ಗೆಳೆಯ ಕೊರೊನಾಗೆ ಬಲಿ : ಆತನ ಮಡದಿಗೆ ಮತ್ತೊಬ್ಬ ಗೆಳೆಯ ಬದುಕು ನೀಡಿದ

Team Newsnap
1 Min Read

ಕೊರೊನಾಗೆ ಗೆಳೆಯ ಬಲಿಯಾದ ಸ್ನೇಹಿತನ ಮಡದಿಯನ್ನು ಮದುವೆಯಾಗಿ ಯುವಕನೊಬ್ಬ ಆದಶ೯ ಮೆರದಿದ್ದಾನೆ

ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್ ಪತಿ ಕಳೆದುಕೊಂಡು ಕಂಗಾಲಾಗಿದ್ದ ಗೆಳೆಯನ ಪತ್ನಿಯನ್ನು ವಿವಾಹವಾಗಿದ್ದಾನೆ.

ಜ.27ರಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಈ ಆದರ್ಶ ಮದುವೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್‍ಕುಮಾರ್(41) ಮತ್ತು ಹನೂರು ಪಟ್ಟಣದ ಅಂಬಿಕಾ(30) 8 ವರ್ಷಗಳ ಹಿಂದೆ ವಿವಾಹವಾಗಿದ್ದರು.

ಚೇತನ್‍ಕುಮಾರ್ ಅವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಚೇತನ್‍ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪತಿಯ ಸಾವಿನಿಂದ ಕಂಗೆಟ್ಟ ಅಂಬಿಕಾ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಚೇತನ್‍ಕುಮಾರ್ ಗೆಳೆಯ, ಎಂ.ಲೋಕೇಶ್ ಅವರು ಅಂಬಿಕಾಗೆ ಸಾಂತ್ವನ ಹೇಳಿ, ತನ್ನ ಗೆಳೆಯನ ಕುಟುಂಬಕ್ಕೆ ಆಸರೆಯಾಗಿ ನಿಲ್ಲಲು ನಿರ್ಧರಿಸಿದರು.

ತನ್ನ ಗೆಳೆಯನ ಪತ್ನಿಯನ್ನು ಮದುವೆಯಾಗಲು ನಿರ್ಧರಿಸಿ, ಅಂಬಿಕಾ ತಂದೆ, ತಾಯಿಯ ಬಳಿ ಹಾಗೂ ಚೇತನ್‍ಕುಮಾರ್ ತಂದೆ, ತಾಯಿಯ ಬಳಿ ವಿಷಯ ಪ್ರಸ್ತಾಪಿಸಿದ್ದಾರೆ. ಅವರೆಲ್ಲರ ಮನವೊಲಿಕೆಯ ಬಳಿಕ ಅಂಬಿಕಾ ಮದುವೆಗೆ ಒಪ್ಪಿದರು. ಎಲ್ಲರ ಒಪ್ಪಿಗೆ ಪಡೆದು ಲೋಕೇಶ್ ಅವರು ಅಂಬಿಕಾ ಅವರನ್ನು ಪುನರ್ ವಿವಾಹವಾಗುವ ಮೂಲಕ ಮಾದರಿಯಾಗಿ ಗೆಳೆಯನ ಕುಟುಂಬಕ್ಕೆ ಆಸರೆಯಾಗಿದ್ದಾರೆ.

Share This Article
Leave a comment