೇ ?
ಆದ್ದರಿಂದ ಅಧ್ಯಾತ್ಮ ಗುರುಗಳು ಕೇವಲ ಅಧ್ಯಾತ್ಮಿಕ ಚಿಂತನೆಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವ ಮತ್ತು ಅವರ ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಉತ್ತಮ.
ಜನರೂ ಸಹ ಯಾವುದೇ ಸದ್ಗುರುಗಳನ್ನು ಅತಿಮಾನುಷರೆಂದು ಭಾವಿಸದೆ, ಒಬ್ಬ ವ್ಯಕ್ತಿ ಎಲ್ಲಾ ಸಮಸ್ಯೆಗಳಿಗೂ ಉತ್ತರಿಸುತ್ತೇನೆ – ಪರಿಹರಿಸುತ್ತೇನೆ ಎಂಬುದನ್ನು ನಂಬದೆ ಅವರ ಮಿತಿಗಳನ್ನು ಸಹ ಅರಿಯುವ ಪ್ರಬುದ್ದತೆ ಬರಲಿ ಎಂದು ಆಶಿಸುತ್ತಾ….
ನಿಸ್ವಾರ್ಥ – ನಿಷ್ಕಲ್ಮಶ – ನಿರಪೇಕ್ಷ
ಕಾರ್ಯಗಳನ್ನು ಪ್ರೋತ್ಸಾಹಿಸೋಣ.
ಆಡಂಬರದ ತೋರಿಕೆಯ ಪ್ರದರ್ಶನದ
ಪ್ರಚಾರದ ಆಸೆಯ ಕೆಲಸಗಳನ್ನು ತಿರಸ್ಕರಿಸೋಣ.
ಯಾರೇ ಮಾಡಿದರೂ…….
ವಿವೇಕಾನಂದ. ಹೆಚ್.ಕೆ.
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!